For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?

  |

  ಕನ್ನಡ ಚಿತ್ರರಂಗ ಕಂಡ ಅದ್ಭುತ ಕಥೆಯ, ಸೂಪರ್ ಹಿಟ್ ಚಿತ್ರಗಳಲ್ಲಿ 'ಬಂಧನ'ವೂ ಒಂದು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಅಮೋಘ ಅಭಿನಯದಿಂದ ಮನೆಮಾತಾಗಿತ್ತು. ನಾಯಕನಿಗೆ ನಾಯಕಿ ಸಿಗದ ಕಥೆಯು ದುರಂತ ಅಂತ್ಯದ್ದಾಗಿದ್ದರೂ, ಅದರಲ್ಲಿನ ಭಾವುಕತೆಗೆ ಜನರು ಮರುಳಾಗಿದ್ದರು. ಹಾಡುಗಳು ಇಂದಿಗೂ ಜನರ ಬಾಯಲ್ಲಿ ನಲಿದಾಡುತ್ತಿರುತ್ತದೆ.

  ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

  ಆದರೆ ಈ ಸಿನಿಮಾ ಹಿಂದೆ ಸಾಕಷ್ಟು ಆಸಕ್ತಿಕರ ಸಂಗತಿಗಳಿವೆ. ಸಿನಿಮಾ ಮಾಡಲು ಕಾದಂಬರಿಯ ಹಕ್ಕು ಕೊಳ್ಳುವುದು, ನಾಯಕ ಮತ್ತು ನಾಯಕಿಯ ಆಯ್ಕೆ, ಚಿತ್ರದ ಕ್ಯಾಸ್ಟ್ಯೂಮ್, ಹಾಡುಗಳು ಹೀಗೆ ಪ್ರತಿಯೊಂದು ಹಂತದಲ್ಲಿಯೂ ನೂರಾರು, ಗೊಂದಲಗಳಿದ್ದವು ಎಂಬುದನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಬಂಧನದ ಹಿಂದಿನ ಆಸಕ್ತಿಕರ ಕಥೆಯನ್ನು ತೆರೆದಿಟ್ಟಿದ್ದಾರೆ. ಮುಂದೆ ಓದಿ...

  ದುರಂತ ಅಂತ್ಯ ಯಾರೂ ನೋಡೊಲ್ಲ ಎಂದಿದ್ದರು

  ದುರಂತ ಅಂತ್ಯ ಯಾರೂ ನೋಡೊಲ್ಲ ಎಂದಿದ್ದರು

  ಆಕ್ಷನ್ ಸಿನಿಮಾಗಳಲ್ಲಿ ನಿರ್ದೇಶಕರಿಗೆ ಶ್ರಮ ಜಾಸ್ತಿ. ಹೀಗಾಗಿ ಒಂದು ಒಳ್ಳೆಯ ಲವ್ ಸ್ಟೋರಿ ಮಾಡಬೇಕು ಎಂದೆನಿಸಿತ್ತು. 'ಬಂಧನ'ದ ಕಾದಂಬರಿ ಓದಿದ್ದೆ. ಅದರ ಹಕ್ಕು ಬೇಕೆಂದು ಕೇಳಿದಾಗ ಲೇಖಕಿ ಉಷಾ ನವರತ್ನರಾಮ್ ಅವರು ಅದು ಕಲ್ಪನಾ ಬಳಿ ಇದೆ ಎಂದಿದ್ದರು. ನಮ್ಮ ಕುಟುಂಬಕ್ಕೆ ಕಲ್ಪನಾ ಹತ್ತಿರದವರಾಗಿದ್ದರಿಂದ ಅವರ ಬಳಿ ಹಕ್ಕು ಪಡೆದುಕೊಂಡಿದ್ದೆ. ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಬೇಕಿತ್ತು. ಆದರೆ ಅವರು ಮಾಡಿರಲಿಲ್ಲ. ಆಂಟಿ ಸೆಂಟಿಮೆಂಟ್ ಸಬ್ಜೆಕ್ಟ್, ನಾಯಕನಿಗೆ ನಾಯಕಿ ಸಿಗದೆ ಇದ್ದರೆ ಯಾರು ಸಿನಿಮಾ ನೋಡುತ್ತಾರೆ ಎಂದು ಅನೇಕರು ಕೇಳಿದ್ದರು. 'ದೇವದಾಸ್'ನಂತಹ ಚಿತ್ರ ವರ್ಷಗಟ್ಟಲೆ ಓಡಿಲ್ಲವೇ? ಅದು ಕನ್ನಡದಲ್ಲಿ ಯಾರೂ ಮಾಡಿರಲಿಲ್ಲ. ಇದೂ ಅದೇ ರೀತಿ ಇದೆ ಎಂದು ಸಿನಿಮಾ ಮಾಡಲು ಮುಂದಾದೆ ಎಂದು ಬಾಬು ನೆನಪಿಸಿಕೊಂಡಿದ್ದಾರೆ.

  ವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರುವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರು

  ಅಂಬರೀಶ್ ನಟಿಸಬೇಕಿತ್ತು...

  ಅಂಬರೀಶ್ ನಟಿಸಬೇಕಿತ್ತು...

  ಈ ಚಿತ್ರವನ್ನು ಅಂಬರೀಶ್‌ಗೆ ಕೊಡೋನಾ ಎಂದು ಮನಸಲ್ಲಿ ಇತ್ತು. ಅಂಬರೀಶ್‌ನನ್ನು ಎಮೋಷನಲ್ ಆಗಿ ತೋರಿಸಬೇಕಿತ್ತು. ಆದರೆ ಡೇಟ್ ವಿಚಾರದಲ್ಲಿ ಅಂಬರೀಶ್ ಬಹಳ ಗೊಂದಲದ ಮನುಷ್ಯ. ಯಾರೇ ಆಗಲಿ ನನಗೆ ಒಂದು ಸಲ ಡೇಟ್ ಕೊಟ್ಟರೆ ಬದಲಿಸಬಾರದು ಎನ್ನುವುದು ನನ್ನ ನೀತಿ. ಹಿಂದೆ ಹೀಗೆ ಡೇಟ್ ಕೊಟ್ಟು ಬಂದಿರಲಿಲ್ಲ. ಅದಕ್ಕೆ ಒಂದು ಟೆಲಿಗ್ರಾಮ್ ಕಳಿಸಿದ್ದೆ. 'ಬಾರದೆ ಇರುವುದಕ್ಕೆ ಧನ್ಯವಾದ. ನಾನು ಹೊಸ ಕಲಾವಿದರನ್ನು ಹಾಕಿಕೊಂಡಿದ್ದೇನೆ. ನೀನು ನಿನ್ನ ಶೂಟಿಂಗ್ ಎಂಜಾಯ್ ಮಾಡಬಹುದು' ಎಂದು 'ಕಿಲಾಡಿ ಜೋಡಿ'ಯಿಂದ ಅವನನ್ನು ತೆಗೆದೇ ಬಿಟ್ಟಿದ್ದೆ. ಹೀಗಾಗಿ ಫ್ರೆಂಡ್ಸ್ ಮಧ್ಯೆ ಜಗಳ ಬೇಡ. ಡೇಟ್ಸ್ ಕೊಡು. ಬೇರೆ ಯಾರಿಗೂ ಆ ಡೇಟ್ ಕೊಡಬೇಡ ಎಂದೆ. ಕೊನೆಗೆ ಡೇಟ್ಸ್ ಎಲ್ಲ ಗೊಂದಲಮಯವಾಗಿದೆ ಎಂದು ಅವನು ಹಿಂದೆ ಸರಿದ ಎಂದು 'ಬಂಧನ'ದಿಂದ ಅಂಬಿ ವಂಚಿತರಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ

  ವಿಷ್ಣುವರ್ಧನ್ ಕೂಡ ಹಿಂಜರಿದಿದ್ದರು

  ವಿಷ್ಣುವರ್ಧನ್ ಕೂಡ ಹಿಂಜರಿದಿದ್ದರು

  ವಿಷ್ಣುವರ್ಧನ್ ಕೂಡ ಈ ಸಿನಿಮಾ ಮಾಡಲು ಹಿಂದೆಮುಂದೆ ನೋಡಿದ್ದರು. ಸಾಹಸಿಂಹ, ಖೈದಿಯಂತಹ ಆಕ್ಷನ್ ಚಿತ್ರಗಳನ್ನು ಮಾಡಿದ್ದರು, 'ಲೋ ಈ ಸಿನಿಮಾ ಯಾರು ನೋಡುತ್ತಾರೋ' ಎಂದು ವಿಷ್ಣು ಆತಂಕ ಹಂಚಿಕೊಂಡಿದ್ದರು. ಅದಕ್ಕೆ ಬಾಬು, 'ನನಗೆ ಕಾನ್ಫಿಡೆನ್ಸ್ ಇದೆ. ಸಿನಿಮಾ ಚೆನ್ನಾಗಿ ಆಗುತ್ತದೆ' ಎಂದು ಭರವಸೆ ತುಂಬಿದ್ದರು. ಕಥೆ ರೀಡಿಂಗ್ ಕೊಡು ಎಂದು ಕೇಳಿದ್ದ ವಿಷ್ಣು ದಾದಾಗೆ ಬಾಬು, ನನ್ನ ಮೇಲೆ ನಂಬಿಕೆ ಇಲ್ಲವಾ ಎಂದು ಕೇಳಿದ್ದರಂತೆ. ಅಲ್ಲಿಂದ ಮತ್ತೆ ವಿಷ್ಣು ಎಂದಿಗೂ ಬಾಬು ಬಳಿ ಕಥೆ ಕೇಳಿರಲಿಲ್ಲ. ಒಂದು ಲೈನ್ ಅಷ್ಟೇ ಕೇಳಿ ಏನು ಬೇಕಾದರೂ ಮಾಡು ಎನ್ನುತ್ತಿದ್ದರಂತೆ.

  ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?

  ಹೀರೋಯಿನ್ ಹುಡುಕಾಟ

  ಹೀರೋಯಿನ್ ಹುಡುಕಾಟ

  ಆದರೆ ಚಿತ್ರಕ್ಕೆ ಹೀರೋಯಿನ್ ಸಿಕ್ಕಿರಲಿಲ್ಲ. ಆರತಿ ಆಗಷ್ಟೇ ಎಕ್ಸಿಟ್ ಆಗಿದ್ದರು. ಕಲ್ಪನಾ ಆಗುತ್ತಿರಲಿಲ್ಲ. ಆದರೆ ಆ ಲೆವೆಲ್‌ಗೆ ಹೀರೋಯಿನ್ ಬೇಕಿತ್ತು. ಇಲ್ಲದಿದ್ದರೆ ಕಥೆ ಝೀರೋ. ಹೀರೋಯಿನ್ ಅಷ್ಟು ಮುಖ್ಯವಾಗಿದ್ದರು. ಶೂಟಿಂಗ್ ಶುರುಮಾಡೋಣ ಎಂದೆ. ಎರಡು ದಿನ ಶೂಟಿಂಗ್ ಆಯ್ತು. ಸಮಸ್ಯೆ ಆಗಿದ್ದು ಕ್ಯಾಸ್ಟ್ಯೂಮ್‌ನಲ್ಲಿ. ಡಾಕ್ಟರ್ ಪಾತ್ರಕ್ಕೆ ಸೂಕ್ತ ಉಡುಪು ಬೇಕಿತ್ತು. ಆದರೆ ವಸ್ತ್ರ ವಿನ್ಯಾಸಕ ಮದ್ರಾಸ್‌ನವನು. ಸಂಪೂರ್ಣ ವರ್ಣಮಯಗೊಳಿಸಿಬಿಟ್ಟಿದ್ದ ಎಂದು ಬಾಬು ಹೇಳಿದ್ದಾರೆ.

  ಕನ್ನಡದ ಸೊಗಡಿನ ನಟಿ ಬೇಕಿತ್ತು

  ಕನ್ನಡದ ಸೊಗಡಿನ ನಟಿ ಬೇಕಿತ್ತು

  ವಿಷ್ಣುವರ್ಧನ್ ಜತೆ ಬಾಂಬೆಗೆ ಹೋದ ಬಾಬು, ಅಲ್ಲಿ ಪರಿಚಯದ ಟೈಲರ್ ಬಳಿ ಪಾತ್ರಕ್ಕೆ ಸೂಕ್ತವಾದ ಬಟ್ಟೆ ಹೊಲಿಸಿದರು. ಮತ್ತೆ ವಾಪಸ್ ಬಂದು ಶೂಟಿಂಗ್ ಆರಂಭಿಸಿದರು. ಆರು ದಿನ ಶೂಟಿಂಗ್ ನಡೆಯಿತು. ಆದರೆ ಹೀರೋಯಿನ್ ಮಾತ್ರ ಸಿಕ್ಕಿರಲಿಲ್ಲ. ಎಷ್ಟು ಹುಡುಕಿದರೂ ಯಾರೂ ಸೂಕ್ತ ಎನಿಸುತ್ತಿರಲಿಲ್ಲ. ಬಾಂಬೆಯಲ್ಲಿನ ಹೀರೋಯಿನ್‌ಗಳ ಬಣ್ಣ ಹೊಂದಿಕೆಯಾಗುತ್ತಿರಲಿಲ್ಲ. ಇದಕ್ಕೆ ಪಕ್ಕಾ ಕನ್ನಡದ ಬಣ್ಣ, ಸೊಗಡು ಬೇಕಿತ್ತು. ಕಲ್ಪನಾ, ಆರತಿ, ಭಾರತಿ, ಜಯಂತಿ ಅವರ ಪಾತ್ರಗಳು ಕನ್ನಡಕ್ಕೆ ಅಂಟಿಕೊಂಡಿದ್ದು ಹೀಗೆ. ಅಂತಹ ಪಾತ್ರ ಬೇಕಿತ್ತು.

  ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!

  ಅವಳೇ ಹೀರೋಯಿನ್ ನಂದಿನಿ!

  ಅವಳೇ ಹೀರೋಯಿನ್ ನಂದಿನಿ!

  ಅದೇ ತಾನೆ ಕಾಲೇಜು ಮುಗಿಸಿ ಬಂದಿದ್ದ ಮುನ್ನಿ (ಸಹೋದರಿ ವಿಜಯಲಕ್ಷ್ಮಿ ಸಿಂಗ್) 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಳು. ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಲಿಫ್ಟ್ ಹತ್ತುವಾಗ ಕಮಲಹಾಸನ್ ಜತೆ ಅವಳು ಬಂದಳು. ಆಗ ಅವರ ಜತೆಗಿದ್ದಾಕೆ ಒಂದು ಸಲ ಕೂದಲನ್ನು ಹಾರಿಸಿ ತಿರುಗಿದಳು. ಆ ದೃಶ್ಯವನ್ನು ಎಂದಿಗೂ ಮರೆಯಲು ಆಗೊಲ್ಲ. ಇವಳೇ ನನ್ನ ಚಿತ್ರದ ಹೀರೋಯಿನ್ ನಂದಿನಿ ಎಂದು ನಿರ್ಧರಿಸಿಬಿಟ್ಟೆ. ಆಕೆಯೇ ಸುಹಾಸಿನಿ- ಹೀಗೆ ಚಿತ್ರದ ನಾಯಕಿಯಾಗಿ ಸುಹಾಸಿನಿ ಆಯ್ಕೆಯಾದ ಸಂದರ್ಭದ ಗಳಿಗೆಯನ್ನು ವಿವರಿಸಿದ್ದಾರೆ.

  ಒಪ್ಪಿಕೊಂಡ ಸುಹಾಸಿನಿ

  ಒಪ್ಪಿಕೊಂಡ ಸುಹಾಸಿನಿ

  ವಿಜಯಲಕ್ಷ್ಮಿ ಸಿಂಗ್ ಬಳಿ ಸುಹಾಸಿನಿ ಬಗ್ಗೆ ವಿಚಾರಿಸಿದೆ. ಕಮಲಹಾಸನ್ ಸಂಬಂಧಿ, ಒಳ್ಳೆಯ ನಟಿ. ಆದರೆ ಗ್ಲಾಮರ್ ಇಲ್ಲ ಎಂದು ಹೇಳಿದರು. ನನ್ನ ಪಾತ್ರಕ್ಕೆ ಹೀಗೆಯೇ ಇರಬೇಕು. ಗ್ಲಾಮರ್ ಬೇಡ ಎಂದೆ. ರಾತ್ರಿಯೇ ಸುಹಾಸಿನಿ ಅವರಿದ್ದ ರೂಮ್‌ಗೆ ಹೋಗಿ ಸಿನಿಮಾ ಬಗ್ಗೆ ಹೇಳಿ, ಕಥೆ ವಿವರಿಸಬೇಕು ಎಂದೆ. ಮರು ದಿನ ಚಾಮುಮಡೇಶ್ವರಿ ಸ್ಟುಡಿಯೋದ ಮೇಕಪ್ ರೂಮ್‌ನಲ್ಲಿ ಕಥೆ ಹೇಳಿದೆ. ಒಪ್ಪಿಕೊಂಡರು. ಅಲ್ಲಿಯೇ ಚೆಕ್ ಬರೆದು ಬಂದೆ. 1983ರ ಇಸವಿ ಅದು. ಅದರ ಬಳಿಕ ಸುಹಾಸಿನಿ ಕನ್ನಡದಲ್ಲಿ ಮಹಾನ್ ನಟಿಯಾಗಿ ಹೊರಹೊಮ್ಮಿದರು ಎಂದು ಬಾಬು ಸ್ಮರಿಸಿದ್ದಾರೆ.

