twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ ಅಣ್ಣಾವ್ರು ಕಾಣಿಸಲೇ ಇಲ್ಲ: ನಟ ಸಂಚಾರಿ ವಿಜಯ್ ಬಾಲ್ಯದ ನೆನಪು

    By ಸಂಚಾರಿ ವಿಜಯ್
    |

    ಅಣ್ಣಾವ್ರು ಎಂದರೆ ಆ ಬಾಲವೃದ್ಧರಾಗಿ ಎಲ್ಲರಿಗೂ ಅಚ್ಚುಮೆಚ್ಚು. ಈಗಲೂ ಅವರ ಹೆಸರು ಕೇಳಿದಾಗ ರೋಮಾಂಚನವಾಗುತ್ತದೆ. ಅವರನ್ನು ಒಮ್ಮೆಯಾದರೂ ನೋಡಬೇಕು, ಅವರಿಂದ ಆಟೋಗ್ರಾಫ್ ಪಡೆದುಕೊಳ್ಳಬೇಕು, ಅವರ ಜತೆ ಫೋಟೊ ತೆಗೆಸಿಕೊಳ್ಳಬೇಕು ಎಂಬ ಆಸೆ ಸಾವಿರಾರು ಮಂದಿಗೆ ಈಡೇರಲೇ ಇಲ್ಲ. ಹಾಗೆ ಆರಾಧ್ಯ ದೈವ ಎಂದೇ ಭಾವಿಸಿದ್ದ ಅಣ್ಣಾವ್ರನ್ನು ನೋಡಬೇಕೆಂದು ಬಯಸಿ, ಹರಸಾಹಸ ಪಟ್ಟವರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಒಬ್ಬರು.

    ಡಾ. ರಾಜ್‌ಕುಮಾರ್ ಅವರನ್ನು ನೇರವಾಗಿ ನೋಡುವ ಅಪೂರ್ವ ಅವಕಾಶವೊಂದು ನಟ ಸಂಚಾರಿ ವಿಜಯ್ ಅವರಿಗೆ ಬಾಲ್ಯದಲ್ಲಿ ದೊರಕಿತ್ತು. ರಾಜ್ ಕುಮಾರ್ ಅವರ ಊರಿಗೇ ಬರುವವರಿದ್ದರು. ಅವರ ಸಿನಿಮಾಗಳನ್ನು ನೋಡಿ ಬೆಳೆಯುತ್ತಿದ್ದ ಮಕ್ಕಳು, ದೊಡ್ಡವರಿಗೆ ಇಂತಹ ಅವಕಾಶ ಬಿಡಲು ಸಾಧ್ಯವೇ? ಊರಿನ ಉಳಿದವರಂತೆ ಅವರೂ ಅಣ್ಣಾವ್ರನ್ನು ನೋಡಲು ಅಲ್ಲಿಗೆ ಓಡಿದರು. ಮುಂದೇನಾಯ್ತು?

    ರಾಜ್‌ಕುಮಾರ್ ಮೇಲಿತ್ತು ಎಸ್‌.ಎಂ.ಕೃಷ್ಣ ಗೆ ಸಣ್ಣ ಅಸಮಾಧಾನರಾಜ್‌ಕುಮಾರ್ ಮೇಲಿತ್ತು ಎಸ್‌.ಎಂ.ಕೃಷ್ಣ ಗೆ ಸಣ್ಣ ಅಸಮಾಧಾನ

