Urvashi: "ಕುಡಿತದ ದಾಸಿಯಾಗಿದ್ದಕ್ಕೆ ಡಿವೋರ್ಸ್ ಆಯ್ತು.. ನನ್ನ ಮಗಳನ್ನೂ ದೂರ ಮಾಡಿಕೊಂಡೆ": ಊರ್ವಶಿ
ಬಹುಭಾಷಾ ನಟಿ ಊವರ್ಶಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಒಂದ್ಕಾದಲ್ಲಿ ಡಾ. ರಾಜ್‌ಕುಮಾರ್ ಸೇರಿದಂತೆ ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಮಿಂಚಿದ ಚೆಲುವೆ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಕೇರಳ ಚೆಲುವೆ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲೂ ಊರ್ವಶಿ ಮೋಡಿ ಮಾಡಿದ್ದಾರೆ.
ಬಾಲನಟಿಯಾಗಿ ಊರ್ವಶಿ ಚಿತ್ರರಂಗಕ್ಕೆ ಬಂದರು. ಕೆಲ ದಶಕಗಳಿಂದ ತಾಯಿಯಾಗಿ, ಮುಗ್ಧ ಪಾತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಕಾಮಿಡಿ ಟೈಮಿಂಗ್‌ನಿಂದಲೂ ಊವರ್ಶಿ ಅಭಿಮಾನಿಗಳ ಮನಗೆದ್ದಿದ್ದಾರೆ. ತೆರೆಮೇಲೆ ಇಷ್ಟೊಂದು ಲವಲವಿಕೆಯಿಂದ ಕಾಣಿಸಿಕೊಳ್ಳುವ ನಟಿ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಸಾಂಸಾರಿಕ ಜೀವನದಲ್ಲಿ ಸಂಕಷ್ಟ ಎದುರಿಸಿದ್ದಾರೆ. 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ವೈಯಕ್ತಿಕ ಜೀವನದ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

23 ವರ್ಷಗಳ ಹಿಂದೆ ಊರ್ವಶಿ ಮಲಯಾಳಂ ನಟ ಮನೋಜ್ ಕೆ. ಜಯನ್ ಕೈ ಹಿಡಿದಿದ್ದರು. ಇವರಿಗೆ ತೇಜ ಲಕ್ಷ್ಮಿ ಎನ್ನುವ ಮಗಳು ಇದ್ದಾಳೆ. ಆದರೆ ಇವರ ದಾಂಪತ್ಯ ಜೀವನ ಅಷ್ಟೇನು ಚೆನ್ನಾಗಿ ಇರಲಿಲ್ಲ. ಮದುವೆಯಾದ 8 ವರ್ಷಕ್ಕೆ ಜೋಡಿ ಡಿವೋರ್ಸ್ ಪಡೆದಿದ್ದರು. 6 ವರ್ಷಗಳ ಬಳಿಕ ಚೆನ್ನೈ ಮೂಲದ ಶಿವಪ್ರಸಾದ್ ಎಂಬುವವರನ್ನು ಊರ್ವಶಿ ಕೈ ಹಿಡಿದರು. ದಂಪತಿಗೆ ಒಬ್ಬ ಮಗ ಇದ್ದಾನೆ. ಮನೋಜ್ ಸಹ ಆಶಾ ಎಂಬುವವರ ಜೊತೆ 2ನೇ ಮದುವೆ ಆಗಿದ್ದಾರೆ.
