"ದುಡ್ಡಿಗಾಗಿ ಎಕ್ಸ್‌ಪೋಸ್ ಮಾಡಿ, ನಾಳೆ ಗಂಡ ಕೇಳಿದ್ರೆ ಏನು ಹೇಳಲಿ" ಎಂದಿದ್ದರಂತೆ ನಟಿ ಸೌಂದರ್ಯ!
ನಟಿ ಸೌಂದರ್ಯ. ಈ ಹೆಸರು ಕೇಳಿದ ಕೂಡಲೇ ಸುಂದರ ರೂಪ ಕಣ್ಣಮುಂದೆ ಬರುತ್ತದೆ. ಅಭಿನವ ಸಾವಿತ್ರಿ ಎನ್ನುವ ಬಿರುದು ಪಡೆದಿದ್ದ ಸೌಂದರ್ಯ ದುರದೃಷ್ಟವಶಾತ್ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದರು. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ಮಾತ್ರ ಆಕೆ ನಟಿಸುತ್ತಿದ್ದರು. ಎಕ್ಸ್‌ಪೋಸಿಂಗ್ ಮಾಡುತ್ತಿರಲಿಲ್ಲ. ಎಕ್ಸ್‌ಪೋಸಿಂಗ್ ಬಗ್ಗೆ ತಮ್ಮ ನಿಲುವನ್ನು ಸ್ನೇಹಿತೆ ನಟಿ ಆಮನಿ ಬಳಿ ಹೇಳಿಕೊಂಡಿದ್ದರಂತೆ. ಸಂದರ್ಶನವೊಂದರಲ್ಲಿ ಆಮನಿ ಇದನ್ನು ವಿವರಿಸಿದ್ದಾರೆ.
ಪಂಚಭಾಷಾ ತಾರೆಯಾಗಿ ನಟಿ ಸೌಂದರ್ಯ ಮೋಡಿ ಮಾಡಿದ್ದರು. 13 ವರ್ಷಗಳ ಕರಿಯರ್‌ನಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದರು. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸೌಂದರ್ಯ, ಹೀರೊಗಳ ರೇಂಜಿಗೆ ಸಂಭಾವನೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗಿ ಮುಂದೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಂಬರ್ ವನ್ ಹೀರೊಯಿನ್ ಆಗಿ ಬೆಳೆದರು. ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ವಿಷ್ಣುವರ್ಧನ್‌ರಂತಹ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದರು. ಗ್ಲಾಮರ್ ಬೊಂಬೆಯಂತೆ ನಿಲ್ಲುವ, ಮರ ಸುತ್ತುವ ಪಾತ್ರಗಳನ್ನು ಎಂದೂ ಮಾಡಲಿಲ್ಲ.
ನಟಿ ಸೌಂದರ್ಯ ಗ್ಲಾಮರಸ್ ರೋಲ್‌ಗಳನ್ನು ಎಂದೂ ಮಾಡಲೇಯಿಲ್ಲ. ಆಗೊಮ್ಮೆ ಈಗೊಮ್ಮೆ ಮಾಡ್ರನ್ ಡ್ರೆಸ್‌ನಲ್ಲಿ ಕಾಣಿಸಕೊಂಡಿದ್ದು ಬಿಟ್ಟರೆ ಬಹುತೇಕ ಸೀರೆ, ಲಂಗಾ ದಾವಣಿಯಲ್ಲೇ ಕಂಗೊಳಿಸಿದ್ದರು. ಪಕ್ಕದ ಮನೆ ಹುಡುಗಿ, ಮನೆ ಮಗಳಂತಹ ಪಾತ್ರಗಳಲ್ಲೇ ಹೆಚ್ಚು ಬಣ್ಣ ಹಚ್ಚಿದ್ದರು. ಎಕ್ಸ್‌ಪೋಸಿಂಗ್, ಇಂಟಿಮೆಂಟ್ ಸೀನ್ ಮಾಡಲೇ ಇಲ್ಲ. ಎಕ್ಸ್‌ಪೋಸಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಆಪ್ತ ಸ್ನೇಹಿತೆ ನಟಿ ಆಮನಿ ಬಳಿ ಹೇಳಿಕೊಂಡಿದ್ದರಂತೆ ಸೌಂದರ್ಯ.

ಎಕ್ಸ್‌ಪೋಸ್ ಮಾಡದೇ ಗೆದ್ದ ಸೌಂದರ್ಯ
90ರ ದಶಕದಲ್ಲಿ ರಮ್ಯಾಕೃಷ್ಣ, ರೋಜಾ, ಮೀನಾರಂತಹ ನಟಿಯರು ಗ್ಲಾಮರಸ್ ರೋಲ್‌ಗಳ ಮೂಲಕ ಸದ್ದು ಮಾಡುತ್ತಿದ್ದರು. ಪಾತ್ರ ಬಯಸಿದರೆ ಸ್ಕಿನ್ ಶೋಗೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಇವರೆಲ್ಲ ಎಷ್ಟೇ ಪೈಪೋಟಿ ನೀಡಿದರೂ ಸೌಂದರ್ಯ ಮಾತ್ರ ಎಕ್ಸ್‌ಪೋಸ್ ಮಾಡೋಕೆ ಒಪ್ಪಲೇಯಿಲ್ಲ. ಒಂದೆರಡು ಬಾರಿ ಸೊಂಟ ತೋರಿಸಿದ್ದರು ಬಿಟ್ಟರೆ ಅದನ್ನು ಮೀರಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿಲ್ಲ. ಮೈಮಾಟ ಪ್ರದರ್ಶನ ಮಾಡದೆಯೇ 10 ವರ್ಷಗಳ ಕಾಲ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಸೌಂದರ್ಯ ಮೆರೆದರು.

