'ಕರೀಮಣಿ ಮಾಲೀಕ' ಯಾರು? ನಿಮ್ಮ - ಉಪ್ಪಿ ನಡುವೆ ಪ್ರೀತಿ ಇತ್ತಾ?; ನೇರ ಪ್ರಶ್ನೆಗೆ ಮೌನ ಮುರಿದ ಪ್ರೇಮಾ
'ಉಪೇಂದ್ರ' ಚಿತ್ರದ 'ಏನಿಲ್ಲಾ ಏನಿಲ್ಲಾ' ಹಾಡು 25 ವರ್ಷಗಳ ಬಳಿಕ ಸದ್ದು ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾ 'ರೀಲ್ಸ್' ಸಖರ್ ವೈರಲ್ ಆಗಿ ಮತ್ತೆ ಆ ಹಾಡಿನ ಬಗ್ಗೆ ಎಲ್ಲರೂ ಮಾತನಾಡುವಂತಾಯಿತು. 20 ದಶಕಗಳ ಬಳಿಕ ಆ ಹಾಡಿನ ರೆಕಾರ್ಡಿಂಗ್, ಟ್ಯೂನ್ ಎಲ್ಲದರ ಬಗ್ಗೆ ಉಪ್ಪಿ- ಗುರುಕಿರಣ್ ಸಹ ಮಾತನಾಡಿದರು.
ಉಪ್ಪಿ ಹಾಗೂ ಪ್ರೇಮಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿ ಎಂದು ಆಗ ಗುಲ್ಲಾಗಿತ್ತು. ಆ ಬಗ್ಗೆ ಸ್ಪಷ್ಟನೆ ನೀಡಲು ಉಪೇಂದ್ರ ಈ ರೀತಿಯ ಸಾಲುಗಳನ್ನು ಬರೆದರು. ಇಬ್ಬರ ನಡುವೆ ಏನಿಲ್ಲಾ ಏನಿಲ್ಲಾ ಎಂದು ಸಾರಿ ಹೇಳಿದರು ಎಂದು ಸ್ವತಃ ಉಪೇಂದ್ರ ಹೇಳಿದರು. ಸದ್ಯ ಇದೇ ವಿಚಾರದ ಬಗ್ಗೆ ನಟಿ ಪ್ರೇಮಾ ಮಾತನಾಡಿದ್ದಾರೆ. ಇನ್ನು ಉಪೇಂದ್ರ ನಿರ್ದೇಶಿಸಿ ನಟಿಸಿದ 'A' ಸಿನಿಮಾ ಕಥೆ ನಿಮ್ಮದೇನಾ? ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ ಮಾತನಾಡಿದ್ದಾರೆ. ಚಿತ್ರರಂಗದ ಎಂಟ್ರಿ, ಮದುವೆ, ವಿಚ್ಛೇದನ, ಜೀವನದ ಏಳುಬೀಳು ಎಲ್ಲದರ ಬಗ್ಗೆಯೂ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವದಂತಿಗಳ ಬಗ್ಗೆ ಯಾಕೆ ಪ್ರತಿಕ್ರಿಯಿಸಲಿಲ್ಲ ಎಂದು ಸಹ ಹೇಳಿದ್ದಾರೆ. ಮೊದಲಿಗೆ ಈ ಕರಿಮಣಿ ಮಾಲೀಕ ಯಾರು? ಎನ್ನುವ ಪ್ರಶ್ನೆಯನ್ನು ರಾಜೇಶ್, ಪ್ರೇಮಾ ಮುಂದೆ ಇಟ್ಟಿದ್ದಾರೆ.
"ಆ ಸಿನಿಮಾ ಮಾಡಿದ ಉಪೇಂದ್ರ ಅವ್ರೇ ಕರಿಮಣಿ ಮಾಲೀಕ. ಆ ಸಿನಿಮಾ ಬಂದಾಗ ಹಾಡು ಬಂದಾಗ ಅದು ಸ್ಲೋ ಆಗಿ ಇತ್ತು. ಈಗ ಅದನ್ನು ರೀಮಿಕ್ಸ್ ಮಾಡಿಬಿಟ್ಟಿದ್ದಾರೆ. ಆಗ ಚಿತ್ರಕ್ಕೆ ಆ ಹಾಡು ಇಂಪ್ಯಾಕ್ಟ್ ಆಗಿತ್ತು" ಎಂದಿದ್ದಾರೆ. ಉಪೇಂದ್ರ, ಪ್ರೇಮಾ ಲವ್ ಇತ್ತು ಎನ್ನುವ ಸುದ್ದಿ ಆಗಿದ್ದಕ್ಕೆ ಹಾಡು ಬರೆದಿದ್ದು ಎನ್ನುತ್ತಾರೆ. ನಿಮ್ಮ ಅಭಿಪ್ರಾಯ ಏನು? ಅಂದಾಗ "ಗೊತ್ತಿಲ್ಲ.. ಉಪೇಂದ್ರ ಅವರ ತಲೆಯಲ್ಲಿ ಏನಿತ್ತು ಅಂತ. ಆ ಹಾಡು ಚೆನ್ನಾಗಿ ಬಂತು. ಲಿರಿಕ್ಸ್ ಹಾಗೆ ಇತ್ತು. ಅದು ಚಿತ್ರಕ್ಕೆ ಹೊಂದಿಕೆ ಆಗಿತ್ತು"
