ವೀರಪ್ಪನ್‌ನನ್ನು ಕೊಂದುಬಿಡೋಣ ಎಂದು ನಾಗಪ್ಪ ಹೇಳಿದಾಗ ಅಣ್ಣಾವ್ರು ಮುಗ್ಧವಾಗಿ ಏನಂದ್ರು?
ಭೀಮನ ಅಮಾವಾಸ್ಯೆ.. ಈ ದಿನವನ್ನು ವಿವಾಹಿತ ಮಹಿಳೆ ತನ್ನ ಪತಿಯ ದೀರ್ಘಾಯುಷ್ಯ, ಆರೋಗ್ಯ, ಯಶಸ್ಸು ಮತ್ತು ಸಂತೋಷಕ್ಕಾಗಿ ಆಚರಿಸುತ್ತಾರೆ. ಆದರೆ 25 ವರ್ಷಗಳ ಹಿಂದೆ ಪಾರ್ವತಮ್ಮ ಅವರಿಂದ ಡಾ. ರಾಜ್‌ಕುಮಾರ್ ಅವರನ್ನು ದೂರಮಾಡಿ ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಪ್ರತಿವರ್ಷ ಭೀಮನ ಅಮವಾಸ್ಯೆ ಬಂದರೆ ಆ ಕರಾಳ ದಿನ ನೆನಪಾಗುತ್ತದೆ.
2000ದ ಇಸವಿ ಜುಲೈ 30ರಂದು ಗಾಜನೂರಿನ ಮನೆಯಿಂದ ಅಣ್ಣಾವ್ರನ್ನು ವೀರಪ್ಪನ್ ಬಂದು ಕರೆದುಕೊಂಡು ಹೋಗಿದ್ದ. ಅಂದು ರಾತ್ರಿ 9:30ರ ಸಮಯಕ್ಕೆ ಅಣ್ಣಾವ್ರು ಊಟ ಮುಗಿಸಿ, ಎಲೆ ಅಡಿಕೆ ಹಾಕಿಕೊಂಡು ಟಿವಿ ನೋಡುತ್ತಾ ಮನೆಯಲ್ಲಿ ಕುಳಿತ್ತಿದ್ದರು. ಅದಾಗಲೇ ಪ್ಲ್ಯಾನ್ ಮಾಡಿದಂತೆ ವೀರಪ್ಪನ್ ಅಂಡ್ ಗ್ಯಾಂಗ್ ಮನೆ ಪ್ರವೇಶಿಸಿದ್ದರು. ಅಂದು ಡಾ. ರಾಜ್‌ಕುಮಾರ್ ಅವರನ್ನು ಕರೆದುಕೊಂಡು ಹೋದ್ದ ವೀರಪ್ಪನ್ ಬಿಡುಗಡೆ ಮಾಡಿದ್ದು 108 ದಿನಗಳ ಬಳಿಕ.

ಅಣ್ಣಾವ್ರು ಕಾಡಿನಲ್ಲಿ ಇದ್ದ ಅಷ್ಟೂ ದಿನ ಕುಟುಂಬ ಸದಸ್ಯರು, ಅಭಿಮಾನಿಗಳು ಆತಂಕದಲ್ಲೇ ದಿನ ದೂಡುವಂತಾಗಿತ್ತು. ಅದರಲ್ಲೂ 61ನೇ ದಿನ ಒಂದು ಎಡವಟ್ಟಾಗಿ ಭಯ ಹೆಚ್ಚಾಗಿಬಿಟ್ಟಿತ್ತು. ಡಾ. ರಾಜ್‌ಕುಮಾರ್ ಜೊತೆ ವೀರಪ್ಪನ್ ಜೊತೆ ಹೋಗಿದ್ದ ನಾಗಪ್ಪ ಮಾರಡಗಿ ಒಂದು ದುಸಾಹಸ್ಸಕ್ಕೆ ಕೈ ಹಾಕಿದ್ದರು. ಮಚ್ಚಿನಿಂದ ವೀರಪ್ಪನ್ ಕೊಲೆ ಮಾಡಿ ಅಣ್ಣಾವ್ರನ್ನು ಕರೆದುಕೊಂಡು ತಪ್ಪಿಸಿಕೊಂಡು ಬರಲು ಪ್ರಯತ್ನಿಸಿದ್ದರು. ತಮ್ಮ ಪ್ರಯತ್ನದಲ್ಲಿ ಅವರು ಭಾಗಶಃ ಗೆದ್ದಿದ್ದರು. ಯೋಜಿಸಿದಂತೆ ಮಚ್ಚಿನಿಂದ ವೀರಪ್ಪನ್ ತಲೆಗೆ ಹೊಡೆದಿದ್ದರು. ಬಳಿಕ ಕಾಡುಗಳ್ಳ ಪ್ರತಿರೋಧ ತೋರಿದಾಗ ತಪ್ಪಿಸಿಕೊಂಡು ಬಂದುಬಿಟ್ಟಿದ್ದರು. ಅಣ್ಣಾವ್ರು ವೀರಪ್ಪನ್ ಜೊತೆಗೆ ಉಳಿದುಬಿಟ್ಟರು. ಈ ಘಟನೆಯಿಂದ ಕಾಡುಗಳ್ಳ ಕೋಪಗೊಂಡಿದ್ದು ಸುಳ್ಳಲ್ಲ.
