ಮೊಮ್ಮಗ ಬೇಕಾ? ಮೊಮ್ಮಗಳು ಬೇಕಾ? ಅಂದಾಗ ಸುದೀಪ್ ತಾಯಿ ಹೇಳಿದ್ದಿದ್ದೇನು?
ಕನ್ನಡ ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜಯನಗರ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 7:04ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಖಾಯಿಲೆಯಿಂದ ಸರೋಜಾ ಸಂಜೀವ್ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾದೇ ಸುದೀಪ್ ತಾಯಿ ಸರೋಜಾ ಅಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನ ಜೆಪಿ ನಗರದ ನಿವಾಸಕ್ಕೆ ತರಲಿದ್ದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೇರಿ ಚಿತ್ರರಂಗದ ಕೆಲವರು ಸರೋಜಾ ಸಂಜೀವ್ ಅಂತಿಮ ದರ್ಶನ ಪಡೆದಿದ್ದಾರೆ.

ಸರೋಜಾ ಸಂಜೀವ್ ಅಗಲಿಕೆ ಬೆನ್ನಲ್ಲೇ ಅವರ ಹಳೆಯ ಸಂದರ್ಶನದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಿರಿಯ ಸಿನಿಮಾ ಪತ್ರಕರ್ತೆ ಎಸ್. ಜಿ ತುಂಗರೇಣುಕಾ ಅವರು ನಡೆಸಿದ್ದ ತಾರೆಯರ ಮನೆ-ಮನ ಎನ್ನುವ ಸಂದರ್ಶನ ಕಾರ್ಯಕ್ರಮ ಇದು. ಆಗ ಸುದೀಪ್ ಪತ್ನಿ ಪ್ರಿಯಾ ಗರ್ಭಿಣಿ ಆಗಿದ್ದರು. ಈ ವೇಳೆ ಅತ್ತೆ- ಸೊಸೆ ಒಟ್ಟಿಗೆ ಕೂತು ಎಸ್. ಜಿ ತುಂಗರೇಣುಕಾ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ಪ್ರಿಯಾ ನಮ್ಮ ಮನೆಗೆ ಮಗಳಾಗಿ ಬಂದಿದ್ದಾಳೆ. ಹಾಗಾಗಿ ಅವಳ ಎಲ್ಲಾ ಗುಣ ನನಗೆ ಇಷ್ಟ ಎಂದು ಸರೋಜಾ ಸಂಜೀವ್ ಹೇಳಿದ್ದರು. ಪ್ರಿಯಾ ಈಗ ಅಡುಗೆ ಮಾಡಲು ಕಲಿಯುತ್ತಿದ್ದಾಳೆ, ಮುಂದೆ ಚೆನ್ನಾಗಿ ಮಾಡ್ತಾಳೆ ಎಂದಿದ್ದರು. ನಿಮಗೆ ಮೊಮ್ಮಗು ಬೇಕಾ? ಮೊಮ್ಮಗಳು ಬೇಕಾ? ಎನ್ನುವ ಪ್ರಶ್ನೆ ಸರೋಜಾ ಅವರು ಮಾತನಾಡಿ "ಈಗಾಗಲೇ 4 ಮೊಮ್ಮಕ್ಕಳಿಗೆ ಅಜ್ಜಿ ಆಗಿದ್ದೀನಿ, ಮಗನಿಗೆ ಮಗು ಹುಟ್ಟುತ್ತದೆ ಎನ್ನುವುದು ಬಹಳ ಸಂತೋಷ" ಎಂದು ಹೇಳಿದ್ದರು.
