ರಾಮ ಪ್ರಾಣ ಪ್ರತಿಷ್ಠಾಪನೆ: ಕನ್ನಡ ಸಿನಿಮಾಗಳಲ್ಲಿ ಶ್ರೀರಾಮನ ಅವತಾರ
ಎಲ್ಲೆಲ್ಲೂ ರಾಮನಾಮ ಸ್ಮರಣೆ ಶುರುವಾಗಿದೆ. ಅಸಂಖ್ಯಾತ ಭಕ್ತರ ಕನಸು ಈಡೇರುವ ಶುಭ ಗಳಿಗೆ ಹತ್ತಿರವಾಗುತ್ತಿದೆ. ಅಯೋಧ್ಯೆಯಲ್ಲಿ ಸುಂದರ ರಾಮಮಂದಿರ ನಿರ್ಮಾಣವಾಗುತ್ತಿದೆ. 5 ಶತಮಾನಗಳ ಕಾಯುವಿಕೆ ಕೊನೆಯಾಗುತ್ತಿದೆ. ಸೋಮವಾರ(ಜನವರಿ 22) ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ.
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಹಲ ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಗರ್ಭಗುಡಿಯಲ್ಲಿ ಶ್ರೀರಾಮ ಮೂರ್ತಿ ತಲುಪಿದ್ದು ಫೋಟೊಗಳು ಹೊರಬಿದ್ದಿದೆ. ಗರ್ಭಗುಡಿಯ ಪೀಠದಲ್ಲಿ ಈಗಾಗಲೇ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣಶಿಲೆಯಲ್ಲಿ ಈ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಸೋಮವಾರ ಈ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಈಗಾಗಲೇ ಅಯೋಧ್ಯೆ ರಾಮಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಟಾಪನೆ ಪೂರ್ವಬಾವಿ ಪೂಜೆಗಳು ಆರಂಭವಾಗಿದೆ. ಸಾಕಷ್ಟು ಅತಿಥಿಗಳಿಗೆ ಸೋಮವಾರ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಆಮಂತ್ರಣ ನೀಡಲಾಗಿದೆ. ಸಿನಿಮಾ ತಾರೆಯರು ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಸಿನಿಮಾಗಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ರಾಮಾಯಣದ ಕತೆಯನ್ನು ಚಿತ್ರಿಸಲಾಗಿದೆ.
ತೆಲುಗಿನಲ್ಲಿ ರಾಮನ ಕುರಿತು ಸಾಕಷ್ಟು ಸಿನಿಮಾಗಳು ಬಂದಿವೆ. ಮೂರ್ಲಾಲ್ಕು ಸಿನಿಮಾಗಳಲ್ಲಿ ಎನ್‌ಟಿಆರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಕೃಷ್ಣ, ಜ್ಯೂ. ಎನ್‌ಟಿಆರ್ ಮಾತ್ರವಲ್ಲ ಬಾಲಕೃಷ್ಣ ಕೂಡ ಶ್ರೀರಾಮನ ಪಾತ್ರದಲ್ಲಿ ಗಮನ ಸೆಳೆದಿದ್ದರು. ಕನ್ನಡದಲ್ಲಿ ರಾಮನ ಕುರಿತಾಗಿ ಸಿನಿಮಾಗಳು ಬಂದಿದ್ದು ಕಮ್ಮಿ. ಇದ್ದಿದ್ದರಲ್ಲಿ ಡಾ. ರಾಜ್‌ಕುಮಾರ್ ಶ್ರೀರಾಮನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರು ಭಕ್ತಿಭಾವದಲ್ಲಿ ಮೈಮರೆಯುವಂತೆ ಮಾಡಿದ್ದರು.
