ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿದ್ದ ಚೆಲುವೆ ಈಗ ಸನ್ಯಾಸಿನಿ ; ಪ್ರೇಮಾನಂದ ಮಹಾರಾಜ್ ಆಜ್ಞೆ- ಕೃಷ್ಣ ಭಕ್ತೆಯಾದ ನಟಿ
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ.
ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ .ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಅನ್ನಾ ಜೈಸಿಂಘಾನಿ ಸದ್ಯದ ಉದಾಹರಣೆ.

ಹೌದು, ಅನ್ನಾ ಜೈಸಿಂಘಾನಿ.. ಮಧ್ಯ ಪ್ರದೇಶದ ಗ್ವಾಲಿಯರ್ ನ ಚೆಲುವೆ. ಬಾಲ್ಯದಿಂದಲೇ ನೃತ್ಯ ಮತ್ತು ಅಭಿನಯದತ್ತ ಆಸಕ್ತಿ ಹೊಂದಿದ್ದ ಅನ್ನಾ 2011ರಲ್ಲಿ ಕೊರಿಯೋಗ್ರಾಫರ್ ಆಗಿ ತಮ್ಮ ವೃತ್ತಿ ಬದುಕು ಶುರು ಮಾಡಿದ್ದರು.
ಆ ನಂತರ ಏಕ್ತಾ ಕಪೂರ್ ಅವರ ಬಾಲಾಜಿ ನಿರ್ಮಾಣ ಸಂಸ್ಥೆಯಡಿ ಕಲಿಸಿ ಕೊಡಲಾಗುತ್ತಿದ್ದ ಅಭಿನಯದ ಅ.ಆ.ಇ.ಈ ಕಲಿತ ಅನ್ನಾ ನಟಿಯಾಗಿ ಒಂದೊಂದೆ ಮೆಟ್ಟಿಲನ್ನೇರಲು ಶುರು ಮಾಡಿದರು. ''ದೇಖಾ ಏಕ್ ಖ್ವಾಬ್'' ಇವರ ಜನಪ್ರಿಯ ಧಾರಾವಾಹಿ. ನಾಯಕಿಯ ಆತ್ಮೀಯ ಗೆಳತಿಯ ಪಾತ್ರವನ್ನು ಈ ಧಾರಾವಾಹಿಯಲ್ಲಿ ಅನ್ನಾ ನಿರ್ವಹಿಸಿದ್ದರು.
''ಸಾವಧಾನ್ ಇಂಡಿಯಾ''.. ''ಕ್ರೈಮ್ ಪೆಟ್ರೋಲ್''.. ಅಂತಹ ಸರಣಿ ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡ ಅನ್ನಾ ಜೈಸಿಂಘಾನಿ ಮತ್ತೊಂದು ಕಡೆ ಡ್ಯಾನ್ಸ್ ಮಾಸ್ಟರ್ ಆಗಿ ಕೂಡ ಹೆಸರು ಮಾಡಲು ಶುರು ಮಾಡಿದ್ದರು. ಆ ಕಾಲದ ಪ್ರಸಿದ್ಧ ಡ್ಯಾನ್ಸ್ ಮಾಸ್ಟರ್ ಥಾಮಸ್ ಪಾಲ್ಸನ್ ಅವರ ಗರಡಿಯನ್ನು ಸೇರಿಕೊಂಡ ಅನ್ನಾ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿ ಕೊಟ್ಟಿದ್ದರು.
ಇಂಥಾ ಅನ್ನಾ ಜೈಸಿಂಘಾನಿ ಸದ್ಯ ಬಣ್ಣದ ಸಂಕೋಲೆ ಕಳಚಿದ್ದಾರೆ. ಸಂಪೂರ್ಣವಾಗಿ ಅಧ್ಯಾತ್ಮದತ್ತ ಹೊರಳಿದ್ದಾರೆ. ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದಾರೆ. ದೇವರ ಸೇವೆ-ಪೂಜೆ ಮಾಡುತ್ತಾ ಕಾಲ ತಳ್ಳುತ್ತಿದ್ದಾರೆ. ಗುರುತು ಹಿಡಿಯಲು ಸಾಧ್ಯವಾಗದಷ್ಟು ಬದಲಾಗಿದ್ದಾರೆ.