ಚಿಕ್ಕಂದಿನಲ್ಲಿ ಸುದೀಪ್ ಚೇಷ್ಟೆ ಮಾಡುತ್ತಿದ್ದ. ಹೆಣ್ಣು ಮಕ್ಕಳು ದೊಡ್ಡವರು, ಇವನು ಕೊನೆಯವನು. ಅಕ್ಕಂದಿರಿಗೆ ಇವ್ನು ಬಹಳ ಕಾಟ ಕೊಡ್ತಿದ್ದ. ನನ್ನ ಕೈಯಲ್ಲೂ ಒದೆ ತಿನ್ನುತ್ತಿದ್ದ. ಆದರೂ ಒಬ್ಬನೇ ಮಗ ಎಂದು ಮುದ್ದು ಜಾಸ್ತಿ. ಆದರೆ ಹಾಳಾಗದೇ ಒಳ್ಳೆ ಹುಡುಗನಾಗಿ ಮುಂದೆ ಬಂದ ಎಂದು ಸರೋಜಾ ಸಂಜೀವ್ ಹೇಳಿದ್ದರು. ಈ ವೀಡಿಯೋವನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಟ ಸುದೀಪ್ ಬಗ್ಗೆ ತಾಯಿ ಸರೋಜಾ ಅವರು ಮಾತನಾಡಿದ್ದರು. ಸುದೀಪ್ ಬಾಲ್ಯದ ಬಗ್ಗೆ ನೆನೆಪಿಸಿಕೊಂಡಿದ್ದರು. 7ನೇ ತರಗತಿಯಲ್ಲಿದ್ದಾಗ ಸುದೀಪ್ ತಾಯಿಗೆ ಮೊದಲ ಬಾರಿ ಸೀರೆವೊಂದನ್ನು ಉಡುಗೊರೆ ನೀಡಿದ್ದರು. ಆ ಸೀರೆಯನ್ನು ಶೋಗೆ ತಂದು ಅದರ ಬಗ್ಗೆ ಮಾತನಾಡಲಾಗಿತ್ತು. ಕೇಂಬ್ರಿಡ್ಜ್ ಶಾಲೆಯಲ್ಲಿ ಓದುತ್ತಿದ್ದೆ. ಆಗ ದೆಹಲಿ, ಆಗ್ರಾಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.
ಪ್ರವಾಸದ ವೇಳೆ ಸೀರೆ ನೋಡಿ ಇಷ್ಟವಾಗಿ ಖರೀದಿಸಿ ತಂದಿದ್ದೆ. 7ನೇ ತರಗತಿಯಲ್ಲಿದ್ದಾಗ ಪಾಕೆಟ್ ಮನಿ ಉಳಿಸಿ ತಾಯಿಗಾಗಿ ಸುದೀಪ್ ಕೊಡಿಸಿದ್ದ ಸೀರೆ ಅದು. ಆ ಸೀರೆಯನ್ನು ಇಂದಿಗೂ ಭದ್ರವಾಗಿ ಸರೋಜಮ್ಮ ಇಟ್ಟುಕೊಂಡಿದ್ದರು. ಸುದೀಪ್ ಸಾಧನೆಗೆ ತಾಯಿ ನಿಜವಾದ ಶಕ್ತಿ ಆಗಿದ್ದರು. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಕಿಚ್ಚ ಹೇಳಿಕೊಂಡಿದ್ದಾರೆ.
4 ವರ್ಷಗಳ ಹಿಂದೆ ತಾಯಿಗೆ ಹುಟ್ಟುಹಬ್ಬಕ್ಕೆ ಶುಭ ಕೋರಿ ಸುದೀಪ್ ಒಂದು ಟ್ವೀಟ್ ಮಾಡಿದ್ದರು. "ನಾನು ಸಾಕಷ್ಟು ಬಾರಿ ಸೋತಾಗ ನೀವು ನನ್ನಲ್ಲಿ ನಂಬಿಕೆ ಇಟ್ಟಿದ್ದಿರಿ. ನಾನು ಶಾಲೆಯಲ್ಲಿ ಯಾವುದೇ ಸ್ಪರ್ಧೆಯಲ್ಲಿ ಗೆದ್ದು ಪ್ರಶಸ್ತಿ ಹಿಡಿದು ಬಂದಾಗ ನಿಮಗೆ ಎಷ್ಟು ಸಂತೋಷವಾಗುತ್ತಿತ್ತು ಎನ್ನುವುದು ನನಗೆ ಇನ್ನು ನೆನಪಿದೆ. ಆ ಸಂತೋಷವನ್ನು ಇವತ್ತಿಗೂ ನಿಮ್ಮಲ್ಲಿ ನೋಡುತ್ತಿದ್ದೇನೆ. ನಿಮ್ಮ ಬಗ್ಗೆ ಇದು ಬಹಳ ಚಿಕ್ಕ ಮಾತಾಯಿತು ಅಮ್ಮ. ಹುಟ್ಟುಹಬ್ಬದ ಶುಭಾಶಯಗಳು, ಇನ್ನು ನೂರಾರು ವರ್ಷ ಸುಖವಾಗಿರಿ" ಎಂದು ಬರೆದುಕೊಂಡಿದ್ದರು.


Click it and Unblock the Notifications