    ಕಡೂರಿಗೆ ಅಣ್ಣಾವ್ರ ಸುದ್ದಿ

    ಕಡೂರಿಗೆ ಅಣ್ಣಾವ್ರ ಸುದ್ದಿ

    ಇಪ್ಪತ್ತೈದು ವರ್ಷಗಳ ಹಿಂದಿನ ನೆನಪು ಡಾ. ರಾಜಕುಮಾರ್ ಎಂಬ ಕನ್ನಡಿಗರ ಆರಾಧ್ಯದೈವ ಕಡೂರಿಗೆ ಬರುವರೆಂಬ ಸುದ್ದಿ ನಮ್ಮ ಜಿಲ್ಲೆಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತ್ತು. ನಮ್ಮ ತಂದೆ ಕೂಡ ಅವರ ಅಭಿಮಾನಿಯಾಗಿದ್ದರು. ಚಿಕ್ಕಂದಿನಿಂದಲೂ ಪಂಚನಹಳ್ಳಿಯಲ್ಲಿ ಇದ್ದ ಒಂದೇ ಒಂದು ಟೆಂಟಲ್ಲಿ ಅವರ ಸಿನಿಮಾಗಳನ್ನು ತೋರಿಸಿ ಅವರು ನಡೆದುಬಂದ ಕಷ್ಟದ ಹಾದಿಗಳನ್ನು ಹೇಳಿ ಅವರಂತೆ ನೀವು ಆಗಿ ಎಂದು ಪ್ರೇರೇಪಿಸಿದ್ದೂ ಉಂಟು.

    ಅಪ್ಪಾಜಿಯ ಕೈಹಿಡಿದು ಹೊರಟೆ

    ಅಪ್ಪಾಜಿಯ ಕೈಹಿಡಿದು ಹೊರಟೆ

    ಹೀಗೆ ಅವರು ನಮ್ಮೂರಿಗೆ ಬರುವ ದಿನದ ಹಿಂದಿನ ರಾತ್ರಿಯೆಲ್ಲಾ ಅವರನ್ನು ನೇರವಾಗಿ ನೋಡುವುದನ್ನು ನೆನಪಿಸಿಕೊಂಡು ಪುಳಕಿತನಾಗಿದ್ದೆ. ಬೆಳಗ್ಗೆ ಎದ್ದವನೇ ಅರ್ಧಂಬರ್ಧ ಕೈಕಾಲು ಮುಖ ತೊಳೆದು ಅಮ್ಮ 'ತಿಂಡಿ ತಿನ್ನೋ ವಿಜಿ' ಅಂದ್ರೂ ಕೇಳದೆ ಅಪ್ಪಾಜಿಯ ಕೈಹಿಡಿದು ಬಸ್ ನಿಲ್ಡಾಣದ ಕಡೆ ಓಡಿಯೇಬಿಟ್ಟೆ. ನಮ್ಮೂರಲ್ಲಿ ಆಗೆಲ್ಲ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ರಾತ್ರಿ ಒಂದು ಬಸ್ ಬಿಟ್ಟರೆ ಬೇರೆ ಸಮಯಕ್ಕೆ ಹಾಲಿನ ಲಾರಿಯನ್ನೋ ಇಲ್ಲ ಸಾರಾಯಿ ಪ್ಯಾಕೆಟ್ ಹೊತ್ತು ತರುತ್ತಿದ್ದ ಲಾರಿಯನ್ನೋ ಕಾಯಬೇಕಿತ್ತು.

    ಡಾ.ರಾಜ್ ಹುಟ್ಟುಹಬ್ಬಕ್ಕೆ ಸಿನಿಗಣ್ಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?ಡಾ.ರಾಜ್ ಹುಟ್ಟುಹಬ್ಬಕ್ಕೆ ಸಿನಿಗಣ್ಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

    ಬಸ್ ನಿಲ್ಲಿಸಲೇ ಇಲ್ಲ

    ಬಸ್ ನಿಲ್ಲಿಸಲೇ ಇಲ್ಲ

    ಬೆಳಗ್ಗೆ 6.45ಕ್ಕೆ ಬಂದ ಬಸ್ಸು ಆಗಲೇ ಜನರಿಂದ ತುಂಬಿ ತುಳುಕಾಡುತ್ತಿತ್ತು. ಕೈ ಅಡ್ಡ ಹಾಕೋದಿರ್ಲಿ ಅಡ್ಡಡ್ಡ ಮಲಗಿದ್ರೂ ಅದು ನಿಲ್ಲೋ ಸೂಚನೆ ಕಾಣಿಸಲೇ ಇಲ್ಲ. ದೂರದಲ್ಲೆಲ್ಲೂ ಮುಂದೆ ನಿಲ್ಲಿಸಬಹುದು ಅಂತ ಹಿಂದೆ ಓಡಿದ್ದಷ್ಟೇ ಬಂತು. ಕೊನೆಗೂ ಬಸ್ ನಿಲ್ಲಲೇ ಇಲ್ಲ. ನಿರಾಸೆಯಿಂದ ವಾಪಸ್ ಬಂದು ಏನು ಮಾಡುವುದು ಅಂತ ಯೋಚಿಸುತ್ತಿರುವಾಗಲೇ ನಮ್ಮಪ್ಪಾಜಿ 'ನಡಿ ನಡೆದುಕೊಂಡೆ ಹೋಗೋಣ' ಅಂದ್ರು.

