For Quick Alerts
  ALLOW NOTIFICATIONS  
  For Daily Alerts

  ಗ್ಲಾಮರ್ ಗೊಂಬೆಯಾಗಿದ್ದ ತಾಪ್ಸಿ ಪನ್ನು ಉರಿವ ಚೆಂಡಾಗಿದ್ದು ಹೇಗೆ?

  |

  ಆನ್‌ಸ್ಕ್ರೀನ್‌ ಕಿಸ್, ಬಿಕಿನಿ ಫೋಸು, ಐಟಂ ಡಾನ್ಸ್ ಬಾಲಿವುಡ್‌ನ ಬಹುತೇಕ ನಟಿಯರು ಸಿನಿಮಾಗಳಲ್ಲಿ ಇವು ಮೂರಕ್ಕಷ್ಟೆ ಸೀಮಿತವಾಗಿಬಿಟ್ಟಿದ್ದಾರೆ. ಆದರೆ ಇಂಥ ಚರ್ವಿತ ಚರ್ವಣ ನಟಿಯರ ಸಾಲಿಗೆ ಸೇರುವುದಿಲ್ಲ ನಟಿ ತಾಪ್ಸಿ ಪನ್ನು.

  ಆರಂಭದಲ್ಲಿ ತಾಪ್ಸಿ ಸಹ ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಂಡರು. ನಾಯಕನೊಂದಿಗೆ ಹಾಡು, ಕುಣಿತ ಬಿಟ್ಟು ಹೆಚ್ಚಿನದೇನೂ ಇರದ ಪಾತ್ರಗಳಲ್ಲಿ ತಾಪ್ಸಿ ನಟಿಸಿದರು. ಆದರೆ ಆ ನಂತರ ತಮ್ಮ ನಟನಾ ವೃತ್ತಿಯ ಹಾದಿಯನ್ನು ಪೂರ್ಣವಾಗಿ ತಿರುಗಿಸಿಕೊಂಡರು. ಇದೀಗ 'ತಾಪ್ಸಿ ಮಾದರಿ' ಎಂಬ ಪ್ರತ್ಯೇಕ ಮಾದರಿಯ ಸಿನಿಮಾಗಳೇ ನಿರ್ಮಾಣವಾಗುತ್ತವೆ. ತಮ್ಮ ಸಿನಿಮಾಗಳ ಮೂಲಕ ಸೂಕ್ಷ್ಮ ವಿಷಯಗಳನ್ನು ಚರ್ಚಿಸುವ, ಗಟ್ಟಿ ಸಂದೇಶವನ್ನು ನೀಡುವ ಪ್ರಯತ್ನದಲ್ಲಿ ತಾಪ್ಸಿ ನಿರತರಾಗಿದ್ದಾರೆ.

  ಉತ್ತಮ ಕುಟುಂಬದಿಂದಲೇ ಬಂದ ತಾಪ್ಸಿ ಕಷ್ಟಪಟ್ಟು ಸಿನಿಮಾ ರಂಗಕ್ಕೆ ಬಂದವರೇನೂ ಅಲ್ಲ ಆದರೆ ತಾಪ್ಸಿ ತಮ್ಮ ವೃತ್ತಿ ಬದುಕಿನಲ್ಲಿ ಏರಿದ ಎತ್ತರ, ಅದರಲ್ಲಿಯೂ ತಮ್ಮ ಸಮಕಾಲೀನ ನಟಿಯರು ಹಿಡಿದಿದ್ದ ಹಾದಿ ಬಿಟ್ಟು ತಮ್ಮದೇ ಪ್ರತ್ಯೇಕ ಹಾದಿ ಸೃಷ್ಟಿಸಿಕೊಂಡ ಛಲ, ಎಲ್ಲರೂ ಹೆದರಿ ಮೌನವಾಗಿದ್ದಲೂ ಮಾತನಾಡಲು ತೋರಿದ ಧೈರ್ಯ ಇವೆಲ್ಲವೂ ಗುರುತಿಸಲೇ ಬೇಕಾದ ಅಂಶಗಳು. ನಿನ್ನೆ (ಆಗಸ್ಟ್ 01) ತಾಪ್ಸಿ ಪನ್ನು ಹುಟ್ಟುಹಬ್ಬ ಈ ವಿಶೇಷ ಸಂದರ್ಭದಲ್ಲಿ ತಾಪ್ಸಿ ಸಿನಿ ಜೀವನದ ಸಣ್ಣ ಮೆಲಕು ಇಲ್ಲಿದೆ.

