ಮನೆಯಲ್ಲಿ 2 ಲಕ್ಷ ರೂ. ವಜ್ರದ ನೆಕ್ಲೆಸ್ ಕದ್ದ ಕಳ್ಳ ಸಿಕ್ಕಿ ಬಿದ್ದಾಗ ಅಣ್ಣಾವ್ರು ಏನಂದಿದ್ರು?
ಡಾ. ರಾಜ್‌ಕುಮಾರ್ ಸರಳ ಸಜ್ಜನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಅಣ್ಣಾವ್ರ ಜೊತೆಗಿದ್ದವರು ಕೂಡ ಅವರ ಒಳ್ಳೆತನ ಮಾರು ಹೋಗಿದ್ದರು. ಎಷ್ಟೇ ಎತ್ತರಕ್ಕೆ ಬೆಳೆದರೂ ಹಳೆಯದ್ದನ್ನು ಅವರು ಮರೆತ್ತಿರಲಿಲ್ಲ. ಶರಣರ ರೀತಿ ಅಣ್ಣಾವ್ರು ಇರುತ್ತಿದ್ದರು.
ಕೆಲವೊಮ್ಮೆ ಅಣ್ಣಾವ್ರ ವಿಚಾರಲಹರಿ ಕಂಡು ಆಪ್ತರಿಗೂ ಅಚ್ಚರಿ ಆಗುತ್ತಿತ್ತು. ನಾನು ಹೆಚ್ಚು ಎನ್ನುವ ಅಹಂ ಅವರಿಗೆ ಇರಲೇ ಇಲ್ಲ. ಸದಾ ಬಿಳಿ ಬಣ್ಣದ ಶರ್ಟು, ಪಂಚೆ ಧರಿಸುತ್ತಿದ್ದ ಡಾ. ರಾಜ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದರು. ವೀರಪ್ಪನ್ ತಮ್ಮನ್ನು ಅಪಹರಿಸಿ 108 ದಿನಗಳ ಕಾಲ ಕಾಡಿನಲ್ಲಿಟ್ಟುಕೊಂಡಿದ್ದರು, ಬಿಡುಗಡೆಯಾಗಿ ಬಂದಮೇಲೆ ಆತನ ಬಗ್ಗೆ ಅನುಕಂಪ ಇದೆ ಎಂದಿದ್ದರು. ಅವನು ಕಳ್ಳನೇ, ಆದರೂ ಅವನ ಬಗ್ಗೆ ಅನುಕಂಪ ಇದೆ ಎಂದಿದ್ದರು. ಮುತ್ತುರಾಜ್ ಯಾವುದಕ್ಕೂ ಹೆಚ್ಚು ರಿಯಾಕ್ಟ್ ಮಾಡುತ್ತಿರಲಿಲ್ಲ. ಸರಿ ತಪ್ಪುಗಳನ್ನು ತುಲನೆ ಮಾಡಿ ಮಾತನಾಡುತ್ತಿದ್ದರು. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಒಮ್ಮೆ ಮನೆಯಲ್ಲಿ 2 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್ ಕಳುವಾದಾಗ ಅಣ್ಣಾವ್ರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು.

ದೊಡ್ಮನೆ ಕಂಪೆನಿಯಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕ ಆದಿತ್ಯ ಚಿಕ್ಕಣ್ಣ ಹಲವು ವರ್ಷಗಳ ಕಾಲ ಅಣ್ಣಾವ್ರಿಗೆ ಆಪ್ತರಾಗಿದ್ದರು. ಡಾ. ರಾಜ್ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ. ಅವರನ್ನು ಹತ್ತಿರದಿಂದ ನೋಡಿದ್ದಾರೆ. 'ನಂಜುಂಡಿ ಕಲ್ಯಾಣ' ಸಿನಿಮಾ ಸಕ್ಸಸ್ ಸಮಯದಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗನೊಬ್ಬ 2 ಲಕ್ಷ ರೂ. ಮೌಲ್ಯದ ನೆಕ್ಲೆಸ್ ಕದ್ದುಬಿಟ್ಟಿದ್ದ. ವಿಷಯ ಗೊತ್ತಾದಾಗ ಅಣ್ಣಾವ್ರ ಪ್ರತಿಕ್ರಿಯೆ ಕಂಡು ಅಚ್ಚರಿಯಾಗಿತ್ತು ಎಂದು ನಿರ್ದೇಶಕ ಆದಿತ್ಯ ಚಿಕ್ಕಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ಮಾತನಾಡಿದ್ದಾರೆ.
