"ಸೌಂದರ್ಯಗೆ ಅವರಪ್ಪ ಸ್ವೀಟ್ಸ್ ತಿನ್ನೋಕು ಬಿಡ್ತಿರಲಿಲ್ಲ, ಏನೂ ಅನುಭವಿಸ್ದೆ ಹೋಗಿಬಿಟ್ಲು"; ಆಮನಿ
ಬಹಳ ಚಿಕ್ಕ ವಯಸ್ಸಿನಲ್ಲೇ ನಟಿ ಸೌಂದರ್ಯ ಬಾರದ ಲೋಕಕ್ಕೆ ಹೊರಟುಬಿಟ್ಟರು. 20 ವರ್ಷಗಳ ಹಿಂದೆ ವಿಮಾನ ದುರಂತದಲ್ಲಿ ಆಕೆ ಕೊನೆಯುಸಿರೆಳೆದಿದ್ದರು. ಜಕ್ಕೂರು ಏರ್‌ಫೀಲ್ಡ್‌ನಲ್ಲಿ ಏರ್‌ಕ್ರಾಫ್ಟ್ ಟೇಕಾಫ್ ಆಗುತ್ತಿದ್ದಂತೆ ಕ್ರ್ಯಾಶ್ ಆಗಿ ಸುಟ್ಟು ಭಸ್ಮವಾಗಿತ್ತು. ನಟಿ ಸೌಂದರ್ಯಗೆ ಬೆಂಗಳೂರು ಮೂಲದ ತೆಲುಗು ನಟ ಆಮನಿ ಆತ್ಮೀಯ ಗೆಳತಿಯಾಗಿದ್ದರು.
ನಟಿ ಆಮನಿ ಸಾಕಷ್ಟು ಸಂದರ್ಶನಗಳಲ್ಲಿ ಗೆಳತಿ ಸೌಂದರ್ಯ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಕನ್ನಡ ಸಂದರ್ಶನದಲ್ಲಿ ಮತ್ತೊಮ್ಮೆ ಸೌಂದರ್ಯ ಜೊತೆಗಿನ ಒಡನಾಟದ ಬಗ್ಗೆ ನೆನಪಿಸಿಕೊಂಡಿದ್ದಾರೆ. ನಾವಿಬ್ಬರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದೆವು. ಇಬ್ಬರೂ ಕನ್ನಡವರಾಗಿದ್ದರಿಂದ ನಮ್ಮಿಬ್ಬರ ಒಡನಾಟ ಹೆಚ್ಚಾಗಿತ್ತು. ಸದಾ ಕನ್ನಡದಲ್ಲೇ ಮಾತನಾಡುತ್ತಿದ್ದೆವು ಎಂದಿದ್ದಾರೆ.

