ಅಬ್ಬಬ್ಬಾ ; ಒಂದು ಜಾಮೂನಿಗೆ ₹410,ಭೇಲ್ ಪುರಿಗೆ ₹395 - ಕೆ.ಜಿ.ಎಫ್ ನಟಿಯ ಬೆಂಗಳೂರಿನ ಈ ರೆಸ್ಟೋರೆಂಟ್ ಬಲು ದುಬಾರಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.
ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿದ್ದಾರೆ.

ತೀರಾ ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮದೇ ''ಪರ್ಫ್ಯೂಮ್'' ಬ್ರ್ಯಾಂಡ್ ಶುರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಸೇರಿ ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಮ್ಮ ಹೋಟೆಲ್ ಬ್ರ್ಯಾಂಚ್‌ಗಳನ್ನು ಶುರು ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿಯ ಉದ್ಯಮಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ''ಮೌನಿ ರಾಯ್'' ಕೂಡ ಒಬ್ಬರು.
ಹೌದು, ಮೌನಿ ರಾಯ್.. ''ಕೆ.ಜಿ.ಎಫ್'' ಚಿತ್ರದ ಹಿಂದಿ ವರ್ಷನ್‌ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ''ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿ ಇವರ ಮೊದಲ ಹೆಜ್ಜೆ.
ಆ ನಂತರ ''ಕಸ್ತೂರಿ''.. ''ದೇವೊಂಕೇ ದೇವ್ ಮಹಾದೇವ್'' ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ''ನಾಗಿನ್'' ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.
ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್''ನ ಅವಕಾಶ ಪಡೆದರು. ''ಬ್ರಹ್ಮಾಸ್ತ್ರ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನ ಮದುವೆಯೂ ಆದರು.

ಸದ್ಯಕ್ಕೆ ಮೌನಿ ಸುಖಿ ಸಂಸಾರಿ. ಇಂಥಾ ಮೌನಿ ರಾಯ್ 2023ರಲ್ಲಿ ಬೆಂಗಳೂರಿನ ಸರ್ಜಾಪುರದಲ್ಲಿ ರೆಸ್ಟೋರೆಂಟ್ ಒಂದನ್ನು ಶುರು ಮಾಡಿದ್ದರು. ಈ ರೆಸ್ಟೋರೆಂಟ್ ಗೆ ಇವರು ಇಟ್ಟಿರುವ ಹೆಸರು ''ಬದ್ಮಾಶ್''. ಬೆಂಗಳೂರಿನಲ್ಲಿ ಶುರುವಾದ ಈ ಹೋಟೆಲ್ ಈಗ ದೇಶದ ಆರು ಕಡೆ ವಿಸ್ತಾರಗೊಂಡಿದೆ. ಮೌನಿ ರಾಯ್ ಅವರಿಗೆ ಭರ್ಜರಿ ಆದಾಯವನ್ನು ಕೂಡ ತಂದು ಕೊಡುತ್ತಿದೆ.
ಸದ್ಯ ಮೌನಿ ರಾಯ್ ಅವರ ಇದೇ ''ಬದ್ಮಾಶ್''ನ ರೆಸ್ಟೋರೆಂಟ್ ನ ಮೆನ್ಯೂ ಕಂಡು ಹಲವರು ಬೆಚ್ಚಿ ಬಿದ್ದಿದ್ದಾರೆ. ಯಾಕೆಂದರೆ..ರೆಸ್ಟೋರೆಂಟ್ ಹೆಸರಿನಲ್ಲಿ ಮೌನಿ ರಾಯ್ ಅಕ್ಷರಶಃ ಹಗಲು ದರೋಡೆ ಮಾಡುತ್ತಿದ್ದಾರೆ. ಮಧ್ಯಮ ವರ್ಗದವರು ಅಪ್ಪಿ ತಪ್ಪಿ ಇಲ್ಲಿ ಹೋದರೆ ಪಂಗನಾಮ ಗ್ಯಾರಂಟಿ.

ಯಾಕೆಂದರೆ.. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಕೇವಲ ಒಂದು ಗುಲಾಬ್ ಜಾಮೂನ್ ತಿನ್ನಬೇಕು ಅಂದರೆ ₹410 ರೂಪಾಯಿ ಕೊಡಬೇಕು. ಭೇಲ್ ಪುರಿ ತಿನ್ನುವ ಆಸೆ ಆದರೆ ₹395 ನೀಡಬೇಕು. ಮಸಾಲಾ ಪೀನಟ್, ಮಸಾಲಾ ಪಾಪಡ್, ಕ್ರಿಸ್ಪಿ ಕಾರ್ನ್ ಮತ್ತು ಸೇವ್‌ಪುರಿಗೆ ₹295 ದರವನ್ನು ನಿಗದಿ ಮಾಡಲಾಗಿದೆ. ಕಾಂದಾ ಭಜ್ಜಿ ನಿಮಗೆ ಇಷ್ಟ ಇದ್ದರೆ ₹355 ನೀಡಬೇಕು.
ಇನ್ನು ಸಿಗಡಿಯಿಂದ ಮಾಡಿದ ತಿಂಡಿಗಳಿಗೆ ₹795 ಕೊಡಬೇಕು. ತಂದೂರಿ ರೋಟಿ ಒಂದಕ್ಕೆ 105 ರೂಪಾಯಿ ಆದರೆ ನಾನ್ 115 ರೂಪಾಯಿ ಮತ್ತು ಅಮೃತಸರಿ ಕುಲ್ಚಾ 145 ರೂಪಾಯಿ ನಿಗದಿ ಮಾಡಲಾಗಿದೆ.
ಇನ್ನೂ ಇಲ್ಲಿ ಮಧ್ಯಪ್ರಿಯರಿಗೆ ಎಣ್ಣೆ ವ್ಯವಸ್ಥೆ ಕೂಡ ಇದೆ. ಒಂದು ವೇಳೆ ಕುಡಿಯುವ ಅಭ್ಯಾಸ ಇಲ್ಲವಾದರೆ ಇಲ್ಲಿ ಸಿಗುವ ''ಮೌನಿಲಿಷಿಯಸ್'' ಎಂಬ ಸ್ಪೆಷಲ್ ಡ್ರಿಂಕ್ಸ್ ಕುಡಿಯಬಹುದು. ಇದರ ಬೆಲೆ ಕೇವಲ ₹695 ಮಾತ್ರ. ಜಿನ್, ಸೌತೆಕಾಯಿ, ಕಿವಿ, ನಿಂಬೆ, ಎಲ್ಡರ್ ಫ್ಲವರ್ ಮತ್ತು ಸ್ಪಾರ್ಕ್ಲಿಂಗ್ ವಾಟರ್ ಹೊಂದಿರುವ ಈ ''ಮೌನಿಲಿಷಿಯಸ್'' ಮೌನಿ ರಾಯ್ ಅವರ ಮೆಚ್ಚಿನ ಡ್ರಿಂಕ್ ಕೂಡ ಹೌದು.
ಸದ್ಯಕ್ಕೆ ಮೌನಿ ರಾಯ್ ಒಡೆತನದ ''ಬದ್ಮಾಶ್'' ರೆಸ್ಟೋರೆಂಟ್‌ನ ಈ ಮೆನ್ಯೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಮೌನಿ ಪರ ವಕಾಲತ್ತು ವಹಿಸಿದರೆ ಇನ್ನೂ ಕೆಲವರು ದರ ತುಂಬಾ ದುಬಾರಿ ಆಯ್ತು ಎಂದು ಹೇಳುತ್ತಿದ್ಧಾರೆ.


Click it and Unblock the Notifications