"ಅದು 1988-89ರ ಸಮಯ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೇ ವಜ್ರದ ನೆಕ್ಲೆಸ್ ಕದ್ದುಬಿಟ್ಟಿಟ್ಟ. ವಿಷಯ ಗೊತ್ತಾಗಿ ಆ ನೆಕ್ಲೆಸ್ ಅನ್ನು ಅಲ್ಲಿ ಇಟ್ಟಿದ್ದು ನಿಮ್ಮ ತಪ್ಪು ಎಂದು ಅಕ್ಕಾವ್ರನ್ನು(ಪಾರ್ವತಮ್ಮ) ಅಣ್ಣಾವ್ರು ಬೈದಿದ್ದರು. ದೂರು ಕೊಟ್ಟು ಅವನನ್ನು ಜೈಲಿಗೆ ಕಳಿಸ್ಬೇಡಿ. ಪಾಪ ಅವನಿಗೆ ಹೆಂಡ್ತಿ ಮಕ್ಕಳು ಇರ್ತಾರೆ. ನೆಕ್ಲೆಸ್ ಅವನಿಗೆ ಸಿಗುವಂತೆ ಇಟ್ಟಿದ್ದು ನಿಮ್ಮ ತಪ್ಪು ಎಂದು ಅಣ್ಣಾವ್ರು ಹೇಳಿದ್ದರು" ಎಂದು ಚಿಕ್ಕಣ್ಣ ನೆನಪಿಸಿಕೊಂಡಿದ್ದಾರೆ.
"ಅಣ್ಣಾವ್ರು ಅಂದು ಯೋಚಿಸಿದಂತೆ ಯಾರು ಯೋಚಿಸೋಕೆ ಸಾಧ್ಯ, ಯಾವ ನ್ಯಾಯಾಧೀಶರು ಆ ರೀತಿ ಹೇಳಲು ಸಾಧ್ಯವಿಲ್ಲ. ಪೊಲೀಸರು ಅವನ್ನು ಹಿಡ್ಕೊಂಡು ಬಂದಾಗ ಡಾ. ರಾಜ್ ಪ್ರತಿಕ್ರಿಯೆ ಆ ತರ ಇತ್ತು. ಅವನು ನಮ್ಮ ಮನೆಯಲ್ಲಿ 10-12 ವರ್ಷದಿಂದ ಕೆಲಸ ಮಾಡುತ್ತಿದ್ದಾನೆ, ಇಷ್ಟು ದಿನ ಕಳ್ಳ ಆಗಿರಲಿಲ್ಲ. ಈಗ ಆಗಿದ್ದಾನೆ. 3 ವರ್ಷದ ಹಿಂದೆ ಅದು ಕಳೆದು ಹೋಗಿದೆ. ನಿಮಗೆ ಅದರ ಬೆಲೆ ಗೊತ್ತಿಲ್ಲ, ನೀವು ಸರಿಯಾಗಿ ನೋಡಿಕೊಂಡಿಲ್ಲ. ಇಷ್ಟು ವರ್ಷ ಕಳ್ಳತನ ಮಾಡದೇ ಇದ್ದ ವ್ಯಕ್ತಿ, ಈಗ ಕಳ್ಳತನಕ್ಕೆ ಮನಸ್ಸು ಮಾಡಲು ಕಾರಣ ನೀವೇ ಎಂದು ಮನೆಯವರಿಗೆ ಹೇಳಿದ್ದರು. ಶತ್ರುವನ್ನು ಸಹ ಪ್ರೀತಿಯಿಂದ ನೋಡುತ್ತಿದ್ದರು" ಎಂದು ಚಿಕ್ಕಣ್ಣ ವಿವರಿಸಿದ್ದಾರೆ.