    ಗಾಡಿಯಲ್ಲಿ ಜೋತಾಡಿ ಹೋದೆವು

    ಗಾಡಿಯಲ್ಲಿ ಜೋತಾಡಿ ಹೋದೆವು

    ನಮ್ಮೂರಿಂದ ಕಡೂರಿಗೆ ಸುಮಾರು 35 ರಿಂದ 40km ದೂರ. ಸರಿ ಏನಾದರು ಆಗಲಿ ಅಣ್ಣಾವ್ರನ್ನ ನೋಡಲೇ ಬೇಕು ಅಂತ ಹೊರಟೇಬಿಟ್ಟೆವು. ಸರಿ ಸುಮಾರು 2-3km ಕ್ರಮಿಸಿದ್ದೆವು ಅಷ್ಟೊತ್ತಿಗೆ 407 ಗಾಡಿಯೊಂದು ಬಂತು. ಇದನ್ನ ಬಿಡಲೇ ಬಾರದು ಅಂತ ಹಿಂದೆ ಜೋತು ಬಿದ್ದೇ ಬಿಟ್ಟೆವು. ಹಾಗೂ ಹೀಗೂ ಹೊಡೆದಾಡಿ ಬಡಿದಾಡಿ ಕಡೂರು ತಲುಪಿದಾಗ ಬೆಳಿಗ್ಗೆ 9ರ ಆಸುಪಾಸು. ಇಳಿದವರೇ ಬೀರೂರು ಮಾರ್ಗದಲ್ಲಿರುವ ರಂಗಮಂದಿರದ ಮೈದಾನದ ಕಡೆ ಓಡಿದೆವು.

    ಡಾ.ರಾಜ್ ಕುಮಾರ್ ಜನ್ಮದಿನಾಚರಣೆ: ಸಿಎಂ ಯಡಿಯೂರಪ್ಪ ಶುಭ ಕೋರಿದ್ದು ಹೀಗೆಡಾ.ರಾಜ್ ಕುಮಾರ್ ಜನ್ಮದಿನಾಚರಣೆ: ಸಿಎಂ ಯಡಿಯೂರಪ್ಪ ಶುಭ ಕೋರಿದ್ದು ಹೀಗೆ

    ಅಣ್ಣಾವ್ರು ಬರಲೇ ಇಲ್ಲ

    ಅಣ್ಣಾವ್ರು ಬರಲೇ ಇಲ್ಲ

    ಆಗಲೇ ಅಭಿಮಾನಿಗಳು ಮೈದಾನದ ಕಡೆ ಸಾಗರದಂತೆ ಹರಿಯತೊಡಗಿದ್ದರು. ನಾವು ಅವರ ಜೊತೆ ತಳ್ಳಾಡಿಕೊಂಡು ಮೈದಾನದ ಮಧ್ಯಭಾಗಕ್ಕೆ ಸೇರಿಕೊಂಡೆವು. ಅಣ್ಣಾವ್ರು ಈಗ ಬರ್ತಾರೆ ಆಗ ಬರ್ತಾರೆ ಅಂತ ಕಾದಿದ್ದೆ ಕಾದಿದ್ದು. ಅಣ್ಣಾವ್ರು ಬರಲೇ ಇಲ್ಲಾ. ನೆತ್ತಿಯ ಮೇಲೆ ಬಿಸಿಲು ಸುಡುತ್ತಿದ್ದರೂ ಯಾರೊಬ್ಬರೂ ಸ್ವಲ್ಪವೂ ಅಲುಗಾಡದೆ ನೆಲದ ಮೇಲೆ ಝಾಂಡಾ ಊರಿಬಿಟ್ಟಿದ್ದರು. 'ಒಂದ' ಬಂದರೂ ಇಲ್ಲ, 'ಎರಡ' ಬಂದರೂ ಇಲ್ಲ! ಸ್ವಲ್ಪವೂ ಮಿಸುಕಾಡಲು ಬಿಡಲಿಲ್ಲ ಜನ. ಜಾಗ ಬಿಟ್ಟರೆ ಕೆಟ್ಟೆವು ಅಂತಾ ಎಲ್ಲವನ್ನು ತಡೆದುಕೊಂಡೇ ಕೂತೆವು.