  ಆಗಸ್ಟ್ 01, 1987ರಲ್ಲಿ ದೆಹಲಿಯಲ್ಲಿ ಮಧ್ಯಮ ವರ್ಗದ ಪಂಜಾಬಿ ಕುಟುಂಬದಲ್ಲಿ ಜನಿಸಿದರು ನಟಿ ತಾಪ್ಸಿ ಪನ್ನು. ತಾಪ್ಸಿಯವರದ್ದು ಬಡ ಕುಟುಂಬವಲ್ಲ ಹಾಗೆಂದು ಶ್ರೀಮಂತ ಕುಟುಂಬವೂ ಅಲ್ಲ. ಮಧ್ಯಮವರ್ಗದವರಾದ ತಾಪ್ಸಿ ಆ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾನು ದೆಹಲಿಯ ಮಧ್ಯಮ ವರ್ಗದ ಹುಡುಗಿ ಹಾಗೂ ಎಂದಿಗೂ ಹಾಗೇ ಇರುವುದು ಇಷ್ಟವೆಂದು ಹಲವು ಸಂದರ್ಶನಗಳಲ್ಲಿ ತಾಪ್ಸಿ ಹೇಳಿದ್ದಾರೆ ಅಷ್ಟೇ ಅಲ್ಲದೆ ಬಾಲಿವುಡ್‌ನ ಬೆರಗು, ನಟಿಯರ ಆ ಕೃತಕ 'ಕ್ಲಾಸ್' ತಮಗೆ ಒಂದಿಷ್ಟೂ ಹಿಡಿಸುವುದಿಲ್ಲವೆಂದು ಸಹ ತಾಪ್ಸಿ ಹೇಳಿದ್ದಾರೆ.

  ತಾಪ್ಸಿ ಪನ್ನು ಎಂದ ಕೂಡಲೇ ಸಿನಿಮಾಗಳಲ್ಲಿ ಅವರು ನಿರ್ವಹಿಸುವ ಗಟ್ಟಿ ಪಾತ್ರಗಳು, ಶ್ವೇತಾರವಿಂದದ ಜೊತೆಗೆ ಅವರ ಗುಂಗುರು ಕೂದಲು ಸಹ ನೆನಪಿಗೆ ಬರುತ್ತದೆ. ಇದು ಅವರ ತಾಯಿಯಿಂದ ಬಂದ ಬಳುವಳಿ ಗುಂಗುರು ಕೂದಲಿನ ಈ ಚೆಲುವೆಯನ್ನು ಮನೆಯಲ್ಲಿ ಮ್ಯಾಗಿ ಎಂದೇ ಕರೆಯುತ್ತಿದ್ದರಂತೆ. ಈಗ ಬಹಳ ಬೋಲ್ಡ್ ಆದ ಪಾತ್ರಗಳಲ್ಲಿ ನಟಿಸುವ, ಬೋಲ್ಡ್ ಆಗಿ ಮಾತನಾಡುವ ತಾಪ್ಸಿ ಸಣ್ಣವಳಿದ್ದಾಗ ಬಹಳ ಮೌನಿ. ಆದರೆ ಬಹಳ ಬುದ್ಧಿವಂತೆ.

