Anushka Shetty: ಸ್ವೀಟಿ ಅನ್ನೋ ಟ್ರಂಪ್ ಕಾರ್ಡ್ ಮಿಸ್ ಮಾಡಿಕೊಳ್ತಾ ಸ್ಯಾಂಡಲ್‌ವುಡ್? ಆ ಕನ್ನಡ ಚಿತ್ರದಲ್ಲೇ ಆಕೆ ನಟಿಸಬೇಕಿತ್ತು
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದಿದ್ದು ಗೊತ್ತೇಯಿದೆ. ಆದರೆ ಸ್ವೀಟಿ ಕನ್ನಡ ಸಿನಿಮಾದಲ್ಲಿ ನಟಿಸಲೇ ಇಲ್ಲ. ಇವತ್ತಿಗೂ ಅಭಿಮಾನಿಗಳು ಕನ್ನಡ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿನ ನೋಡೋಕೆ ಕಾಯುತ್ತಿದ್ದಾರೆ. ಆದರೆ ಯಾಕೋ ಆ ಲಕ್ಷಣಗಳು ಕಾಣುತ್ತಿಲ್ಲ.
ಅನುಷ್ಕಾ ಶೆಟ್ಟಿ ಬಾಹುಬಲಿ ಸರಣಿ ನಂತರ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. ಕೊನೆಯದಾಗಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಂದ ಹಾಗೆ ಸ್ವೀಟಿ ಕನ್ನಡ ಸಿನಿಮಾ ಮೂಲಕವೇ ಚಿತ್ರರಂಗ ಪ್ರವೇಶಿಸಬೇಕಿತ್ತು. ಚಿತ್ರವೊಂದಕ್ಕೆ ಫೋಟೊಶೂಟ್ ಮಾಡಿ ಆಡಿಷನ್ ಸಹ ಕೊಟ್ಟಿದ್ದರು. ನಾಯಕಿ ಪಾತ್ರಕ್ಕೆ ಆಯ್ಕೆ ಕೂಡ ಆಗಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ತೆಲುಗಿನ 'ಸೂಪರ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.

ಅಂದಹಾಗೆ ಅನುಷ್ಕಾ ಶೆಟ್ಟಿ ಮೊದಲು ಆಡಿಷನ್ ಕೊಟ್ಟಿದ್ದು ಕೋಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರಕ್ಕೆ. 2006ರಲ್ಲಿ ಕೋಡ್ಲು ರಾಮಕೃಷ್ಣ 'ಮಿಸ್ ಕ್ಯಾಲಿಫೋರ್ನಿಯಾ' ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಸ್ವೀಟಿ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದರು. ಈ ವಿಚಾರವನ್ನು ಸ್ವತಃ ನಿರ್ದೇಶಕರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ನಾನು ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಸ್ವತಃ ಅನುಷ್ಕಾ ಶೆಟ್ಟಿ ಕನ್ನಡದ 'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರಕ್ಕೆ ಆಯ್ಕೆ ಆಗಿದ್ದು ನಟಿಸಲು ಬಯಸಿದ್ದನ್ನು ಕನ್ನಡ ಪತ್ರಕರ್ತರ ಬಳಿ ಹೇಳಿಕೊಂಡಿದ್ದನ್ನು ವಿವರಿಸಿದ್ದರು.
'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರಕ್ಕೆ ದಿಗಂತ್ ಜೊತೆ ನಟಿಸೋಕೆ ಅನುಷ್ಕಾ ಆಯ್ಕೆ ಆಗಿದ್ದರು. ಆದರೆ ವಿದೇಶದಲ್ಲಿ ಶೂಟಿಂಗ್ ಇತ್ತು. ಅದೇ ಸಮಯದಲ್ಲಿ ಕಾಲೇಜು ಪರೀಕ್ಷೆ ಇದ್ದಿದ್ದರಿಂದ ಆ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಾಗಿರಲಿಲ್ಲ. 'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರಕ್ಕೂ ಮುನ್ನ ಕೋಡ್ಲು ರಾಮಕೃಷ್ಣ 'ಹೆಲೋ' ಎನ್ನುವ ಸಿನಿಮಾ ಮಾಡಿದ್ದರು. ಆ ಸೆಟ್‌ಗೆ ಪದೇ ಪದೆ ಅನುಷ್ಕಾ ಹೋಗುತ್ತಿದ್ದರಂತೆ. ಇದನ್ನು ಗಮನಿಸಿದ ರಾಮಕೃಷ್ಣ, "ನೋಡೋಕೆ ಮುದ್ದಾಗಿದ್ದೀಯಾ. ಚಿತ್ರದಲ್ಲಿ ನಟಿಸೋ ಆಸೆ ಇದ್ಯಾ? ಅಂತ ಕೇಳಿದ್ದಾರೆ. ಇಲ್ಲ ಅಂತ ತಲೆ ಆಡಿಸಿ ಹೋಗಿದ್ದ ಸ್ವೀಟಿ, ಮಾರನೇ ದಿನ ಬಂದು, ಸರ್ ನಮ್ಮ ತಂದೆ ನಿಮ್ಮ ಜೊತೆ ಮಾತನಾಡಬೇಕಂತೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ. ಜೊತೆಗೆ ನೀವು ಮೀನು ತಿನ್ನುತ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ನಿರ್ದೇಶಕರು ಹ್ಞೂಂ ಎಂದಿದ್ದಾರೆ.