    ಹೆಲಿಕಾಪ್ಟರ್ ಹುಟ್ಟಿಸಿದ್ದ ಆಸೆ

    ಹೆಲಿಕಾಪ್ಟರ್ ಹುಟ್ಟಿಸಿದ್ದ ಆಸೆ

    ಮಧ್ಯಾಹ್ನ ಎರಡು ಗಂಟೆಯಾಯ್ತು, ಮೂರು ಗಂಟೆಯಾಯ್ತು ಅಣ್ಣಾವ್ರು ಬರುವುದೇ ಇಲ್ಲವೇನೋ ಅವರನ್ನು ನೋಡುವ ಭಾಗ್ಯ ಇಲ್ಲವೇನೋ ಅನ್ನಿಸೋಕೆ ಶುರುವಾಯ್ತು. ಅಷ್ಟೊತ್ತಿಗೆ ಆಗಸದಲ್ಲಿ ಹೆಲಿಕಾಪ್ಟರ್ ಒಂದು ಬರ್ರೋ ಅಂತಾ ಸದ್ದು ಮಾಡ್ತಾ ಸಾಗಿತು. ಅಲ್ಲಿದ್ದ ಆಯೋಜಕರು ಮೈಕಿನಲ್ಲಿ 'ಅಣ್ಣಾವ್ರು ಇನ್ನೇನು ಬಂದೆ ಬಿಟ್ಟರು' ಅಂತಾ ಹೇಳಿದ್ದೇ ತಡ ಜನ ಒಂದೇ ಸಮನೆ ಧೂಳೆಬ್ಬಿಸ್ಕೊಂಡು ಜೈಕಾರ ಹಾಕೋಕೆ ಶುರು ಮಾಡಿದ್ರು. ಆದರೂ ಅಣ್ಣಾವ್ರು ಬರೋ ಸೂಚನೆಯೇ ಕಾಣಲಿಲ್ಲ. ಮುಖ ಸಪ್ಪಗೆ ಮಾಡಿಕೊಂಡು ಮತ್ತೆ ಅದೇ ಜಾಗದಲ್ಲಿ ಕಾಯುತ್ತ ಕುಳಿತೆವು. ಅವರನ್ನ ನೋಡುವ ಕಾತುರದಲ್ಲಿ ಹಸಿವೇ ಮರೆತು ಹೋಗಿತ್ತು.

