'ಒಂದು ಮುತ್ತಿನ ಕಥೆ'ಯಲ್ಲಿ ಡಾ. ರಾಜ್- ಶಂಕರ್ ನಾಗ್ ಹಾರ್ಡ್‌ವರ್ಕ್ ಮರೆಯೋಕ್ಕಾಗಲ್ಲ; ನಟಿ ಅರ್ಚನಾ ಭಾವುಕ
ಕನ್ನಡ ಚಿತ್ರರಂಗದ ಅಪರೂಪದ ಸಿನಿಮಾ 'ಒಂದು ಮುತ್ತಿನ ಕಥೆ'. ಅವತ್ತಿನ ಕಾಲಕ್ಕೆ ಹಾಲಿವುಡ್ ಶೈಲಿಯ ಸಿನಿಮಾ ಇದು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲದೇ ಇದ್ದರೂ ತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಕಲ್ಟ್ ಕ್ಲಾಸಿಕ್ ಸ್ಟೇಟಸ್ ಪಡೆದುಕೊಂಡುಬಿಟ್ಟಿದೆ. ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಜೋಡಿಯಾಗಿ ಅರ್ಚನಾ ನಟಿಸಿದ್ದರು.
ವಿಜಯವಾಡ ಮೂಲದ ಅರ್ಚನಾ ನಾನು ತಮಿಳು ನಟಿ ಎಂದು ಹೇಳಿಕೊಳ್ಳುತ್ತಾರೆ. ತಮಿಳುನಾಡಿನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ತಮಿಳಿನ ಜನ ನನಗೆ ಬೆಂಬಲ ನೀಡಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ. 1984ರಲ್ಲಿ 'ಪ್ರೇಮಿಗಳ ಸವಾಲ್' ಸಿನಿಮಾ ಮೂಲಕ ಅರ್ಚನಾ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತ ಸುಧಾ ಮುಂದೆ ಅರ್ಚನಾ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಅರ್ಚನಾ ಅವರನ್ನು ಬಾಲು ಮಹೇಂದರ್ ಚಿತ್ರರಂಗಕ್ಕೆ ಪರಿಚಯಿಸಿದರು. Swan Studios ಯೂಟ್ಯೂಬ್ ಸಂದರ್ಶನದಲ್ಲಿ ಅರ್ಚನಾ ತಮ್ಮ ಸಿನಿ ಜೀವನ ಮೆಲುಕು ಹಾಕಿದ್ದಾರೆ.

ಆರಂಭದಲ್ಲಿ ಸಿನಿಮಾಗಳಲ್ಲಿ ಅರ್ಚನಾ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು. ನೋಡೊಕೆ ನಟಿ ರೀತಿ ಕಾಣಲ್ಲ, ಬಹಳ ಸಿಂಪಲ್ ಆಗಿ ಕಾಣ್ತೀನಿ ಎನ್ನುವ ಕಾರಣಕ್ಕೆ ಬೇಡ ಎಂದಿದ್ದರು. ಆದರೆ ಬಾಲು ಮಹೇಂದರ್ ನಾನು ನಟಿಸಬಹುದು ಎಂದು ಹೇಳಿ ಅವಕಾಶ ಕೊಟ್ಟರು. ಬಳಿಕ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ಸಿಕ್ತು ಎಂದಿದ್ದಾರೆ. ಮುಂದೆ ಎರಡು ಬಾರಿ ಅರ್ಚನಾ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡರು. 'ಒಂದು ಮುತ್ತಿನ ಕಥೆ' ಚಿತ್ರದಲ್ಲಿ ನಟಿಸಿದ ಅನುಭವವನ್ನು ಆಕೆ ನೆನಪಿಸಿಕೊಂಡಿದ್ದಾರೆ.
