ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ಸರೋಜಾ ದೇವಿ ಬರೆದ ದಾಖಲೆಗಳು
ಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇಹಲೋಕ ತ್ಯಜಿಸಿದ್ದಾರೆ. ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಮಿಂಚಿ ಮೋಡಿ ಮಾಡಿ ಅವರು ತಮ್ಮ ಸಿನಿಮಾಗಳ ಮೂಲಕ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ದಶಕಗಳ ಹಿಂದೆಯೇ ವರ್ಷಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು ಬಿ. ಸರೋಜಾ ದೇವಿ.
ಚಿಕ್ಕಂದಿನಲ್ಲೇ ಹಾಡು ಹಾಡುವುದು, ಡ್ಯಾನ್ಸ್ ಮಾಡುವುದನ್ನು ಸರೋಜಾ ದೇವಿ ಕಲಿತಿದ್ದರು. ಕಾರ್ಯಕ್ರಮವೊಂದರಲ್ಲಿ ಆಕೆಯ ಹಾಡುವುದನ್ನು ನೋಡಿ ಹೊನ್ನಪ್ಪ ಭಾಗವತರ್ ಕರೆದು ಗಾಯಕಿ ಮಾಡಬೇಕು ಎಂದುಕೊಂಡಿದ್ದರು. ಆದರೆ 'ಮಹಾಕವಿ ಕಾಳಿದಾಸ' ಒಂದು ಪಾತ್ರ ಕೊಟ್ಟು ನಟಿಸಲು ಹೇಳಿದ್ದರು. ಹೀಗೆ ಅಚಾನಕ್ ಆಗಿ ಅಷ್ಟೇ ಸುಲಭವಾಗಿ ಅವರು ಚಿತ್ರರಂಗಕ್ಕೆ ಬರುವಂತಾಯಿತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಹೋದರು.

ನಟನೆ ತಮಗೆ ಇಷ್ಟ ಇಲ್ಲರಿಲ್ಲ. ಆದರೆ ತಾಯಿ ಸಿನಿಮಾಗಳಂತೆ ಒಲವು. ಹಾಗಾಗಿ ಇದೊಂದು ಸಿನಿಮಾದಲ್ಲಿ ನಟಿಸು, ಆಮೇಲೆ ನೋಡೋಣ ಎಂದಿದ್ದರು. ಆದರೆ ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಬಿ. ಸರೋಜಾ ದೇವಿ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ ಒಂದೊಂದೇ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. ನೋಡ ನೋಡುತ್ತಲೇ ತೆಲುಗಿನಲ್ಲಿ ಎನ್‌ಟಿಆರ್, ನಾಗೇಶ್ವರ ರಾವ್ ಇತ್ತ ತಮಿಳಿನಲ್ಲಿ ಎಂಜಿಆರ್, ಶಿವಾಜಿ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ನಟಿಸುತ್ತಾ ಬಂದರು. ಕನ್ನಡದಲ್ಲಿ ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಜೊತೆಗೆ ತೆರೆ ಹಂಚಿಕೊಂಡಿದ್ದರು.
29 ವರ್ಷ ನಾಯಕಿಯಾಗಿ ದಾಖಲೆ
ಚಿತ್ರರಂಗದಲ್ಲಿ ನಟಿಯರ ಹವಾ 5 ವರ್ಷ ಮಾತ್ರ ಎನ್ನುವ ಮಾತಿದೆ. ನಾಯಕಿಯಾಗಿ ಕ್ರೇಜ್ ಕಮ್ಮಿ ಆಗುತ್ತಿದ್ದಂತೆ ಪೋಷಕ ನಟಿಯಾಗಿ ನಟಿಸೋಕರ ಆರಂಭಿಸುತ್ತಾರೆ. ಆದರೆ ಅವತ್ತಿನ ಕಾಲಕ್ಕೆ ಬರೋಬ್ಬರಿ 29 ವರ್ಷಗಳ ಕಾಲ ನಾಯಕಿಯಾಗಿಯೇ ನಟಿಸಿ ಬಿ. ಸರೋಜಾ ದೇವಿ ದಾಖಲೆ ಬರೆದಿದ್ದರು. ಅವರು ಒಂದೇ ವರ್ಷದಲ್ಲಿ 12, 13 ಸಿನಿಮಾಗಳಲ್ಲಿ ನಟಿಸಿದ ಉದಾಹರಣೆ ಕೂಡ ಇದೆ. ಸತತ 20 ಗಂಟೆಗಳ ಕಾಲ ಆಗ ಚಿತ್ರೀಕರಣದಲ್ಲಿ ಭಾಗವಹಿಸಿರುವ ದಿನಗಳು ಇವೆ. 1855ರಿಂದ 1984ರ ವರೆಗೆ ಸತತವಾಗಿ ಪ್ರಮುಖ ಪಾತ್ರಗಳಲ್ಲಿ ಮಾತ್ರವೇ ಆಕೆ ನಟಿಸಿದ್ದರು. ಈ ದಾಖಲೆಯನ್ನು ಮತ್ಯಾರು ಮಾಡಲಿಲ್ಲ.
