ತಮಿಳು ನಟ ವಿಜಯ್ ದಾಖಲೆ ಮುರಿದ ಅಲ್ಲು ಅರ್ಜುನ್!
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫಿಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಪುಡಿ ಮಾಡುತ್ತಿದೆ. ಈ ಹಿಂದೆ ದೊಡ್ಡ ದಾಖಲೆಗಳನ್ನು ಮಾಡಿದ್ದ ಸಿನಿಮಾಗಳನ್ನು ಹಿಂದಿಕ್ಕುತ್ತಿದೆ ಪುಷ್ಪ ಚಿತ್ರ.
Recommended Video
ಸದ್ಯ ತಮಿಳು ನಟ ವಿಜಯ್ ಸಿನಿಮಾದ ದಾಖಲೆಯನ್ನು ಮೀರಿಸಿದೆ ಪುಷ್ಪ. ಪುಷ್ಪ ತೆಲುಗು ಮತ್ತು ಹಿಂದಿಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಮೂಲಕ ಸಂಪೂರ್ಣ ಗಳಿಕೆಯ ಲೆಕ್ಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಳಪತಿ ವಿಜಯ್ ನಟನೆಯ 'ಬಿಗಿಲ್' ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ ಅಲ್ಲು ಅರ್ಜುನ್ ಸಿನಿಮಾ.
ಸದ್ಯ ಪುಷ್ಪ ಚಿತ್ರದ ಕಲೆಕ್ಷನ್ 300 ಕೋಟಿ ದಾಟಿದೆ. ರಿಲೀಸ್ ಆದ ಅತಿ ಕಡಿಮೆ ದಿನಗಳಲ್ಲಿ ಪುಷ್ಪ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಅದರಲ್ಲೂ ಹಿಂದಿ ಅವತರಣಿಯಿಂದ ಉತ್ತಮ ಗಳಿಕೆ ಆಗುತ್ತಿದೆ.

'ಬಿಗಿಲ್' ಮಾಡಿದ್ದು 304 ಕೋಟಿ ಪುಷ್ಪ ಗಳಿಕೆ 306 ಕೋಟಿ!
ನಟ ವಿಜಯ್ ಅಭಿನಯದ ತಮಿಳು ಚಿತ್ರ 2019ರಲ್ಲಿ ತೆರೆ ಕಂಡಿತು. ವಿಜಯ್‌ಗೂ ಮಾಸ್ ಅಭಿಮಾನಿ ಬಳಗ ಇರುವುದರಿಂದ, ಬಿಗಿಲ್ ಚಿತ್ರ ಉತ್ತಮ ಗಳಿಕೆ ಮಾಡಿತ್ತು. ಅಂದರೆ, ಬಿಗಿಲ್ ಚಿತ್ರದ ಒಟ್ಟಾರೆ ಕಲೆಕ್ಷನ್ 304.7 ಕೋಟಿ ರೂಪಾಯಿ. ಇದು ಚಿತ್ರಮಂದಿರಗಳಲ್ಲಿ ಈ ತನಕ ಮಾಡಿರುವ ಒಟ್ಟಾರೆ ಗಳಿಕೆ. ಈ ಲೆಕ್ಕವನ್ನು ಮೂರನೇ ವಾರಕ್ಕೆ ಪುಡಿ ಮಾಡಿದೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ. 306 ಕೋಟಿ ರೂ ಗಡಿ ದಾಟಿ ದಾಖಲೆಯನ್ನು ಮುಂದುವರೆಸಿದೆ.

