ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕನಸಿನ ಹನಿಮೂನ್ ಸ್ಪಾಟ್ ಯಾವ್ದು?
ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸೈಡ್ B ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 2ನೇ ವಾರಕ್ಕೆ ಸಿನಿಮಾ ಕಾಲಿಡುತ್ತಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಟಿಸಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗಿದ್ದ ಸೈಡ್ A ಹಿಟ್ ಆಗಿತ್ತು. ಬಳಿಕ ತೆಲುಗಿಗೂ ಡಬ್ ಆಗಿ ಗಮನ ಸೆಳೆದಿತ್ತು. ಕೊನೆಗೆ ಸಿನಿಮಾ ಓಟಿಟಿಗೆ ಬಂದು ತೆಲುಗು, ತಮಿಳು, ಮಲಯಾಳಂ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಇದೇ ಕಾರಣಕ್ಕೆ 2ನೇ ಭಾಗವನ್ನು ಕನ್ನಡ ಜೊತೆಗೆ ಏಕಕಾಲಕ್ಕೆ ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್ ಮಾಡಲಾಗಿದೆ.

ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇನ್ನು ಚಿತ್ರದ ಪ್ರಮೋಷನ್ ಭಾಗವಾಗಿ ನಟ ರಕ್ಷಿತ್ ಶೆಟ್ಟಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ತೆಲುಗು ಯೂಟ್ಯೂಬ್ ಚಾನಲ್‌ಗಳಿಗೂ ಸಂದರ್ಶನ ನೀಡಿದ್ದರು.
ತೆಲುಗು ಫಿಲ್ಮ್ ನಗರ್ ಯೂಟ್ಯೂಬ್ ಸಂದರ್ಶನದಲ್ಲಿ ಸಿಂಪಲ್ ಸ್ಟಾರ್‌ಗೆ ಇಂಟ್ರೆಸ್ಟಿಂಗ್ ಪ್ರಶ್ನೆಗಳು ಎದುರಾಗಿತ್ತು. ರಕ್ಷಿತ್ ಶೆಟ್ಟಿ ಕುರಿತು ಜನ ಗೂಗಲ್‌ನಲ್ಲಿ ಹೆಚ್ಚು ಹುಡುಕಿರುವ ಪ್ರಶ್ನೆಗಳನ್ನು ಆರಿಸಿ ಕೇಳಲಾಗಿತ್ತು. ಆ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿದ್ದಾರೆ. ರಕ್ಷಿತ್ ಶೆಟ್ಟಿ ಸಿಂಗಲ್ಲಾ? ಎನ್ನುವ ಪ್ರಶ್ನೆಗೆ "ಒಂದರ್ಥದಲ್ಲಿ ಹೌದು, ಕಂಡಿತ ಕಮೀಟ್ ಆಗಿಲ್ಲ" ಎಂದು ಉತ್ತರಿಸಿದ್ದಾರೆ. ರಶ್ಮಿಕಾರನ್ನು ರಕ್ಷಿತ್ ಪ್ರೀತಿಸಿದ್ದರು. ಇಬ್ಬರ ಎಂಗೇಜ್‌ಮೆಂಟ್ ಸಹ ನಡೆದಿತ್ತು. ಆದರೆ ಬಳಿಕ ಬ್ರೇಕಪ್ ಆಗಿತ್ತು.
ರಕ್ಷಿತ್ ಶೆಟ್ಟಿ ಜೀವನದ ಮರೆಯಲಾಗದ ಕ್ಷಣಗಳು ಯಾವುದು? ಎನ್ನುವ ಪ್ರಶ್ನೆಗೆ "ನನ್ನ ಮೊದಲ ಹಿಟ್ ಸಿನಿಮಾ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಫಸ್ಟ್ ಡೇ ಫಸ್ಟ್ ಶೋ. ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ದು ಅವರ ಪ್ರತಿಕ್ರಿಯೆ, ಶಿಳ್ಳೆ, ಚಪ್ಪಾಳೆ ಮರೆಯೋಕೆ ಸಾಧ್ಯವಿಲ್ಲ" ಎಂದಿದ್ದಾರೆ.
