twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್

    |

    ಶಂಕರ್ ನಾಗ್ ಕುರಿತು ಅನೇಕಾನೇಕ ಕತೆಗಳನ್ನು ಕನ್ನಡಿಗರು ಕೇಳಿದ್ದಾರೆ. ಆದರೆ ಶಂಕರ್ ನಾಗ್ ಕುರಿತು ಮಡದಿ ಅರುಂಧತಿ ನಾಗ್ ಮಾತಲ್ಲಿ ಕೇಳುವುದು ವಿಶಿಷ್ಟ ಅನುಭೂತಿ.

    ಅರುಂಧತಿ ನಾಗ್ ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಅಪರೂಪ, ಮಾತನಾಡಿದರೂ ವಿಷಯ ಕೇಂದ್ರಿತ ಭಾಷಣಗಳಲ್ಲಿ ಅಲ್ಲಲ್ಲಿಯಷ್ಟೆ ಶಂಕರ್ ನಾಗ್ ಮಾತುಗಳು ಸುಳಿಯುತ್ತವೆ. ಆದರೆ ಭಾನುವಾರ ನಡೆದ ಆಪ್ತ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಅರುಂಧತಿ ನಾಗ್ ಮಾತನಾಡಿದರು, ಅವರ ಮಾತುಗಳಲ್ಲಿ ಶಂಕರ್ ನಾಗ್ ಕತೆಗಳು ಬಹುವಾಗಿ ಸುಳಿದವು, ಕೇಳುಗರ ಮನಸ್ಸು ಬೆಚ್ಚಗೆ ಮಾಡಿದವು.

    ಅರುಂಧತಿ ನಾಗ್ ಅವರು ಭಾನುವಾರ, ಕನ್ನಡ ಪುಸ್ತಕಗಳ ಆಡಿಯೋ ಮಾದರಿಯನ್ನು ಓದುಗರಿಗೆ ಒದಗಿಸುವ 'ಮೈ ಲ್ಯಾಂಗ್' ಎಂಬ ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಕನ್ನಡ ಕಲಿಕೆ, ಶಂಕರ್ ನಾಗ್ ಅವರಿಗೆ ಇದ್ದ ಕನ್ನಡ ಪ್ರೀತಿ, ಸಾಹಿತ್ಯ ಬಗೆಗೆ ಇಬ್ಬರಿಗೂ ಇದ್ದ ಅದಮ್ಯ ಒಲವು, ರಂಗಶಂಕರ, ಶಂಕರ್ ನಾಗ್ ಅವರೊಂದಿಗಿನ ಪ್ರೀತಿ ಎಲ್ಲದರ ಬಗ್ಗೆಯೂ ಮಾತನಾಡಿದರು.

    ಅರುಂಧತಿ ನಾಗ್ ಕಲಿತ ಮೊದಲ ಕನ್ನಡ ಪದ

    ಅರುಂಧತಿ ನಾಗ್ ಕಲಿತ ಮೊದಲ ಕನ್ನಡ ಪದ

    ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅರುಂಧತಿ ನಾಗ್, 'ನಾನು ಮೊದಲಿಗೆ ಕನ್ನಡ ಪದ ಕಲಿತಿದ್ದು ಬೈಗುಳ' ಎಂದು ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದರು. 'ಬಾಲ್ಯದಲ್ಲಿ ದೆಹಲಿಯಲ್ಲಿದ್ದಾಗ ಅಪ್ಪ-ಅಮ್ಮ ಇಬ್ಬರದ್ದೂ ಭಿನ್ನ-ಭಿನ್ನ ಮರಾಠಿ ಭಾಷೆ ಆದ್ದರಿಂದ ಮನೆಯಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದರು. ನಾವು ಕನ್ನಡ ಕೇಳುತ್ತಿದ್ದು ಅಪ್ಪ ಮನೆ ಪಕ್ಕದ ತಮ್ಮ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ. ಆಪ್ತ ಗೆಳೆಯನನ್ನು ಬೈಗುಳದೊಂದಿಗೆ ಮಾತನಾಡಿಸುತ್ತಿದ್ದರು, ಮಕ್ಕಳಾದ ನಾವು ಅದನ್ನೇ ಕಲಿತಿದ್ದೆವು, ಬೈಗುಳವೇ ನಾನು ಕಲಿತ ಮೊದಲ ಕನ್ನಡ' ಎಂದು ನಕ್ಕರು.

