ಅನುಶ್ರೀಗೆ ಅಪ್ಪು ಸೈಕಲ್ ಗಿಫ್ಟ್ ಕೊಟ್ಟ ಅಶ್ವಿನಿ ಪುನೀತ್; ಹಾಕಿದ ಕಂಡೀಷನ್ ಏನು?
ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಬರೀ ನಟನಾಗಿ ಮಾತ್ರವಲ್ಲದೇ ಒಂದೊಳ್ಳೆ ವ್ಯಕ್ತಿತ್ವದಿಂದ ಅಪ್ಪು ಎಲ್ಲರಿಗೂ ಆಪ್ತರಾಗಿದ್ದರು. ಅನುಶ್ರೀ ಕೂಡ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅಪ್ಪು ಬಳಸುತ್ತಿದ್ದ ಸೈಕಲ್ ಈಗ ಆಕೆಯ ಮನೆಯಲ್ಲಿದೆ.
ತಮ್ಮ ತಾಯಿ ಬಳಿಕ ಅನುಶ್ರೀ ಬಹಳ ಇಷ್ಟಪಡುತ್ತಿದ್ದ ವ್ಯಕ್ತಿ ಪುನೀತ್ ರಾಜ್‌ಕುಮಾರ್. ಇವತ್ತಿಗೂ ಅನುಶ್ರೀ ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಚಾನಲ್ ಡಿಪಿಯಲ್ಲಿ ನಗುವಿನ ಒಡೆಯ ರಾರಾಜಿಸುತ್ತಿದ್ದಾನೆ. ಸಾಕಷ್ಟು ವೇದಿಕೆಗಳಲ್ಲಿ ಅನುಶ್ರೀ ಹಾಗೂ ಪುನೀತ್ ರಾಜ್‌ಕುಮಾರ್ ಭಾಗಿ ಆಗಿದ್ದರು. ಕಿರುತೆರೆ ಕಾರ್ಯಕ್ರಮಗಳು ಅಥವಾ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಭೇಟಿ ಆಗುತ್ತಿದ್ದರು.

ಅನುಶ್ರೀ ಯೂಟ್ಯೂಬ್ ಚಾನಲ್‌ಗೆ ಅಪ್ಪು ಒಂದೆರಡು ಬಾರಿ ಸಂದರ್ಶನ ಕೂಡ ಕೊಟ್ಟಿದ್ದರು. ಕಳೆದ ವರ್ಷ ನ್ಯೂಯಾರ್ಕ್ ಟೈಮ್ಸ್ ಸ್ಕೇರ್ ಮೇಲೆ ಪುನೀತ್ ಹಾಗೂ ಅನುಶ್ರೀ ಫೋಟೊ ರಾರಾಜಿಸಿತ್ತು. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ಅನುಶ್ರೀ ಹಂಚಿಕೊಂಡಿದ್ದರು. ಇವತ್ತಿಗೂ ಪುನೀತ್ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವಾಗ ಆಕೆ ಭಾವುಕರಾಗುತ್ತಾರೆ.
ದೊಡ್ಮನೆ ಜೊತೆ ಅನುಶ್ರೀ ಉತ್ತಮ ಒಡನಾಟ ಹೊಂದಿದ್ದಾರೆ. ಅಂದಹಾಗೆ ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ಸೈಕಲ್ ಅನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಆಂಕರ್ ಅನುಶ್ರೀ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಪ್ಪು ಸೈಕಲ್ ಕ್ರೇಜ್ ಬಗ್ಗೆ ಗೊತ್ತೇಯಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸೈಕಲ್ ಸವಾರಿ ಮಾಡಿ ವೀಡಿಯೋಗಳನ್ನು ಅಪ್ಪು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಒಮ್ಮೆ ಸದಾಶಿವನಗರದ ತಮ್ಮ ನಿವಾಸದಿಂದ ಎಂಜಿ ರಸ್ತೆಯ ಟ್ರಿನಿಟಿ ಸರ್ಕಲ್‌ವರೆಗೆ ಅಪ್ಪು ಸೈಕಲ್ ಸವಾರಿ ಮಾಡಿದ್ದರು. ಆ ವೀಡಿಯೋ ಸಖತ್ ವೈರಲ್ ಆಗಿತ್ತು. ಮೊದಲೇ ಲಾಕ್‌ಡೌನ್, ಅದರಲ್ಲೂ ಬೆಳಗಿನ ಜಾವ 6 ಗಂಟೆ ಸುಮಾರಿಗೆ ನಗರದ ಖಾಲಿ ರಸ್ತೆಗಳಲ್ಲಿ ಅಪ್ಪು ಸೈಕಲ್ ಏರಿ ಸುತ್ತಾಡಿದ್ದರು.