"ಡಾ. ರಾಜ್ ಜೊತೆ 22 ವರ್ಷಗಳ ಒಡನಾಟ ನನ್ನದು. ಅವ್ರು ಮದ್ರಾಸಿನಲ್ಲಿ ಇದ್ದ ದಿನಗಳಿಂದ ಜೊತೆಗಿದ್ದೆ. 'ಕಾಳಿದಾಸ', 'ಪ್ರಹ್ಲಾದ', 'ಅಪೂರ್ವ ಸಂಗಮ', 'ಅದೇ ಕಣ್ಣು' ಸೇರಿ ಕೆಲ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. 1979ರಲ್ಲಿ ನಾನು ಅಣ್ಣಾವ್ರ ಕಂಪನಿ ಸೇರಿದ್ದೆ. ನನಗೆ 34 ವರ್ಷ ವಯಸ್ಸು. ಅದಕ್ಕೂ ಮುನ್ನ ಬೇರೆ ಕಂಪನಿಯಲ್ಲಿ ಕೆಲಸ ಮಾಡಿದ್ದೆ. ಬಳಿಕ ಅಣ್ಣಾವ್ರ ಕಂಪನಿ ಬಿಟ್ಟು ಸ್ವತಂತ್ರ ನಿರ್ದೇಶಕನಾಗಿ ಸಿನಿಮಾಗಳನ್ನು ಕಟ್ಟಿಕೊಟ್ಟೆ" ಎಂದು ಆದಿತ್ಯ ಚಿಕ್ಕಣ್ಣ ಹೇಳಿದ್ದಾರೆ.
ಅಣ್ಣಾವ್ರ ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ. ಬಹಳ ಹತ್ತಿರದಿಂದ ಅವರನ್ನು ನೋಡಿದ್ದೇನೆ. ಯಾರಿಗೂ ಕೆಟ್ಟದಯ ಬಯಸದ ಒಳ್ಳೆ ವ್ಯಕ್ತಿತ್ವ ಅವರದ್ದು. ಯಾವುದೇ ಹಮ್ಮು ಬಿಮ್ಮು ಇರಲಿಲ್ಲ. ಬಡತನದಿಂದ ಬಂದವರು. ಹಾಗಾಗಿ ಅದನ್ನು ಕೊನೆಯವರೆಗೂ ಮರೆಯಲಿಲ್ಲ. ಯಾರಾದರೂ ನಿಮ್ಮ ನಟನೆ ಅದ್ಭುತ ಎಂದರೂ ನನ್ನದೇನು ಇಲ್ಲ, ಕಲೆ ಎನ್ನುವುದು ಒಂದು ಸಮುದ್ರ, ಅದರಲ್ಲಿ ನಾನು ಒಂದು ಹನಿ ಅಷ್ಟೇ, ನಾನು ಕಲಿತ್ತಿಲ್ಲ. ಇನ್ನು ಕಲಿಯುವುದು ಬಹಳ ಇದೆ ಎನ್ನುತ್ತಿದ್ದರು ಎಂದು ಚಿಕ್ಕಣ್ಣ ವಿವರಿಸಿದ್ದಾರೆ.
'ಜಗತ್ ಕಿಲಾಡಿ', 'ಮಾರ್ತಾಂಡ', 'ವಂಶೋದ್ಧಾರಕ' ಸೇರಿ ಕೆಲ ಸಿನಿಮಾಗಳನ್ನು ಆದಿತ್ಯ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್‌ನಲ್ಲಿ ಕೆಲಸ ಮಾಡುವ ಮುನ್ನ ಬೇರೆ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಈಗ ವಯಸ್ಸು 80 ವರ್ಷ ದಾಟಿದೆ, ಇವತ್ತಿಗೂ ಬಹಳ ಹರುಪಿನಿಂದ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾರಂಗದಿಂದ ಆದಿತ್ಯ ಚಿಕ್ಕಣ್ಣ ದೂರಾಗಿದ್ದಾರೆ. ಆದರೆ ಒಳ್ಳೆ ಸಿನಿಮಾ ಮಾಡುವ ತುಡಿತ ಈಗಲೂ ಇದೆ.


Click it and Unblock the Notifications











