ಅಕ್ಷಯ್ ಕುಮಾರ್ ಮೊದಲ ಚಿತ್ರವಾಗಬೇಕಿದ್ದ ''ಫೂಲ್ ಔರ್ ಕಾಂಟೆ'' ಅಜಯ್ ದೇವಗನ್ ಪಾಲಾಗಿದ್ಹೇಗೆ..?
ಆಗಷ್ಟೇ ಬಣ್ಣದ ಲೋಕದಲ್ಲಿ ವಿಶಿಷ್ಟವೆನಿಸೋ ಸಾಹಸ ದೃಶ್ಯಗಳನ್ನ ಸೆರೆ ಹಿಡಿಯೋ ಪ್ರಯತ್ನ ಬಾಲಿವುಡ್ ನಲ್ಲಿ ನಡಿತೀತ್ತು. ಮಾಮೂಲಿಯಲ್ಲದ ಸ್ಟಂಟ್ ಗಳ ಸೀಕ್ವೆನ್ಸ್ ಹಲವು ನಾಯಕರ ನಿದ್ದೆಯನ್ನೂ ಕೆಡಿಸಿತ್ತು. ಇದೇ ಸಮಯದಲ್ಲಿ ಹಿಂದಿ ಚಿತ್ರರಂಗದಲ್ಲಿ ಒಬ್ಬ ಕಿಲಾಡಿಯ ಉದಯವಾಯ್ತು ಅವರೇ ಅಜಯ್ ದೇವಗನ್.
ಹೌದು. ಫೂಲ್ ಔರ್ ಕಾಂಟೆ.. ಅಜಯ್ ದೇವಗನ್ ಅಭಿನಯದ ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ಮೈ ಜುಮ್ಮೆನ್ನಿಸೋ ಸಾಹಸಗಳನ್ನ ಸಿಲ್ವರ್ ಸ್ಕ್ರೀನ್ ಮೇಲೆ ಪರ್ಫಾಮ್ ಮಾಡಿದ ಅಜಯ್, ದಿನ ಕಳೆಯೋದ್ರೊಳಗೆ ಬಿಟೌನಿನ ಹೊಸ ಆಕ್ಷನ್ ಸ್ಟಾರ್ ಆದರು.

ಆದರೆ ನಿಮಗೆ ಗೊತ್ತಾ ಫೂಲ್ ಔರ್ ಕಾಂಟೆ ಚಿತ್ರಕ್ಕೆ ಅಜಯ್ ದೇವಗನ್ ಮೊದಲ ಆಯ್ಕೆ ಆಗಿರಲಿಲ್ಲ. ಹೌದು. ಈ ಚಿತ್ರದ ಮಾಡುವ ಸಮಯದಲ್ಲಿ ಚಿತ್ರದ ನಿರ್ದೇಶಕ ಕುಕ್ಕು ಕೊಹ್ಲಿ ಆ ಕಾಲಕ್ಕೆ ಹೆಸರು ಮಾಡಿದ್ದ ದೊಡ್ಡ ಕಲಾವಿದರನ್ನೆಲ್ಲ ಸಂಪರ್ಕ ಮಾಡಿದ್ದರು. ತಮ್ಮ ಚಿತ್ರಕ್ಕೆ ನಾಯಕನಾಗುವಂತೆ ಕೇಳಿಕೊಂಡಿದ್ದರು. ಆದರೆ ಯಾರೊಬ್ಬರು ಒಪ್ಪಲಿಲ್ಲ.
ಈ ಕಾರಣಕ್ಕೆ ಬೇಸತ್ತಿದ್ದ ಕುಕ್ಕು ತಮ್ಮ ಸ್ನೇಹಿತ ಮತ್ತು ಆ ಕಾಲದ ಖ್ಯಾತ ಸಾಹಸ ನಿರ್ದೇಶಕರು ಆಗಿದ್ದ ಅಜಯ್ ತಂದೆ ವೀರು ದೇವಗನ್ ಜೊತೆ ಕುಳಿತು ತನ್ನ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಇದೇ ಸಮಯದಲ್ಲಿ ಕುಕ್ಕು ಕೊಹ್ಲಿ ಕಣ್ಣು ಅಲ್ಲಿಯೇ ಗೋಡೆಯ ಮೇಲೆ ಬಿದ್ದಿತ್ತು. ಆ ಫೋಟೋ ಬೇರೆ ಯಾರದ್ದು ಅಲ್ಲ ಬದಲಿಗೆ ಅಜಯ್ ದೇವಗನ್ ಅವರದ್ದು.
