ಅಂಬಿ ಮೊದಲ ಸಿನಿಮಾ 'ನಾಗರಹಾವು' ಅಲ್ಲ, ಜಲೀಲ ಪಾತ್ರಕ್ಕೆ ಸಿಕ್ಕಿದ್ದ ಸಂಭಾವನೆ ಎಷ್ಟು?
ರೆಬಲ್ ಸ್ಟಾರ್ ಅಂಬರೀಶ್. ಕನ್ನಡ ಚಿತ್ರರಂಗಕ್ಕೆ ಅಂಬಿ ಕೊಡುಗೆ ಅಪಾರ. ರಾಜಕಾರಣದಲ್ಲಿ ಕೂಡ ಗುರ್ತಿಸಿಕೊಂಡಿದ್ದ ಮಂಡ್ಯದ ಗಂಡು ಜೀವನವೇ ವರ್ಣಣಾತೀತ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಜಲೀಲನಾಗಿ ಅಂಬಿ ಅಬ್ಬರಿಸಿ ಗೆದ್ದಿದ್ದರು.
ಸಣ್ಣ ಪಾತ್ರದಲ್ಲಿ ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂನಿಂದ ಅಂಬರೀಶ್ ಗಮನ ಸೆಳೆದಿದ್ದರು. ಮುಂದೆ ಸಣ್ಣ ಪುಟ್ಟ ಪಾತ್ರಗಳ ಮೂಲಕ ಸದ್ದು ಮಾಡಿ ಕೊನೆಗೆ ಹೀರೊ ಪಟ್ಟ ಅಲಂಕರಿಸಿದ್ದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ರೆಬಲ್ ಪಾತ್ರಗಳ ಮೂಲಕವೇ ಕಮಾಲ್ ಮಾಡಿದ್ದರು. ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸೋಕೆ ಆರಂಭಿದರು. ಶಿವಣ್ಣ, ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಯಶ್ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು.

ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಶ್ರೀನಾಥ್ ಹೀಗೆ ಕನ್ನಡ ಚಿತ್ರರಂಗದ ಆ ಕಾಲದ ಸ್ಟಾರ್ ನಟರ ಜೊತೆಗೆಲ್ಲಾ ಅಂಬಿ ತೆರೆ ಹಂಚಿಕೊಂಡಿದ್ದರು. ತಮ್ಮ ಜಾಲಿ ಲೈಫ್‌ಸ್ಟೈಲ್‌ನಿಂದ ಕೂಡ ರೆಬಲ್ ಸ್ಟಾರ್ ಆಪ್ತರಿಗೆ ಬಹಳ ಇಷ್ಟವಾಗಿದ್ದರು. ಅಭಿಮಾನಿಗಳು ಕೂಡ ಅದನ್ನು ಒಪ್ಪಿಕೊಂಡಿದ್ದರು. ಪಿಟೀಲು ಚೌಡಯ್ಯನವರ ಮೊಮ್ಮಗನಾದ ಅಂಬರೀಶ್ ಅವರಿಗೆ ಚಿತ್ರರಂಗದ ಹಿನ್ನೆಲೆ ಇರಲಿಲ್ಲ. ಆದರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಸಂಗ್ರಾಮ್ ಸಿಂಗ್ ಒಡನಾಟದಿಂದ ಚಿತ್ರರಂಗಕ್ಕೆ ಬರುವಂತಾಗಿತ್ತು.
'ನಾಗರಹಾವು' ಚಿತ್ರಕ್ಕೂ ಮುನ್ನ ಒಂದೆರಡು ಸಿನಿಮಾಗಳಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದರು. 'ಶಿವಶರಣೆ ನಂಬೆಕ್ಕ' ಚಿತ್ರದಲ್ಲಿ ಬಾಲ ನಟರಾಗಿಯೂ ಅಂಬಿ ಕಾಣಿಸಿಕೊಂಡಿದ್ದರು. ಬಳಿಕ 'ಬಂಗಾರದ ಕಳ್ಳ' ಹಾಗೂ 'ಮಹದೇಶ್ವರ ಪೂಜಾಫಲ' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಆದರೆ ಮೊದಲು ಬಿಡುಗಡೆ ಆಗಿದ್ದು ಮಾತ್ರ 'ನಾಗರಹಾವು' ಸಿನಿಮಾ. ಜಲೀಲನ ಪಾತ್ರವೇ ದೊಡ್ಡ ಬ್ರೇಕ್ ಕೊಟ್ಟಿತ್ತು. ಆ ಪಾತ್ರಕ್ಕೆ 500 ರೂಪಾಯಿ ಸಂಭಾವನೆ ಸಿಕ್ಕಿತ್ತು ಎಂದು ಸ್ವತಃ ಅಂಬರೀಶ್ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಮೈಸೂರಿನಲ್ಲಿ ರಾಜೇಂದ್ರ ಸಿಂಗ್ ಬಾಬು ಮನೆಯ ಪಕ್ಕದಲ್ಲೇ ಅಂಬರೀಶ್ ಅವರ ಮನೆ ಇತ್ತು. ಸಿಂಗ್ ಬಾಬು ಸಹೋದರ ಹಾಗೂ ಅಂಬಿ ಸ್ನೇಹಿತರಾಗಿದ್ದರು. ಒಮ್ಮೆ ತಂದೆ ಜೊತೆ ಜಗಳವಾಡಿ ಮನೆಬಿಟ್ಟು ಸ್ನೇಹಿತನ ಮನೆಯಲ್ಲಿ ಅಂಬಿ ಉಳಿದುಕೊಳ್ಳುವಂತಾಗಿತ್ತು. ಅದೇ ಸಮಯದಲ್ಲಿ ಸಿಂಗ್ ಬಾಬು ಕುಟುಂಬದ ಜೊತೆ ಒಡನಾಟ ಹೆಚ್ಚಾಗಿತ್ತು. ಮಹಾತ್ಮ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶಂಕರ್ ಸಿಂಗ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು.
