ಅಶ್ವಿನಿ ಕೂದಲು ಕಟ್ ಮಾಡ್ಕೊಂಡು ಪಜೀತಿ; ಅಣ್ಣಾವ್ರ ಫ್ಯಾಮಿಲಿ ಹುಡುಗಿ ನೋಡಲು ಹೋದಾಗ ಏನಾಗಿತ್ತು?
ಆಪ್ತರು ಹಾಗೂ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಶಾಶ್ವತ ಸ್ಥಾನವನ್ನು ಸಂಪಾದಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಇಲ್ಲ ಎನ್ನುವ ನೋವು ಮರೆತು ಅವರನ್ನು ಸಂಭ್ರಮಿಸಲು ಎಲ್ಲರೂ ಮುಂದಾಗಿದ್ದಾರೆ. ಪಿಆರ್‌ಕೆ ಫ್ಯಾನ್‌ಡಮ್ ಆಪ್ ಮೂಲಕ ಹಿಂದೆಂದೂ ಕಾಣದ ಅಪ್ಪುವಿನ ಹೊಸ ಪ್ರಪಂಚ ಪರಿಚಯಿಸುವ ಕೆಲಸ ನಡೆಯುತ್ತಿದೆ.
ಅಭಿಮಾನಿಗಳು PRK Star Fandom App ಡೌನ್‌ಲೋಡ್ ಮಾಡಿಕೊಂಡು ಅವರ ಬಗೆಗಿನ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ. 'ನಾ ಕಂಡ ಅಪ್ಪು' ಹೆಸರಿನಲ್ಲಿ ಸ್ಪೆಷಲ್ ಪಾಡ್‌ಕಾಸ್ಟ್ ನಡೆಸಿ ಆಪ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಪತ್ನಿ ಅಶ್ವಿನಿ ಸೇರಿದಂತೆ ಆಪ್ತರು ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳುತ್ತಿದ್ದಾರೆ. ಅನುಶ್ರೀ ಈ ಪಾಡ್‌ಕಾಸ್ಟ್ ನಿರೂಪಣೆ ಮಾಡುತ್ತಿದ್ದಾರೆ.

'ನಾ ಕಂಡ ಅಪ್ಪು' ಸಂದರ್ಶನದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ಅವರೊಟ್ಟಿಗೆ ಲವ್, ಮದುವೆ ಹೀಗೆ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿ ಏನೆಲ್ಲಾ ನಡೀತು ಎನ್ನುವುದನ್ನು ಮೆಲುಕು ಹಾಕಿದ್ದಾರೆ. ಅಣ್ಣಾವ್ರ ಫ್ಯಾಮಿಲಿ ಹುಡುಗಿ ನೋಡಲು ಏನೆಲ್ಲಾ ಆಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ತಮ್ಮ ಕೂದಲು ಕಟ್ ಮಾಡಿಸಿಕೊಂಡು ಅಶ್ವಿನಿ ಪಜೀತಿ ಅನುಭವಿಸಿದ್ದನ್ನು ಹೇಳಿ ನಕ್ಕಿದ್ದಾರೆ.
ನಾನು ಚಿಕ್ಕಂದಿನಲ್ಲಿ ಅಪ್ಪನ ಜೊತೆ ಹೋಗಿ 'ಬೆಟ್ಟದ ಹೂವು' ಸಿನಿಮಾ ನೋಡಿದ್ದೆ. ಆಗ ಯಾವುದೇ ಯೋಚನೆ ಇರಲಿಲ್ಲ. ಸಿನಿಮಾ ನೋಡಿ ಎಂಜಾಯ್ ಮಾಡಿ ಬಂದಿದ್ವಿ ಅಷ್ಟೇ. ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಒಂದು ಸೀರೆ ಕೊಡಿಸಿದ್ದೆ. ಆಗಷ್ಟೇ ಅಪ್ಪು ಜೊತೆ ಡೇಟಿಂಗ್ ಶುರುವಾಗಿತ್ತು. ಹಾಗಾಗಿ ಸನ್ ಗ್ಲಾಸ್ ಉಡುಗೊರೆ ಕೊಟ್ಟಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಕನ್ನಿಂಗ್‌ಹ್ಯಾಂ ರೋಡ್‌ನಲ್ಲಿ ಕಾಪಿಶಾಪ್ ಇತ್ತು. ಅಲ್ಲೇ ಪ್ರಪೋಸ್ ಮಾಡಿದ್ದು ಎಂದು ಅಶ್ವಿನಿ ತಿಳಿಸಿದ್ದಾರೆ.