ಕುಡಿತದಿಂದ ಡಿವೋರ್ಸ್
ಸದ್ಯ ಊರ್ವಶಿ ತಮ್ಮ ಮೊದಲ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. "ನಾನು, ಮನೋಜ್ ದೂರಾಗಲು ಒಂದೇ ಒಂದು ಕಾರಣ ಕುಡಿತ. ಆತನ ಮನೆಯಲ್ಲಿ ಎಲ್ಲರೂ ಮದ್ಯ ಸೇವಿಸುತ್ತಾರೆ. ನನಗೂ ಕುಡಿಯುವಂತೆ ಬಲವಂತ ಮಾಡುತ್ತಿದ್ದರು. ಪ್ರತಿದಿನ ಕುಡಿದು ನಾನು ಕುಡಿತಕ್ಕೆ ದಾಸಿಯಾಗಿದ್ದೆ. ಆತನಿಂದಲೇ ನಾನು ಕುಡಿತದ ಚಟಕ್ಕೆ ಬಿದ್ದಿದ್ದೆ. ಅದೇ ನಮ್ಮ ಡಿವೋರ್ಸ್‌ಗೂ ಕಾರಣವಾಯಿತು. ನನ್ನ ಮಗಳು ನನಗೆ ಸಿಗದಂತೆ ಮಾಡಿದ"

ಶಿವಪ್ರಸಾದ್ ಜೊತೆ 2ನೇ ಮದುವೆ
"ನಾನು ಕುಡಿತದ ದಾಸಿಯಾಗಿದ್ದೆ ಎಂದು ಹೇಳಿ ಮಗಳ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದ. ನಾನು ಒಬ್ಬೊಂಟಿಯಾಗಿಬಿಟ್ಟೆ. ಖಿನ್ನತೆಗೆ ಒಳಗಾಗಿದ್ದೆ. ಬಹಳ ದಿನಗಳ ಕಾಲ ನನ್ನೊಳಗೆ ನಾನೇ ನೊಂದು ಬೆಂದು ಹೋಗಿದ್ದೆ. ಬಳಿಕ ತಮ್ಮ ಫ್ಯಾಮಿಲಿ ಫ್ರೆಂಡ್ ಶಿವಪ್ರಸಾದ್‌ನ 2ನೇ ಮದುವೆ ಆಗಿದ್ದೆ. ಆಗ ನನ್ನ ವಯಸ್ಸು 40 ವರ್ಷ. ಆ ವಯಸ್ಸಿನಲ್ಲಿ ಮದುವೆನಾ? ಎಂದು ಸಾಕಷ್ಟು ಜನ ಟೀಕಿಸಿದ್ದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಪತಿ, ಮಗನ ಜೊತೆ ಸಂತೋಷದಿಂದ ಇದ್ದೀನಿ" ಎಂದಿದ್ದಾರೆ.
ಊರ್ವಶಿ ಕನ್ನಡ ಚಿತ್ರಗಳು
1980ರಲ್ಲಿ 'ನ್ಯಾಯ ನೀತಿ ಧರ್ಮ' ಸಿನಿಮಾ ಮೂಲಕ ಊರ್ವಶಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಡಾ. ರಾಜ್‌ಕುಮಾರ್ ಜೊತೆ 'ಶ್ರಾವಣ ಬಂತು' ಚಿತ್ರದಲ್ಲಿ ನಟಿಸಿದ್ದರು. 'ನಾನು ನ್ನ ಹೆಂಡ್ತಿ', 'ಪ್ರೇಮಲೋಕ', 'ನ್ಯೂ ಡೆಲ್ಲಿ', 'ಜೀವನದಿ', 'ಹಬ್ಬ', 'ಕೋತಿಗಳು ಸಾರ್ ಕೋತಿಗಳು', 'ಕತ್ತೆಗಳು ಸಾರ್ ಕತ್ತೆಗಳು', 'ರಾಮಾ ಶಾಮ ಭಾಮ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
700ಕ್ಕೂ ಅಧಿಕ ಚಿತ್ರಗಳಲ್ಲಿ ಊರ್ವಶಿ
ಕೇರಳದ ಕೊಲ್ಲಂನಲ್ಲಿ ಹುಟ್ಟಿ ಬೆಳೆದ ಊರ್ವಶಿ ಮೂಲ ಹೆಸರು ಕವಿತಾ ರಂಜಿನಿ. ತಂದೆ ನಾಟಕಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಮನೆಯಲ್ಲಿ ಸಹೋದರಿಯರು, ಸಹೋದರರು ಎಲ್ಲರೂ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾಗಿ ಊರ್ವಶಿ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಮಲಯಾಳಂ, ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿ ಬರೋಬ್ಬರಿ 700ಕ್ಕೂ ಅಧಿಕ ಸಿನಿಮಾಗಳಲ್ಲಿ ಊರ್ವಶಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