    ಅರುಂಧತಿ ನಾಗ್ ಗೆ ಪತ್ರ ಬರೆದಿದ್ದ ಶಂಕರ್ ನಾಗ್

    ಅರುಂಧತಿ ನಾಗ್ ಗೆ ಪತ್ರ ಬರೆದಿದ್ದ ಶಂಕರ್ ನಾಗ್

    ಶಂಕರ್ ನಾಗ್ ಪರಿಚಯವಾದಾಗಲೂ ನನಗೆ ಕನ್ನಡ ಬರುತ್ತಿರುಲಿಲ್ಲ, ಸ್ವತಃ ಅವನಿಗೇ ಕನ್ನಡ ಬರುತ್ತಿರಲಿಲ್ಲ, ಮೊದಲ ಸಿನಿಮಾ 'ಒಂದಾನೊಂದು ಕಾಲದಲ್ಲಿ' ಮಾಡಿದ ನಂತರ ಆತನಿಗೆ ಕನ್ನಡ ಕಲಿಕೆಯ ಅದಮ್ಯ ಆಸಕ್ತಿ ಹುಟ್ಟಿತು, ಅದಾಗಲೇ 'ಸಂಕೇತ್' ನಾಟಕ ತಂಡ ಪ್ರಾರಂಭ ಮಾಡುವ ನಿರ್ಧಾರ ಮಾಡಿಬಿಟ್ಟಿದ್ದ, ಅಣ್ಣ ಅನಂತ್‌ ನಾಗ್ ಜೊತೆಗಿದ್ದರು. ಆಗ ನನಗೆ ಪತ್ರ ಬರೆದು ನನ್ನ ಸಹಾಯ ಕೋರಿದ್ದ ಎಂದು ಹಳೆಯ ನೆನಪುಗಳಿಗೆ ಜಾರಿದರು ಅರುಂಧತಿ ನಾಗ್.

    ಶಂಕರ್ ನಾಗ್ ದಂಪತಿಗೆ ಕನ್ನಡ ಹೇಳಿಕೊಟ್ಟವರ್ಯಾರು?

    ಶಂಕರ್ ನಾಗ್ ದಂಪತಿಗೆ ಕನ್ನಡ ಹೇಳಿಕೊಟ್ಟವರ್ಯಾರು?