ಮರುದಿನ ಅನುಷ್ಕಾ ಮನೆಗೆ ನಿರ್ದೇಶಕರು ಹೋದಾಗ ಊಟದ ವ್ಯವಸ್ಥೆ ಆಗಿತ್ತಂತೆ. ಊಟ ಮಾಡಿದ ಬಳಿಕ ಅನುಷ್ಕಾ ಸಿನಿಮಾದಲ್ಲಿ ನಟಿಸೋ ಬಗ್ಗೆ ಪೋಷಕರ ಜೊತೆ ಕೋಡ್ಲು ರಾಮಕೃಷ್ಣ ಮಾತನಾಡಿದ್ದರು. ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಫೋಟೊಗ್ರಫರ್ ಕರೆಸಿ ಫೋಟೊಶೂಟ್ ಕೂಡ ಮಾಡಿಸಿದ್ದರು. ಆದರೆ ಪಿಯುಸಿ ಪರೀಕ್ಷೆ ಇದ್ದ ಕಾರಣ ಆ ಚಿತ್ರದಲ್ಲಿ ಅನುಷ್ಕಾ ನಟಿಸಲು ಸಾಧ್ಯವಾಗಲಿಲ್ಲ ಎಂದು ನಿರ್ದೇಶಕರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಯೋಗ ಟೀಚರ್ ಆಗಿದ್ದ ಸ್ವೀಟಿ ಟಾಲಿವುಡ್ ಪ್ರವೇಶಿಸಿದರು. ಪೂರಿ ಜಗನ್ನಾಥ್ ನಿರ್ದೇಶನದ 'ಸೂಪರ್' ಚಿತ್ರದಲ್ಲಿ ನಾಗಾರ್ಜುನ ಜೋಡಿಯಾಗಿ ಮೊದಲಿಗೆ ನಟಿಸಿದ್ದರು. ಮೊದಲ ಚಿತ್ರದಲ್ಲೇ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸ್ವೀಟಿ ಶೆಟ್ಟಿ ಅನುಷ್ಕಾ ಶೆಟ್ಟಿಯಾಗಿ ಹೆಸರು ಬದಲಿಸಿಕೊಂಡು ಮೋಡಿ ಮಾಡಿದರು. 'ಬುಲ್ ಬುಲ್' ದರ್ಶನ್ ಜೊತೆ ಅನುಷ್ಕಾ ನಟಿಸ್ತಾರೆ ಎಂದು ಸುದ್ದಿ ಆಗಿತ್ತು. ಆದರೆ ಅದು ನಿಜವಾಗಲಿಲ್ಲ.
'ರಾಣಿ ಅಬ್ಬಕ್ಕ' ಚಿತ್ರದಲ್ಲಿ ಅನುಷ್ಕಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ. ಮಂಸೋರೆ ಈ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳ ಆಸೆ ಈಡೇರುತ್ತಾ ಕಾದು ನೋಡಬೇಕಿದೆ.


Click it and Unblock the Notifications