ಇನ್ನೂ ಚಿತ್ರಕ್ಕೆ ಅಜಯ್ ದೇವಗನ್ ನಾಯಕ ಎಂದು ತೀರ್ಮಾನವೇನೋ ಆಗಿತ್ತು. ಆದರೆ ಅಜಯ್ ದೇವಗನ್ ಅವರಿಗೆ ಸುತಾರಾಂ ಇಷ್ಟ ಇರಲಿಲ್ಲ. ಯಾಕೆಂದರೆ ಅಜಯ್ ದೇವಗನ್ ಒಲವು ನಿರ್ದೇಶನದ ವಿಭಾಗದಲ್ಲಿತ್ತು. ಇನ್ನೂ ಆಗಿನ್ನೂ ಅಜಯ್ ಗೆ 23ರ ಪ್ರಾಯ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಬಣ್ಣ ಸರಿ ಇಲ್ಲ ಎಂಬ ಕೀಳರಿಮೆ ಅಜಯ್ ಅವರಲ್ಲಿತ್ತು. ಈ ಎಲ್ಲ ಕಾರಣಗಳಿಂದ ಬೇಸರಗೊಂಡಿದ್ದ ಅಜಯ್ ದೇವಗನ್ ಚಿತ್ರಕ್ಕೆ ನಾಯಕನಾಗುತ್ತಿರುವ ವಿಚಾರವನ್ನ ತಮ್ಮ ಸ್ನೇಹಿತರ ಬಳಿ ಚರ್ಚಿಸಿದ್ದರು. ವಿಪರ್ಯಾಸ ಅಂದರೆ ಅಜಯ್ ಸ್ನೇಹಿತರೇ ಅವತ್ತು ಆಡಿಕೊಂಡು ನಕ್ಕಿದ್ದರು. ನೀನು ಹೀರೋನಾ..? ಎಂದು ಚುಡಾಯಿಸಿದ್ದರು.

ಅಜಯ್ ದೇವಗನ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಅಕ್ಷಯ್ ಕುಮಾರ್ ..!
ಫೂಲ್ ಔರ್ ಕಾಂಟೆ ಅಜಯ್ ದೇವಗನ್ ಅಭಿನಯದ ಮೊದಲ ಸಿನಿಮಾ. ಆ ಕಾಲಕ್ಕೆ ಐತಿಹಾಸಿಕ ದಾಖಲೆಯನ್ನ ಬರೆದ ಸಿನಿಮಾ. ಇದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇವತ್ತು ಕೂಡ ಒಂದು ವಾದ ವಿವಾದ ನಡೆಯುತ್ತಾನೇ ಇದೆ. ಅದು ಸ್ವಜನಪಕ್ಷಪಾತಕ್ಕೆ ಸಂಬಂಧಿಸಿದ್ದು ಅನ್ನುವುದು ವಿಶೇಷ.
ಹೌದು, ಬಾಲಿವುಡ್ ನ ಇನ್ನೊಂದು ಬಣದ ವಾದದ ಪ್ರಕಾರ, ಫೂಲ್ ಔರ್ ಕಾಂಟೇ ಚಿತ್ರಕ್ಕೆ ಮೊದಲು ಅಕ್ಷಯ್ ಕುಮಾರ್ ನಾಯಕನಾಗಿ ಆಯ್ಕೆಯಾಗಿದ್ದರು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಫೂಲ್ ಔರ್ ಕಾಂಟೆ ಅಕ್ಷಯ್ ಕುಮಾರ್ ಅಭಿನಯದ ಮೊದಲ ಸಿನಿಮಾ ಆಗಬೇಕಿತ್ತು. ಸೂರ್ಯವಂಶಿ ಚಿತ್ರದ ಬಿಡುಗಡೆಯ ಸಮಯದಲ್ಲಿ ಖುದ್ದು ಅಕ್ಷಯ್ ಕುಮಾರ್ ಈ ಮಾತನ್ನ ಒಪ್ಪಿದ್ದರು. ವೇದಿಕೆ ಮೇಲೆ ಹೇಳಿದ್ದರು ಕೂಡ.