  ಬಂಧನದ ಹಾಡುಗಳು ಹುಟ್ಟಿದ್ದು...

  ಬಂಧನದ ಹಾಡುಗಳು ಹುಟ್ಟಿದ್ದು...

  'ಅಂತ'ದ ಬಳಿಕ ಜಿ.ಕೆ ವೆಂಕಟೇಶ್ ಅವರಿಂದಲೇ 'ಬಂಧನ'ಕ್ಕೆ ಹಾಡು ಮಾಡಿಸಲು ನೀಡಿದ್ದೆ. ನನಗೆ ಶಾರ್ಟ್ ಟೆಂಪರ್. ಒಪ್ಪಿಕೊಂಡಾಗ ಮಾಡಿಕೊಡಬೇಕು. ಮೈಸೂರಿಗೆ ಬಂದು ಹಾಡು ಮಾಡಿಕೊಡಿ ಎಂದರೆ ಅವರು ಬರಲಿಲ್ಲ. ಕೊನೆಗೆ ನಾನೇ ಅವರಿಗಾಗಿ ಮದ್ರಾಸ್‌ಗೆ ಹೋಗಿದ್ದೆ. ಅಲ್ಲಿಯೂ ಕಾಯಿಸಿದರು. ಕೊನೆಗೆ ಇಲ್ಲೇ ಮಾಡುತ್ತೇನೆ ಎಂದರು. ನಾನು ಈ ರೀತಿ ಮಾಡಲು ಆಗೊಲ್ಲ. ಬೇರೆಯವರನ್ನು ಹಾಕಿಕೊಂಡು ಮಾಡುತ್ತೇನೆ ಎಂದು ವಾಪಸ್ ಬಂದೆ. ನಂತರ ರಂಗರಾವ್ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಸಂಗೀತ ಸಂಯೋಜನೆ ಮಾಡಿಸಿದೆ. ಹಾಡುಗಳನ್ನು ಉದಯ್ ಶಂಕರ್ ಬರೆಯಬೇಕಿತ್ತು. ಆದರೆ ಅವರು ಬಿಜಿಯಾಗಿದ್ದರಿಂದ ಆರ್ ಎನ್ ಜಯಗೋಪಾಲ್ ಬಳಿ ಬರೆಯಿಸಬೇಕಾಯಿತು ಎಂದು ಸಾರ್ವಕಾಲಿಕ ಹಿಟ್ ಹಾಡುಗಳು ಹುಟ್ಟಿದ ಬಗೆಯನ್ನು ಹಂಚಿಕೊಂಡಿದ್ದಾರೆ.

  25 ಕೇಂದ್ರಗಳಲ್ಲಿ 25 ವಾರ

  25 ಕೇಂದ್ರಗಳಲ್ಲಿ 25 ವಾರ

  'ಬಂಧನ'ದ ಸಕ್ಸಸ್ ಹೇಗಿತ್ತು ಎಂದರೆ 25 ಕೇಂದ್ರಗಳಲ್ಲಿ 25 ವಾರ ಓಡಿತ್ತು. ಬೆಂಗಳೂರಿನ ಮುಖ್ಯ ಚಿತ್ರಮಂದಿರ ತ್ರಿವೇಣಿಯಲ್ಲಿ ಇನ್ನೂ ಓಡುತ್ತಿತ್ತು. ಎಲ್ಲ ಸಿನಿಮಾಗಳಿಗೂ ಆ ಚಿತ್ರಮಂದಿರ ಬೇಕಿತ್ತು. ಮಧ್ಯಾಹ್ನದ ಪ್ರದರ್ಶನಕ್ಕೆ ಮಹಿಳೆಯರು ಹೆಚ್ಚು ಬರುತ್ತಿದ್ದರು. ಕೆ.ವಿ. ಜಯರಾಮ್ ಆ ಚಿತ್ರಮಂದಿರ ಬೇಕು ಎಂದಾಗ ಬಿಟ್ಟುಕೊಟ್ಟೆ ಎಂದು ವಿವರಿಸಿದ್ದಾರೆ.

  English summary
  Ambareesh was the first choice of director Rajendra Singh Babu for Bandhana movie before Vishnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X