"ಉಪೇಂದ್ರ ಮನಸ್ಸಿನಲ್ಲಿ ಏನಿತ್ತು ಎನ್ನುವುದು ನನಗೆ ಗೊತ್ತಿಲ್ಲ. ನಾವಿಬ್ಬರು ವಿರೋಧಿಗಳಲ್ಲ. ನಮಗೆ ಬರೀ ಕೆಲಸ ಮಾಡುವ ಹಸಿವು ಇತ್ತು. ಲವ್ ಮಾಡುವ ಆಲೋಚನೆಯೇ ಇರುತ್ತಿರಲಿಲ್ಲ. ಆದರೆ ನನಗೆ ಅವರ ಹಾರ್ಡ್‌ವರ್ಕ್ ಇಷ್ಟ ಆಗುತ್ತಿತ್ತು. ತುಂಬಾ ಹಾರ್ಡ್‌ವರ್ಕ್ ಮಾಡುತ್ತಿದ್ದರು ಉಪೇಂದ್ರ" ಎಂದಿದ್ದಾರೆ. ಇಬ್ಬರ ನಡುವೆ ಪ್ರೀತಿ ಇತ್ತಾ? ಎನ್ನುವ ನೇರಾನೇರ ಪ್ರಶ್ನೆಗೆ 'ಇಲ್ಲ', ನಾವಿಬ್ಬರು ಒಳ್ಳೆ ಫ್ರೆಂಡ್ಸ್, ನಾವಿಬ್ಬರು ಎರಡ್ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದೆವು. ಆದರೆ ನಮ್ಮ ನಡುವೆ ಅಂತಹದು ಏನು ಇರಲಿಲ್ಲ" ಎಂದು ಹೇಳಿದ್ದಾರೆ.

"ಗುರುಕಿರಣ್ ಆಗಲಿ, ಉಪೇಂದ್ರ ಆಗಲಿ ಆಗ ಏನು ಯೋಚಿಸಿದರು, ಎನ್ನುವುದು ನನಗೆ ಗೊತ್ತಿಲ್ಲ. ನನ್ನ ತಲೆಯಲ್ಲಿ ಯಾವುದೇ ಪ್ರೀತಿ ಗೀತಿ ಇರಲಿಲ್ಲ. ನನಗೆ ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಇದನ್ನು ತಗೊಂಡು ಹೋಗೋದಾ? ಅದನ್ನು ತಗೊಂಡು ಹೋಗೋದಾ? ನಾನು ಗೊಂದಲಕ್ಕೀಡಾಗಲು ಸಿದ್ಧಳಿರಲಿಲ್ಲ. ನನಗೆ ಒಂದು ಸಿನಿಮಾ ಹಿಟ್ ಆಯಿತು. ಮುಂದೇನು? ಎನ್ನುವ ಯೋಚನೆ ಇರುತ್ತಿತ್ತು" ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.
ನಟಿ ಪ್ರೇಮಾ ಅವರ ಕುರಿತು ಮಾಡಿದ ಸಿನಿಮಾ 'A' ಅಂತ ಸುದ್ದಿ ಆಗಿತ್ತು ನಿಜಾನಾ? ಎನ್ನುವ ಪ್ರಶ್ನೆಗೆ, "ಉಪೇಂದ್ರ ಅವರ ಆಲೋಚನೆ ಏನಿರುತ್ತದೆ ಎನ್ನುವುದು ನನಗೆ ಗೊತ್ತಿಲ್ಲ, ಆಗ ಅದು ಫ್ರೆಶ್ ಲವ್ ಸ್ಟೋರಿ. ನನಗೂ ಅದಕ್ಕೂ ಏನು ಸಂಬಂಧನೇ ಇಲ್ಲ. ನಾನು ಆ ಸಿನಿಮಾ ಟಿವಿಯಲ್ಲಿ ನೋಡಿದ್ದೆ. ಚಾಂದಿನಿ ಪಾತ್ರಕ್ಕೂ ನನ್ನ ಪಾತ್ರಕ್ಕೂ ಸಂಬಂಧವೇ ಇಲ್ಲ" ಎಂದು ಪ್ರೇಮಾ ವಿವರಿಸಿದ್ದಾರೆ.
'A' ಚಿತ್ರಕ್ಕೆ ಕೌಂಟರ್ ಆಗಿ 'Z' ಸಿನಿಮಾ ಮಾಡಿದ್ದಾ? ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಅದಕ್ಕೆ ಪ್ರೇಮಾ "ಖಂಡಿತ ಇಲ್ಲ. ಅದೇ ಬೇರೆ, ಇದೇ ಬೇರೆ. 'Z' ಚಿತ್ರದ ಕಥೆ ನನಗೆ ಬಹಳ ಚಾಲೆಂಜಿಂಗ್ ಅನಿಸಿತು ಹಾಗಾಗಿ ನಾನು ಮಾಡಿದೆ. ನಮ್ಮಿಬ್ಬರ ನಡುವೆ ಲವ್ವೇ ಇಲ್ಲ ಅಂದಮೇಲೆ ಅದಕ್ಕೂ ಇದಕ್ಕೂ ಸಂಬಂಧ ಹೇಗೆ ಬರುತ್ತದೆ? ಎಂದು ಪ್ರೇಮಾ ಕೇಳಿದ್ದಾರೆ.


Click it and Unblock the Notifications











