Malavika Mohanan: ಅಂದು ನಾನು ಯಶ್ ಫ್ಯಾನ್ ಎಂದಿದ್ದ ಮಾಳವಿಕಾ ಈಗ ಹೊರ ರಾಗ ಎಳೆದ್ರಾ?
ಕೇರಳದಲ್ಲಿ ಹುಟ್ಟಿ ಮುಂಬೈನಲ್ಲಿ ಓದಿ ಬೆಳೆದ ಬಿಂದಾಸ್ ಬೆಡಗಿ ಮಾಳವಿಕಾ ಮೋಹನನ್ ಹೆಚ್ಚು ನಟಿಸಿದ್ದು ತಮಿಳು ಸಿನಿಮಾಗಳಲ್ಲಿ. 'ನಾನು ಮತ್ತು ವರಲಕ್ಷ್ಮೀ' ಎನ್ನುವ ಒಂದು ಕನ್ನಡ ಚಿತ್ರದಲ್ಲೂ ಮಾಳವಿಕಾ ನಟಿಸಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.
ತಮಿಳಿನ ಪೇಟಾ ಹಾಗೂ ಮಾಸ್ಟರ್ ಸಿನಿಮಾಗಳಲ್ಲಿ ನಟಿಸಿದ ಮಾಳವಿಕಾ ಎಷ್ಟೋ ಬೋಲ್ಡ್ ಆಗಿ ನಟಿಸಿದರೂ ಪ್ರಯೋಜನವಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಗಮನ ಸೆಳೆದರೂ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆ ಯಶ್19 ಚಿತ್ರದಲ್ಲಿ ಮಾಳವಿಕಾ ಮೋಹನನ್ನ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಆ ಸಿನಿಮಾ ಇನ್ನು ಸೆಟ್ಟೇರಲೇಯಿಲ್ಲ. ಹಾಗಾಗಿ ಯಾರು ನಾಯಕಿ ಆಗ್ತಾರೆ? ಅನ್ನೋದು ಸ್ಪಷ್ಟವಾಗಲಿಲ್ಲ.

ಮಾಳವಿಕಾ ಟ್ವಿಟ್ಟರ್‌ನಲ್ಲಿ #AskMalavika ಎಂದು ಪ್ರಶ್ನೋತ್ತರ ಸೆಷನ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳ ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ಸ್ಯಾಂಡಲ್‌ವುಡ್ ನಟ ಯಾರು? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಮಾಳವಿಕಾ ನಾನು ಹೆಚ್ಚು ಕನ್ನಡ ಸಿನಿಮಾ ನೋಡಿಲ್ಲ. ನೋಡಬೇಕು ಎಂದುಕೊಂಡಿದ್ದೇವೆ. ಒಂದಷ್ಟು ಸಿನಿಮಾಗಳನ್ನು ಸೂಚಿಸಿ ಎಂದು ರಿಪ್ಲೈ ಮಾಡಿದ್ದಾರೆ. ಸಾಕಷ್ಟು ಜನ ಕನ್ನಡ ಜನಪ್ರಿಯ ಸಿನಿಮಾಗಳ ಪಟ್ಟಿಯನ್ನೇ ಮಾಳವಿಕಾ ಮುಂದಿಟ್ಟಿದ್ದಾರೆ.
