ಅಮಿತಾಬ್ ಬಚ್ಚನ್‌ರಿಂದ ರಜಿನಿಕಾಂತ್‌ವರೆಗೆ ; ಅಣ್ಣಾವ್ರ ಚಿತ್ರಗಳನ್ನು ಯಾರೆಲ್ಲ ರಿಮೇಕ್ ಮಾಡಿದ್ದಾರೆ ಗೊತ್ತಾ ?
ಸಾಮಾಜಿಕ, ಪೌರಾಣಿಕ, ಚಾರಿತ್ರಿಕ, ಜಾನಪದ ಹೀಗೆ ಎಲ್ಲ ಪ್ರಕಾರದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಏಕೈಕ ಕಲಾವಿದ ಅಂದರೆ ಅದು ಡಾ. ರಾಜಕುಮಾರ್ ಮಾತ್ರ. ಭಕ್ತಚೇತ, ಕನಕದಾಸ, ಬೇಡರಕಣ್ಣಪ್ಪ, ಕುಂಬಾರ, ಪುರಂದರದಾಸ, ರಾಘವೇಂದ್ರಸ್ವಾಮಿ, ಸರ್ವಜ್ಞ, ಹೋಟೆಲ್ ಕಾರ್ಮಿಕ, ಕೃಷಿಕಾರ್ಮಿಕ, ರೈತ, ಆಧ್ಯಾಪಕ, ಸೈನಿಕ, ಅಧಿಕಾರಿ, ರಾಜ ಮಹಾರಾಜ - ಹೀಗೆ ಹತ್ತಾರು ರೂಪ.. ಅವತಾರದಲ್ಲಿ ಕಾಣಿಸಿಕೊಂಡ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಮಾಸದ ಮುತ್ತು ಮತ್ತು ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ಕೂಡ ಹೌದು.
ಇಂಥಾ ಡಾ.ರಾಜ್ ಕುಮಾರ್ ಕುರಿತು ಮೊನ್ನೆ ರಾಮ್ ಗೋಪಾಲ್ ವರ್ಮಾ ನಾಲಿಗೆ ಹರಿಬಿಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಅವರ ಚಿತ್ರಗಳನ್ನು ರಿಮೇಕ್ ಮಾಡಿ ದಕ್ಷಿಣದ ಸ್ಟಾರ್‌ಗಳು ಗೆದ್ದರು ಎಂದು ಹೇಳಿದ್ದಾರೆ. ಆ ಸಾಲಿನಲ್ಲಿ ಡಾ.ರಾಜ್ ಕುಮಾರ್ ಅವರ ಹೆಸರನ್ನು ಕೂಡ ತೆಗೆದುಕೊಂಡಿದ್ದಾರೆ.

ಆದರೆ, ಇದು ರಾಮ್ ಗೋಪಾಲ್ ವರ್ಮಾ ಅವರ ಅಜ್ಞಾನದ ಹೇಳಿಕೆ. ವಾಸ್ತವದಲ್ಲಿ ಡಾ.ರಾಜ್ ಕುಮಾರ್ ಅವರ ಚಿತ್ರಗಳನ್ನು ಕೇವಲ ದಕ್ಷಿಣದ ಸ್ಟಾರ್‌ಗಳು ಮಾತ್ರವಲ್ಲ ಉತ್ತರದ ಮಹಾ ತಾರೆಯರು ಕೂಡ ರಿಮೇಕ್ ಮಾಡಿದ್ದಾರೆ. ಹಾಗಿದ್ದರೆ ಡಾ.ರಾಜ್ ಕುಮಾರ್ ಅವರ ಯಾವೆಲ್ಲ ಚಿತ್ರಗಳನ್ನು ಯಾರೆಲ್ಲ ರಿಮೇಕ್ ಮಾಡಿದ್ದರು ಎಂದು ತಿಳಿಯಲು ಮುಂದೆ ಓದಿ.
