"ನನಗೆ 5 ಸಲ ಮದುವೆ ಆಗಿದೆ.. ಅದು ಯಾರ್‍ಯಾರ ಜೊತೆ ಅಂದ್ರೆ": ಅನುಷ್ಕಾ ಶೆಟ್ಟಿ ಹೇಳಿಕೆ ವೈರಲ್
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗ್ಬಿಟ್ಟಿದೆ. 'ಬಾಹುಬಲಿ' - 2 ನಂತರ ಸ್ವೀಟಿ ಅಷ್ಟಾಗಿ ನಟಿಸಲಿಲ್ಲ. 'ಸೈಜ್ ಜೀರೊ' ಚಿತ್ರಕ್ಕೆ ತೂಕ ಹೆಚ್ಚಿಸಿಕೊಂಡಿದ್ದೇ ಇದಕ್ಕೆ ಕಾರಣ. ಆದರೂ ಅಭಿಮಾನಿಗಳು ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಸದ್ಯ ಅನುಷ್ಕಾ ಶೆಟ್ಟಿ 'ಮಿಸ್. ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸ್ವೀಟಿ ಮದುವೆ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಲೇ ಇದೆ. ವಯಸ್ಸು 40 ದಾಟಿದ್ರು ಯಾಕೆ ಮಂಗಳೂರು ಬೆಡಗಿ ಮದುವೆ ಆಗುವ ಮನಸ್ಸು ಮಾಡಿದಂತೆ ಕಾಣುತ್ತಿದೆ. ಒಂದಷ್ಟು ಜನರ ಜೊತೆಗೆ ಆಕೆಯ ಹೆಸರು ತಳಕು ಹಾಕಿಕೊಂಡರೂ ಅದೆಲ್ಲಾ ಸುಳ್ಳು ಅನ್ನೋದು ಸಾಬೀತಾಯಿತು. ಪ್ರಭಾಸ್- ಅನುಷ್ಕಾ ಪ್ರೀತಿ ಮಾಡ್ತಿದ್ದಾರೆ, ಇಬ್ಬರು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದಕ್ಕೆ ಕಾರಣ ಇಬ್ಬರ ನಡುವಿನ ಲವ್. ಬಹಳ ದಿನಗಳಿಂದ ಲವ್ ಮಾಡ್ತಿರೋ ಜೋಡಿ ಆದಷ್ಟು ಬೇಗ ಮದುವೆ ಆಗೇಬಿಡ್ತಾರೆ ಎನ್ನುವಮಟ್ಟಿಗೆ ವದಂತಿ ಹರಿದಾಡಿತ್ತು.

ಸದ್ಯ ಕೃತಿ ಸನೂನ್ ಜೊತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದೆ. ಹಾಗಾಗಿ ವದಂತಿ ಆಕೆ ಕಡೆ ತಿರುಗಿದೆ. ಇನ್ನು ಅನುಷ್ಕಾ ಶೆಟ್ಟಿಗೆ ಒಬ್ಬ ಉದ್ಯಮಿ ಜೊತೆ ಮದುವೆ ಫಿಕ್ಸ್ ಆಗಿದೆ ಎನ್ನುವ ಗುಸುಗುಸು ಇತ್ತೀಚೆಗೆ ಜೋರಾಗಿ ಕೇಳಿಬಂದಿತ್ತು. ಪೋಷಕರು ನೋಡಿದ ಹುಡುಗನನ್ನು ಸ್ವೀಟಿ ಕೈ ಹಿಡಿಯಲು ಒಪ್ಪಿದ್ದಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇದೆಲ್ಲದರ ನಡುವೆ ಮದುವೆ ಬಗ್ಗೆ ಸ್ವೀಟ್ ಹೇಳಿಕೆಯೊಂದು ವೈರಲ್ ಆಗ್ತಿದೆ.
5 ಬಾರಿ ಮದುವೆ ಆಗಿದೆ
ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ನನಗೆ ಒಂದಲ್ಲ ಎರಡಲ್ಲ 5 ಬಾರಿ ಮದುವೆ ಆಗಿದೆ ಎಂದು ಹೇಳಿದ್ದರು. ಅದು ಯಾರ್‍ಯಾರ ಅನ್ನೋದನ್ನು ಕೂಡ ಸ್ವೀಟಿ ಹೇಳಿದ್ದರು. ಹಿರಿಯ ನಟಿ ಜಯಪ್ರದ ಬಹಳ ವರ್ಷಗಳ ಹಿಂದೆ ಕಿರುತೆರೆ ಸಂದರ್ಶನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 'ಅರುಂಧತಿ' ಸಿನಿಮಾ ಆಗಷ್ಟೆ ರಿಲೀಸ್ ಆಗಿ ಸ್ವೀಟಿ ಕ್ರೇಜ್ ಹೆಚ್ಚಾಗಿತ್ತು. ಸಂದರ್ಶನದ ವೇಳೆ ಜಯಪ್ರದ ನಿಮ್ಮ ಬಗ್ಗೆ ನೀವು ಕೇಳಿದ ಅತಿ ದೊಡ್ಡ ಗಾಸಿಪ್ ಯಾವುದು ಎನ್ನುವ ಪ್ರಶ್ನೆ ಕೇಳಿದ್ದರು.
