ಮದುವೆ, ವಿಚ್ಛೇದನ.. ಎರಡನೇ ಮದುವೆ ಬಗ್ಗೆ ನಟಿ ಪ್ರೇಮಾ ಅಂತರಾಳ
ಬಹುಭಾಷಾ ನಟಿ ಪ್ರೇಮಾ ಕನ್ನಡದಲ್ಲಿ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಆಗೊಂದು ಈಗೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಪ್ರೇಮಾ ಭಾಗಿ ಆಗಿದ್ದರು. ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಜೀವನ್ ಅಪ್ಪಚ್ಚು ಎಂಬುವವರ ಜೊತೆ ಪ್ರೇಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಮದುವೆ ಹೇಗೆ ಕುದುರಿತು, ಬಳಿಕ ವೈಯಕ್ತಿಕ ಜೀವನದಲ್ಲಿ ಏನಾಯ್ತು? ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎನ್ನುವ ಬಗ್ಗೆ ಸಂದರ್ಶನದಲ್ಲಿ ಪ್ರೇಮಾ ಮಾತನಾಡಿದ್ದಾರೆ.

"ಆ ಸಮಯದಲ್ಲಿ ನನಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯಿಸಿದರು. ನನ್ನ ತಂಗಿ 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಹಾಗಾಗಿ ನಿನ್ನ ಮದುವೆ ಆಗದಿದ್ದರೆ ತಂಗಿ ಮದುವೆ ಆಗಲ್ಲ ಎಂದು ಅಪ್ಪ- ಅಮ್ಮ ಹೇಳುತ್ತಿದ್ದರು. ಹಾಗಾಗಿ ಬೇಡ ಎನ್ನಲು ಸಾಧ್ಯವಾಗದೇ ಮದುವೆಗೆ ಒಪ್ಪಿಕೊಂಡೆ. ನಮ್ಮದು ಅರೇಂಜ್ಡ್ ಮ್ಯಾರೇಜ್" ಎಂದು ಪ್ರೇಮಾ ಹೇಳಿದ್ದಾರೆ.
ಜೀವನ್ ಅಪ್ಪಚ್ಚು ಅವರೊಟ್ಟಿಗೆ ಮದುವೆ ಆಗಲು ಕಾರಣ ಏನು? ಎನ್ನುವ ಪ್ರಶ್ನೆಗೆ "ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆ ಮಾಡಿಕೊಳ್ಳುತ್ತೀನಿ ಎಂದು ಕೇಳಿದರು. ಆಮೇಲೆ ಎಲ್ಲರೂ ಒಪ್ಪಿದರು. ನಮ್ಮ ಮನೆಗೆ ಅವರ ಮನೆ ಹತ್ತಿರ ಇತ್ತು. ಹಾಗಾಗಿ ನಾನು ಅಮ್ಮನ ಮನೆಗೆ ಹೋಗಿ ಬಂದು ಮಾಡಬಹುದು. ಅವರನ್ನು ನೋಡಿಕೊಳ್ಳಬಹುದು ಎಂದು ಅನ್ನಿಸಿ ಮದುವೆಗೆ ಒಪ್ಪಿಕೊಂಡೆ" ಎಂದಿದ್ದಾರೆ.