"ನಮ್ಮಿಬ್ಬರಿಗೆ ಕನ್ನಡ ಹಾಡುಗಳಂದ್ರೆ ಬಹಳ ಇಷ್ಟ. ಇಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಕೂತು ಕನ್ನಡ ಹಾಡುಗಳನ್ನು ಹಾಡುತ್ತಿದ್ದೆವು. ಅಣ್ಣಾವ್ರು, ವಿಷ್ಣು ಸರ್, ಅನಂತ್ ಸರ್ ಹಾಡುಗಳನ್ನು ಇಷ್ಟಪಟ್ಟು ಹಾಡುತ್ತಿದ್ದೆವು. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳು ಗುನುಗುತ್ತಿದ್ದೆವು. ಸೌಂದರ್ಯ ಬಗ್ಗೆ ಮಾತನಾಡಿದ ಪ್ರತಿ ಬಾರಿ ಕಣ್ಣೀರು ಹಾಕಿದ್ದೀನಿ."
"ದೇವರೇ ಸೌಂದರ್ಯ ಬದ್ಲು ನನ್ನನ್ನು ಕರ್ಕೊಂಡ್‌ಬಿಡಬಾರದಿತ್ತಾ? ಎಂದು ನಾನು ಅಂದುಕೊಂಡಿದ್ದು ಇದೆ. ಆ ರೀತಿ ನಾನು ಫೀಲ್ ಮಾಡಿದ್ದು ಇದೆ. ಯಾಕಂದ್ರೆ ಆಗಿನ್ನು ನನಗೆ ಮಕ್ಕಳು ಆಗಿರಲಿಲ್ಲ. ಆ ನೋವಲ್ಲಿ ಇದ್ದೆ. ಆದರೆ ಸೌಂದರ್ಯ ಸಾವಿನ ವಿಚಾರ ಗೊತ್ತಾದಾಗ ಯಾಕೆ ದೇವ್ರೇ ಸೌಂದರ್ಯ ಬದ್ಲು ನನ್ನ ಕರ್ಕೊಬಾರದಿತ್ತಾ? ಎಂದುಕೊಂಡಿದ್ದೆ. ಕಾರಣ ಆಕೆ ಕಷ್ಟಬಿದ್ದು ಸಾಕಷ್ಟು ಸಂಪಾದಿಸಿದ್ದಳು. ಆದರೆ ಏನೂ ಅನುಭವಿಸಿರಲಿಲ್ಲ. ಇನ್ನು ಮುಂದೆ ಅನುಭವಿಸಬೇಕು ಎನ್ನುವ ಸಮಯಕ್ಕೆ ಹೊರಟು ಹೋದಳು"
"ಸೌಂದರ್ಯಗೆ ಸ್ವೀಟ್ಸ್ ಅಂದ್ರೆ ಬಹಳ ಇಷ್ಟ ಇತ್ತು. ಊಟ ಅಂದ್ರೆ ಇಷ್ಟ. ಆದರೆ ದಪ್ಪ ಆಗಿಬಿಡ್ತೀನಿ ಎನ್ನುವ ಕಾರಣಕ್ಕೆ ಬಾಯಿ ಕಟ್ಟುತ್ತಿದ್ದಳು. ಯಾವುದನ್ನು ಇಷ್ಟಪಟ್ಟು ತಿನ್ನುತ್ತಿರಲಿಲ್ಲ. ಅವರ ತಂದೆ ಜಾಸ್ತಿ ತಿನ್ನಬೇಡ, ಸಾಕು ಮಗಾ.. ಸಾಕು ಮಗಾ ಎಂದುಬಿಡುತ್ತಿದ್ದರು. ಪಾಪ ಅದನ್ನೆಲ್ಲಾ ಅನುಭವಿಸಲೇಯಿಲ್ಲ. ಅಷ್ಟು ಕಂಟ್ರೋಲ್‌ನಲ್ಲಿ ಇದ್ದು ಹೆಸರು ಮಾಡಿ, ಸಂಪಾದನೆ ಮಾಡಿ ಒಳ್ಳೆ ಲೈಫ್ ಅನುಭವಿಸುವ ಮುನ್ನ ಹೋಗಿಬಿಟ್ಟಳು ಎಂದಾಗ ಮನಸ್ಸಿಗೆ ಬಹಳ ನೋವಾಗಿತ್ತು"

"ಹೆಸರಿಗೆ ತಕ್ಕ ಸೌಂದರ್ಯ, ದೇವತೆ ಅವಳು. ಸೌಮ್ಯ ಸ್ವಭಾವದಳು. ಸಿನಿಮಾಗಳಲ್ಲಿ ಎಕ್ಸ್‌ಪೋಸ್ ಮಾಡಬೇಡ ಎನ್ನುತ್ತಿದ್ದಳು. ನಾಳೆ ಮದುವೆ ಆಗಿ ಗಂಡ ಬಂದ್ರೆ ಆತನಿಗೆ ಏನು ಹೇಳೋದು ಎನ್ನುತ್ತಿದ್ದಳು. ಆದರೆ ಅಷ್ಟೊತ್ತಿಗಾಗಲೇ ನಾನು ಕೆಲ ಸಿನಿಮಾಗಳಲ್ಲಿ ಎಕ್ಸ್‌ಪೋಸ್ ಮಾಡಿ ನಟಿಸಿದ್ದೆ. ಆದರೂ ಈ ರೀತಿ ಸಲಹೆ ನೀಡುತ್ತಿದ್ದಳು"
"ಸೌಂದರ್ಯ ತಂದೆ ಮಗ ಅಮರ್ ಜೊತೆ ನನ್ನನ್ನು ಮದುವೆ ಆಗುವಂತೆ ಕೇಳಿದ್ದರು. ಚಿತ್ರೀಕರಣದ ವೇಳೆ ಒಟ್ಟಿಗೆ ಕೂತು ಊಟ ಮಾಡುವಾಗ ಈ ವಿಚಾರ ಪ್ರಸ್ತಾಪಿಸಿದ್ದರು. ನಾನು ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೆ. ಇಲ್ಲ ನಾನು ನಿಜವಾಗಿಯೂ ಕೇಳುತ್ತಿದ್ದೇನೆ ಎಂದಿದ್ದರು. ಅವರ ಕುಟುಂಬದ ಜೊತೆ ನನಗೆ ಬಹಳ ಒಳ್ಳೆಯ ಒಡನಾಟ ಇತ್ತು" ಎಂದು ಆಮನಿ ವಿವರಿಸಿದ್ದಾರೆ.


Click it and Unblock the Notifications