ಹುಡುಗಿಯರಲ್ಲಿ ಯಾವ ಗುಣಗಳು ಇದ್ದರೆ ರಕ್ಷಿತ್ ಶೆಟ್ಟಿ ಪ್ರೀತಿಲಿ ಬೀಳುತ್ತಾರೆ? ಎನ್ನುವ ಪ್ರಶ್ನೆಗೆ "ಹುಡುಗಿಯರ ನಗು, ಕಣ್ಣುಗಳು, ಜೊತೆಗೆ ಅವರ ಕೂದಲು. ಅದಕ್ಕಿಂತ ಅವರ ವ್ಯಕ್ತಿತ್ವ ಬಹಳ ಮುಖ್ಯವಾಗುತ್ತದೆ" ಎಂದು ಉತ್ತರಿಸಿದ್ದಾರೆ.
ನಿಮ್ಮ ಕನಸಿನ ಹನಿಮೂನ್ ಸ್ಪಾಟ್ ಯಾವ್ದು? ಎನ್ನುವ ಪ್ರಶ್ನೆಗೆ ರಕ್ಷಿತ್ ಶೆಟ್ಟಿ "ಅಯ್ಯೋ ನಾನು ಈ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಆದರೆ ನಾನು ಒಂದಷ್ಟು ಸ್ಥಳಗಳನ್ನು ಇಷ್ಟಪಡ್ತೀನಿ. ನಾನು ಹುಟ್ಟಿ ಬೆಳೆದಿದ್ದು ಸಮುದ್ರದ ಸಮೀಪದ ಊರಿನಲ್ಲಿ. ಹಾಗಾಗಿ ನಾನು ಸಮುದ್ರದ ತೀರಕ್ಕೆ ಹೋಗಲು ಇಷ್ಟಪಡಲ್ಲ. ಯಾಕಂದರೆ ನಾನು ಬಹಳ ನೋಡಿಬಿಟ್ಟಿದ್ದೀನಿ. ನನಗೆ ಬೆಟ್ಟ ಗುಡ್ಡ ಅಂದ್ರೆ ಬಹಳ ಇಷ್ಟ. ಬೆಟ್ಟದ ಮೇಲಿಂದ ವೀವ್ ನೋಡುವುದು ಇಷ್ಟ. ಹಾಗಾಗಿ ನಾನು ಹೋಗಿ ಸಮಯ ಕಳೆಯುವುದಾದರೆ ಅದು ಬೆಟ್ಟಗಳ ಮೇಲಾಗಿರುತ್ತದೆ. ಹಾಗಾಗಿ ಎಲ್ಲಾದರೂ ಸರಿ ಬೆಟ್ಟಗಳ ಮೇಲೆ" ಎಂದು ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಸಿನಿಮಾಗಳ ವಿಚಾರಕ್ಕೆ ಬಂದರೆ ಮುಂದೆ 4 ಸಿನಿಮಾಗಳಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. 'ರಿಚರ್ಡ್ ಆಂಟನಿ', 'ಪುಣ್ಯಕೋಟಿ'-1, 'ಪುಣ್ಯಕೋಟಿ'- 2 ಹಾಗೂ 'ಮಿಡ್‌ನೈಟ್ ಮೋಕ್ಷ' ಸಿನಿಮಾಗಳಿಗಾಗಿ ಕತೆ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ. ಶೀಘ್ರದಲ್ಲೇ 'ಉಳಿದವರು ಕಂಡಂತೆ' ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಸಿನಿಮಾ ನಿರ್ಮಿಸಲಿದೆ. 'ಮಿಡ್‌ನೈಟ್ ಮೋಕ್ಷ' ಚಿತ್ರದಲ್ಲಿ ರಿಷಬ್, ರಾಜ್ ಬಿ. ಶೆಟ್ಟಿ ಕೂಡ ನಟಿಸೋ ಸಾಧ್ಯತೆಯಿದೆ.


Click it and Unblock the Notifications