"ಶಂಕರ್ ನಾಗ್ ಅದ್ಭುತ ತಂತ್ರಜ್ಞ.. ಕನ್ನಡದಲ್ಲಿ ಅವರು ದೊಡ್ಡ ಕಲಾವಿದರು. ಆದ್ರೆ ನೋಡಲು ತಮಿಳು ವ್ಯಕ್ತಿ ರೀತಿ ಕಾಣ್ತಿದ್ರು.. 'ಒಂದು ಮುತ್ತಿನ ಕಥೆ' ಸಂಪೂರ್ಣವಾಗಿ ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಆ ಚಿತ್ರದಲ್ಲಿ ನನಗೆ ಬಹಳ ಒಳ್ಳೆ ಅನುಭವಗಳಿವೆ. ಡಾ. ರಾಜ್‌ಕುಮಾರ್ ಅವರೊಟ್ಟಿಗೆ ನಟಿಸಿದ್ದು ಮರೆಯೋಕೆ ಸಾಧ್ಯವಿಲ್ಲ. ಅದು ನಾನು ನಟಿಸುವ ಜಾನರ್ ಸಿನಿಮಾ ಆಗಿತ್ತು" ಎಂದು ಅರ್ಚನಾ ಮೆಲುಕು ಹಾಕಿದ್ದಾರೆ.
ಒಂದು ಇಡೀ ಹಾಡನ್ನು ನೀರಿನ ಆಳದಲ್ಲಿ ಚಿತ್ರೀಕರಿಸಲಾಗಿತ್ತು. ಅದಕ್ಕಾಗಿ ನಾನು ಅಂಡರ್ ವಾಟರ್ ಸ್ವಿಮ್ಮಿಂಗ್ ಕಲಿತೆ ಎಂದು ಅರ್ಚನಾ ತಿಳಿಸಿದ್ದಾರೆ. "ಅವತ್ತಿನ ಕಾಲಕ್ಕೆ ಒಂದು ಇಂಗ್ಲೀಷ್ ಸಿನಿಮಾ ಟಚ್ ಆ ಚಿತ್ರಕ್ಕಿತ್ತು. ಅಂತಾದೊಂದು ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದು ವಿಶೇಷ. ನಾನು ಆ ವಿಚಾರದಲ್ಲಿ ಬಹಳ ಲಕ್ಕಿ. ಆ ಚಿತ್ರಕ್ಕೆ ಶಂಕರ್‌ನಾಗ್ ಪತ್ನಿ ಅರುಂಧತಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ರು. ಆಗ ಮಹಿಳಾ ಕಾಸ್ಟ್ಯೂಮ್ ಡಿಸೈನರ್ ಬಹಳ ಕಮ್ಮಿ. ಚಿತ್ರದಲ್ಲಿ ಎಲ್ಲರಿಗೂ ಅವ್ರೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ರು. ಅವ್ರು ಹಾರ್ಡ್ ವರ್ಕ್ ಹೇಳುವುದಕ್ಕೆ ಕಷ್ಟ, ನನ್ನನ್ನು ಇಡೀ ತಂಡ ಮಗು ರೀತಿ ನೋಡಿಕೊಂಡಿದ್ರು. ಅದ್ಭುತ ಅನುಭವ.. ಮಾತನಾಡುವಾಗಲೇ ಡಾ. ರಾಜ್, ಶಂಕರ್ ನಾಗ್ ನೆನಪಾದರು" ಎಂದು ಅರ್ಚನಾ ಭಾವುಕರಾಗಿದ್ದಾರೆ.
'ಗುರಿ' ಸಿನಿಮಾದಲ್ಲಿ ಕೂಡ ಡಾ. ರಾಜ್‌ಕುಮಾರ್ ಜೋಡಿಯಾಗಿ ಅರ್ಚನಾ ನಟಿಸಿದ್ದರು. 'ಬೆಳ್ಳಿನಾಗ' ಹಾಗೂ 'ಹುಲಿಯಾ' ಕನ್ನಡದಲ್ಲಿ ಆಕೆ ನಟಿಸಿದ ಮತ್ತೆರಡು ಸಿನಿಮಾಗಳು. ತೆಲುಗಿನ 'ದಾಸಿ' ಹಾಗೂ ತಮಿಳಿನ 'ವೀಡು' ಚಿತ್ರಗಳ ನಟನೆಗಾಗಿ ಎರಡು ಬಾರಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಅರ್ಚನಾ ಅವರಿಗೆ ಲಭಿಸಿತ್ತು. 'ಒಂದು ಮುತ್ತಿನ ಕಥೆ' ಚಿತ್ರದಲ್ಲಿ ಐತು(ಡಾ. ರಾಜ್) ಜೋಡಿ ಕಾಕಿ ಪಾತ್ರದಲ್ಲಿ ಅರ್ಚನಾ ಅವರನ್ನು ಮರೆಯೋಕೆ ಸಾಧ್ಯವಿಲ್ಲ.


Click it and Unblock the Notifications