ಆದರೆ ಅಕ್ಷಯ್ ಕುಮಾರ್ ಅವರ ಈ ಹೇಳಿಕೆಯ ಬಗ್ಗೆ ಅನೇಕರಿಗೆ ತಕರಾರು ಇದೆ. ಇರಲಿ.. ಅವತ್ತು ಅಕ್ಷಯ್ ಖುದ್ದು ಹೇಳಿದಂತೆ ಫೂಲ್ ಔರ್ ಕಾಂಟೆ ಚಿತ್ರದ ಚಿತ್ರೀಕರಣಕ್ಕೆ ಕೇವಲ 24 ಘಂಟೆ ಬಾಕಿ ಇತ್ತು. ಮೊದಲ ಚಿತ್ರವಾಗಿದ್ದ ಕಾರಣ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಸಂಭ್ರಮದ ಅಲೆಯಲ್ಲಿ ಇದ್ದರು. ಈ ಕಾರಣಕ್ಕೆ ಅಕ್ಷಯ್ ಕುಮಾರ್ ಎಕ್ಸಾಯಟ್ಮೆಂಟ್ ನಲ್ಲಿ ಸಂಗೀತ ನಿರ್ದೇಶಕರಾದ ನದೀಮ್-ಶ್ರವಣ್ ನೇತೃತ್ವದಲ್ಲಿ ನಡೆಯುತ್ತಿದ್ದ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೇಳಲು ಸ್ಟುಡಿಯೋಗೆ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಕರೆ ಬಂತು. ನಿಮ್ಮ ಬದಲು ಚಿತ್ರಕ್ಕೆ ಬೇರೆ ನಾಯಕನನ್ನ ಆಯ್ಕೆ ಮಾಡಿದ್ದೇವೆ ಎಂಬ ಸುದ್ದಿ ಅಕ್ಷಯ್ ಕುಮಾರ್ ಗೆ ಆಗ ಬರಸಿಡಿಲಿನಂತೆ ಬಂದೆರಗಿತ್ತು.
ಅಕ್ಷಯ್ ಕುಮಾರ್ ಹೇಳಿರುವ ಈ ಮಾತು ಕಾಲ ಕಾಲಕ್ಕೆ ಚರ್ಚೆಗೀಡಾಗ್ತಾನೇ ಬಂದಿದೆ. ಆ ಕಾಲದಲ್ಲಿಯೇ ಬಾಲಿವುಡ್ ನಲ್ಲಿ ನೆಪೋಟಿಸಂ ಇತ್ತು ಅನ್ನುವುದಕ್ಕೆ ಸಾಕ್ಷಿ ಎಂಬ ಅಭಿಪ್ರಾಯ ವ್ಯಕ್ತವಾಗ್ತಾನೇ ಇರುತ್ತೆ. ಇನ್ನೂ ಅಜಯ್ ದೇವಗನ್ ಸಾಹಸ ನಿರ್ದೇಶಕ ವೀರು ದೇವಗನ್ ಮಗ ಎಂಬ ಏಕೈಕ ಕಾರಣಕ್ಕೆ ಚಿತ್ರರಂಗದಲ್ಲಿ ಮೊದಲ ಅವಕಾಶ ಸಲೀಸಾಗಿ ಸಿಕ್ಕಿತೇ ಹೊರತು, ಪ್ರತಿಭೆಯ ಮಾನದಂಡದ ಮೇಲೆ ಅಜಯ್ ದೇವಗನ್ ಫೂಲ್ ಔರ್ ಕಾಂಟೆ ಚಿತ್ರಕ್ಕೆ ಆಯ್ಕೆ ಆಗಿಯೇ ಇಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆ. ಆದರೂ ಅಜಯ್ ದೇವಗನ್ ವ್ಯಕ್ತವಾಗುವ ಈ ಅಭಿಪ್ರಾಯಗಳ ಬಗ್ಗೆ, ಅಕ್ಷಯ್ ಕುಮಾರ್ ಅವರ ಹೇಳಿಕೆಯ ಬಗ್ಗೆ ಹೆಚ್ಚೇನು ಮಾತನಾಡುವ ಗೋಜಿಗೆ ಹಿಂದೆಯೂ ಹೋಗಿಲ್ಲ. ಬಹುಶ ಮುಂದೆಯೂ ಮಾತನಾಡುವುದಿಲ್ಲ. ಹಾಗಂಥ ಕ್ರೆಡಿಟ್ ವಿಚಾರದಲ್ಲಿ ಮುನಿಸಿಕೊಂಡು ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕಿತ್ತಾಡಿಕೊಂಡು ದೂರವೂ ಆಗಿಲ್ಲ. ಇಷ್ಟೆಲ್ಲ ಮಾತುಗಳು ಇದ್ದರೂ ಇಬ್ಬರು ಇವತ್ತು ಕೂಡ ಸ್ನೇಹಿತರಾಗಿಯೇ ಇದ್ದಾರೆ.
ಅಂದ್ಹಾಗೇ ಫೂಲ್ ಔರ್ ಕಾಂಟೆ ಚಿತ್ರದಿಂದ ಕೊನೆ ಕ್ಷಣದಲ್ಲಿ ಹೊರ ತಳ್ಳಲ್ಪಟ್ಟ ಅಕ್ಷಯ್ ಕುಮಾರ್ ಅದೇ ವರ್ಷ ಅಂದರೆ 1991ರಲ್ಲಿ ಸೌಗಂಧ್ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಬಾಲಿವುಡ್ ಗೆ ಪಾದಾರ್ಪಣೆಯನ್ನ ಮಾಡಿದರು.


Click it and Unblock the Notifications











