ಅಪರೂಪದ ಖಾಯಿಲೆಯಿಂದ ನಿಧನರಾದ ಬಪ್ಪಿ ಲಹರಿ: ನಿಮಗೂ ಇರಲಿ ಎಚ್ಚರ!
ಭಾರತ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಬಪ್ಪಿ ಲಹರಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್‌ನ ಗಣ್ಯರು, ವಿವಿಧ ಚಿತ್ರರಂಗಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬಪ್ಪಿಗೆ 69 ವರ್ಷ ವಯಸ್ಸು ಕಳೆದ ವರ್ಷ ಕೋವಿಡ್‌ಗೆ ಸಹ ತುತ್ತಾಗಿದ್ದರು. ಆದರೆ ಎಲ್ಲವನ್ನೂ ಗೆದ್ದು ಬಂದಿದ್ದ ಬಪ್ಪಿ ಲಹರಿ ಅಪರೂಪದ ಖಾಯಿಲೆಯೊಂದಕ್ಕೆ ಬಲಿ ಆದರು.
ಬಪ್ಪಿ ಲಹರಿಗೆ ಕಳೆದ ವರ್ಷ ಕೋವಿಡ್ ಆದಾಗ ಅವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಕೋವಿಡ್ ವಾಸಿಯಾಯಿತಾದರೂ ಹಲವು ಖಾಯಿಲೆಗಳನ್ನು ನೀಡಿ ಹೋಯಿತು. ಬಪ್ಪಿ ಲಹರಿಗೆ ಓಎಸ್‌ಎ (ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಫ್ನಿಯಾ) ಹೆಸರಿನ ಅಪರೂಪದ ಖಾಯಿಲೆ ಕಾಣಿಸಿಕೊಂಡಿತು.

ದಪ್ಪ ಇರುವವರಿಗೆ, ವಯಸ್ಸಾದವರಲ್ಲಿ ಓಎಸ್‌ಎ ಖಾಯಿಲೆ ತೀರ ಅಪರೂಪವೇನಲ್ಲ ಆದರೆ ಜೀವ ತೆಗೆವ ಹಂತಕ್ಕೆ ಹೋಗುವುದು ತುಸು ಅಪರೂಪವೇ ಆದರೆ ಬಪ್ಪಿ ಲಹರಿಗೆ ಅದೇ ಖಾಯಿಲೆ ಯಮವಾಗಿ ವಕ್ಕರಿಸಿತ್ತು.
ನಿದ್ದೆಗೆ ಸಂಬಂಧಿಸಿದ ಓಎಸ್‌ಎ ಖಾಯಿಲೆ ಮಾರಣಾಂತಿಕವೂ ಹೌದು. ಈ ಖಾಯಿಲೆ ಇದ್ದ ವ್ಯಕ್ತಿ ನಿದ್ದೆಯಲ್ಲಿಯೇ ಜೀವ ಬಿಟ್ಟುಬಿಡುತ್ತಾನೆ. ಆತ ಸಾಯುತ್ತಿರುವ ವಿಷಯ ಸ್ವತಃ ಮರಣಿಸುತ್ತಿರುವ ವ್ಯಕ್ತಿಗೇ ಗೊತ್ತಾಗುವುದಿಲ್ಲ. ನೆರವಿಗೆ ಸಹ ಕೂಗಲಾಗುವುದಿಲ್ಲ. ಹಾಗಾಗಿ ಈ ಖಾಯಿಲೆ ಪ್ರಮಾದಕರವಾದುದು.
ಓಎಸ್‌ಎ ಬಂದವರಿಗೆ ಆಗುವುದಿಷ್ಟು, ವ್ಯಕ್ತಿ ನಿದ್ರಿಸಬೇಕಾದರೆ ವ್ಯಕ್ತಿಯ ಮಾಂಸಖಂಡಗಳು, ಸಕಲ ಅಂಗಗಳೂ ನಿದ್ರಿಸುತ್ತಿರುತ್ತವೆ. ನಿದ್ರಿಸುವ ಸಮಯದಲ್ಲಿ ಗಂಟಲಿನ ಮಾಂಸಖಂಡಗಳು ನಿದ್ರಾವಸ್ತೆಗೆ ಜಾರಿ ಮೆದುವಾಗಿರುವ ಆ ಅಂಗ ಗಂಟಲಿನ ತಳಭಾಗವನ್ನು ಮುಟ್ಟುವ ಕಾರಣದಿಂದ ಬಾಯಿಯಿಂದಾಗಲಿ, ಮೂಗಿನಿಂದಾಗಲಿ ಶ್ವಾಸಕೋಶಕ್ಕೆ ಗಾಳಿ ಹೋಗದಂತೆ ತಡೆದು ಬಿಡುತ್ತದೆ.