  ಸಾಫ್ಟ್‌ವೇರ್ ಉದ್ಯೋಗ ಮಾಡುತ್ತಿದ್ದ ತಾಪ್ಸಿ

  ಸಾಫ್ಟ್‌ವೇರ್ ಉದ್ಯೋಗ ಮಾಡುತ್ತಿದ್ದ ತಾಪ್ಸಿ

  ಬೆಳೆದಂತೆಲ್ಲ ತುಸು ಧೈರ್ಯವಂತೆಯೂ ಆದ ತಾಪ್ಸಿ, ಶಾಲೆಯಲ್ಲಿ ಟಾಪರ್ ಪಟ್ಟವನ್ನು ಯಾರಿಗೂ ಬಿಟ್ಟುಕೊಡಲಿಲ್ಲ. ದ್ವಿತೀಯ ಪಿಯುಸಿಯಲ್ಲಿ ಶೇ97 ಅಂಕ ಪಡೆದ ತಾಪ್ಸಿ ಆ ನಂತರ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿ, ನಂತರ ಬಿಟೆಕ್ ಸಹ ಮುಗಿಸಿದರು. ಒಳ್ಳೆಯ ಸಂಬಳ ತರುವ ಸಾಫ್ಟ್‌ವೇರ್ ಉದ್ಯೋಗಕ್ಕೆ ಸೇರಿಕೊಂಡರು. ಆದರೆ ಅವರ ಗಮನವೆಲ್ಲ ಮಾಡೆಲಿಂಗ್ ಕಡೆಗಿತ್ತು. ಉದ್ಯೋಗ ಮಾಡುವಾಗಲೇ ತಾಪ್ಸಿ ಮಾಡೆಲಿಂಗ್ ಮಾಡುತ್ತಿದ್ದರು. 2008ರಲ್ಲಿ ವಿ ಚಾನೆಲ್‌ನ 'ಗೆಟ್ ಗಾರ್ಜಿಯಸ್‌'ಗೆ ಆಯ್ಕೆ ಆದ ಬಳಿಕ ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಸಂಪೂರ್ಣವಾಗಿ ತಮ್ಮನ್ನು ಮಾಡೆಲಿಂಗ್‌ನಲ್ಲಿಯೇ ತೊಡಗಿಸಿಕೊಂಡರು.

  ಹಲವು ಜಾಹೀರಾತುಗಳಲ್ಲಿ ನಟನೆ

  ಹಲವು ಜಾಹೀರಾತುಗಳಲ್ಲಿ ನಟನೆ

  ಮಾಡೆಲಿಂಗ್ ಮಾಡುವಾಗಲೇ ಫೆಮಿನಾ ಮತ್ತಿತರೆ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಶಸ್ತಿ ಪಡೆದ ತಾಪ್ಸಿ ನಟನೆ ಆರಂಭಿಸಿದ್ದು ಜಾಹೀರಾತುಗಳ ಮೂಲಕ. ಸಿನಿಮಾಕ್ಕೆ ಬರುವ ಮುಂಚೆ, ಕೋಕಾ-ಕೋಲ, ರೆಡ್‌ ಎಫ್‌ಎಂ, ಮೊಟರೋಲಾ, ಪ್ಯಾಂಟಲೂನ್ಸ್, ಪಿವಿಆರ್ ಸಿನಿಮಾ, ಏರ್ಟೆಲ್, ಡೊಕೊಮೊ, ಡಾಬರ್ ಇನ್ನೂ ಹಲವು ಜಾಹೀರಾತುಗಳಲ್ಲಿ ನಟಿಸಿದರು. ಸಿನಿಮಾದಲ್ಲಿ ಅವಕಾಶಕ್ಕಾಗಿ ಹುಡುಕುತ್ತಿರಬೇಕಾದರೆ ಮೊದಲ ಅವಕಾಶ ದೊರೆತಿದ್ದು ತೆಲುಗಿನಲ್ಲಿ. ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವ್ ನಿರ್ದೇಶೀಸಿದ 'ಜುಮ್ಮಂದಿ ನಾದಂ' ಸಿನಿಮಾ ತಾಪ್ಸಿಯ ಮೊದಲ ಸಿನಿಮಾ. ಆ ಸಿನಿಮಾದ ಹಾಡೊಂದರ ಚಿತ್ರೀಕರಣದಲ್ಲಿ ತಮ್ಮ ಹೊಕ್ಕಳಿನ ಭಾಗಕ್ಕೆ ತೆಂಗಿನ ಕಾಯಿಗಳನ್ನು ಹಾಕಿದ್ದು ತೆಂಗಿನ ಕಾಯಿ ಹೊಟ್ಟೆಗೆ ತಾಕಿದಾಗೆಲ್ಲ ತಾವು ಅದಕ್ಕೆ ಉದ್ರೇಕಿತವಾಗಿ ಪ್ರತಿಕ್ರಿಯಿಸಿದ್ದನ್ನೆಲ್ಲ ಕಾಮಿಡಿ ಶೋ ಒಂದರಲ್ಲಿ ನೆನಪಿಸಿಕೊಂಡರು ಜೋರು ನಕ್ಕಿದ್ದರು ತಾಪ್ಸಿ.

