Sandalwood: ಪ್ಯಾನ್ ಇಂಡಿಯಾ ಸಹವಾಸ ಸಾಕಪ್ಪ ಸಾಕು.. ವರ್ಷಕ್ಕೆ ಮೂರು ಸಿನಿಮಾ ಬೇಕು
ಪ್ಯಾನ್ ಇಂಡಿಯಾ ಸಿನಿಮಾಗಳ ಗುಂಗಿನಲ್ಲಿ ಕನ್ನಡ ಚಿತ್ರರಂಗ ಬಡವಾಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ. ನೆಟ್ಟಿಗರು ಪ್ಯಾನ್ ಇಂಡಿಯಾ ಸಹವಾಸ ಸಾಕಪ್ಪ ಸಾಕು.. ವರ್ಷಕ್ಕೆ ಮೂರು ಸಿನಿಮಾ ಬೇಕು ಎನ್ನುತ್ತಿದ್ದಾರೆ.
'ಬಾಹುಬಲಿ', 'KGF' ಸರಣಿ ಸಿನಿಮಾಗಳು ಸಕ್ಸಸ್ ಆಗುತ್ತಿದ್ದಂತೆ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಯಿತು. ಒಂದೇ ಸಿನಿಮಾವನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಮಾಡಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ದೊಡ್ಡ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಿದೆ. 'KGF'-2 ಬಂದೋಗಿ ವರ್ಷ ಕಳೆದರೂ ಯಶ್ ಹೊಸ ಸಿನಿಮಾ ಘೋಷಿಸಿಲ್ಲ. ಈ ವರ್ಷ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಮಾತ್ರ ರಿಲೀಸ್ ಆಗಿದೆ. ಶಿವಣ್ಣ 'ಘೋಸ್ಟ್' ಈಗ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ನಟನೆಯ ಯಾವುದೇ ಸಿನಿಮಾ ಈ ವರ್ಷ ತೆರೆಗೆ ಬರಲಿಲ್ಲ.

ಧ್ರುವ ನಟನೆಯ 'ಮಾರ್ಟಿನ್', 'ಕೆಡಿ' ಈ ವರ್ಷ ಬರೋದು ಅನುಮಾನ. ಹೀಗೆ ದೊಡ್ಡ ನಟರೆಲ್ಲಾ ವರ್ಷಕ್ಕೆ ಒಂದು ಸಿನಿಮಾ ಮಾಡೋದಕ್ಕು ಹಿಂದೇಟು ಹಾಕುತ್ತಿದ್ದಾರೆ. ಜನ ಥಿಯೇಟರ್‌ಗಳಿಗೆ ಬರೋಕು ಕಮ್ಮಿ ಆಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸ್ಥಿತಿ ಆ ದೇವರಿಗೆ ಪ್ರೀತಿ. ಇದಕ್ಕೆಲ್ಲಾ ಪ್ಯಾನ್ ಇಂಡಿಯಾ ಹುಚ್ಚು ಕಾರಣ ಎನ್ನುವುದು ಕೆಲವರ ವಾದ. ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣ, ಪ್ರೀ ಪ್ರೊಡಕ್ಷನ್, ಪ್ರಮೋಷನ್ ಎಲ್ಲದ್ದಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಥಿಯೇಟರ್‌ಗಳು ಸಿಗಲ್ಲ. ಹಾಗಾಗಿ ಸಿನಿಮಾ ರಿಲೀಸ್ ತಡವಾಗುತ್ತದೆ ಎನ್ನುವ ಚರ್ಚೆ ನಡೀತಿದೆ.
ಸ್ಟಾರ್ ನಟರು ವರ್ಷಕ್ಕೆ 3 ಸಿನಿಮಾ ಮಾಡಬೇಕು. ಆಗ ಮಾತ್ರ ಚಿತ್ರರಂಗ ಉಳಿಯಲು ಸಾಧ್ಯ ಎನ್ನುವ ಮಾತನ್ನು ಎಲ್ಲರೂ ಹೇಳುತ್ತಿರುತ್ತಾರೆ. ಸಿನಿಮಾ ವಿತರಕರು, ಪ್ರದರ್ಶಕರು ಇದೇ ಬೇಡಿಕೆ ಇಡುತ್ತಾರೆ. ಪ್ರೇಕ್ಷಕರಿಗೆ ಸಿನಿಮಾ ನೋಡುವ ಹವ್ಯಾಸವನ್ನು ರೂಢಿಸಬೇಕು. ಅದಕ್ಕಾಗಿ ನಿಯಮಿತವಾಗಿ ಒಳ್ಳೆ ಒಳ್ಳೆ ಸಿನಿಮಾಗಳು ಬರಬೇಕು. ಎರಡ್ಮೂರು ವರ್ಷ ಶ್ರಮಿಸಿ ಮಾಡುವ ಪ್ಯಾನ್ ಇಂಡಿಯಾ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಗ್ಯಾರೆಂಟಿ ಕೂಡ ಇಲ್ಲ.