ಅಮಿತಾಬ್ ಬಚ್ಚನ್ - ಹಿಂದಿ
1978ರಲ್ಲಿ ತೆರೆಗೆ ಬಂದ ಶಂಕರ್ ಗುರು ಚಿತ್ರವನ್ನು ಅಮಿತಾಬ್ ಬಚ್ಚನ್ ಮಹಾನ್ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಕನ್ನಡದಲ್ಲಿ ವಿ.ಸೋಮಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರೆ ಹಿಂದಿಯಲ್ಲಿ ಈ ಚಿತ್ರವನ್ನು ಎಸ್ ರಾಮನಾಥನ್ ನಿರ್ದೇಶಿಸಿದ್ದರು. ವಹಿದಾ ರೆಹಮಾನ್, ಜೀನತ್ ಅಮಾನ್ ಮತ್ತು ಪರ್ವಿನ್ ಬಾಬಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಎಂಜಿಆರ್ - ತಮಿಳು
1967ರಲ್ಲಿ ತೆರೆಗೆ ಬಂದ ಬೀದಿ ಬಸವಣ್ಣ ಚಿತ್ರವನ್ನ ಆಧರಿಸಿ 1970ರಲ್ಲಿ ಎಂಜಿಆರ್ ತೇಡಿ ವಂದ ಮಾಪಿಳ್ಳೈ ಚಿತ್ರವನ್ನು ಮಾಡಿದ್ದರು. ಆ ನಂತರ 1970ರಲ್ಲಿ ತೆರೆಗೆ ಬಂದಿದ್ದ ಬಾಳು ಬೆಳಗಿತು ಚಿತ್ರವನ್ನು ಎಂ.ಜಿ.ರಾಮಚಂದ್ರನ್ ಊರಕ್ಕು ಉಜೇಪ್ಪಾವನ್ ಹೆಸರಿನಲ್ಲಿ 1976 ಎಂ.ಜಿ.ರಾಮಚಂದ್ರನ್ ರಿಮೇಕ್ ಮಾಡಿದ್ದರು.
ಎನ್ ಟಿ ಆರ್ - ತೆಲುಗು
ಅಣ್ಣಾವ್ರು ಅಭಿನಯಿಸಿದ್ದ ಕುಲಗೌರವ ಚಿತ್ರವನ್ನು ಎನ್.ಟಿ.ರಾಮ್ ರಾವ್ 1972ರಲ್ಲಿ ರಿಮೇಕ್ ಮಾಡಿದ್ದರು. ಆ ನಂತರ ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ ಚಿತ್ರವನ್ನು ಶ್ರೀ ಕೃಷ್ಣ ತುಲಾಭಾರಂ ಹೆಸರಿನಲ್ಲಿ ಎನ್.ಟಿ.ಆರ್ ರಿಮೇಕ್ ಮಾಡಿದರು. ಇವರು ಅಭಿನಯದ ಅಡವಿ ರಾಮುಡು ಚಿತ್ರಕ್ಕೆ ಅಣ್ಣಾವ್ರ ಗಂಧದ ಗುಡಿಯೇ ಸ್ಫೂರ್ತಿ.
ಶಿವಾಜಿ ಗಣೇಶನ್ - ತಮಿಳು
ಡಾ.ರಾಜ್ ಕುಮಾರ್ ಅಭಿನಯದ ಶಂಕರ್ ಗುರು ಚಿತ್ರವನ್ನು ಕೇವಲ ಅಮಿತಾಬ್ ಬಚ್ಚನ್ ಮಾತ್ರವಲ್ಲ ಶಿವಾಜಿ ಗಣೇಶನ್ ಕೂಡ ಮಾಡಿದ್ದರು. ತಿರಿಸೂಲಂ ಹೆಸರಿನಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಅಣ್ಣಾವ್ರ ಮತ್ತೊಂದು ಕ್ಲಾಸಿಕ್ ಚಿತ್ರ ಕಸ್ತೂರಿ ನಿವಾಸವನ್ನು ಅವಂಧನ್ ಮಣಿಧನ್ ಹೆಸರಿನಲ್ಲಿ ಶಿವಾಜಿ ಗಣೇಶನ್ ರಿಮೇಕ್ ಮಾಡಿದ್ದರು.
ಜೆಮಿನಿ ಗಣೇಶನ್ - ತಮಿಳು
1967ರಲ್ಲಿ ತೆರೆಗೆ ಬಂದ ಗಂಗೆ ಗೌರಿ ಚಿತ್ರವನ್ನು 1973ರಲ್ಲಿ ಗಂಗಾ ಗೌರಿ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಕಿಂಗ್ ಆಫ್ ರೊಮ್ಯಾನ್ಸ್ ಎಂದೇ ಕರೆಯಲ್ಪಡುತ್ತಿದ್ದ ಜೆಮಿನಿ ಗಣೇಶನ್ ಅಭಿನಯಿಸಿದ್ದರು.
ರಜಿನಿಕಾಂತ್ - ತಮಿಳು
ಪ್ರೇಮದ ಕಾಣಿಕೆ ಚಿತ್ರದ ರಿಮೇಕ್ ಆದ ಪೊಲ್ಲಾಧವನ್ ಚಿತ್ರದಲ್ಲಿ ರಜಿನಿಕಾಂತ್ ಅಭಿನಯಿಸಿದ್ದರು. ನಾ ನಿನ್ನ ಮರೆಯಲಾರೆ ಚಿತ್ರವನ್ನು ಪುದು ಕವಿತೈ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಆ ನಂತರ ಅನುರಾಗ ಅರಳಿತು ಚಿತ್ರದ ರಿಮೇಕ್ ಮನ್ನನ್ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.