  ರಾಷ್ಟ್ರಪ್ರಶಸ್ತಿ ವಿಜೇತ 'ಆಡುಕುಳಂ' ಎರಡನೇ ಸಿನಿಮಾ

  ರಾಷ್ಟ್ರಪ್ರಶಸ್ತಿ ವಿಜೇತ 'ಆಡುಕುಳಂ' ಎರಡನೇ ಸಿನಿಮಾ

  ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ತಾಪ್ಸಿಗೆ ಧನುಷ್ ಅಂಥ ಸ್ಟಾರ್ ಜೊತೆ ನಟಿಸುವ ಅವಕಾಶ ಅರಸಿ ಬಂತು. 'ಆಡುಕುಳಂ' ಸಿನಿಮಾದಲ್ಲಿ ಧನುಷ್ ಅಂಥಹಾ ನಟರಾಕ್ಷಸನ ಎದುರು ಸಹ ಧೈರ್ಯದಿಂದ ನಟಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ತಾಪ್ಸಿ. ಧನುಷ್‌ಗೆ ಆ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ದೊರಕಿತು. ಸಿನಿಮಾ ಸಹ ಸೂಪರ್ ಹಿಟ್ ಆಯಿತು. ತಾಪ್ಸಿ ನಟನೆ ಬಗ್ಗೆಯೂ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. 'ಆಡುಕುಳಂ' ಬಿಡುಗಡೆ ಆದ ಬಳಿಕ ತಾಪ್ಸಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಲೇ ಸಾಗಿದವು. 2010ರಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ ತಾಪ್ಸಿ 2011ರಲ್ಲಿ ನಟಿಸಿದ್ದು ಬರೋಬ್ಬರಿ ಏಳು ಸಿನಿಮಾಗಳಲ್ಲಿ. ಅದೂ ಪ್ರಭಾಸ್, ರವಿತೇಜ ಅಂಥ ಸ್ಟಾರ್ ನಟರ ಜೊತೆಗೆ.

  'ಬೇಬಿ' ಸಿನಿಮಾದ ಸಣ್ಣ ಪಾತ್ರದಿಂದ ಗುರುತು

  'ಬೇಬಿ' ಸಿನಿಮಾದ ಸಣ್ಣ ಪಾತ್ರದಿಂದ ಗುರುತು

  ಹಿಂದಿಯವರೇ ಆದರೂ ತಾಪ್ಸಿಗೆ ಮೊದಲ ಹಿಂದಿ ಸಿನಿಮಾ ಅವಕಾಶ ಸಿಕ್ಕಿದ್ದು 2013 ರಲ್ಲಿ 'ಚಶ್ಮೆ ಬದ್ದೂರ್' ಎಂಬ ಸಿನಿಮಾದಲ್ಲಿ. ಆದರೆ ಆ ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ. ನಂತರ 2015ರಲ್ಲಿ ಅಕ್ಷಯ್ ಕುಮಾರ್ ನಟನೆಯ 'ಬೇಬಿ' ಸಿನಿಮಾದಲ್ಲಿ ಶಬಾನಾ ಖಾನ್ ಪಾತ್ರದಲ್ಲಿ ತಾಪ್ಸಿ ನಟಿಸಿದರು. ಅದು ಸಣ್ಣ ಪಾತ್ರವೇ ಆದರು ಪ್ರೇಕ್ಷಕರ ಮೇಲೆ ದೊಡ್ಡ ಪರಿಣಾಮ ಬೀರಿತು. ಹಿಂದಿಯಲ್ಲಿ ಮುಂದಿನ ದಿನಗಳಲ್ಲಿ ತಾಪ್ಸಿಗೆ ಒಳ್ಳೆ ಅವಕಾಶಗಳು ಸಿಗಲು ಕಾರಣವಾಗಿದ್ದು 'ಬೇಬಿ' ಸಿನಿಮಾದ ಶಬಾನಾ ಖಾನ್ ಪಾತ್ರ. ಅದೇ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ 'ಪಿಂಕ್' ಸಿನಿಮಾದಲ್ಲಿ ಅವಕಾಶ ಕೊಟ್ಟರು ನಿರ್ದೇಶನದ ಅನಿರುದ್ಧ್ ರಾಯ್ ಚೌಧರಿ. 'ಪಿಂಕ್' ಸಿನಿಮಾದ ಬಳಿಕ ತಾಪ್ಸಿಯ ಸಿನಿಮಾ ಜೀವನ ತನ್ನ ದಿಕ್ಕನ್ನೇ ಬದಲಿಸಿಬಿಟ್ಟಿತು.