ಅಣ್ಣಾವ್ರು ವರ್ಷಕ್ಕೆ 8ರಿಂದ 10 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಈಗಿನ ಸ್ಟಾರ್ ನಟರು ಕೊನೆ ಪಕ್ಷ ವರ್ಷಕ್ಕೆ 2 ಸಿನಿಮಾಗಳಲ್ಲಿ ನಟಿಸಬೇಕು. ಸಿನಿಮಾ ಚೆನ್ನಾಗಿದ್ದರೆ ತಾನಾಗಿಯೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗುತ್ತದೆ. ಕನ್ನಡದಲ್ಲಿ ಮಾತ್ರ ಮಾಡಲು ನಿರ್ಧರಿಸಿದ್ದ 'ಕಾಂತಾರ' ತಾನಾಗಿಯೇ ಪ್ಯಾನ್ ಇಂಡಿಯಾ ರೂಪ ಪಡೆಯಿತು. ಇಂತಹ ಸನ್ನಿವೇಶದಲ್ಲಿ ಸುಖಾ ಸುಮ್ಮನೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ ಎನ್ನುವುದು ಕೆಲವರ ವಾದ.
ಶಿವಣ್ಣ ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಈ ವರ್ಷ 'ಘೋಸ್ಟ್' ಸಿನಿಮಾಕ್ಕೆ ಸೀಮಿತವಾಗಿಬಿಟ್ಟರು. ಆದರೆ ತಮಿಳಿನ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೋನ ಹಾವಳಿಯಿಂದ ಕಂಗೆಟ್ಟಿದ್ದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಇಂತಹ ಸಮಯದಲ್ಲಿ ಹೆಚ್ಚು ಸಿನಿಮಾಗಳು ಬರಬೇಕಾದ ಅನಿವಾರ್ಯತೆಯಿದೆ. ಆದರೆ ಪ್ಯಾನ್ ಇಂಡಿಯಾ ಆಸೆಗೆ ಮರುಳಾಗಿ ತಡ ಮಾಡುತ್ತಿದ್ದಾರೆ. ಈ ವರ್ಷ 'ಕ್ರಾಂತಿ', 'ಕಬ್ಜ', 'ಸಪ್ತ ಸಾಗರದಾಚೆ ಎಲ್ಲೋ', 'ಘೋಸ್ಟ್' ಬಿಟ್ಟರೆ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿಲ್ಲ. ಇನ್ನುಳಿದ 2 ತಿಂಗಳಲ್ಲೂ ಯಾವುದೇ ಸಿನಿಮಾ ದೊಡ್ಡ ಸಿನಿಮಾ ರಿಲೀಸ್ ಆಗುವ ಸುಳಿವು ಸಿಗುತ್ತಿಲ್ಲ. 'ಮಾರ್ಟಿನ್', 'ಯುವ', 'UI', 'ಕಾಟೇರ' ಎಲ್ಲಾ ಸಿನಿಮಾಗಳು ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿವೆ. ದಸರಾ ಸಂಭ್ರಮದಲ್ಲಿ ಬಂದಿರುವ 'ಘೋಸ್ಟ್' ಕೊಂಚಮಟ್ಟಿಗೆ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ.
ದರ್ಶನ್, ಶಿವಣ್ಣ, ಸುದೀಪ್ ಈ ಹಿಂದೆ ವರ್ಷಕ್ಕೆ 3 ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಅನ್ನೋದೇ ಬೇಸರದ ಸಂಗತಿ. ಮತ್ತೊಂದಷ್ಟು ಸ್ಟಾರ್ ನಟರು, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕು ಎನ್ನುವ ವಾದವರು ಮುಂದಿಡುತ್ತಿದ್ದಾರೆ.


Click it and Unblock the Notifications