    'ಶಂಕರ್ ನಾಗ್ ತಾಯಿ ಗಿರೀಶ್ ಕಾರ್ನಾಡ್ ಅವರ 'ಅಂಜುಮಲ್ಲಿಗೆ' ನಾಟಕವನ್ನು ದೇವನಾಗರಿ ಲಿಪಿಯಲ್ಲಿ ಬರೆದು ನನಗೆ ಕಳುಹಿಸಿದ್ದರು. ನಾನು ಅದನ್ನೇ ಓದಿಕೊಂಡಿದ್ದೆ. ಅದೇ ಮೊದಲ ಬಾರಿಗೆ ನಾನು ಕನ್ನಡಕ್ಕೆ ಪರಿಚಯವಾಗಿದ್ದು, ಶಂಕರ್ ನಾಗ್ ಗೆ ಸಿನಿಮಾ ಆಫರ್‌ಗಳು ಹೆಚ್ಚಾಗಿದ್ದವು, ಕನ್ನಡದ ನಾಯಕನಿಗೆ ಕನ್ನಡ ಬರುವುದಿಲ್ಲ ಎಂಬುದು ಅವಮಾನದ ವಿಷಯವೆಂದು ಕನ್ನಡ ಓದಲು, ಬರೆಯಲು ಕಲಿಯುತ್ತೀನೆಂದು ಹಠ ತೊಟ್ಟು ಕನ್ನಡ ಕಲಿಯಲು ಆರಂಭಿಸಿದ್ದು, ವನಮಾಲಾ ವಿಶ್ವನಾಥ್ ನಮ್ಮ ಮನೆಗೆ ದಿನವೂ ಬಂದು ಇಬ್ಬರಿಗೂ ಕನ್ನಡ ಹೇಳಿಕೊಟ್ಟರು, ಅವನು ಬೇಗ ಕಲಿತುಬಿಟ್ಟ ನಾನು ಕಲಿಯಲಿಲ್ಲ'' ಎಂದು ತಮ್ಮ ಕನ್ನಡ ಕಲಿಕೆಯ ಪ್ರಯತ್ನಗಳ ಬಗ್ಗೆ ಹೇಳಿದರು ಅರುಂಧತಿ ನಾಗ್. 'ಶಂಕರ್ ನಾಗ್ ಹಾಗೂ ತಮಗೆ ಗೆಳೆಯರೊಬ್ಬರು ಕನ್ನಡ ಪುಸ್ತಕಗಳನ್ನು ಓದಿ ಹೇಳುತ್ತಿದ್ದರು. ನಂತರ ಜೋಗಿ ಅವರು ಸಹ ನಮಗೆ ಸಹಾಯ ಮಾಡಿದರು' ಎಂದು ಅರುಂಧತಿ ನೆನಪಿಸಿಕೊಂಡರು.

    ಕಾದಂಬರಿಗಳನ್ನು ಓದಿಸಿ ಕೇಳಿಸಿಕೊಳ್ಳುತ್ತಿದ್ದ ಶಂಕರ್ ನಾಗ್

    ಕಾದಂಬರಿಗಳನ್ನು ಓದಿಸಿ ಕೇಳಿಸಿಕೊಳ್ಳುತ್ತಿದ್ದ ಶಂಕರ್ ನಾಗ್

    ಶಂಕರ್ ನಾಗ್ ಅವರ ಸಾಹಿತ್ಯ ಪ್ರೀತಿಯ ಬಗ್ಗೆ ಮಾತನಾಡಿದ ಅರುಂಧತಿ ನಾಗ್, 'ಶಂಕರ್ ನಾಗ್ ಹಾಗೂ ನನಗೆ ತೇಜಸ್ವಿ ಅವರ ಕತೆಗಳನ್ನು ನಮ್ಮ ಗೆಳೆಯರು ಓದಿ ಹೇಳುತ್ತಿದ್ದರು. ನಂತರ ಶಂಕರ್ ಕನ್ನಡ ಕಲಿತಮೇಲೆ ಸ್ವ ಓದು ಪ್ರಾರಂಭಿಸಿದರು. ಜೋಗಿ ಅವರೂ ಸಹ ನಮಗೆ ಓದಿ ಹೇಳಿದ್ದಾರೆ' ಎಂದು ನೆನಪಿಸಿಕೊಂಡರು.

    ರಂಗಶಂಕರದಲ್ಲಿ ಶಂಕರ್ ನಾಗ್ ಪ್ರತಿಮೆ ಯಾಕಿಲ್ಲ?

    ರಂಗಶಂಕರದಲ್ಲಿ ಶಂಕರ್ ನಾಗ್ ಪ್ರತಿಮೆ ಯಾಕಿಲ್ಲ?

    ರಂಗಶಂಕರದ ಬಗ್ಗೆ ಮಾತನಾಡಿದ ಅವರು, 'ರಂಗಶಂಕರಕ್ಕೆ ನಾನು 'ಶಂಕರ್ ನಾಗ್ ಕೇಂದ್ರ' ಎಂದು ಹೆಸರಿಟ್ಟಿಲ್ಲ, ಶಂಕರ್ ನಾಗ್ ಮೂರ್ತಿಯನ್ನು ಅಲ್ಲಿ ಪ್ರತಿಷ್ಟಾಪಿಸಿಲ್ಲ, ಅಲ್ಲಿ ನಡೆಯುವ ರಂಗ ಚಟುವಟಿಕೆಗಳೇ ಶಂಕರ್ ನಾಗ್ ಅನ್ನು ಅಲ್ಲಿ ಉಳಿಸಿವೆ' ಎಂದಾಗ ಸಭಿಕರಿಂದ ಭಾರಿ ಕರತಾಡನ.