ಮದುವೆ ಬಳಿಕ ಬ್ಯುಸಿ
ಹಿಂದಿನ ಕಾಲದಲ್ಲಿ ನಾಯಕಿಯರು ಮದುವೆ ಆದರೆ ಅಲ್ಲಿಗೆ ಸಿನಿಬದುಕು ಅರ್ಧ ಮುಗಿದಂತೆ ಎನ್ನುತ್ತಿದ್ದರು. ಬಿ. ಸರೋಜಾ ದೇವಿ ಅವರಿಗೆ ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸೋದು ಬೇಡ ಎಂದು ತಾಯಿ ಹೇಳಿದ್ದರು. ಆದರೆ ಪತಿಯ ಸಹಕಾರದಿಂದ ಮದುವೆ ನಂತರ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ಪತಿ ಶ್ರೀಹರ್ಷ ಅಗಲಿಕೆ ಸಮಯದಲ್ಲಿ ಖಿನ್ನತೆಗೆ ಒಳಗಾಗಿ ಒಂದು ವರ್ಷ ಯಾವುದೇ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲ. ಆ ನಂತರ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದರು.
ಕನ್ನಡದ ಲೇಡಿ ಸೂಪರ್ ಸ್ಟಾರ್
ಡಾ. ರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದ 2 ವರ್ಷಗಳ ಬಳಿಕ ಬಿ. ಸರೋಜಾ ದೇವಿ ಕೂಡ ಪದಾರ್ಪಣೆ ಮಾಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅದು ಸಿನಿಮಾರಂಗ ಬೆಳವಣಿಗೆ ಆರಂಭಿಸಿದ ದಿನಗಳು. ಅಂತಹ ಸಮಯದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿ. ಸರೋಜಾ ದೇವಿ ನಟಿಸಲು ಆರಂಭಿಸಿದ್ದರು. 'ಕಿತ್ತೂರು ರಾಣಿ ಚೆನ್ನಮ್ಮ' ಚಿತ್ರದಲ್ಲಿ ನಟಿಸಿ ಅವರು ಜನಪ್ರಿಯರಾಗಿದ್ದರು. ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು.
ಅಮ್ಮನ ಷರತ್ತು
ಅವತ್ತಿನ ಕಾಲದಲ್ಲಿ ಮಹಿಳೆಯರು ಚಿತ್ರರಂಗಕ್ಕೆ ಬರುವುದನ್ನು ಎಲ್ಲರೂ ಪ್ರೋತ್ಸಾಹಿಸುತ್ತಿರಲಿಲ್ಲ. ಒಂದು ವೇಳೆ ಬಂದರೂ ಪೋಷಕರು ಷರತ್ತು ಹಾಕುತ್ತಿದ್ದರು. ಕಾಸ್ಟ್ಯೂಮ್ ವಿಚಾರದಲ್ಲಿ ಬಿ. ಸರೋಜಾ ದೇವಿ ಅವರ ತಾಯಿ ರುದ್ರಮ್ಮ ಬಹಳ ಕಟ್ಟುನಿಟ್ಟಾಗಿ ಇದ್ದರು. ಈಜುಡುಗೆ ಹಾಗೂ ಸ್ಲೀವ್‌ಲೆಸ್ ಬ್ಲೌಸ್ ಧರಿಸಬಾರದು ಎಂದಿದ್ದರು. ಅಮ್ಮನ ಮಾತನ್ನು ಎಂದಿಗೂ ಬಿ. ಸರೋಜಾ ದೇವಿ ಮೀರಲಿಲ್ಲ.
ತಮಿಳುನಾಡಿನಲ್ಲಿ ಜನಪ್ರಿಯತೆ
ಕನ್ನಡದ ನಟಿಯಾಗಿದ್ದರೂ ತಮಿಳು ಚಿತ್ರರಂಗದಲ್ಲಿ ಬಹಳ ಜನಪ್ರಿಯ ನಟಿ ಎನಿಸಿಕೊಂಡಿದ್ದರು. ಅದರಲ್ಲೂ ಎಂಜಿಆರ್ ಹಾಗೂ ಬಿ. ಸರೋಜಾ ದೇವಿ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿತ್ತು. ಎಂಜಿಆರ್ ಜೊತೆ ರಾಜಕೀಯರಂಗ ಪ್ರವೇಶಿಸಿದ್ದರೆ ತಮಿಳುನಾಡಿನ ಸಿಎಂ ಆಗಿಬಿಡುತ್ತಿದ್ದರು ಎನ್ನುವವರು ಇದ್ದಾರೆ. ಅಷ್ಟರಮಟ್ಟಿಗೆ ಅಭಿಮಾನಿಗಳ ಪ್ರೀತಿ ಸಿಕ್ಕಿತ್ತು.


Click it and Unblock the Notifications