    ಅಣ್ಣಾವ್ರು ಬರ್ತಾ ಇದ್ದಾರೆ

    ಅಣ್ಣಾವ್ರು ಬರ್ತಾ ಇದ್ದಾರೆ

    ಅದಾಗಿ ಸ್ವಲ್ಪ ಹೊತ್ತಿಗೆ ದೂರದಲ್ಲಿ ಡೊಳ್ಳು, ವೀರಗಾಸೆ ಬಡಿತದ ಶಬ್ದಗಳು ಜನರ ಕಿವಿಗೆ ಬಿದ್ದಿದ್ದೇ ಬಿದ್ದಿದ್ದು ಎಲ್ಲರಿಗೂ ಅಣ್ಣಾವ್ರು ಬಂದ್ರು ಅನ್ನೋ ಸುಳಿವು ಸಿಕ್ತು. 'ದೂರದಲ್ಲಿ ತೆರೆದ ಜೀಪಿನಲ್ಲಿ ಅಭಿಮಾನಿಗಳ ಕಡೆ ಕೈಬೀಸುತ್ತ ವೇದಿಕೆ ಕಡೆಗೆ ಬರ್ತಾ ಇದ್ದಾರೆ' ಅಂತಾ ಮತ್ತೆ ಮೈಕಿನಲ್ಲಿ ಹೇಳಿದರು. ನಮಗೋ ಇನ್ನೇನು ಅಣ್ಣಾವ್ರನ್ನು ಕಣ್ತುಂಬಿಕೊಳ್ಳೋ ಸಮಯ ಬಂತು ಅಂದುಕೊಂಡು ತುಂಬಾ ಎತ್ತರದ ವೇದಿಕೆಯ ಕಡೆ ಒಂದೇ ಸಮನೆ ಬಿಟ್ಟೂ ಬಿಡದೆ ಕಣ್ಣು ನೆಟ್ಟಿದ್ದೆವು. ಅದಾಗಲೇ ವೇದಿಕೆ ತುಂಬಾ ರಾಜಕಾರಣಿಗಳು ಅಭಿಮಾನಿ ಸಂಘದ ಅಧ್ಯಕ್ಷರು ಇನ್ನೂ ಹಲವಾರು ಗಣ್ಯರು ಅಣ್ಣಾವ್ರನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆ ಕ್ಷಣ ಬಂದೇ ಬಿಟ್ಟಿತು 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಕಿವಿ ತುಂಬಿಕೊಳ್ತಿತ್ತು.

    ಕೊನೆಗೂ ಅಣ್ಣಾವ್ರು ಬಂದರು

    ಕೊನೆಗೂ ಅಣ್ಣಾವ್ರು ಬಂದರು

    ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ ಘೋಷಣೆಗಳು ಮುಗಿಲು ಮುಟ್ಟಿದವು, ಯಾವಾಗ ಜನ ಜೈಕಾರ ಹಾಕುತ್ತಾ ಕೂತ ಜಾಗದಿಂದ ಎದ್ದರೋ ಧೂಳು ಇಡೀ ಮೈದಾನವನ್ನೇ ತುಂಬಿಕೊಳ್ಳೋಕೆ ಶುರುವಾಯ್ತು. ಅಣ್ಣಾವ್ರು ಆಯೋಜಕರ ಮಧ್ಯದಿಂದ ವೇದಿಕೆಯ ಮೇಲೆ ಬಂದೇ ಬಿಟ್ಟರು. ಶುಭ್ರ ಬಿಳಿ ಪಂಚೆ ಬಿಳಿ ಅಂಗಿಯನ್ನು ತೊಟ್ಟಿದ್ದ ಧ್ರುವತಾರೆ ವೇದಿಕೆಯ ಮಧ್ಯಭಾಗದಲ್ಲಿ ಹಗಲಲ್ಲೂ ನಕ್ಷತ್ರದ ಹಾಗೆ ಮಿನುಗತೊಡಗಿದರು.

    ಕಣ್ಣಿಗೆ ಕಾಣಲೇ ಇಲ್ಲ

    ಕಣ್ಣಿಗೆ ಕಾಣಲೇ ಇಲ್ಲ

    ನಾನು ಕುಣಿದು ಕುಪ್ಪಳಿಸಿ ಅಣ್ಣಾವ್ರನ್ನ ನೋಡಬೇಕು ಅಂತಾ ಜಿಗಿದಾಡಿದೆ. ಎಷ್ಟೇ ಜಿಗಿದರು ಧೂಳು ತುಂಬಿದ್ದ ಮೈದಾನದ ಆ ಜನ ಜಂಗುಳಿಯಲ್ಲಿ ಅಣ್ಣಾವ್ರನ್ನು ನೋಡೋಕೆ ಆಗಲೇ ಇಲ್ಲ. ನಮ್ಮ ಅಪ್ಪಾಜಿಯವರು ಹೆಗಲಮೇಲೆ ಹೊತ್ತುಕೊಳ್ಳಲು ಹರಸಾಹಸ ಪಟ್ಟರೂ ಅದು ಸಾಧ್ಯವಾಗಲೇ ಇಲ್ಲ. ಅವರು ವೇದಿಕೆಯ ಮೇಲೆ ಇದ್ದಷ್ಟೂ ಹೊತ್ತು ಕೆಳಗೆ ನಿಂತಿದ್ದ ಅಭಿಮಾನಿಗಳ ಜೈಕಾರ ಕೇಳಿಸ್ತೇ ವಿನಾ ಅವರ ಮಾತುಗಳನ್ನು ಆಲಿಸುವುದಾಗಲೀ, ಅವರನ್ನು ನೋಡುವುದಾಗಲಿ ಆಗಲೇ ಇಲ್ಲ. ಬಹಳ ಬೇಜಾರಾಯ್ತು.