    ಕಾವ್ಯಾಗೆ ಕನ್ನಡವನ್ನೇ ಕಲಿಸಿದ ನಾಗ್ ದಂಪತಿ

    ಕಾವ್ಯಾಗೆ ಕನ್ನಡವನ್ನೇ ಕಲಿಸಿದ ನಾಗ್ ದಂಪತಿ

    'ಆದರೆ ಮಗಳು ಕಾವ್ಯಾ ಹುಟ್ಟಿದಾಗ ನಾನು ಶಂಕರ್ ನಾಗ್ ನಿರ್ಧಾರ ಮಾಡಿಬಿಟ್ಟೆವು ಇವಳಿಗೆ ಮೊದಲ ಭಾಷೆ ಕನ್ನಡವೇ ಆಗಬೇಕೆಂದು, ಅವಳೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದೆವು, ಅತ್ತೆಯೊಂದಿಗೆ ಕೊಂಕಣಿಯಲ್ಲಿ ಮಾತನಾಡುತ್ತಿದ್ದೆವು ಆದರೆ ಕಾವ್ಯಾ ಜೊತೆ ಕನ್ನಡದಲ್ಲೇ ಮಾತನಾಡುತ್ತಿದ್ದೆವು, ಅವಳಿಗೆ ಕನ್ನಡವನ್ನೇ ಮಾತೃಭಾಷೆ ಮಾಡಿದೆವು' ಎಂದು ಹೆಮ್ಮೆಯಿಂದ ಹೇಳಿದರು ಅರುಂಧತಿ ನಾಗ್.

    ಆರು ಭಾಷೆ ನಿರ್ಗಳವಾಗಿ ಮಾತನಾಡಬಲ್ಲರು ಅರುಂಧತಿ ನಾಗ್

    ಆರು ಭಾಷೆ ನಿರ್ಗಳವಾಗಿ ಮಾತನಾಡಬಲ್ಲರು ಅರುಂಧತಿ ನಾಗ್

    'ಕನ್ನಡ ಮಾತನಾಡುತ್ತೀನಿ, ಮರಾಠಿ, ಗುಜರಾತಿ, ಉರ್ದು, ಹಿಂದಿ ಭಾಷೆಗಳನ್ನು ಮಾತನಾಡಬಲ್ಲೆ ಆದರೆ ಕನ್ನಡ ಓದಲು ಸರಿಯಾಗಿ ಬರುವುದಿಲ್ಲ. ಜೋಡಿಸಿ-ಜೋಡಿಸಿ ಓದುತ್ತೇನೆ. ಕನ್ನಡ ನನಗೆ ಕಲಿತ ಭಾಷೆ ಹಾಗಾಗಿ ಓದುವುದು ಸವಾಲು, ಬಹಳ ಸಮಯ ತೆಗೆದುಕೊಂಡು ಓದುತ್ತೇನೆ. ಆದರೆ ಮಾತು ನಿರರ್ಗಳ. ನನ್ನಂತಹವರಿಗೆ ಮೈ ಲ್ಯಾಂಗ್ ಆಪ್ ಬಹು ಸಹಾಯಕಾರಿ ಆಗಲಿದೆ, ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ತೊಡಗಿಕೊಳ್ಳುತ್ತೇನೆ ಎಂದರು ಅರುಂಧತಿ ನಾಗ್.

    English summary
    Seniour Actress Arundhati Nag talked about Shankar Nag and told story how she learnt Kannada.
    Monday, March 2, 2020, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X