ಅಕ್ಕಿನೇನಿ ನಾಗೇಶ್ವರ್ ರಾವ್ - ತೆಲುಗು
ಅಣ್ಣಾವ್ರ ಬಾಳು ಬೆಳಗಿತು ಚಿತ್ರದ ತೆಲುಗು ರಿಮೇಕ್ ಆಗಿದ್ದ ಮಂಚಿವಾಡುದಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯಿಸಿದ್ದರು. ಭಕ್ತಕುಂಬಾರ ಚಿತ್ರದ ರಿಮೇಕ್ ಚಕ್ರಧಾರಿಯಲ್ಲಿ ಕೂಡ ಎ.ಎನ್.ಆರ್ ನಟಿಸಿದ್ದರು.
ಶೋಭನ್ ಬಾಬು - ತೆಲುಗು
ತೆಲುಗು ಚಿತ್ರರಂಗದ ಖ್ಯಾತ ನಾಯಕ ಶೋಭನ್ ಬಾಬು ಕೂಡ ಡಾ.ರಾಜ್ ಕುಮಾರ್ ಅವರ ರಿಮೇಕ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಲಿಸುವ ಮೋಡಗಳು ಮತ್ತು ಸನಾದಿ ಅಪ್ಪಣ್ಣ ಇವರು ಮಾಡಿದ ರಿಮೇಕ್ ಚಿತ್ರಗಳು. ವಿಶೇಷ ಅಂದರೆ ಚಲಿಸುವ ಮೋಡಗಳು ಚಿತ್ರಕ್ಕೆ ತೆಲುಗಿನಲ್ಲಿ ರಾಜಕುಮಾರ ಎಂದೇ ಹೆಸರಿಡಲಾಗಿತ್ತು.
ಕೃಷ್ಣ - ತೆಲುಗು
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಕೂಡ ಡಾ.ರಾಜ್ ಕುಮಾರ್ ಅವರ ಶಂಕರ್ ಗುರು ಚಿತ್ರದ ತೆಲುಗು ರಿಮೇಕ್‌ನಲ್ಲಿ ಅಭಿನಯಿಸಿದ್ದರು. ತೆಲುಗಿನಲ್ಲಿ ಕುಮಾರರಾಜ ಶಂಕರ್ ಗುರು ಹೆಸರಿನಲ್ಲಿ ಚಿತ್ರ ತೆರೆಗೆ ಬಂದಿತ್ತು. ಇವರ ಮಹಾರಾಜಶ್ರೀ ಮಾಯಗಾಡು ಚಿತ್ರಕ್ಕೆ ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರ ಸ್ಫೂರ್ತಿಯಾಗಿತ್ತು.
ಪ್ರೇಮ್ ನಜೀರ್ - ಮಲಯಾಳಂ
ಮಲಯಾಳಂ ಚಿತ್ರರಂಗದ ಬಹುದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾದ ಪ್ರೇಮ್ ನಜೀರ್ ಕೂಡ ಡಾ.ರಾಜ್ ಕುಮಾರ್ ಅವರ ಚಿತ್ರದ ರಿಮೇಕ್‌ನಲ್ಲಿ ಅಭಿನಯಿಸಿದ್ದರು. ಕಣ್ತೆರದು ನೋಡು ಚಿತ್ರದ ಮಲಯಾಳಂ ಆವೃತ್ತಿ ಕಾವ್ಯಮೇಳ ಚಿತ್ರಕ್ಕೆ ಬಣ್ಣ ಹಚ್ಚಿದ್ದರು.
ರಾಜೇಶ್ ಖನ್ನಾ - ಹಿಂದಿ
ಭಾರತದ ಮೊದಲ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ರಾಜೇಶ್ ಖನ್ನಾ ಕೂಡ ಡಾ.ರಾಜ್ ಕುಮಾರ್ ಅವರ ಚಿತ್ರವನ್ನು ರಿಮೇಕ್ ಮಾಡಿದ್ದರು. ಬಾಳು ಬೆಳಗಿತು ಚಿತ್ರವನ್ನು ರಾಜೇಶ್ ಖನ್ನಾ ಹಮ್‌ಶಕಲ್ ಹೆಸರಿನಲ್ಲಿ ರಿಮೇಕ್ ಮಾಡಿದ್ದರು.
ಧಮೇಂದ್ರ - ಹಿಂದಿ
ಬಾಲಿವುಡ್‌ನ ಅಂದಕಾಲತ್ತಿಲ್‌ನ ಸೂಪರ್ ಸ್ಟಾರ್ ಧಮೇಂದ್ರ ಕೂಡ ಗಂಧದಗುಡಿ ಹಿಂದಿ ರಿಮೇಕ್ ನಲ್ಲಿ ಅಭಿನಯಿಸಿದ್ದರು. ಹಿಂದಿಯಲ್ಲಿ ಈ ಚಿತ್ರಕ್ಕೆ ಕರ್ತವ್ಯ ಎಂದು ಹೆಸರಿಡಲಾಗಿತ್ತು. ತಾಯಿಗೆ ತಕ್ಕ ಮಗ ಚಿತ್ರವನ್ನು ಕೂಡ ಹಿಂದಿಗೆ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಕೂಡ ಧರ್ಮೇಂದ್ರ ಅಭಿನಯಿಸಿದ್ದರು.