ತಂದೆಯ ಸಿನಿಮಾಗಳಲ್ಲಿ ರಾಜೇಂದ್ರ ಸಿಂಗ್ ಬಾಬು ತೊಡಗಿಸಿಕೊಳ್ಳುತ್ತಿದ್ದರು. ಹಾಗಾಗಿ ಅಂಬರೀಶ್ ಕೂಡ ಬಣ್ಣ ಹಚ್ಚುವ ಅವಕಾಶ ಸಿಕ್ಕಿತ್ತು. ಮಹದೇಶ್ವರ ಪೂಜಾ ಫಲ ಹಾಗೂ ಬಂಗಾರದ ಕಳ್ಳ ಸಿನಿಮಾಗಳಲ್ಲಿ ಅಂಬಿ ಅದಾಗಲೇ ಬಣ್ಣ ಹಚ್ಚಿದ್ದರು. ಆ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ ಇದ್ದಾಗಲೇ 'ನಾಗರಹಾವು' ಚಿತ್ರದ ಆಡಿಷನ್ ವಿಚಾರ ಗೊತ್ತಾಗಿತ್ತು. ಪುಟ್ಟಣ್ಣ ಕಣಗಾಲ್ ಬಹಳ ಸ್ಟ್ರಿಕ್ಟ್ ಎನ್ನುವ ಕಾರಣಕ್ಕೆ ಆಡಿಷನ್‌ಗೆ ಹೋಗುವುದು ಬೇಡ ಎಂದುಕೊಂಡಿದ್ದರಂತೆ. ಆದರೆ ಸ್ನೇಹಿತರು ಪಟ್ಟು ಹಿಡಿದು ಕರೆದುಕೊಂಡು ಹೋಗಿದ್ದರು.
ಅದಾಗಲೇ ರಾಮಾಚಾರಿ ಪಾತ್ರಕ್ಕೆ ಆಡಿಷನ್ ಕೊಟ್ಟು ವಿಷ್ಣುವರ್ಧನ್ ಆಯ್ಕೆ ಆಗಿದ್ದರು. ಜಲೀಲನ ಪಾತ್ರಕ್ಕಾಗಿ ಸಾಕಷ್ಟು ಜನ ಆಡಿಷನ್ ಕೊಟ್ಟಿದ್ದರು. ಕೊನೆಗೆ ಅಂಬರೀಶ್ ಅವರಿಗೆ ಒಂದು ಡೈಲಾಗ್ ಕೊಟ್ಟು ಹೇಳಲು ಪುಟ್ಟಣ್ನ ಹೇಳಿದ್ದರು. ಅದನ್ನು ಹೇಳಿದ ಸ್ಟೈಲ್ ನೋಡಿ ಜಲೀಲನ ಪಾತ್ರಕ್ಕೆ ನೀನು ಆಯ್ಕೆ ಆಗಿದ್ದೀಯಾ ಎಂದು ತಿಳಿಸಿದ್ದರು. ಈ ಚಿತ್ರದಿಂದ ನಿನಗೂ, ವಿಷ್ಣುಗೂ ಒಳ್ಳೆ ಹೆಸರು ಬರುತ್ತದೆ ಎಂದು ಪುಟ್ಟಣ್ಣ ಹೇಳಿದ್ದರು. ಅಯ್ಯೋ ವಿಷ್ಣು ಹೀರೊ ಸರಿ, ನಾನು ಒಂದು ದೃಶ್ಯದಲ್ಲಿ ಬಂದು ಹೋಗ್ತೀನಿ ನನಗೆ ಏನು ಹೆಸರು ಬರುತ್ತದೆ ಬಿಡಿ ಎಂದು ಅಂಬಿ ಹೇಳಿದ್ದರಂತೆ. ಮುಂದೆ ಪುಟ್ಟಣ್ಣ ಹೇಳಿದ್ದೇ ನಿಜವಾಯಿತು ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ರೆಬಲ್ ಸ್ಟಾರ್ ನೆನಪಿಸಿಕೊಂಡಿದ್ದರು.


Click it and Unblock the Notifications