ಅಣ್ಣಾವ್ರಿಗೆ ಫೋನ್ ಮಾಡಿ ಬರ್ತ್‌ಡೇ ವಿಶ್ ಮಾಡಿದ್ದನ್ನು ಕೂಡ ಅಶ್ವಿನಿ ನೆನಪಿಸಿಕೊಂಡಿದ್ದಾರೆ. ಒಂದು ವರ್ಷ ನಮ್ಮಿಬ್ಬರ ರಿಲೇಷನ್‌ಶಿಪ್ ಮುಂದುವರೀತು. ವರ್ಷದ ಬಳಿಕ ನಾವಿಬ್ಬರು ಒಬ್ಬರನ್ನೊಬ್ಬರು ಇಷ್ಟಪಡುತ್ತಿರುವುದು ಗೊತ್ತಾಯಿತು. ಮನೆಯಲ್ಲಿ ಸಂಬಂಧಗಳು ಬಂದವು. ಸಾಫ್ಟ್‌ವೇರ್ ಇಂಜಿನಿಯರ್, ವಿದೇಶದಲ್ಲಿ ಸೆಟ್ಲ್ ಆಗಿರುವವರು ಹೀಗೆ ಹೇಳುತ್ತಿದ್ದರು. ನಾನು ಮನೆಯಲ್ಲಿ ಹೇಳುವುದು ಹೇಗೆ ಅಪ್ಪುಗೆ 23 ವರ್ಷ, ನನಗೂ ಅದೇ ವಯಸ್ಸು. ನಾನು ಹೀಗೆ ಮದುವೆ ಪ್ರಪೋಸಲ್ ಬಂದಿದೆ ಎಂದಾಗ ಅಪ್ಪು ಹೋಗಿ ಮನೆಯಲ್ಲಿ ಹೇಳಿದ್ದರು ಎಂದು ಅಶ್ವಿನಿ ಮೆಲುಕು ಹಾಕಿದ್ದಾರೆ.
ಪೂರ್ಣಿಮಾ ಮೂಲಕ ಅಪ್ಪು ತಮ್ಮ ತಾಯಿಗೆ ನಮ್ಮ ಪ್ರೀತಿ ವಿಷಯ ತಿಳಿಸಿದ್ದರು. ಅಮ್ಮ ಹೋಗಿ ಅಪ್ಪಾಜಿಗೆ ಹೇಳಿದ್ದರು. ಅಪ್ಪು ಯಾರನ್ನೋ ಇಷ್ಟಪಡ್ತಿದ್ದಾನೆ ಅಂತ. ಮೊದಲಿಗೆ ನಮ್ಮ ಮನೆಯಲ್ಲಿ ನಮ್ಮ ತಂದೆ ಒಪ್ಪಲಿಲ್ಲ. ಸಿನಿಮಾ ಫ್ಯಾಮಿಲಿ ಬೇಡ ಎನ್ನುವ ಭಯ ಇತ್ತು. ಅಪ್ಪಾಜಿ ಅಂದ್ರೆ ಗೌರವ ಇತ್ತು. ಹಾಗಾಗಿ ಏಳೆಂಟು ತಿಂಗಳು ಸಮಯ ಕೊಟ್ರು. ನಾನು ಕೆಲಸ ಬಿಡಲ್ಲ ಅಂತ ಹೋಗ್ತಿದ್ದೆ. ಆಗ ನಾನು ಕೂದಲು ಕಟ್ ಮಾಡಿಸಿಕೊಳ್ತಿದ್ದೆ. ಮನೆಯಲ್ಲಿ ಮದುವೆ ವಿಷಯ ಬಂದಮೇಲೆ ಮದುವೆ ಆಗಬಹುದು ಎಂದು ಕೂದಲು ಕಟ್ ಮಾಡಿಸದೇ ಬೆಳೆಸಿದ್ದೆ ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
ಏಳೆಂಟು ತಿಂಗಳು ಕಾದರೂ ಮದುವೆ ಮಾತುಕತೆ ಬರಲಿಲ್ಲ. ಸರಿ ಇನ್ನು ತಡವಾಗಬಹುದು ಎಂದು ನಾನು ಕೂದಲು ಶಾರ್ಟ್ ಆಗಿ ಕತ್ತರಿಸಿಕೊಂಡಿದ್ದೆ. ಇದ್ದಕ್ಕಿದಂತೆ ಒಂದು ರಾತ್ರಿ 9.30ಕ್ಕೆ ಅಪ್ಪು ಫೋನ್ ಮಾಡಿ ನಾಳೆ ನಿಮ್ಮ ಮನೆಗೆ ಬರ್ತಿದ್ದಾರೆ ಎಂದು ಹೇಳಿದ್ರು. ಅವರದ್ದು ಸಂಪ್ರದಾಯಸ್ಥ ಕುಟುಂಬ, ನಾನು ನೋಡಿದ್ರೆ ಅದೇ ಸಮಯದಲ್ಲಿ ಕೂದಲು ಕಟ್ ಮಾಡಿಸಿಕೊಂಡಿದ್ದೆ. ನನಗೆ ಭಯವಾಗಿತ್ತು. ಸರಿ ಬಂದ್ರು. ಮಾತುಕತೆ ಆಯ್ತು. ಹೂವು ಹೇಗೆ ಮುಡಿಸೋದು? ನನ್ನ ಜುಟ್ಟು ಚಿಕ್ಕದಾಗಿತ್ತು. ಬಹಳ ಫನ್ನಿಯಾಗಿತ್ತು ಆ ದಿನ ಎಂದು ಅಶ್ವಿನಿ ಹೇಳಿ ನಕ್ಕಿದ್ದಾರೆ. ಪಿಆರ್‌ಕೆ ಸ್ಟಾರ್‌ಡಮ್ ಆಪ್‌ನಲ್ಲಿ ಸಂಪೂರ್ಣ ಸಂದರ್ಶನ ನೋಡಬಹುದು.


Click it and Unblock the Notifications











