ಗಣೇಶ್ ಇಷ್ಟಪಟ್ಟಿದ್ದ ಕಥೆ ಸುದೀಪ್ ಪಾಲಾಗಿತ್ತು; ಚಿತ್ರದ ಟೈಟಲ್ ವಿವಾದ ಸೃಷ್ಟಿಸಿದ್ದೇಕೆ?
ಚಿತ್ರರಂಗದಲ್ಲಿ ಒಬ್ಬರು ಕೇಳಿ ನಟಿಸೋಕೆ ಒಲ್ಲೆ ಎಂದ ಕಥೆಯನ್ನು ಮತ್ತೊಬ್ಬರು ಮೆಚ್ಚಿ ನಟಿಸಿ ಗೆದ್ದ ಸಾಕಷ್ಟು ಉದಾಹರಣೆಗಳಿವೆ. ಸಾಮಾನ್ಯವಾಗಿ ನಿರ್ದೇಶಕರು ತಮ್ಮ ಬಳಿ ಇರುವ ಕಥೆಗಳನ್ನು ನಟರಿಗೆ ಹೇಳಿ ಒಪ್ಪಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಕೆಲವರು ಹೇಳಿದ ಕಥೆ ಕೂಡಲೇ ಸಿನಿಮಾ ಆಗಿಬಿಡುತ್ತದೆ. ಕೆಲವು ಕಥೆಗಳು ಅಷ್ಟು ಸುಲಭವಾಗಿ ಓಕೆ ಆಗಲ್ಲ.
ಯಾವ ಅವಕಾಶವೇ ಆಗಿದ್ದರೂ ಅದು ಯಾರಿಗೆ ಸಿಗಬೇಕೋ ಅವರಿಗೆ ಸಿಗುತ್ತದೆ. ಸೋಲು ಗೆಲುವು ಬೇರೆ ಮಾತು. ಕಿಚ್ಚ ಸುದೀಪ್ ನಟಿಸಬೇಕಿದ್ದ ಸಾಕಷ್ಟು ಸಿನಿಮಾ ಕಥೆಗಳು ಬೇರೆಯವರ ಪಾಲಾಗಿರುವ ಉದಾಹರಣೆಗಳಿವೆ. ಸುದೀಪ್ ಕೂಡ ತಮ್ಮ ಕರಿಯರ್‌ನಲ್ಲಿ ನೂರಾರು ಕಥೆಗಳನ್ನು ಕೇಳಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದೊಂದು ಕಥೆಯನ್ನು ಮೊದಲು ಗಣೇಶ್ ಕೇಳಿ ಒಪ್ಪಿದ್ದರಂತೆ. ಡೇಟ್ಸ್ ಇಲ್ಲದೇ ನಟಿಸೋಕೆ ಸಾಧ್ಯವಾಗಿರಲಿಲ್ಲ. ಮುಂದೆ ಆ ಕಥೆ ಸುದೀಪ್ ಪಾಲಾಗಿತ್ತು.

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಕಿಚ್ಚ ಸುದೀಪ್. ನೆಚ್ಚಿನ ನಟನ ಹೆಸರಿನಲ್ಲೇ ಬಾದ್‌ಶಾ ಒಂದು ಸಿನಿಮಾ ಮಾಡಿದ್ದರು. ಆ ಚಿತ್ರವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಪೊನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಅದಕ್ಕಿಂತ 4 ವರ್ಷ ಮುಂಚೆ ಈ ಕಥೆ ಗಣೇಶ್ ಬಳಿ ಹೋಗಿತ್ತು. ಬಹಳ ಇಷ್ಟಪಟ್ಟಿದ್ದ ಗಣೇಶ್ ನಟಿಸೋಕೆ ಸಾಧ್ಯವಾಗಿರಲಿಲ್ಲ. ಅದೇ ಚಿತ್ರ 'ವಿಷ್ಣುವರ್ಧನ'.
2011ರಲ್ಲಿ ತೆರೆಗೆ ಬಂದಿದ್ದ 'ವಿಷ್ಣುವರ್ಧನ' ಭರ್ಜರಿ ಯಶಸ್ಸು ಕಂಡಿತ್ತು. ಬಹಳ ಅದ್ಧೂರಿಯಾಗಿ ಮೂಡಿಬಂದಿದ್ದ ಚಿತ್ರದಲ್ಲಿ ಸುದೀಪ್ ಟೈಟಲ್ ರೋಲ್ ಪ್ಲೇ ಮಾಡಿದ್ದರು. ಆರಂಭದಲ್ಲಿ ತಮಾಷೆಯಾಗಿ ಸಾಗುವ ಕಥೆ ಬಳಿಕ ಆಕ್ಷನ್ ಥ್ರಿಲ್ಲರ್ ಆಗಿ ಬದಲಾಗುತ್ತದೆ. ಚಿತ್ರದಲ್ಲಿ ಸುದೀಪ್ ನಟನೆ ಪ್ರೇಕ್ಷಕರ ಮನಗೆದ್ದಿತ್ತು. ಈ ಕಥೆ ಗಣೇಶ್ ಕೇಳಿ ಮೆಚ್ಚಿದ್ದರು ಎಂದು ನಿರ್ಮಾಪಕ ಯೋಗೀಶ್ ದ್ವಾರಕೀಶ್ ನೆನಪಿಸಿಕೊಂಡಿದ್ದಾರೆ.

