ಮಗು ಬೇಕು ಎಂದಿದ್ದಕ್ಕೆ ಗಂಡನಿಗೆ ಡಿವೋರ್ಸ್ ನೀಡಿದ ಈ ಖ್ಯಾತ ನಾಯಕಿಯ ಬದುಕು ಏರಿಳಿತದ ತಕ್ಕಡಿ..!
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇದಕ್ಕೆ ಪೂಜಾ ಬಾತ್ರಾ ಅತ್ಯುತ್ತಮ ಉದಾಹರಣೆ.
ಹೌದು, ಪೂಜಾ ಬಾತ್ರಾ .. ಒಂದು ಕಾಲದಲ್ಲಿ ಲಿರಿಲ್ ಸೋಪ್ ಜಾಹೀರಾತಿನಲ್ಲಿ ಮಿಂಚಿದ ಮಿಂಚುಳ್ಳಿ ಚೆಲುವೆ. ಮೂರು ದಶಕದ ಹಿಂದೆ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್
ಕಿರೀಟವನ್ನು ಕೂಡ ಮುಡಿಗೇರಿಸಿಕೊಂಡ ಸುಂದರಿ. ಅನಿಲ್ ಕಪೂರ್ ಅಭಿನಯದ ವಿರಾಸತ್ ಚಿತ್ರದ ಮೂಲಕ, ಬಣ್ಣದ ಬದುಕಿಗೆ ಮುನ್ನುಡಿ ಬರೆದ ಪೂಜಾ ಬಾತ್ರಾ ಅತ್ಯಲ್ಪ ಅವಧಿಯಲ್ಲಿಯೇ ಹೆಸರು ಮಾಡಿದರು. ಭಾಯ್ , ಹಸೀನಾ ಮಾನ್ ಜಾಯೇಗಿ, ದಿಲ್ ನೆ ಫಿರ್ ಯಾದ್ ಕಿಯಾ ಮತ್ತು ಕಹೀ ಪ್ಯಾರ್ ನಾ ಹೋ ಜಾಯೆ, ಹೀಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ನಟಿಸಿದರು. ಜನ ಮನ ಗೆದ್ದರು.

ಮನಸು ಮಾಡಿದ್ದರೆ ಪೂಜಾ ಬಾತ್ರಾ ಆ ಕಾಲದಲ್ಲಿ ಐಶ್ವರ್ಯ ರೈ, ಸುಶ್ಮಿತಾ ಸೇನ್, ರಾಣಿ ಮುಖರ್ಜಿಯಂತೆ ಹೆಸರು ಮಾಡಬಹುದಿತ್ತು. ಚಿತ್ರರಂಗದಲ್ಲಿ ನೆಲೆಯೂರಬಹುದಿತ್ತು. ಆ ಎಲ್ಲ ಅವಕಾಶ ಪೂಜಾ ಬಾತ್ರಾಗೆ ಇತ್ತು. ಆದರೆ.. ನೇಮು-ಫೇಮು ಎರಡನ್ನೂ ತಮ್ಮ ಎಡಗಾಲಿನಲ್ಲಿ ಒದ್ದ ಪೂಜಾ, ಸೋನು ಅಹ್ಲುವಾಲಿಯಾ ಎಂಬ ವೈದ್ಯರನ್ನು ಮದುವೆಯಾದರು. ಅಮೆರಿಕಾದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು.
ಆದರೆ, 2002ರಿಂದ 2010ರವರೆಗೆ 08 ವರ್ಷ ಅಮೆರಿಕಾದಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಡಾ. ಸೋನು ಎಸ್. ಅಹ್ಲುವಾಲಿಯಾ ಜೊತೆ ಸುಖ ಸಂಸಾರವನ್ನು ನಡೆಸಿದ ಪೂಜಾ ಬಾತ್ರಾ, ತಮ್ಮ ದಾಂಪತ್ಯ ಜೀವನಕ್ಕೆ 2011ರಲ್ಲಿ ಗುಡ್ ಬೈ ಹೇಳಿದರು. ಅದು.. ಮಗು ವಿಚಾರಕ್ಕೆ ಅನ್ನುವುದು ದುರ್ದೈವ. ಹೌದು, ಅಸಲಿಗೆ ಪೂಜಾ ಅವರ ಗಂಡ ಸೋನು ಅವರಿಗೆ ಮಗು ಪಡೆಯುವ ಆಸೆ ಇತ್ತು. ಆದರೆ ಪೂಜಾಗೆ ಇದು ಸುತಾರಾಂ ಇಷ್ಟ ಇರಲಿಲ್ಲ. ಈ ಕಾರಣಕ್ಕೆ ಮನೆಯಲ್ಲಿ ಶುರುವಾದ ಕಲಹ ಆ ನಂತರ ವಿಚ್ಛೇದನದ ಹಂತಕ್ಕೆ ತಲುಪಿತು ಎಂಬ ಸುದ್ದಿ ಅವತ್ತು ಕೇಳಿ ಬಂದಿತ್ತು. ಆದರೆ, ವಿಚ್ಛೇದನಕ್ಕೆ ನಿಜವಾದ ಕಾರಣವೇನು ಅನ್ನುವುದನ್ನು ಪೂಜಾ ಬಾತ್ರಾ ಆಗಲಿ ಅವರ ಪತಿ ಸೋನು ಆಗಲಿ ಮೌನ ಮುರಿಯಲಿಲ್ಲ. ಮಗು ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಕೂಡ ಹೇಳಲಿಲ್ಲ.