"ಎಲ್ಲಾ ಹೆಣ್ಣು ಮಕ್ಕಳಿಗೆ ಇರುವಂತೆ ಮದುವೆ ಜೀವನದ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆಗಳಿದ್ದವು. ನಾನು ಸಿನಿಮಾಗಳಲ್ಲಿ ಬ್ಯುಸಿ ಇದ್ದಿದ್ದರಿಂದ ನನ್ನ ಎಲ್ಲಾ ಕನಸುಗಳನ್ನು ಮುಂದೂಡುತ್ತಾ ಹೋಗುತ್ತಿದ್ದೆ. ಪಬ್‌ಗೆ ಹೋಗೋದು, ಮತ್ತೆಲ್ಲೋ ಹೋಗಿ ಎಂಜಾಯ್ ಮಾಡೋದು ಎಲ್ಲಾ ಮದುವೆ ಬಳಿಕ ಎಂದುಕೊಳ್ಳುತ್ತಿದ್ದೆ. ನನ್ನ ಗಂಡ ಹೀಗಿರಬೇಕು, ಹಾಗಿರಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಆ ಎಕ್ಸ್‌ಪೆಕ್ಟೇಷನ್‌ಗೆ ಹರ್ಟ್ ಆಗೋದು"
"ನನ್ನ ಮದುವೆ ನಿರ್ಧಾರ ಸರಿ ಇರಲಿಲ್ಲ ಎನಿಸುತ್ತದೆ. ಆತುರದಲ್ಲಿ ನಿರ್ಧಾರಕ್ಕೆ ಬಂದೆ ಎನಿಸುತ್ತದೆ. ಮದುವೆ ಅನ್ನೋದು ಒಂದು ಕಮೀಟ್‌ಮೆಂಟ್. ಜವಾಬ್ದಾರಿ. ನನ್ನದೇ ತಪ್ಪು ಅಂತಲ್ಲ. ಇಬ್ಬರದ್ದು ಸರಿ ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಯಾರೋ ನನಗೆ ಮದುವೆ ಬಳಿಕ ಆ ಸ್ವಾತಂತ್ರ ಇರಲಿಲ್ಲ ಎನಿಸಿತು. ನಾನು ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಅದೇ, ಸಮಯ ತೆಗೆದುಕೊಂಡು ಯೋಚಿಸಿ. ಸುಖಾಸುಮ್ಮನೆ ದಿಢೀರ್ ನಿರ್ಧಾರಕ್ಕೆ ಬರಬೇಡಿ. ಮದುವೆ ಅನ್ನೋದು ಒಂದು ಜವಾಬ್ದಾರಿ. ಆತುರ ಬೇಡ" ಎಂದಿದ್ದಾರೆ.
"ಡಿವೋರ್ಸ್ ನಿರ್ಧಾರ ಅವತ್ತು ಬಹಳ ಕಷ್ಟವಾಗಿತ್ತು. ತಂದೆ-ತಾಯಿಗೆ ಹೇಳುವುದು ಕಷ್ಟ ಎನಿಸಿತು. ನಂತರ ಎಲ್ಲರೂ ಬೆಂಬಲವಾಗಿ ನಿಂತರು. ಬಳಿಕ ನಾನು ಹೆಜ್ಜೆ ಮುಂದಿಟ್ಟೆ" ಎಂದು ವಿವರಿಸಿದ್ದಾರೆ. ಬಳಿಕ 2ನೇ ಮದುವೆ ಆಗುವ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಒಳ್ಳೆಯ ಗಂಡು ಸಿಕ್ಕರೆ ಖಂಡಿತ ನಾನು ಮದುವೆ ಆಗ್ತೀನಿ. ಇವರು ನನಗೆ ಸರಿಯಾದ ಜೋಡಿ ಎನಿಸಿದರೆ ಮದುವೆ ಮಾಡಿಕೊಳ್ತೀನಿ" ಎಂದಿದ್ದಾರೆ.
"ಮದುವೆ ಆಗದೆಯೇ ಒಂಟಿಯಾಗಿಯೂ ಜೀವಿಸಬಹುದು. ಯಾಕಂದರೆ ಕೊನೆಗೆ ಹೋಗುವುದು ಒಬ್ಬರೇ ಅಲ್ಲವೇ? ಇನ್ನೊಬ್ಬರ ಮೇಲೆ ಯಾಕೆ ಅವಲಂಬಿತವಾಗಬೇಕು? ಇನ್ನೊಬ್ಬರ ಮೇಲೆ ಯಾಕೆ ನಿರೀಕ್ಷೆ ಇಟ್ಟುಕೊಳ್ಳಬೇಕು?" ಎಂದು ಪ್ರೇಮಾ ಪ್ರಶ್ನಿಸಿದ್ದಾರೆ.


Click it and Unblock the Notifications