  ವೃತ್ತಿ ಬದುಕಿಗೆ ತಿರುವು ಕೊಟ್ಟ 'ಪಿಂಕ್'

  ವೃತ್ತಿ ಬದುಕಿಗೆ ತಿರುವು ಕೊಟ್ಟ 'ಪಿಂಕ್'

  ಮೂರರಲ್ಲಿ ಮತ್ತೊಬ್ಬ ನಟಿ ಎಂಬಂತಾಗಿದ್ದ ತಾಪ್ಸಿಯ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟಿದ್ದ 'ಪಿಂಕ್' ಸಿನಿಮಾ. 'ಪಿಂಕ್‌' ಸಿನಿಮಾದ ಕೇಂದ್ರ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಇದ್ದರೂ ಸಹ ತಾಪ್ಸಿ ತನ್ನ ಪ್ರೌಢ ಅಭಿನಯದಿಂದ ಪ್ರೇಕ್ಷಕರ ಮಸ್ತಕದಲ್ಲಿ ಗುರುತು ಮೂಡಿಸಲು ಯಶಸ್ವಿಯಾದರು. ಅಲ್ಲಿಯವರೆಗೆ ಹಾಡು, ಕುಣಿತ, ನಾಯಕನೊಂದಿಗೆ ಸರಸ ಇಂಥ ಸಾಮಾನ್ಯ ನಾಯಕಿಯ ಪಾತ್ರಗಳನ್ನೇ ಮಾಡುತ್ತಿದ್ದ ತಾಪ್ಸಿಗೆ ಗಟ್ಟಿ ವ್ಯಕ್ತಿತ್ವದ, ಶಕ್ತಿಯುತ ಪಾತ್ರಗಳು ಸಿಗಲು ಆರಂಭಿಸಿದ್ದು 'ಪಿಂಕ್' ಸಿನಿಮಾದ ಬಳಿಕವೇ.