    ಸದಾಶಿವನಗರದ ಮನೆಯಲ್ಲೂ ದರ್ಶನವಾಗಲಿಲ್ಲ

    ಸದಾಶಿವನಗರದ ಮನೆಯಲ್ಲೂ ದರ್ಶನವಾಗಲಿಲ್ಲ

    ಅಪ್ಪಾಜಿ ನನ್ನ ಸಮಾಧಾನ ಮಾಡಿ 'ಇರ್ಲಿ ಬಿಡು ಇನ್ನೊಂದ್ಸರಿ ಯಾವಾಗಲಾದ್ರೂ ಇನ್ನೂ ಹತ್ತಿರದಿಂದ ತೋರಿಸ್ತೀನಿ' ಅಂತಾ ಸಮಾಧಾನ ಮಾಡಿ ಹತ್ತಿರದ ಹೋಟೆಲೊಂದರಲ್ಲಿ ತಿಂಡಿ ತಿನ್ನಿಸಿ ನಮ್ಮೂರಿಗಿದ್ದ ಕೊನೆಯ ಬಸ್ಸನ್ನು ಹತ್ತಿಸ್ಕೊಂಡು ಮನೆಗೆ ಕರೆದುಕೊಂಡು ಬಂದರು. ಅದಾಗಿ ಎಷ್ಟೋ ವರ್ಷಗಳ ನಂತರ ಬೆಂಗಳೂರಿಗೆ ಬಂದಮೇಲೂ ನನ್ನ ಆಟೋ ಸ್ನೇಹಿತರನ್ನು ಕಟ್ಟಿಕೊಂಡು ಹತ್ತಾರು ದಿನ ಸದಾಶಿವ ನಗರದ ಅಣ್ಣಾವ್ರ ಮನೆಯ ಹಿಂದೆ ಮುಂದೆ ಕಳ್ಳರ ಹಾಗೆ ಸುತ್ತಿದೆ, ಎಲ್ಲಾದರೂ ಕಾಣಿಸಿಯಾರೇನೋ ಅನ್ನೋ ಆಸೆಯಿಂದ, ಆದರೂ ಆರಾಧ್ಯದೇವರನ್ನು ಕಾಣಲು ಸಾಧ್ಯವಾಗಲೇ ಇಲ್ಲ.

    ಅವರ ಆದರ್ಶಗಳು ಶಾಶ್ವತ

    ಅವರ ಆದರ್ಶಗಳು ಶಾಶ್ವತ

    ಅವರನ್ನು ನೋಡಲೇ ಬೇಕು ಅನ್ನೋ ಮಹದಾಸೆ ಕೊನೆಗೂ ನೆರವೇರಲೇ ಇಲ್ಲ. ಆದರೆ ಅವರ ಆದರ್ಶಗಳು ಇಂದಿಗೂ ನನ್ನ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿವೆ. ಇಂದು ಅವರ ಹುಟ್ಟಿದ ದಿನ ಅವರು ಎಂದಿಗೂ ನಮ್ಮ ನಡುವೆ ಅಜರಾಮರ.

    - ನಿಮ್ಮ ಸಂಚಾರಿ ವಿಜಯ್

    English summary
    Actor Sanchari Vijay shares his experience of his childhood when he tried to see Rajkumar.
    Friday, April 24, 2020, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X