ಆರೋಪ ಸಾಬೀತಾದರೂ ದರ್ಶನ್‌ರನ್ನು ಕ್ಷಮಿಸಬೇಕಾ? ಬಡವರ 'ಭಾವನೆ'ಗಳಿಗೆ ಬೆಲೆ ಇಲ್ವಾ ಭಾವನಾ ಅವರೇ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ಸಂಬಂಧ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರುತ್ತಿದ್ದಂತೆ ಸ್ಯಾಂಡಲ್‌ವುಡ್‌ನ ಕೆಲವು ತಾರೆಯರು ಓಪನ್ ಆಗಿ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಈ ಕೊಲೆ ಪ್ರಕರಣವನ್ನು ಸಿನಿಮಾರಂಗದ ಕೆಲ ತಾರೆಯರು ಖಂಡಿಸುತ್ತಿದ್ದಾರೆ.
ಮತ್ತೆ ಕೆಲವರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಅವರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ನಿರೂಪಕಿ ಹೇಮಲತಾ ಸೇರಿದಂತೆ ನಟಿ ಭಾವನಾ ರಾಮಣ್ಣ ಕೂಡ ಸೇರಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಭಾವನಾ ರಾಮಣ್ಣ ಮಾಧ್ಯಮಗಳಲ್ಲಿ ದರ್ಶನ್ ಪರ ಹೇಳಿಕೆಗಳನ್ನು ಕೊಟ್ಟಿದ್ದರು. "ದರ್ಶನ್ ಆರೋಪಿ ಅಂತ ಸಾಬೀತಾದರೂ ಅವರ ಪರವಾಗಿ ನಿಲ್ಲುತ್ತೇನೆ" ಎಂದು ಹೇಳಿದ್ದರು. ಭಾವನಾ ಕೊಟ್ಟಿರುವ ಈ ಹೇಳಿಕೆ ವಿರುದ್ಧ ಅಸಮಧಾನ ವ್ಯಕ್ತವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸೇರಿದಂತೆ ಸುದ್ದಿ ವಾಹಿನಿಗಳು ಭಾವನಾ ರಾಮಣ್ಣಗೆ ಅವರ ಹೇಳಿಕೆ ಕುರಿತು ಪ್ರಶ್ನೆಗಳನ್ನು ಮಾಡುತ್ತಿವೆ. ದರ್ಶನ್ ಆರೋಪಿ ಅಂತ ಸಾಬೀತಾದರೂ ಅವರ ಬೆಂಬಲಕ್ಕೆ ನಿಲ್ಲುವುದು ಯಾಕೆ? ನಿಮ್ಮಂತೆಯೇ ಒಬ್ಬ ಕಲಾವಿದ ಅನ್ನೋ ಕಾರಣಕ್ಕೆ ಬೆಂಬಲ ವ್ಯಕ್ತಪಡಿಸುವುದು ಎಷ್ಟು ಸರಿ ? ಎಂದು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಭಾವನಾ ರಾಮಣ್ಣ ಇತ್ತೀಚೆಗೆ "ದರ್ಶನ್ ಅವರನ್ನ ನಾನು ಕಲಾವಿದರಾಗಿ ಒಪ್ಪಿಕೊಂಡಿದ್ದೇನೆ. ಮುಂದೆಯೂ ಒಪ್ಪಿಕೊಳ್ಳುತ್ತೇನೆ. ಅವರು ಹೀರೋ ಆಗೋಕ್ಕಿಂತಲೂ ಮುನ್ನವೇ ನನಗೆ ಗೊತ್ತು. ನಾನು ದರ್ಶನ್ ಪರವಾಗಿ ನಿಂತಿದ್ದೇನೆ. ಈ ಮಾತನ್ನು ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ರೀತಿಯ ಹಿಂಜರಿಕೆ ಇಲ್ಲ" ಎಂದು ಹೇಳಿಕೊಂಡಿದ್ದರು. ಭಾವನಾ ಕೊಟ್ಟ ಈ ಹೇಳಿಕೆ ಸಾಕಷ್ಟು ಮಂದಿಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ದರ್ಶನ್ ತಪ್ಪು ಮಾಡಿದ್ದರೂ ಅವರನ್ನು ಸರ್ಮರ್ಥಿಸಿಕೊಳ್ಳಬೇಕೆ? ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ದರ್ಶನ್ ತಪ್ಪು ಮಾಡದೆ ಇದ್ದರೆ ಅವರ ಅಭಿಮಾನಿಗಳು ಸೇರಿದಂತೆ ಕನ್ನಡಿಗರು ಖಂಡಿತವಾಗಿಯೂ ಖುಷಿ ಪಡುತ್ತಾರೆ. ಅದೇ ಒಂದು ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಏನು ಮಾಡಬೇಕು? ಆಗಲೂ ಬೆಂಬಲ ಕೊಡಬೇಕೆ? ಭಾವನಾ ರಾಮಣ್ಣ ಕೊಟ್ಟ ಹೇಳಿಕೆ ಇಂತಹ ಪ್ರಶ್ನೆಯನ್ನಂತೂ ಖಂಡಿತವಾಗಿಯೂ ಹುಟ್ಟಾಕುತ್ತಿದೆ.