ಅಂದು ವೀರಪ್ಪನ್‌ಗೆ ಹೊಡೆಯಬೇಕು ಎಂದು ನಾಗಪ್ಪ ಮಾರಡಗಿ ಮನಸ್ಸು ಮಾಡಿದ್ದರು. ಬಳಿಕ ಏನೆಲ್ಲಾ ಆಯಿತು ಎಂದು ಡಿಜಿಟಲ್ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಾಗಪ್ಪ ವಿವರಿಸಿದ್ದರು. ಸಾಕಷ್ಟು ಬಾರಿ ವೀರಪ್ಪನ್‌ಗೆ ಹೊಡೆದು ತಪ್ಪಿಸಿಕೊಂಡು ಬರುವ ಅವಕಾಶ ನಮಗೆ ಸಿಕ್ಕಿತ್ತು. ಆದರೆ ಧೈರ್ಯ ಬರಲಿಲ್ಲ. ವೀರಪ್ಪನ್ ನನ್ನ ಪ್ರಕಾರ ಅಂತಹ ಗಟ್ಟಿಗ ಅಲ್ಲ, ಸುಮ್ಮನೆ ಆತನ ಬಗ್ಗೆ ಹೆಚ್ಚು ಬಿಲ್ಡಪ್ ಕೊಡುತ್ತಾರೆ. ಸಣಕಲು ದೇಹ, ಶಕ್ತಿ ಸಾಮರ್ಥ್ಯ ಕೂಡ ಇರಲಿಲ್ಲ. ಒಂದು ಗನ್ ಮಾತ್ರ ಅವನ ಬಳಿ ಇರುತ್ತಿತ್ತು ಎಂದು ಅವರು ನೆನಪು ಮಾಡಿಕೊಂಡಿದ್ದರು.
"10 ದಿನಗಳ ಕಾಲ ನಮ್ಮೊಟ್ಟಿಗೆ ನಿಮ್ಮನ್ನು ಇರಿಸಿಕೊಳ್ಳುತ್ತೇವೆ ಎಂದು ವೀರಪ್ಪನ್ ಹೇಳಿದ್ದ. ಆದರೆ ನಕ್ಕಿರನ್ ಗೋಪಾಲ್ ಮೂರ್ನಾಲ್ಕು ಬಾರಿ ಬಂದು ಸಂಧಾನ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಯಾರಾದರೂ ಒಬ್ಬರ ತಲೆ ಕಡಿದು, ಕಳುಹಿಸಿದರೆ ನಮ್ಮ ಬೇಡಿಕೆಗೆ ಕರ್ನಾಟಕ ಸರ್ಕಾರ ಒಪ್ಪುತ್ತದೆ ಎಂದು ವೀರಪ್ಪನ್ ಮಾತನಾಡುತ್ತಿದ್ದ. ಅದನ್ನು ಕೇಳಿ ನಮಗೆ ಭಯವಾಯಿತು" ಎಂದು ಆ ದಿನವನ್ನು ನಾಗಪ್ಪ ಮೆಲುಕು ಹಾಕಿದ್ದರು.
