twitter
    For Quick Alerts
    ALLOW NOTIFICATIONS  
    For Daily Alerts

    ರಾಜಮಂಡ್ರಿಯ ಲಲಿತಾ ರಾಣಿ, ಜಯಪ್ರದ ಆಗಿ ಮಿಂಚಿದ ಅಪರೂಪದ ಕತೆ!

    |

    ''ಪ್ರಿಯತಮ.. ಕರುಣೆಯ ತೋರೆಯ...'' 1983 ರಲ್ಲಿ ತೆರೆಕಂಡ 'ಕವಿರತ್ನ ಕಾಳಿದಾಸ' ಚಿತ್ರದ ಈ ಹಾಡನ್ನು ಕೇಳಿದ ಕೂಡಲೆ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಸುಂದರ ವದನದ ಚೆಲುವೆ ಜಯಪ್ರದ. ''ಕಣ್ಣೆರಡು ಕಮಲಗಳಂತೆ.. ಮುಂಗುರುಳು ದುಂಬಿಗಳಂತೆ.. ನಾಸಿಕವು ಸಂಪಿಗೆಯಂತೆ.. ನೀ ನಗಲು ಹೂ ಬಿರಿದಂತೆ.. ನಡೆಯುತ್ತಿರೆ ನಾಟ್ಯದಂತೆ.. ರತಿಯೇ ಧರೆಗಿಳಿದಂತೆ.. ಈ ಅಂದಕ್ಕೆ ಸೋತೆನು.. ಸೋತೆ ನಾನು...''

    ನೀವು ಈಗಾಗಲೇ ಗುನುಗಲು ಆರಂಭಿಸಿರುವ 'ಕವಿರತ್ನ ಕಾಳಿದಾಸ' ಚಿತ್ರದ ಈ ಹಾಡು ಜಯಪ್ರದ ಸೌಂದರ್ಯಕ್ಕೆ ಅಕ್ಷರಶಃ ಹೇಳಿ ಮಾಡಿಸಿದಂತಿತ್ತು. ಸಾಕ್ಷಾತ್ ರತಿಯಂತೆ ಸೌಂದರ್ಯವತಿಯಾಗಿದ್ದ ಜಯಪ್ರದಗೆ ಸೋತು ಶರಣಾಗದ ಸಿನಿ ರಸಿಕರೇ ಇಲ್ಲ.

    ಓದುವ ವಯಸ್ಸಿನಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟ ಜಯಪ್ರದ ಇಂದು ಜನಪ್ರಿಯ ನಟಿ ಹಾಗೂ ಪ್ರಸಿದ್ಧ ರಾಜಕಾರಣಿ ಕೂಡ. ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ಜಯ ಕಂಡ ಜಯಪ್ರದ ಮೂಲತಃ ಆಂಧ್ರ ಪ್ರದೇಶದವರು. ರಾಜಮಂಡ್ರಿಯಲ್ಲಿ ಜನಿಸಿದ ಜಯಪ್ರದ, ಚಿತ್ರನಟಿಯಾಗಿ, ಬಾಲಿವುಡ್ ನ ಬಹುಬೇಡಿಕೆಯ ಹೀರೋಯಿನ್ ಆಗಿ ಬೆಳೆದ ಕಥೆಯೇ ಅದ್ಭುತ.

    ಈಕೆ ನಿಜಕ್ಕೂ ಲಲಿತಾ ರಾಣಿ

    ಈಕೆ ನಿಜಕ್ಕೂ ಲಲಿತಾ ರಾಣಿ

    ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಏಪ್ರಿಲ್ 3, 1962 ರಲ್ಲಿ ಜನಿಸಿದ ಜಯಪ್ರದ ಮೂಲ ಹೆಸರು ಲಲಿತಾ ರಾಣಿ. ಬಡ್ಡಿ ವ್ಯವಹಾರ ನಡೆಸುತ್ತಿದ್ದ ಕೃಷ್ಣರಾವ್ ಮತ್ತು ನೀಲವೇಣಿ ದಂಪತಿಯ ಪುತ್ರಿ. ನೋಡಲು ಅಂದವಾಗಿದ್ದ ಲಲಿತಾ ರಾಣಿ ಚಿಕ್ಕವಯಸ್ಸಿನಲ್ಲೇ ನೃತ್ಯ ಮತ್ತು ಸಂಗೀತ ತರಬೇತಿ ಪಡೆಯಲು ಆರಂಭಿಸಿದರು.

    ಡಾ ರಾಜ್ ಜೊತೆ ಜಯಪ್ರದಾ ನಟಿಸಿದ ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್ಡಾ ರಾಜ್ ಜೊತೆ ಜಯಪ್ರದಾ ನಟಿಸಿದ ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್

    ಶಾಲಾ ನೃತ್ಯ ತಂದ ಅವಕಾಶ

    ಶಾಲಾ ನೃತ್ಯ ತಂದ ಅವಕಾಶ

    ರಾಜಮಂಡ್ರಿಯ ತೆಲುಗು ಮೀಡಿಯಂ ಸ್ಕೂಲ್ ನಲ್ಲಿ ಓದುತ್ತಿದ್ದ ಲಲಿತಾ ರಾಣಿ, ಶಾಲೆಯ ವಾರ್ಷಿಕೋತ್ಸವದಲ್ಲಿ ಸ್ಟೇಜ್ ಮೇಲೆ ಮಾಡಿದ ನೃತ್ಯ ತೆಲುಗು ನಿರ್ದೇಶಕರೊಬ್ಬರ ಗಮನ ಸೆಳೆಯಿತು. 'ಭೂಮಿ ಕೋಸಂ' ಎಂಬ ಚಿತ್ರದಲ್ಲಿ ಮೂರು ನಿಮಿಷದ ಹಾಡೊಂದಕ್ಕೆ ಹೆಜ್ಜೆ ಹಾಕುವ ಅವಕಾಶವನ್ನ ಲಲಿತಾ ರಾಣಿಗೆ ಆ ತೆಲುಗು ನಿರ್ದೇಶಕರು ನೀಡಿದರು.