ಭಾವನಾ ರಾಮಣ್ಣ ಕೊಟ್ಟ ಹೇಳಿಕೆಗಳನ್ನು ಖಂಡಿಸಿ ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಭಾವನಾ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. " ಅಕ್ಕ ಭಾವನಾ ಅಕ್ಕ.. ಯಾವ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಳ್ತಾ ಇದೀಯ ಅಕ್ಕ ನೀನು. ಅನ್ಎಜುಕೇಟೆಡ್ ಫೂಲ್" ಅಂತ ನೆಟ್ಟಿಗರೊಬ್ಬರು ನಟಿ ಭಾವನಾ ರಾಮಣ್ಣ ವಿರುದ್ಧ ಕಿಡಿಕಾರಿದ್ದಾರೆ. ಇನ್ನೊಬ್ಬರು "ಅಯ್ಯೋ, ಈ ದೇಶದ ಮಾದರಿ ಹೆಣ್ಣು. ಹಿಡೀರಿ ಮೈಕನ, ಸೂಪರ್ ಭಾಷಣ" ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಹಾಗೇ, " ಅಫಿಶಿಯಲ್ ತರ ಕಾರ್‌ನಲ್ಲಿ ಬಂದು ಅನಕ್ಷರಸ್ಥರ ಹಾಗೇ ಮಾತಾಡ್ತಿದ್ದೀರಲ್ಲ ಮೇಡಂ ಏನಾಗಿದೆ ನಿಮಗೆ.. ಅಲ್ಲಿ ಒಂದು ಕುಟುಂಬದಲ್ಲಿ ಒಬ್ಬ ತೀರಿಕೊಂಡು ಇಡೀ ಕುಟುಂಬ ಬೀದಿಗೆ ಬಂದಿದೆ. ಅಂತಹದ್ರಲ್ಲಿ ದರ್ಶನ್ ಪರ ಮಾತಾಡೋಕೆ ನಿಮಗೆ ನಾಚಿಕೆ ಆಗಬೇಕು" ಅಂತ ಮತ್ತೊಬ್ಬರು ಕಿಡಿಕಾರಿದ್ದಾರೆ. ಹಾಗಂತ ಇಲ್ಲಿಗೆ ನಿಂತಿಲ್ಲ. ಇನ್ನಿಬ್ಬರು "ವೀರಪ್ಪನ್ ಕೂಡ ಅಪರಾದಿಯಲ್ಲ. ರಾಜ್ಕುಮಾರ್ sir ಕಿಡ್ನಾಪ್ ಆಗಿಯೇ ಇಲ್ಲ. ಮೇಡಂ ಪ್ರಕಾರ ಕೋರ್ಟ್‌ನಲ್ಲಿ ಪ್ರೂ ಆಗಿಲ್ಲ. ಓವರ್ ಸ್ಮಾರ್ಟ್." ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮತ್ತೊಂದು ಕಾಮೆಂಟ್ ಹೀಗಿದೆ. "ದರ್ಶನ್ ಮಾಡಿದ ಕೆಲಸ ಒಪ್ಪುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ, ಅವರ ಪರ ನಿಲ್ಲುತ್ತೇನೆ ಎಂದರೆ ಅರ್ಥ ಏನು? ಏನು ಅವನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ಅರ್ಥವೇ? ಎಂದು ಭಾವನಾ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನೊಬ್ಬರು "ಭಾವನಾಗೆ ಶಿಕ್ಷಣದ ಕೊರತೆಯಿದೆ" ಎಂದು ಹೇಳಿದ್ದಾರೆ. ಒಟ್ನಲ್ಲಿ ಭಾವನಾ ರಾಮಣ್ಣ ಸಿನಿಮಾ ಅಷ್ಟೇ ಅಲ್ಲ. ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರಿಂದ ಏನೇ ಮಾತಾಡುವಾಗ ಯೋಚನೆ ಮಾಡಿ ಮಾತಾಡಬೇಕು. ಅಭಿಮಾನವಿದ್ದರೆ, ಅವರು ಮಾಡುವ ಒಳ್ಳೆಯ ಕೆಲಸದ ಮೇಲಿರಬೇಕು. ಆದರೆ, ಕೊಲೆಯಂತಹ ಆರೋಪ ಸಾಬೀತಾದರೂ ಬೆಂಬಲಕ್ಕೆ ನಿಲ್ಲುತ್ತೇನೆ ಅನ್ನೋದು ಎಷ್ಟು ಸರಿ ಅನ್ನೋದು ನೆಟ್ಟಿಗರ ಪ್ರಶ್ನೆ.


Click it and Unblock the Notifications