ಎಕ್ಸ್‌ಪೋಸಿಂಗ್ ಬಗ್ಗೆ ಸ್ನೇಹಿತೆ ಬಳಿ ಹೇಳಿದ್ದೇನು?
ಒಮ್ಮೆ ಶೂಟಿಂಗ್ ವೇಳೆ ಇಬ್ಬರೇ ಮಾತನಾಡುತ್ತಿದ್ದಾಗ "ಯಾಕೆ ನೀನು ಎಕ್ಸ್‌ಪೋಸ್‌ಗೆ ಒಪ್ಪಿಕೊಳ್ಳುವುದಿಲ್ಲ?" ಎಂದು ಆಮನಿ ಸೌಂದರ್ಯ ಅವರನ್ನು ಕೇಳಿದ್ದರಂತೆ. ಅದಕ್ಕೆ ಉತ್ತರಿಸಿದ ಸೌಂದರ್ಯ, "ಯಾಕೆ ಮಾಡಬೇಕು.? ನಾಳೆ ಮದುವೆ ಆದಮೇಲೆ ಗಂಡ ಕೇಳುವುದಿಲ್ಲವಾ? ಯಾಕೆ ಆ ರೀತಿ ಎಲ್ಲಾ ಮಾಡಿದ್ದೀಯಾ ನನಗೂ ಒಂದು ಫ್ಯಾಮಿಲಿ ಇರುತ್ತದೆ. ಈಗ ಇವರಿಗಾಗಿ ದುಡ್ಡಿಗಾಗಿ ಹಂಗೆಲ್ಲಾ ಮಾಡಿಬಿಟ್ಟರೆ ನಾಳೆ ಹೆಂಗೆ ಎಂದು ಹೇಳಿದ್ದಳು. ಸೌಂದರ್ಯ ಒಂದು ಎಥಿಕ್ ಇಟ್ಟುಕೊಂಡಿದ್ದರು. ಅದನ್ನು ಎಂದೂ ಮೀರಲಿಲ್ಲ" ಎಂದು ಆಮನಿ ವಿವರಿಸಿದ್ದಾರೆ.

ಮದುವೆ ಆದ ಒಂದೇ ವರ್ಷಕ್ಕೆ ಸೌಂದರ್ಯ ನಿಧನ
ನಟಿ ಸೌಂದರ್ಯ ಸಾಕಷ್ಟು ಕನಸು ಕಂಡಿದ್ದರು. ಮದುವೆ ಮಕ್ಕಳು ಅಂತೆಲ್ಲಾ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಆಕೆ ಕಂಡ ಕನಸು ನನಸಾಗುವ ಮುನ್ನವೇ ಹೊರಟು ಬಿಟ್ಟರು. ಜಿ. ಎಸ್ ರಘು ಎಂಬುವವರ ಜೊತೆ ಸೌಂದರ್ಯ ಮದುವೆ ನಡೆದಿತ್ತು. ಮದುವೆ ಆಗಿ ವರ್ಷ ಕಳೆಯುವ ಮೊದಲೇ ಸೌಂದರ್ಯ ನಿಧನರಾಗಿದ್ದರು. ಆಕೆ ಕೊನೆಯುಸಿರೆಳೆದಾಗ ಗರ್ಭಿಣಿ ಆಗಿದ್ದರು ಎಂದು ಕೆಲವರು ಹೇಳಿದ್ದರು. ಅದೆಲ್ಲಾ ಸುಳ್ಳು ಎಂದು ಆಮನಿ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಇಬ್ಬರೂ ಆತ್ಮೀಯ ಸ್ನೇಹಿತೆಯರು
ನಟಿ ಸೌಂದರ್ಯ ಹಾಗೂ ನಟಿ ಆಮನಿ ಒಂದೇ ಸಮಯದಲ್ಲಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಆಮನಿ ಕೂಡ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ತೆಲುಗು ಚಿತ್ರರಂಗದಲ್ಲಿ ಒಟ್ಟಿಗೆ ಗುರ್ತಿಸಿಕೊಂಡಿದ್ದರು. ಇಬ್ಬರು ಕನ್ನಡಲ್ಲೇ ಮಾತನಾಡುತ್ತಿದ್ದರಂತೆ. ಕನ್ನಡ ಹಾಡುಗಳನ್ನು ಹಾಡುತ್ತಾ ಕಾಲ ಕಳೀತಿದ್ದರಂತೆ. 'ಅಮ್ಮದೊಂಗ' ಎನ್ನುವ ಸಿನಿಮಾದಲ್ಲೂ ಇಬ್ಬರು ಒಟ್ಟಿಗೆ ನಟಿಸಿದ್ದರು. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಸ್ನೇಹ ಇತ್ತು. ಆಮನಿ ಕೂಡ ಸೌಂದರ್ಯ ಮದುವೆಗೆ ಹಾಜರಾಗಿದ್ದರು. ಸೌಂದರ್ಯ ಬದಲು ನಾನೇ ಆ ಜಾಗದಲ್ಲಿ ಸತ್ತಿದ್ದರೆ ಚೆನ್ನಾಗಿತ್ತು ಎಂದು ಸಂದರ್ಶನದಲ್ಲಿ ಆಮನಿ ಭಾವುಕರಾಗಿದ್ದರು.


Click it and Unblock the Notifications