ಶ್ವಾಸಕೋಶಗಳು ಕೂಡಲೆ ಮೆದುಳಿಗೆ ಎಚ್ಚರಿಕೆ ಸಂದೇಶಗಳನ್ನು ಕಳಿಸುತ್ತಾವಾದರೂ ವಯಸ್ಸಾದ ವ್ಯಕ್ತಿಗಳಲ್ಲಿ ಆ ಎಚ್ಚರಿಕೆಯ ಸಂದೇಶವನ್ನು ಪಡೆಯುವಲ್ಲಿ ಮೆದುಳು ವಿಫಲವಾಗುವ ಕಾರಣ ಶ್ವಾಸಕೋಶದಲ್ಲಿ ಋಣಾತ್ಮಕ ಒತ್ತಡ ಹೆಚ್ಚಾಗಿ ದೇಹದಲ್ಲಿ ಓ2 ಸ್ಯಾಚುರೇಶನ್ ಕಡಿಮೆ ಆಗಿ ನಿದ್ದೆಯಲ್ಲಿಯೇ ಜೀವ ಬಿಟ್ಟುಬಿಡುತ್ತಾರೆ. ನಿದ್ರೆಯಲ್ಲಿ ಉಸಿರಾಟದ ಸಮಸ್ಯೆಯ ಹಲವು ವಿಧಾನಗಳಿವೆ. ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಹ ಸ್ಲೀಪ್ ಅಪ್ನಿಯಾ ವಿಭಾಗಕ್ಕೆ ಸೇರುತ್ತದೆ. ಇದಕ್ಕೆ ಚಿಕಿತ್ಸೆಗಳು, ವ್ಯಾಯಾಮಗಳು ಇವೆ.
ದಪ್ಪಗಿದ್ದ, ವಯಸ್ಸಾದ, ಗಂಟಲಿನ ಭಾಗದಲ್ಲಿ ಅತಿಯಾದ ಕೊಬ್ಬು ಬೆಳೆಸಿಕೊಂಡ ವ್ಯಕ್ತಿಗಳಲ್ಲಿ ಈ ಸಮಸ್ಯೆ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಬಪ್ಪಿ ಲಹರಿಗೆ ಈ ಮೂರೂ ಸಮಸ್ಯೆಗಳಿದ್ದವು. ಬಪ್ಪಿ ಲಹರಿ ದಡೂತಿ ವ್ಯಕ್ತಿಯಾಗಿದ್ದರು. ಅವರ ಗಂಟಲಿನ ಕೊಬ್ಬು ಬಹಳ ಬೆಳೆದಿತ್ತು, ಮುಖಕ್ಕಿಂತಲೂ ಅಗಲವಾಗಿತ್ತು ಅವರ ಗಂಟಲಿನ ಭಾಗ, ಬಪ್ಪಿಗೆ ವಯಸ್ಸು 69 ಆಗಿತ್ತು. ಹಾಗಾಗಿ ಅವರಿಗೆ ಈ ಸಮಸ್ಯೆ ತುಸು ಹೆಚ್ಚೇ ಕಾಡಿತ್ತು.
ಬಪ್ಪಿ ಲಹರಿ ಅವರು ಸತತ 29 ದಿನ ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಫೆಬ್ರವರಿ 14 ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಬಂದಿದ್ದರು. ಆದರೆ ಅದೇ ದಿನ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಹಾಗಾಗಿ ಮತ್ತೆ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರು ಫೆಬ್ರವರಿ 16 ರ ಮುಂಜಾನೆ ಕೊನೆ ಉಸಿರೆಳೆದರು.


Click it and Unblock the Notifications