  'ಜುಡ್ವಾ 2'ನಲ್ಲಿ ಬಿಕಿನಿ ತೊಟ್ಟ ತಾಪ್ಸಿ

  'ಜುಡ್ವಾ 2'ನಲ್ಲಿ ಬಿಕಿನಿ ತೊಟ್ಟ ತಾಪ್ಸಿ

  'ಪಿಂಕ್' ಬಿಡುಗಡೆ ಆದ ಮುಂದಿನ ವರ್ಷ ಬಿಡುಗಡೆ ಆದ 'ನಾಮ್ ಶಬಾನಾ' ತಾಪ್ಸಿಯ ಅಭಿನಯ ಚತುರತೆಯನ್ನು ಬಾಲಿವುಡ್‌ಗೆ ಮತ್ತೊಮ್ಮೆ ಪರಿಚಯ ಮಾಡಿಸಿತು. ಅದೇ ವರ್ಷ ಬಿಡುಗಡೆ ಆದ 'ದಿ ಗಾಜಿ ಅಟ್ಯಾಕ್' ಸಿನಿಮಾದಲ್ಲಿಯೂ ಗಟ್ಟಿ ಪಾತ್ರವನ್ನೇ ನಿರ್ವಹಿಸಿದರು. ಸಮತೋಲನ ಕಾಪಾಡಲು ಕಮರ್ಶಿಯಲ್ ಸಿನಿಮಾಗಳಲ್ಲಿಯೂ ನಟಿಸಿದ ತಾಪ್ಸಿ, 'ಜುಡ್ವಾ 2' ಸಿನಿಮಾದಲ್ಲಿ ಬಿಕಿನಿ ತೊಟ್ಟು ಬೀಚ್ ಬದಿಯಲ್ಲಿ ಓಡಿದರು. ಆದರೆ ಬಿಕನಿ ತಮಗೆ ಒಗ್ಗುವುದಿಲ್ಲವೆಂಬುದನ್ನು ಬೇಗನೆ ಖಾತ್ರಿ ಪಡಿಸಿಕೊಂಡರು. 2018ರಲ್ಲಿ ಬಿಡುಗಡೆ ಆದ 'ಮುಲ್ಕ್' ಸಿನಿಮಾ ತಾಪ್ಸಿ ಗಟ್ಟಿ ಪಾತ್ರಗಳನ್ನು ಹೇಗೆ ನಿರ್ವಹಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟರು. ಅಲ್ಪಸಂಖ್ಯಾತರ ಮೇಲಿನ ಪೂರ್ವಾಗ್ರಹದ ವಿರುದ್ಧವಾದ ಆ ಸಿನಿಮಾದಲ್ಲಿ ವಕೀಲೆಯಾಗಿ ತಾಪ್ಸಿ ಅಭಿನಯ ಅದ್ಭುತವಾಗಿತ್ತು.

  'ಬದ್ಲಾ'ದಲ್ಲಿ ಮತ್ತೆ ಅಮಿತಾಬ್ ಬಚ್ಚನ್ ಜೊತೆ

  'ಬದ್ಲಾ'ದಲ್ಲಿ ಮತ್ತೆ ಅಮಿತಾಬ್ ಬಚ್ಚನ್ ಜೊತೆ

  'ಮುಲ್ಕ್' ನಂತರ 2018ರಲ್ಲಿಯೇ ತೆರೆಗೆ ಬಂದ 'ಮನ್‌ಮರ್ಜಿಯಾ' ಸಿನಿಮಾ ತಾಪ್ಸಿಯ ಧೈರ್ಯಕ್ಕೆ ಹಿಡಿದ ಕನ್ನಡಿ. ಗೆಳೆಯ ಮತ್ತು ಪತಿಯ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲಕ್ಕೆ ಬಿದ್ದ ಯುವತಿಯ ಪಾತ್ರದಲ್ಲಿ ತಾಪ್ಸಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿರುವ ವಿಕ್ಕಿ ಕೌಶಲ್, ಅಭಿಷೇಕ್ ಬಚ್ಚನ್‌ರ ನಡುವೆಯೂ ತಾಪ್ಸಿ ನಟನೆಯೇ ಪ್ರೇಕ್ಷಕರಿಗೆ ಹೆಚ್ಚು ಹಿಡಿಸಿತ್ತು. ನಂತರ ಮತ್ತೆ ಅಮಿತಾಬ್ ಬಚ್ಚನ್ ಜೊತೆಗೆ 'ಬದ್ಲಾ' ಸಿನಿಮಾದಲ್ಲಿ ಜೊತೆಯಾದ ತಾಪ್ಸಿ ಮತ್ತೊಮ್ಮೆ ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದರು. ತಾಯಿ ಪಾತ್ರ ಮಾಡಲು ಹಿಂದೆ-ಮುಂದೆ ನೋಡುವ ನಟಿಯರಿರುವಾಗ ಮದುವೆ ಆಗದ ತಾಪ್ಸಿ 'ಸಾಂಡ್‌ ಕೀ ಆಂಖ್' ಸಿನಿಮಾದಲ್ಲಿ ವೃದ್ಧೆಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಸಿನಿಮಾದ ನಟನೆಗೆ ಕೆಲವು ಪ್ರಶಸ್ತಿಗಳನ್ನು ಸಹ ಪಡೆದುಕೊಂಡರು. ಅದರ ನಂತರ ಬಂದ 'ತಪ್ಪಡ್' ಸಿನಿಮಾ ಬಹುದೊಡ್ಡ ಹಿಟ್ ಆಯಿತು. ಅಷ್ಟು ಮಾತ್ರವಲ್ಲದೆ ಮಹಿಳೆಯರ ಮೇಲಿನ ಗೃಹ ಹಿಂಸಾಚಾರದ ವಿರುದ್ಧ ಬಹುದೊಡ್ಡ ಸಂದೇಶವನ್ನು ನೀಡಿತು. ಇತ್ತೀಚೆಗಷ್ಟೆ ಒಟಿಟಿಯಲ್ಲಿ ಬಿಡುಗಡೆ ಆದ 'ಹಸೀನ್ ದಿಲ್‌ರುಬಾ' ಸಿನಿಮಾದಲ್ಲಿಯೂ ತಾಪ್ಸಿಯ ಬೋಲ್ಡ್‌ನೆಸ್‌ ಅನ್ನು ಹಲವು ವಿಮರ್ಶಕರು ಬಹುವಾಗಿ ಹೊಗಳಿದ್ದಾರೆ.