60ನೇ ದಿನ ವೀರಪ್ಪನ್ ಸಹಚರರೆಲ್ಲಾ ಬೇರೆ ಕಡೆ ಹೋಗಿದ್ದರು. ವೀರಪ್ಪನ್ ಜೊತೆ ಒಬ್ಬ ಹುಡುಗ ಹಾಗೂ ನಾನು, ಅಣ್ಣಾವ್ರು ಮಾತ್ರ ಇದ್ವಿ. ಅದೇ ದಿನ ತಪ್ಪಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಗಿ ನಾಗಪ್ಪ ವಿವರಿಸಿದ್ದರು. ಆಗ ನಾನು ಅಣ್ಣಾವ್ರ ಬಳಿ "ಅಪ್ಪಾಜಿ, ವೀರಪ್ಪನ್ ಈಗ ಒಬ್ಬರ ತಲೆ ಕಡೆಯಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾನೆ. ಇನ್ನು ಸುಮ್ಮನೆ ಇರುವುದು ಸರಿಯಲ್ಲ. ಇಬ್ಬರೇ ಇದ್ದಾರೆ, ಒಂದು ಮಚ್ಚು ಇದೆ. ನಾವೇ ವೀರಪ್ಪನ್ ತಲೆ ಕಡಿದುಕೊಂಡು ಎತ್ಕೊಂಡು ಹೋಗೋಣ ಎಂದೆ. ಆಗ ಮುಗ್ಧವಾಗಿ ಅಪ್ಪಾಜಿ "ಹೇಗೆ ಹೊಡಿತ್ತೀರಾ? ನಿಮಗೆ ಕೊನೆ ಮಾಡಿ ಅಭ್ಯಾಸ ಇದ್ಯಾ?" ಅಂತ ಕೇಳಿದ್ರು. ಇಲ್ಲ ಬೇರೆ ವಿಧಿಯಿಲ್ಲ ಎಂದೆ. ಹೇಗೋ ಮಾಡಿ ಅವರನ್ನು ಒಪ್ಪಿಸಿದ್ದೆ" ಎಂದು ವಿವರಿಸಿದ್ದರು.
ಅಂದು ಸಣ್ಣ ಟೆಂಟ್ ಹಾಕಿ ಮಲಗೆದ್ದೆವು. ನಾನು ಮೊದಲಿಗೆ ಮಚ್ಚಿನಿಂದ ವೀರಪ್ಪನ್ ಕಾಲಿಗೆ ಹೊಡೆದೆ. ಬಳಿಕ ಅವನು ಕೂಗಾಡುತ್ತಿದ್ದಂತೆ ತಲೆಗೆ ಬಲವಾಗಿ ಹೊಡೆದು. ತಲೆಯಿಂದ ರಕ್ತ ಸುರಿಯಲು ಆರಂಭವಾಯಿತು. ಕೂಡಲೇ ವೀರಪ್ಪನ್ ನನ್ನನ್ನು ಪಕ್ಕಕ್ಕೆ ತಳ್ಳಿ ನನ್ನ ಎದೆ ಮೇಲೆ ಕೂತುಬಿಟ್ಟ. ಬಳಿಕ ಕಲ್ಲಿನಿಂದ ನನ್ನ ತಲೆಗೆ ಹೊಡೆದ. ಕೈಗಳಿಂದ ಬಾಯಿಗೆ ಕೈಹಾಕಿ ಕಿತ್ತುಬಿಟ್ಟ. ಆಗ ನನ್ನ ಹಲ್ಲುಗಳು ಮುರಿದವು. ಬಳಿಕ ಆ ಹುಡುಗನಿಗೆ ಹೇಳಿ ನನ್ನ ಹಿಡಿಯಲು ಹೇಳಿದ. ನಾನು ಹೇಗೋ ತಪ್ಪಿಸಿಕೊಂಡು ಟೆಂಟ್‌ನಿಂದ ಹೊರಗೆ ಬಂದೆ. ಪಕ್ಕದಲ್ಲೇ ಕಾಲುವೆ ಇತ್ತು. ಅದನ್ನು ದಾಟಿ ನಾನು ರಾತ್ರಿಯಲ್ಲಾ ನಡೆದು ಬಂದೆ. ರಸ್ತೆ ಸಿಗುತ್ತಿದ್ದಂತೆ ತಾಳವಾರದ ಬಸ್ ಏರಿ ಗಾಜನೂರಿಗೆ ಬಂದೆ. ನನ್ನನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು, ನಾನು ವೀರಪ್ಪನ್‌ಗೆ ಹೊಡೆದು ತಪ್ಪಿಸಿಕೊಂಡು ಬಂದೆ ಎಂದಾಗ ಪಾರ್ವತಮ್ಮ ಕೂಡ ಮೊದಲಿಗೆ ನಂಬಲಿಲ್ಲ" ಎಂದು ನಾಗಪ್ಪ ಆ ಘಟನೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದರು.


Click it and Unblock the Notifications