1963ರಲ್ಲಿ ಬಂದ 'ರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಅಣ್ಣಾವ್ರು ಶ್ರೀರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆಂಜನೇಯನಾಗಿ ಉದಯ್ ಕುಮಾರ್ ಮಿಂಚಿದ್ದರು. 12 ವರ್ಷಗಳ ಬಳಿಕ ಈ ಸಿನಿಮಾ ಇದೇ ಹೆಸರಿನಲ್ಲಿ ತೆಲುಗಿಗೆ ರೀಮೆಕ್ ಆಗಿತ್ತು. ಅಂದಹಾಗೆ ಇದು ಡಾ. ರಾಜ್‌ಕುಮಾರ್ ನಟಿಸಿದ 50ನೇ ಸಿನಿಮಾ ಆಗಿತ್ತು. ವಿಶ್ವಾಮಿತ್ರನ ಆಣತಿಯಂತೆ ಚಂದ್ರಭಾನು ಎಂಬ ರಾಜನ ಶಿರಚ್ಛೇದನಕ್ಕೆ ಶ್ರೀರಾಮ ಮುಂದಾಗುತ್ತಾನೆ. ಇದನ್ನು ತಿಳಿದ ಚಂದ್ರಭಾನು, ಹನುಮಂತನ ಮೊರೆ ಹೋಗುತ್ತಾನೆ. ಚಂದ್ರಭಾನು ರಕ್ಷಣೆಯ ಹೊಣೆ ಹೊತ್ತ ಹನುಮಂತ ತನ್ನ ಸ್ವಾಮಿಯ ವಿರುದ್ಧವೇ ಯುದ್ಧಕ್ಕೆ ನಿಲ್ಲುತ್ತಾನೆ.
ಶ್ರೀರಾಮನಾಗಿ ಅಣ್ಣಾವ್ರು ಮಿಂಚಿದರೆ ಹನುಮಂತನಾಗಿ ಉದಯ್ ಕುಮಾರ್ ನಟಿಸಿದ್ದು ವಿಶೇಷ. ಎಂ. ನಾಗೇಶ್ವರ ರಾವ್ ಹಾಗೂ ನಾಯಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಮೃತ ಕಲಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ರಾಮಾಂಜನೇಯ ಯುದ್ಧ' ಸಿನಿಮಾ ನಿರ್ಮಾಣವಾಗಿತ್ತು. ಇನ್ನುಳಿದಂತೆ ಡಾ. ರಾಜ್‌ಕುಮಾರ್ ರಾವಣನಾಗಿ, ಹನುಮಂತನಾಗಿ ನಟಿಸಿದ್ದು ಇದೆ.
ಅಂದಹಾಗೆ ಡಾ. ರಾಜ್‌ಕುಮಾರ್ ಶ್ರೀರಾಮನ ಪಾತ್ರದಲ್ಲಿ 'ಲವಕುಶ' ಎನ್ನುವ ಸಿನಿಮಾ ಶುರುವಾಗಿತ್ತು. ತೆಲುಗು ನಟ ಕೃಷ್ಣ ಈ ಚಿತ್ರದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದರು. ಮಾಧವಿ ಸೀತೆಯಾಗಿ ನಟಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಆ ಚಿತ್ರದ ಮೇಕಿಂಗ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ.

ಡೈನಾಮಿಕ್ ಸ್ಟಾರ್ ದೇವರಾಜ್ 'ಪ್ರಪಂಚ ರಾವಣ' ಚಿತ್ರದಲ್ಲಿ ನಟಿಸಿದ್ದರು. ರಾವಣನಾಗಿ ದೇವರಾಜ್ ಅಬ್ಬರಿಸಿದರೆ ಕಿರುತೆರೆ ನಟ ನಿತಿನ್ ಗೋಪಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇನ್ನುಳಿದಂತೆ ರಾಮಾಯಣ ಕಾವ್ಯದ ಕುರಿತು ಕೆಲ ತೆಲುಗು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದಿದ್ದವು. 'ಭೀಮಾಂಜನೇಯ ಯುದ್ಧ', 'ಲವಕುಶ' ಹೀಗೆ ಸಾಕಷ್ಟಿವೆ. ಕಳೆದ ವರ್ಷ ಪ್ರಭಾಸ್ ನಟಿಸಿದ 'ಆದಿಪುರುಷ್' ಚಿತ್ರ ಕೂಡ ಕನ್ನಡಕ್ಕೆ ಡಬ್ ಆಗಿತ್ತು. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಗಮನ ಸೆಳೆದರು.


Click it and Unblock the Notifications