ತಮ್ಮ ಈ ಹೊಸ ಬದುಕು, ಅಧ್ಯಾತ್ಮದ ಒಲವು, ಭಕ್ತಿಯ ಪ್ರಯಾಣದ ಕುರಿತು '' ಮೆರೋ ವೃಂದಾವನ್'' ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಅನ್ನಾ ಜೈಸಿಂಘಾನಿ, ಬದುಕಿನಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಬಣ್ಣದ ಲೋಕಕ್ಕೆ ತಾವು ಬಂದಿದ್ದೇಕೆ..? ತಮ್ಮ ಕನಸೇನಾಗಿತ್ತು ಎಂದು ಹೇಳಿದ್ದಾರೆ.
ಅದೊಂದು ದಿನ ಇಸ್ಕಾನ್ ದೇವಾಲಯಕ್ಕೆ ಹೋಗಿದ್ದೇ ಎಂದು ಹೇಳಿರುವ ಅನ್ನಾ ಜೈಸಿಂಘಾನಿ, ಅಲ್ಲಿ ಕೆಲವರು ನನಗೆ ಸ್ನೇಹಿತರಾದರು ಎಂದು ಹೇಳಿದ್ದಾರೆ. ಆ ನಂತರ ಅವರ ಜೊತೆ ನಾನು ನಿರಂತರವಾಗಿ ಇಸ್ಕಾನ್ ದೇವಸ್ಥಾನಕ್ಕೆ ಹೋಗಲು ಶುರು ಮಾಡಿದೆ ಎಂದಿದ್ದಾರೆ.
ಇಲ್ಲಿಂದ ನನ್ನ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳಿತು ಎಂದು ಹೇಳಿರುವ ಅನ್ನಾ ಜೈಸಿಂಘಾನಿ, ನನ್ನ ಮನಸು ನಿಧಾನವಾಗಿ ಭಕ್ತಿ ಮತ್ತು ಅಧ್ಯಾತ್ಮದತ್ತ ವಾಲಲು ಶುರುವಾಯ್ತು ಎಂದು ಹೇಳಿದ್ದಾರೆ. ಯೂಟ್ಯೂಬ್ ಮೂಲಕ ನಾನು ಹಲವು ಹರಿಕಥೆ, ಪ್ರವಚನಗಳನ್ನು ಕೇಳಲು ಶುರು ಮಾಡಿದೆ ಎಂದಿದ್ಧಾರೆ.
ಮುಂದುವರೆದು ಆ ನಂತರ ಬೆಳ್ಳುಳ್ಳಿ, ಈರುಳ್ಳಿ, ಮತ್ತು ಮಾಂಸಾಹಾರವನ್ನು ಸೇವಿಸುವುದನ್ನು ನಾನು ನಿಲ್ಲಿಸಿದೆ ಎಂದಿರುವ ಅನ್ನಾ ಜೈಸಿಂಘಾನಿ ನನಗೆ ಎಣ್ಣೆ ಕುಡಿಯುವ ಅಭ್ಯಾಸವೂ ಇತ್ತು ಅದನ್ನು ಕೂಡ ನಿಲ್ಲಿಸಿದೆ ಎಂದಿದ್ದಾರೆ.
ಇಸ್ಕಾನ್ ಸೇರಿದ ನಂತರ ಅದೊಂದು ದಿನ ಪ್ರೇಮಾನಂದ ಮಹಾರಾಜರು ನನ್ನ ಕನಸಿನಲ್ಲಿ ಬಂದರು ಎಂದು ಹೇಳಿರುವ ಅನ್ನಾ, ಅವರ ಆದೇಶ ಮತ್ತು ಮಾರ್ಗದರ್ಶನದಂತೆ ನಾನು ವೃಂದಾವನಕ್ಕೆ ತೆರಳಿ ದೀಕ್ಷೆ ಪಡೆದೆ ಎಂದು ಹೇಳಿದ್ದಾರೆ. ನನ್ನ ಇಡೀ ಜೀವನ ಈಗ ಕೃಷ್ಣನಿಗೆ ನಾನು ಸಮರ್ಪಿಸಿದ್ದೇನೆ ಎಂದಿದ್ದಾರೆ.ಪ್ರೇಮಾನಂದ ಮಹಾರಾಜರನ್ನು ನಾನು ನನ್ನ ತಂದೆಯೆಂದೇ ಭಾವಿಸಿದ್ದೇನೆ, ನಾನು ಅವರನ್ನು ಹಾಗೆಯೇ ಕರೆಯುತ್ತೇನೆ ಎಂದು ಹೇಳಿದ್ದಾರೆ. ನಾನು ಈಗ ಅನ್ನಾ ಜೈಸಿಂಘಾನಿ ಅಲ್ಲ ಬದಲಿಗೆ ಅನ್ನಾ ಪರಿ ಹರಿವಾಂಶಿ ಎಂದಿದ್ದಾರೆ.
ಸದ್ಯ ಇವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ 5 ದಿನದಲ್ಲಿ 122,930 ವೀಕ್ಷಣೆಯನ್ನು ಕಂಡಿದೆ. 165ಕ್ಕೂ ಅಧಿಕ ಜನ ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಣ್ಣದ ಲೋಕದ ಮೋಹ ತೊರೆದು ಭಕ್ತಿಯ ಹಾದಿ ಹಿಡಿದ ಅನ್ನಾ ಅವರ ಇವರ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಎನ್ನುವುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.


Click it and Unblock the Notifications