ಕಲೆಕ್ಷನ್‌ನಲ್ಲಿ ದೊಡ್ಡ ದಾಖಲೆ ಬರೆದ ಅಲ್ಲು ಅರ್ಜುನ್ ಮೊದಲ ಚಿತ್ರ!
ಇನ್ನು ಚಿತ್ರದ ದಾಖಲೆಗೆ ಸಂಬಂಧಿಸಿದಂತೆ ಹಲವು ಪ್ರಥಮಗಳಿಗೆ ಸಾಕ್ಷಿ ಆಗಿದೆ. ನಟ ಅಲ್ಲು ಅರ್ಜುನ್ ಸಿನಿಮಾ ಜರ್ನಿಯಲ್ಲೇ ಯಾವ ಚಿತ್ರವೂ ಕೂಡ ಇಷ್ಟು ದೊಡ್ಡ ಮಟ್ಟಿನ ದಾಖಲೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅಭಿನಯದ ಚಿತ್ರ ಒಂದು ಈ ಮಟ್ಟಗೆ ದಾಖಲೆ ಮಾಡಿದೆ. ಪುಷ್ಪ ಚಿತ್ರ ಅಲ್ಲು ಅರ್ಜುನ್ ಸಿನಿ ಪಯಣದಲ್ಲಿ ಮೈಲುಗಲ್ಲು ಸಾಧಿಸಿದ ಚಿತ್ರ. ಇನ್ನು ಈ ಚಿತ್ರದ ದಕ್ಷಿಣ ಭಾರತದಲ್ಲಿ ಅಧಿಕ ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ದಕ್ಷಿಣ ಭಾರತದ ಯಾವ, ಯಾವ ಚಿತ್ರಗಳ ದಾಖಲೆ ಮುರಿದ ಪುಷ್ಪ!
ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಬಾಹುಬಲಿ2 ಇದೆ. 1757.50 ಕೋಟಿ ರೂ ಗಳಿಕೆ ಮಾಡಿರುವುದಾಗಿ ದಾಖಲಾಗಿದೆ. ರಜನಿಕಾಂತ್ ಅಭಿನಯದ ರೋಬೊ 2.o ಎರಡನೇ ಸ್ಥಾನದಲ್ಲಿದ್ದು 665.30 ಕೋಟಿ ಗಳಿಸಿದೆ. ಇನ್ನು ಮೂರನೇ ಸ್ಥಾನ ಬಾಹುಬಲಿ ಭಾಗ1ಕ್ಕೆ ಸಿಕ್ಕಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 581 ಕೋಟಿ ಆಗಿದೆ. ಅಂತೆಯೇ ನಾಲ್ಕನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಇದ್ದು, ಇದು 418.90 ಕೋಟಿ ರೂ ಹಣ ಗಳಿಸಿದೆ. ಇನ್ನು 304 ಕೋಟಿ ಗಳಿಸಿ 5ನೇ ಸ್ಥಾನದಲ್ಲಿ ಇದ್ದ ಬಿಗಿಲ್ ಚಿತ್ರವನ್ನು ಹಿಂದಿಕ್ಕಿ, 306 ಕೋಟಿ ರೂ ಗಳಿಸುವ ಮೂಲಕ ಪುಷ್ಪ ಚಿತ್ರ 5ನೇ ಸ್ಥಾನಕ್ಕೆ ಬಂದಿದೆ.

ಪುಷ್ಪ ಭಾಗ 2ರ ಮೇಲೆ ಹೆಚ್ಚಿತು ನಿರೀಕ್ಷೆ!
ಪುಷ್ಪ ರಿಲೀಸ್ ಬೆನ್ನಲ್ಲೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿತ್ತು. ಹಾಗಾಗಿ ಇದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಕೂಡ ಕಾಡಿತ್ತು. ಆದರೆ ಪುಷ್ಪ ಹುಟ್ಟು ಹಾಕಿದ್ದ ಕ್ರೇಜ್ ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಗೆಲ್ಲಿಸಿದೆ. ನೋಡ ನೊಡುತ್ತಲೆ ನಿರೀಕ್ಷೆಗೂ ಮೀರಿದ ದಾಖಲೆ ಮಾಡುತ್ತಿದೆ ಪುಷ್ಪ, ಇನ್ನು ಕೂಡ ಗಳಿಕೆಯನ್ನು ಮುಂದುವರೆಸಿದೆ ಹಾಗಾಗಿ ಪುಷ್ಪ ಭಾಗ2ರ ಮೇಲು ಕೂಡ ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ.


Click it and Unblock the Notifications