  ಮನದ ಮಾತನ್ನು ಧೈರ್ಯದಿಂದ ಆಡುವ ತಾಪ್ಸಿ

  ಮನದ ಮಾತನ್ನು ಧೈರ್ಯದಿಂದ ಆಡುವ ತಾಪ್ಸಿ

  ತಮ್ಮ ಸಿನಿಮಾಗಳಲ್ಲಿ ಬಹಳ ಗಟ್ಟಿಯಾದ ಪಾತ್ರಗಳನ್ನು ಮಾಡುವ ತಾಪ್ಸಿ ಪನ್ನು ನಿಜಜೀವನದಲ್ಲಿಯೂ ಗಟ್ಟಿ ವ್ಯಕ್ತಿತ್ವದವರೇ. ಸಿನಿಮಾ ರಂಗದ ದಿಗ್ಗಜ ನಟರೇ ಕಣ್ಣೆದುರಿನ ಅಸಮಾನತೆ, ಅನ್ಯಾಯ ಕಂಡು ಬಾಯಿಕಟ್ಟಿಕೊಂಡು ಕೂತಿರಬೇಕಾದರೆ ತಾಪ್ಸಿ ಪನ್ನು ಯಾವುದೇ ಭಯವಿಲ್ಲದೆ ಮಾತನಾಡುತ್ತಾರೆ. ದೆಹಲಿಯ ರೈತ ಪ್ರತಿಭಟನೆಗೆ ಶಕ್ತ ಬೆಂಬಲ ನೀಡಿದ್ದ ತಾಪ್ಸಿ ಅದೊಂದೆ ಅಲ್ಲದೆ ಹಲವು ವಿಷಯಗಳ ಕುರಿತಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ತಮ್ಮ ಈ ಟ್ವೀಟ್ ಟೀಕೆಗೆ ಪ್ರತಿಯಾಗಿ ಐಟಿ ರೇಡ್ 'ಶಿಕ್ಷೆ' ಸಹ ಅನುಭವಿಸಿದ್ದಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮತ್ತೆ ಸಿನಿಮಾಗಳತ್ತ ದೃಷ್ಟಿ ನೆಟ್ಟಿರುವ ತಾಪ್ಸಿ, ಪ್ರಸ್ತುತ 'ರಶ್ಮಿ ರಾಕೆಟ್', 'ಲೂಟ್ ಲಪೇಟ', ಅನುರಾಗ್ ಕಶ್ಯಪ್ ನಿರ್ದೇಶನದ 'ದುಬಾರ', ತಾವೇ ನಿರ್ಮಾಣ ಮಾಡುತ್ತಿರುವ 'ಬ್ಲರ್', ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನ ಆಧರಿಸಿದ 'ಶಭಾಸ್ ಮಿಥು' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Taapsee Pannu's life and her movies. Here is Taapsee Pannu's early life and her career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X