ಹಳೇ ವಿಡಿಯೋ ವೈರಲ್
ಜಯಪ್ರದ ಅವರ ಪ್ರಶ್ನೆಗೆ ಕೂಡಲೇ ಉತ್ತರಿಸಿದ ಸ್ವೀಟಿ, "ನಾನು 5 ಸಲ ಮದುವೆ ಆಗಿದ್ದೀನಿ ಅನ್ನೋದು ದೊಡ್ಡ ಗಾಸಿಪ್ ಎಂದು ಹೇಳಿದ್ದಾರೆ. ಆ ಮಾತು ಕೇಳಿ ನಕ್ಕ ಜಯಪ್ರದ ಯಾರ್‍ಯಾರ ಜೊತೆಗೆ ಎನ್ನುತ್ತಿದ್ದಂತೆ ಎಲ್ಲಾ ನನ್ನ ಸಹನಟರು. ಪ್ರಭಾಸ್, ಸುಮಂತ್, ಗೋಪಿಚಂದ್, ಸೆಂಥಿಲ್ ಎಂದು ಹೇಳಿ ಅನುಷ್ಕಾ ಶೆಟ್ಟಿ ನಕ್ಕಿದ್ದಾರೆ. ತಾವು ನಟಿಸಿದ ಸಹನಟರ ಜೊತೆಗೆಲ್ಲಾ ಮದುವೆ ಆಗುತ್ತದೆ, ಮದುವೆ ಆಗಿದೆ ಎನ್ನುವ ಅರ್ಥದಲ್ಲಿ ಗಾಸಿಪ್‌ಗಳು ಹರಿದಾಡುತ್ತಿದ್ದನ್ನು ಸ್ವೀಟಿ ಈ ರೀತಿ ವಿವರಿಸಿದ್ದಾರೆ. ಸದ್ಯ ಈ ಹಳೇ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ.

'ಸೂಪರ್' ಮೊದಲ ಸಿನಿಮಾ
ಯೋಗ ಟೀಚರ್ ಆಗಿದ್ದ ಅನುಷ್ಕಾ ಶೆಟ್ಟಿ ಪೂರಿ ಜಗನ್ನಾಥ್ ನಿರ್ದೇಶನದ 'ಸೂಪರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಹಾನದಿ ಚಿತ್ರದಲ್ಲಿ ಸುಮಂತ್ ಜೋಡಿಯಾಗಿ ನಟಿಸಿದ್ದರು. 'ಲಕ್ಷ್ಯಂ' ಚಿತ್ರದಲ್ಲಿ ಗೋಪಿಚಂದ್ ಹಾಗೂ 'ಬಿಲ್ಲಾ', 'ಮಿರ್ಚಿ', 'ಬಾಹುಬಲಿ' ಸಿನಿಮಾಗಳಲ್ಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ದರು. ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಇಬ್ಬರು ಹೇಳಿಕೊಂಡಿದ್ದರು.
ಮಿಸ್ ಶೆಟ್ಟಿಯಾಗಿ ಸ್ವೀಟಿ
'ಬಾಹುಬಲಿ'- 2 ನಂತರ ಅನುಷ್ಕಾ ಶೆಟ್ಟಿ ಸಿನಿಮಾಗಳು ಅಷ್ಟಾಗಿ ಗೆಲ್ಲಲಿಲ್ಲ. 'ಭಾಗಮತಿ' ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. ಆದರೆ ಅಷ್ಟಾಗಿ ಕಲೆಕ್ಷನ್ ಮಾಡಲಿಲ್ಲ. 'ಸೈಲೆಂಟ್' ಸಿನಿಮಾ ಬಂದೋಗಿದ್ದು ಗೊತ್ತಾಗಲಿಲ್ಲ. ಈಗ ಮಹೇಶ್ ಬಾಬು ಎಂಬುವವರು ನಿರ್ದೇಶನದ 'ಮಿಸ್. ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ಸ್ವೀಟಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