ಕೇವಲ ಇವರಷ್ಟೇ ಅಲ್ಲ ಗೋವಿಂದಾ ಮತ್ತು ಅನಿಲ್ ಕಪೂರ್ ಕೂಡ ನಮ್ಮ ಡಾ.ರಾಜ್ ಕುಮಾರ್ ಅವರ ಚಿತ್ರಗಳನ್ನು ರಿಮೇಕ್ ಮಾಡಿದ್ದಾರೆ. ಗೆದ್ದಿದ್ದಾರೆ. ಆದರೆ ಇದನ್ನೆಲ್ಲ ಅರಿಯದ ಜ್ಞಾನದ ಕೊರತೆಯನ್ನು ಹೊಂದಿರುವ ರಾಮ್ ಗೋಪಾಲ್ ವರ್ಮಾ ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ರಾಮ್ ಗೋಪಾಲ್ ಅವರ ಈ ಹೇಳಿಕೆಯನ್ನು ಖಂಡಿಸಿ ಫಿಲ್ಮಿ ಬೀಟ್ ಕನ್ನಡ ಮೂಲಕ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಉತ್ತರವನ್ನು ಕೊಟ್ಟಿದ್ದಾರೆ. ರಾಮ್ ಗೋಪಾಲ್ ವರ್ಮಾ ಒಬ್ಬ ವಿಕೃತ ಕಾಮಿ ಎಂದು ಹೇಳಿದ್ದಾರೆ.
ಹೌದು, ಫಿಲ್ಮಿ ಬೀಟ್ ಕನ್ನಡಗೆ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಪ್ರಕಾಶ್ ರಾಜ್ ಮೇಹು, ರಾಮ್ ಗೋಪಾಲ್ ವರ್ಮಾ ಒಬ್ಬ ವಿಕೃತ ವ್ಯಕ್ತಿ, ಸೋಶೀಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಜೊತೆಗಿನ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡುವುದೇ ಅವನ ಸಾಧನೆ ಎಂದು ಹೇಳಿದ್ದಾರೆ. ಉಳಿದ ಕಲಾವಿದರ ಬಗ್ಗೆ ಆ ವ್ಯಕ್ತಿ ಹೇಳಿರುವ ಮಾತಿನಲ್ಲಿ ನಿಜಾಂಶ ಇದೆಯಾ ಇಲ್ವಾ ಗೊತ್ತಿಲ್ಲ ಆದರೆ ರಾಜ್ ಕುಮಾರ್ ಅವರ ಬಗ್ಗೆ ಆ ವ್ಯಕ್ತಿ ಹೇಳಿರುವ ಮಾತು ತಪ್ಪು ಎಂದಿರುವ ಪ್ರಕಾಶ್ ರಾಜ್ ಮೇಹು, ಅಮಿತಾಬ್ ಬಚ್ಚನ್ ಅವರ ಯಾವ ಚಿತ್ರವನ್ನು ಕೂಡ ಡಾ.ರಾಜ್ ಕುಮಾರ್ ರಿಮೇಕ್ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಶಂಕರ್ ಗುರು ಚಿತ್ರವನ್ನು ಅಮಿತಾಬ್ ಬಚ್ಚನ್ ಮಹಾನ್ ಹೆಸರಿನಲ್ಲಿ ರಿಮೇಕ್ ಮಾಡಿದರು ಎಂದು ಹೇಳಿದ್ದಾರೆ.
ಹೀಗಾಗಿ ರಾಮ್ ಗೋಪಾಲ್ ವರ್ಮಾ ಮಾತನಾಡಿದ ಮಾತು ಡಾ.ರಾಜ್ ಕುಮಾರ್ ಅವರಿಗೆ ಅಪ್ಲೈ ಆಗಲ್ಲ ಉಳಿದವರ ಕಥೆ ನಮಗೆ ಗೊತ್ತಿಲ್ಲ ಎಂದಿರುವ ಪ್ರಕಾಶ್ ರಾಜ್ ಮೇಹು, ರಾಮ್ ಗೋಪಾಲ್ ವರ್ಮಾಗೆ ಡಾ.ರಾಜ್ ಕುಮಾರ್ ಅವರ ಸಾಧನೆಗಳು ಗೊತ್ತಿದ್ದಂತೆ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications











