ರಾಮರಸ ಕುಡಿದು ಅಣ್ಣಾವ್ರ ಪಜೀತಿ, ಇಳಯರಾಜ ಗಾಬರಿಯಾಗಿ ಪಾರ್ವತಮ್ಮಗೆ ಕರೆ ಮಾಡಿದ್ದಿದ್ಯಾಕೆ?
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಇಂದು ನಮ್ಮೊಂದಿಗಿಲ್ಲ. ಆದರೆ ತಮ್ಮ ಸಿನಿಮಾಗಳು ಹಾಗೂ ಆದರ್ಶ ಗುಣಗಳಿಂದ ಅಣ್ಣಾವ್ರು ಕನ್ನಡಿಗರ ಮನಸ್ಸಿನಲ್ಲಿ ಅಜರಾಮರರಾಗಿರುತ್ತಾರೆ. ಮುತ್ತುರಾಜನ ಸಿನಿಮಾಗಳು ಮಾತ್ರವಲ್ಲ, ಅವರ ಸರಳ ಸಜ್ಜನ ಮುಗ್ಧ ವ್ಯಕ್ತಿತ್ವ ಎಂಥಹವರಿಗೂ ಆದರ್ಶಪ್ರಾಯ.
ಅಣ್ಣಾವ್ರ ಬಗ್ಗೆ ಸಾಕಷ್ಟು ಜನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರೊಟ್ಟಿಗೆ ಕಾಲ ಕಳೆದವರು ಇನ್ನು ಆ ದಿನಗಳನ್ನು ಮರೆತ್ತಿಲ್ಲ. ಡಾ. ರಾಜ್‌ಕುಮಾರ್ ಆಪ್ತರ ಬಳಗದಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕ ಆದಿತ್ಯಾ ಚಿಕ್ಕಣ್ಣ ಸಾಕಷ್ಟು ವಿಚಾರಗಳನ್ನು ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಕ್ಲಾಪ್‌ಬಾಯ್ ಆಗಿ ಚಿತ್ರರಂಗಕ್ಕೆ ಬಂದ ಚಿಕ್ಕಣ್ಣ ಮುಂದೆ ಸಹಯಕ ನಿರ್ದೇಶಕರಾಗಿ ಬಳಿ ನಿರ್ದೇಶಕರು ಆದರು.

'ರವಿಚಂದ್ರ' ಚಿತ್ರಕ್ಕೆ ಕ್ಲಾಪ್ ಬಾಯ್ ಆಗಿ ಅಣ್ಣಾವ್ರ ಸಂಸ್ಥೆ ಸೇರಿದ ಚಿಕ್ಕಣ್ಣ ಬಳಿಕ ಸಂಸ್ಥೆಯ ಖಾಯಂ ಸದಸ್ಯರಾಗಿಬಿಟ್ಟರು. ಅಣ್ಣಾವ್ರ ಒಡನಾಟದ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಿಂದೆ ಹಂಚಿಕೊಂಡಿದ್ದರು. ಅದರಲ್ಲೂ ರಾಮರಸ ಕುಡಿದು ಪಜೀತಿ ಆಗಿದ್ದನ್ನು ವಿವರಿಸಿದ್ದರು. "ನೀ ನನ್ನ ಗೆಲ್ಲಲಾರೆ ಸಿನಿಮಾ ಸಮಯ. ಇಳಯರಾಜಾ ಸಂಗೀತ ನಿರ್ದೇಶಕರು. ಆಗ ರಾಮನವಮಿ ಬಂದಿತ್ತು. ರಾಮರಸ ಮಾಡಿ ನೈವೇದ್ಯ ಇಟ್ಟು ಅಣ್ಣಾವ್ರ ಮನೆಯಲ್ಲಿ ಸೇವಿಸುವ ವಾಡಿಕೆ ಇತ್ತು"
"ಕಂಪೆನಿಯಲ್ಲಿ ಕೆಲಸ ಮಾಡುವ ಎಲ್ಲರೂ ರಾಮರಸ ಸೇವಿಸುತ್ತಿದ್ದೆವು. ಅಣ್ಣಾವ್ರ ಪೂಜೆ ಮಾಡಿ ಹಾಡು ಹಾಡಿದ ಬಳಿಕ ರಾಮರಸ ಸವಿಸುತ್ತಿದ್ದೆವು. ಆ ಬಾರಿ ರಾಮರಸದ ಮಸಾಲೆಯನ್ನು ಜಾಸ್ತಿ ಹಾಕಿ ಬೆರೆಸಿಬಿಟ್ಟಿದ್ದರು. ಕುಡಿದು ಎಲ್ಲರೂ ಒಂದೊಂದು ರೀತಿ ಆಡಲು ಶುರುಮಾಡಿದೆವು. ಹೊನ್ನವಳ್ಳಿ ಕೃಷ್ಣ, ರಾಜಶೇಖರ್ ಎಲ್ಲಾ ಅಮಲಿನಲ್ಲಿ ತೇಲುತ್ತಿದ್ದೆವು. ಪಾರ್ವತಮ್ಮ ಹೋಗ್ರೋ ಎಂದು ಹೇಳುತ್ತಿದ್ದರು. ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ"
"ಅವತ್ತು ರಾಮರಸ ಕುಡಿದು ಇಬ್ಬರು ವಾಂತಿ ಮಾಡಿಕೊಂಡುಬಿಟ್ಟರು. ಅದನ್ನೆಲ್ಲಾ ಪಾರ್ವತಮ್ಮ ರಾಜ್‌ಕುಮಾರ್ ಬಳಿದು, ಕ್ಲೀನ್ ಮಾಡಿದ್ದರು. ಅಣ್ಣಾವ್ರು ಸ್ವಲ್ಪ ರಾಮರಸ ಸೇವಿಸಿದ್ದರು. ಅವತ್ತು ಸ್ವಾಗತ್ ಹೋಟೆಲ್‌ನಲ್ಲಿ "ನೀ ನನ್ನ ಗೆಲ್ಲಲಾರೆ" ಸಿನಿಮಾ ಸಾಂಗ್ ರೆಕಾರ್ಡಿಂಗ್ ನಡೀತಿತ್ತು. ಅಣ್ಣಾವ್ರು ಅಲ್ಲಿಗೆ ಹೋಗಿ ಟ್ಯೂನ್ ಕೇಳಿ ಓಕೆ ಮಾಡಬೇಕಿತ್ತು. ಡ್ರೈವರ್ ಅವರನ್ನು ಕರೆದುಕೊಂಡು ಹೋಗಿದ್ದಾನೆ"

"ಹೋಟೆಲ್ ರೂಮ್‌ನಲ್ಲಿ ಇಳಯರಾಜ ಒಂದಷ್ಟು ಟ್ಯೂನ್‌ಗಳನ್ನು ಹಾಕಿ ಕೇಳಿಸಿದ್ದಾರೆ. ಅಣ್ಣಾವ್ರ ಎದುರಿಗೂ ಕೂತು ಹೇಳಿದ್ದಾರೆ. ಹೇಗಿದೆ ಎಂದು ಕೇಳಿದರೆ ಏನೂ ಉತ್ತರಿಸದೇ ನಗುತ್ತಾ ಕುಳಿತುಬಿಟ್ಟಿದ್ದಾರೆ. ಇದನ್ನು ನೋಡಿ ಇಳಯರಾಜಾಗೆ ಅಚ್ಚರಿಯಾಗಿದೆ. ಯಾವುದೇ ಟ್ಯೂನ್ ಕೇಳಿಸಿದರು ಏನು ಹೇಳುತ್ತಿಲ್ಲ. ಸುಮ್ಮನೆ ಕುಳಿತುಬಿಟ್ಟಿದ್ದಾರೆ. ಏನಾಯ್ತೋ ಎಂದು ಹೆದರಿ ಪಾರ್ವತಮ್ಮಗೆ ಫೋನ್ ಮಾಡಿ ಹೇಳಿದ್ದರಂತೆ."
"ಅದೇ ಹೋಟೆಲ್‌ನ ಮತ್ತೊಂದು ರೂಮ್‌ನಲ್ಲಿ ಸಿನಿಮಾ ಸ್ಕ್ರಿಪ್ಟ್ ಡಿಸ್ಕಷನ್ ನಡೆಯುತ್ತಿತ್ತು. ವರದಪ್ಪ, ಚಿ. ಉದಯಶಂಕರ್ ಎಲ್ಲರೂ ಅಲ್ಲಿದ್ದರು. ಪಾರ್ವತಮ್ಮ ಕೂಡಲೇ ವರದಪ್ಪಗೆ ಫೋನ್ ಮಾಡಿ ಇಳಯರಾಜ ಫೋನ್ ಹೇಳಿದ್ದನ್ನೆಲ್ಲಾ ವಿವರಿಸಿದ್ದರು. ಕೂಡಲೇ ಆ ರೂಮ್‌ಗೆ ಹೋಗಿದ್ದ ವರದಪ್ಪಗೆ ರಾಮರಸ ಕುಡಿದು ಹೀಗಾಗಿದೆ ಎಂದು ಗೊತ್ತಾಗಿ, ಇವತ್ತು ನೀವು ಹೊರಡಿ ನಾಳೆ ಸಾಂಗ್ ಅಣ್ಣಾವ್ರು ಟ್ಯೂನ್ ಕೇಳ್ತಾರೆ ಎಂದು ಇಳಯರಾಜಗೆ ಹೇಳಿ ಕಳುಹಿಸಿದ್ದರಂತೆ. ಆ ಘಟನೆ ಬಳಿಕ ಇನ್ನೆಂದೂ ರಾಮರಸ ಮಾಡೋದು ಬೇಡ ಎಂದು ಪಾರ್ವತಮ್ಮ ನಿರ್ಧರಿಸಿದರು" ಎಂದು ಚಿಕ್ಕಣ್ಣ ವಿವರಿಸಿದ್ದಾರೆ.


Click it and Unblock the Notifications