ಹೀಗೆ ಡಾ.ಸೋನು ಎಸ್. ಅಹ್ಲುವಾಲಿಯಾ ಜೊತೆ ಸಂಬಂಧ ಮುರಿದುಕೊಂಡ ಪೂಜಾ ಆ ನಂತರ ಭಾರತಕ್ಕೆ ಮರಳಿ ಬಂದರು. ಆದರೆ ಅಷ್ಟರಲ್ಲಿ ಸಿನಿ ರಸಿಕರು ಇವರನ್ನೂ ಮರೆತಿದ್ದರು. ನವಯುಗದ ನವನಾಯಕಿಯರು ಬಾಲಿವುಡ್‌ನಲ್ಲಿ ಮೆರೆಯಲು ಶುರು ಮಾಡಿದ್ದರು. ಈ ಕಾರಣಕ್ಕೆ ಅವಕಾಶಗಳ ಕೊರತೆಯನ್ನ ಎದುರಿಸಿದ ಪೂಜಾ, ಮಲಯಾಳಂ ಚಿತ್ರರಂಗಕ್ಕೆ ವಲಸೆ ಬಂದರು. 2011 ಮತ್ತು 2012ರಲ್ಲಿ ಎರಡು ಮಲಯಾಳಂ ಸಿನಿಮಾಗಳನ್ನೂ ಮಾಡಿದರು. ಆದರೆ.. ಅಂದುಕೊಂಡ ಹೆಸರು ಸಿಗಲಿಲ್ಲ. ಚಿಕ್ಕ ಪುಟ್ಟ ಪಾತ್ರಗಳನ್ನು ಹೊರತು ಪಡಿಸಿ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶವೂ ಪೂಜಾ ಬಾತ್ರಾಗೆ ಸಿಗಲಿಲ್ಲ.
ಇಂಥಾ ಪೂಜಾ ಬಾತ್ರಾ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಷ್ಟೇ ಯಾಕೆ ಕನ್ನಡದಲ್ಲಿಯೂ ಹೆಚ್ಚೆಚ್ಚು ವಿಲನ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳುವ ನವಾಬ್ ಶಾ ಅವರನ್ನು 2019ರಲ್ಲಿ ಮದುವೆಯಾದರು. 2021ರಿಂದ ಚಿತ್ರರಂಗದಿಂದ ಮತ್ತೆ ಅಂತರವನ್ನೂ ಕಾಪಾಡಿಕೊಂಡರು. ಸದ್ಯಕ್ಕೆ ನವಾಬ್ ಶಾ ಅವರ ಜೊತೆ ಪೂಜಾ ಬಾತ್ರಾ ಖುಷಿಯಾಗಿದ್ದಾರೆ. ಪ್ರೀತಿಯಿಂದ ಬದುಕುತ್ತಿದ್ಧಾರೆ.


Click it and Unblock the Notifications