ನಾಲ್ಕು ವರ್ಷ 'ವಿಷ್ಣುವರ್ಧನ' ಸಿನಿಮಾ ಕಥೆ ನನ್ನ ಬಳಿ ಇತ್ತು. ಕೊನೆಗೆ ಆ ಚಿತ್ರದಲ್ಲಿ ಸುದೀಪ್ ನಟಿಸುವಂತಾಯಿತು ಎಂದು 'ಸುದ್ದಿಮನೆ' ಯೂಟ್ಯೂಬ್ ಸಂದರ್ಶನದಲ್ಲಿ ಯೋಗೀಶ್ ದ್ವಾರಕೀಶ್ ತಿಳಿಸಿದ್ದಾರೆ. ಆ ಕಥೆ ಇಷ್ಟಪಟ್ಟು ಸಾಕಷ್ಟು ಜನರಿಗೆ ನಟಿಸೋಕೆ ಹೇಳಿದೆ. ನೀವೇ ಯಾರಾದರೂ ನಿರ್ಮಾಪಕರನ್ನು ಹುಡುಕಿ ಸಿನಿಮಾ ಮಾಡಿ ಎಂದಿದ್ದೆ. ನಟ ಗಣೇಶ್ ಅವರಿಗೂ ಈ ಕಥೆ ಹೇಳಿಸಿದ್ದೆ. ಗಣಿ ಬಹಳ ಕಥೆ ಕೇಳಿ ಬಹಳ ಇಷ್ಟಪಟ್ಟರು. ಆದರೆ ನಟಿಸೋಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಸುದೀಪ್ ಜೊತೆ ಸಿನಿಮಾ ಮಾಡಬೇಕು ಎಂದಾಗ ಹೋಗಿ 3 ಕಥೆ ಹೇಳಿದ್ದೆವು. ಆದರೆ ಯಾವುದು ಅಷ್ಟಾಗಿ ಇಷ್ಟವಾಗಲಿಲ್ಲ. ಕೊನೆಗೆ 4 ವರ್ಷಗಳ ಹಿಂದಿನ ಆ ಕಥೆಯನ್ನು ಕೇಳಿದಾಕ್ಷಣ ಸುದೀಪ್ ಕೇಳಿ ಒಪ್ಪಿಕೊಂಡುಬಿಟ್ಟರು. ಕಾಮಿಡಿ ಹೀರೊ ಆಕ್ಷನ್ ಹೀರೊ ಆಗುವ ಕಥೆ ಎಂದೆ. ಕೊನೆಗೆ ಕಥೆ ಕೇಳಿ ಒಪ್ಪಿಕೊಂಡರು. ವಿಲನ್ ಸೋನುಸೂದ್ ಇರಬೇಕು, ಇಬ್ಬರು ನಾಯಕಿಯರಾಗಿ ಪ್ರಿಯಾಮಣಿ, ಭಾವನಾ ಅವರನ್ನು ಆಯ್ಕೆ ಮಾಡಿದ್ದೆವು.
ಟಾಪ್ ನಟನ ಜೊತೆ ನಟಿಸಿದ ನಟಿಯರನ್ನು ಆಯ್ಕೆ ಮಾಡಬೇಕು ಎಂದು ಅಪ್ಪ ಹೇಳಿದರು. ಆಗಷ್ಟೆ ಪುನೀತ್ ರಾಜ್‌ಕುಮಾರ್ ನಟನೆಯ 'ರಾಮ್' ಚಿತ್ರದಲ್ಲಿ ಪ್ರಿಯಾಮಣಿ ನಟಿಸಿದ್ದರು. 'ಜಾಕಿ' ಚಿತ್ರದ ಹೀರೊಯಿನ್ ಭಾವನಾ. ಹಾಗಾಗಿ ಅವರಿಬ್ಬರನ್ನು ಆಯ್ಕೆ ಮಾಡಿಕೊಂಡೆವು. ಇದ್ದಕ್ಕಿದ್ದಂತೆ ದೊಡ್ಡ ಸಿನಿಮಾ ಆಗಿಬಿಡ್ತು. ನನ್ನನ್ನು ಹಾಕಿಕೊಂಡು ಯಾರು ದೊಡ್ಡ ಸಿನಿಮಾ ಮಾಡ್ಲಿಲ್ಲ ಎಂದು ಸುದೀಪ್ ಹೇಳಿದರು. ನೀನು ನನ್ನ ಜೊತೆಗಿದ್ದರೆ ದೊಡ್ಡ ಸಿನಿಮಾ ಮಾಡೋಣ ಅಂದೆ. ಆ ರೀತಿ 'ವಿಷ್ಣುವರ್ಧನ' ಸಿನಿಮಾ ಆಯ್ತು ಎಂದು ಯೋಗಿ ವಿವರಿಸಿದ್ದಾರೆ.
ಇನ್ನು ವಿಷ್ಣುವರ್ಧನ ಟೈಟಲ್ ಕೊಡಲು ಭಾರತಿ ವಿಷ್ಣುವರ್ಧನ್ ನಿರಾಕರಿಸಿದ್ದರು. ಈ ವಿಚಾರ ಭಾರೀ ಸುದ್ದಿ ಆಗಿತ್ತು. ಕೊನೆಗೆ ಇದರಲ್ಲಿ ದ್ವಾರಕೀಶ್ ಗೆದ್ದಿದ್ದರು. ನಿರ್ಮಾಪಕರ ಸಂಘ 'ವಿಷ್ಣುವರ್ಧನ' ಟೈಟಲ್ ಅನ್ನು ಕೊಂಚ ಬದಲಿಸಿ ಬಳಸಿಕೊಳ್ಳಲು ಹೇಳಿ ಸಮಸ್ಯೆ ಬಗೆಹರಿಸಿತ್ತು.


Click it and Unblock the Notifications