ಪುನೀತ್ ರಾಜ್‌ಕುಮಾರ್ ಬಳಿಕ ದುಬಾರಿ ಕಾರುಗಳು ಮಾತ್ರವಲ್ಲ, ಬೈಕ್, ಸೈಕಲ್ ಕೂಡ ಇತ್ತು. ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಒಮ್ಮೆ ಅಪ್ಪು 3 ಲಕ್ಷ ಬೆಲೆಯ BMW ಸೈಕಲ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಫಿಟ್‌ನೆಸ್ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದ ಪುನೀತ್ ಅದಕ್ಕಾಗಿ ಸೈಕ್ಲಿಂಗ್ ಅನ್ನು ನೆಚ್ಚಿಕೊಂಡಿದ್ದರು. ಸೈಕಲ್ ತುಳಿಯುವುದು ಒಳ್ಳೆ ವ್ಯಾಯಾಮ ಎಂದು ಭಾವಿಸಿದ್ದರು. ಹಾಗಾಗಿ ಸ್ನೇಹಿತರ ಜೊತೆ ಆಗಾಗ್ಗೆ ಸೈಕಲ್ ಏರಿ ಸವಾರಿ ಮಾಡುತ್ತಿದ್ದರು. ಕನಕಪುರ, ನಂದಿ ಬೆಟ್ಟ ಕಡೆಗೆಲ್ಲಾ ಸೈಕ್ಲಿಂಗ್ ಹೋಗುತ್ತಿದ್ದರು.
ಒಮ್ಮೆ ಹೆಲ್ಮೆಟ್ ಧರಿಸಿ ಪುನೀತ್ ಹಳ್ಳಿ ಕಡೆ ಸೈಕಲ್ ಏರಿ ಸ್ನೇಹಿತರ ಜೊತೆ ಹೋಗಿದ್ದರಂತೆ. ಆಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ "ಇವನ್ಯಾರೋ ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತಿದ್ದಾನೆ" ಎಂದು ಕೂಗಿ ಹೇಳಿದ್ದನಂತೆ. ಅದನ್ನು ಕೇಳಿ ಅಪ್ಪು ಬಿದ್ದು ಬಿದ್ದು ನಕ್ಕಿದ್ದರಂತೆ. ಹಳ್ಳಿ ಕಡೆ ಕೆಲವರು ಹೆಲ್ಮೆಟ್ ಧರಿಸಿ ಬೈಕ್ ಕೂಡ ಓಡಿಸಲ್ಲ, ಅಂತಾದ್ರಲ್ಲಿ ನಾನು ಹೆಲ್ಮೆಟ್ ಧರಿಸಿ ಸೈಕಲ್ ಸವಾರಿ ಮಾಡಿದ್ದು ಆತನಿಗೆ ವಿಶೇಷ ಎನಿಸಿಬಹುದು ಎಂದು ಕಾರ್ಯಕ್ರಮವೊಂದರಲ್ಲಿ ಪುನೀತ್ ನೆನಪಿಸಿಕೊಂಡಿದ್ದರು.
ಇತ್ತೀಚೆಗೆ ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲಿ ಸಮಾಧಿಗೆ ಆಂಕರ್ ಅನುಶ್ರೀ ಭೇಟಿ ನೀಡಿದ್ದರು. ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೊಟ್ಟ ಸೈಕಲ್ ಗಿಫ್ಟ್ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ನಿಮಗೆಲ್ಲಾ ಹೇಗೆ ಗೊತ್ತಾಯ್ತು ಎಂದು ಒಂದು ಕ್ಷಣ ಅಚ್ಚರಿಗೊಂಡಿದ್ದ ಅನುಶ್ರೀ, "ಹೌದು ಕೊಟ್ಟಿದ್ದಾರೆ, ಇವತ್ತಿಗೂ ಸೈಕಲ್ ಇದೆ. ಇದನ್ನು ಯೂಸ್ ಮಾಡಬೇಕು, ಹಾಗೆ ಇಡಬಾರದು ಎಂದಿದ್ದರು. ಆದರೆ ಅದು ಅಪ್ಪು ಸರ್ ಕೂರುತ್ತಿದ್ದ ಸೈಕಲ್, ಅದು ನಮ್ಮ ಮನೆಯಲ್ಲಿ ಸಿಂಹಾಸನ ತರ ಇದೆ" ಎಂದು ಹೇಳಿದ್ದರು.


Click it and Unblock the Notifications