ಮಾಳವಿಕಾ ಒಳ್ಳೆ ಕನ್ನಡ ಸಿನಿಮಾಗಳನ್ನು ಕೇಳಿದ್ದು ಸರಿ, ನೆಟ್ಟಿಗರು ಪಟ್ಟಿ ಕೊಟ್ಟಿದ್ದು ಸರಿ. ಆದರೆ ಇದೇ ಮಾಳವಿಕಾ ಕಳೆದ ವರ್ಷ ಬೇರೆ ರೀತಿ ಹೇಳಿದ್ದರು. ಈಗ ಯಾಕೆ ಹೀಗೆ ಹೇಳ್ತಿದ್ದಾರೆ ಎಂದು ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಆಕೆಯ ಹಳೇ ಟ್ವೀಟ್ ಟ್ಯಾಗ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ಕಳೆದ ವರ್ಷ ಕೂಡ ಮಾಳವಿಕಾ ಇದೇ ರೀತಿ ಟ್ವಿಟ್ಟರ್‌ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಆಗ ಕನ್ನಡ ಸಿನಿಮಾದಲ್ಲಿ ನಟಿಸೋ ಸಾಧ್ಯತೆ ಇದ್ಯಾ? ಯಾರೊಟ್ಟಿಗೆ ನಟಿಸೋಕೆ ಇಷ್ಟಪಡುತ್ತೀರಾ ಎಂದು ನೆಟ್ಟಿಗರೊಬ್ಬರು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಚೆಲುವೆ "KGF- 1 ಬಿಡುಗಡೆಗೂ ಮುಂಚೆ ನಾನು ಯಶ್ ಅವರ ದೊಡ್ಡ ಅಭಿಮಾನಿ ಆಗಿದ್ದೆ. ಅವರು ದೊಡ್ಡದಾಗಿ ಸಾಧಿಸುತ್ತಾರೆ ಎಂದು ನಂಬಿದ್ದೆ. ಯಶ್ ಜರ್ನಿ ಹಾಗೂ ಸಾಧನೆ ಸ್ಫೂರ್ತಿದಾಯಕ ಮತ್ತು ಸಂತಸ ತಂದಿದೆ. ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಆದಷ್ಟು ಬೇಗ ಸಿಗುತ್ತದೆ ಎಂದುಕೊಂಡಿದ್ದೇನೆ" ಎಂದು ರಿಪ್ಲೇ ಮಾಡಿದ್ದರು.
ಅಂದು ನಾನು ಯಶ್ ದೊಡ್ಡ ಫ್ಯಾನ್ ಎಂದಿದ್ದ ಮಾಳವಿಕಾ, ಈಗ ನೆಚ್ಚಿನ ಕನ್ನಡ ನಟ ಯಾರು ಅಂದ್ರೆ, ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಿಲ್ಲ. ಒಳ್ಳೆ ಸಿನಿಮಾಗಳನ್ನು ಸೂಚಿಸಿ ಎನ್ನುತ್ತಿದ್ದಾರೆ. ಇದು ಸರೀನಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವಿಚಾರ ಕಾಮೆಂಟ್ ಬಾಕ್ಸ್‌ನಲ್ಲಿ ಚರ್ಚೆ ಆಗುತ್ತಿದೆ.
ಮಾಳವಿಕಾ ಪ್ರಶ್ನೆಗೆ ಕೆಲವರು ನಿಮ್ಮದೇ 'ನಾನು ಮತ್ತು ವರಲಕ್ಷ್ಮೀ' ಸಿನಿಮಾ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ 2016ರಲ್ಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ಪೃಥ್ವಿ ಹೀರೊ ಆಗಿ ನಟಿಸಿದ್ದರು. ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ.
ಇನ್ನು ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತಿರುವ 'ಸಲಾರ್' ಹಾಗೂ 'ಡಂಕಿ' ನಿಮ್ಮ ಮೊದಲ ಆಯ್ಕೆ ಯಾವುದು ಎನ್ನುವ ಪ್ರಶ್ನೆಗೆ "ಎರಡೂ ಸಿನಿಮಾ ನೋಡಲು ಉತ್ಸುಕಳಾಗಿದ್ದೀನಿ. ಯಾವುದಾದರೂ ಒಂದು ಎಂದರೆ ನನ್ನ ಆಯ್ಕೆ 'ಸಲಾರ್'. ಟೀಸರ್ ಸಖತ್ತಾಗಿದೆ. ಪ್ರಭಾಸ್ ಸರ್ ಹಾಗೂ ಪೃಥ್ವಿರಾಜ್ ಸರ್ ಸಖತ್ತಾಗಿ ನಟಿಸಿದ್ದಾರೆ ಎಂದುಕೊಂಡಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಮಾಳವಿಕಾ ತಮಿಳಿನ 'ತಂಗಲಾನ್' ಹಾಗೂ ಹಿಂದಿಯ 'ಯುದ್ರ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ತಂಗಲಾನ್' ಚಿತ್ರದಲ್ಲಿ ಡಿ ಗ್ಲಾಮರಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.


Click it and Unblock the Notifications