    'ಸಂಗೊಳ್ಳಿರಾಯಣ್ಣ' ನಂತರ ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ'ಸಂಗೊಳ್ಳಿರಾಯಣ್ಣ' ನಂತರ ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ

    ಪ್ರೋತ್ಸಾಹ ಕೊಟ್ಟ ಕುಟುಂಬ:

    ಪ್ರೋತ್ಸಾಹ ಕೊಟ್ಟ ಕುಟುಂಬ:

    ಸಿನಿಮಾದಲ್ಲಿ ನೃತ್ಯ ಮಾಡುವ ಚಾನ್ಸ್ ಸಿಕ್ಕಾಗ ಲಲಿತಾ ರಾಣಿ ಮೊದಮೊದಲು ಕೊಂಚ ಹಿಂದೇಟು ಹಾಕಿದರು. ಆದರೆ ಕುಟುಂಬದ ಪ್ರೋತ್ಸಾಹವಿದ್ದ ಕಾರಣ, ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಒಂದು ಹಾಡಲ್ಲಿ ಮಾತ್ರ ಕಾಣಿಸಿಕೊಂಡ ಲಲಿತಾ ರಾಣಿಗೆ ಅಂದು ಸಿಕ್ಕ ಸಂಭಾವನೆ ಹತ್ತು ರೂಪಾಯಿ.

    ಬಾಲಚಂದರ್ ಗರಡಿಯಲ್ಲಿ:

    ಬಾಲಚಂದರ್ ಗರಡಿಯಲ್ಲಿ:

    ಲಲಿತಾ ರಾಣಿಯ ಅದೃಷ್ಟವೋ ಏನೋ, ಆ ಒಂದು ನೃತ್ಯ ಮಾಡಿದ ಬಳಿಕ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬಂದವು. ಕೆ.ಬಾಲಚಂದರ್ ಕಣ್ಣಿಗೆ ಬಿದ್ದ ಲಲಿತಾ ರಾಣಿ ಮುಂದೆ ಜಯಪ್ರದ ಆಗಿ ತೆಲುಗಿನ 'ಅಂತುಲೇನಿ ಕಥಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ನೋಡನೋಡುತ್ತಿದ್ದಂತೆಯೇ ಜಯಪ್ರದ ಸ್ಟಾರ್ ಆಗಿಬಿಟ್ಟರು.

    ಸಾಲು ಸಾಲು ತೆಲುಗು ಚಿತ್ರಗಳು:

    ಸಾಲು ಸಾಲು ತೆಲುಗು ಚಿತ್ರಗಳು:

    'ಸಿರಿ ಸಿರಿ ಮುವ್ವ', 'ಸೀತಾ ಕಲ್ಯಾಣಂ', 'ಅಡವಿ ರಾಮುಡು'... ಈ ಮೂರು ಚಿತ್ರಗಳು ಸಾಕಾಯ್ತು ಜಯಪ್ರದ ತೆಲುಗು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರೋಕೆ. ರಜನಿಕಾಂತ್, ಕಮಲ್ ಹಾಸನ್, ಎನ್.ಟಿ.ಆರ್ ನಂತಹ ಸೂಪರ್ ಸ್ಟಾರ್ ಗಳ ಜೊತೆಗೆ ಜಯಪ್ರದ ತೆರೆ ಹಂಚಿಕೊಂಡರು.

    ಕನ್ನಡಕ್ಕೆ ಕಾಲಿಟ್ಟ ಜಯಪ್ರದ:

    ಕನ್ನಡಕ್ಕೆ ಕಾಲಿಟ್ಟ ಜಯಪ್ರದ:

    ತೆಲುಗಿನಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜಯಪ್ರದರನ್ನು ಕನ್ನಡಕ್ಕೆ ಕರೆತಂದಿದ್ದು ನಿರ್ದೇಶಕ ವಿಜಯ್. 1977 ರಲ್ಲಿ ತೆರೆಕಂಡ 'ಸನಾಧಿ ಅಪ್ಪಣ್ಣ' ಚಿತ್ರದ ಮೂಲಕ ಜಯಪ್ರದ ಚಂದನವನಕ್ಕೆ ಕಾಲಿಟ್ಟರು. ಡಾ.ರಾಜ್ ಕುಮಾರ್ ಜೊತೆಗೆ 'ಸನಾಧಿ ಅಪ್ಪಣ್ಣ' ಚಿತ್ರದಲ್ಲಿ ಜಯಪ್ರದ ಕಾಂಬಿನೇಶನ್ ಹಿಟ್ ಆಯ್ತು. 'ಸನಾಧಿ ಅಪ್ಪಣ್ಣ' ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಜೊತೆಗೆ ಜಯಪ್ರದ ಮೊದಲ ಬಾರಿಗೆ ತೆರೆ ಹಂಚಿಕೊಂಡರು. 'ಸನಾಧಿ ಅಪ್ಪಣ್ಣ' ಯಶಸ್ಸು ಗಳಿಸುತ್ತಿದ್ದಂತೆಯೇ, 'ಹುಲಿಯ ಹಾಲಿನ ಮೇವು', 'ಕವಿರತ್ನ ಕಾಳಿದಾಸ' ಚಿತ್ರಗಳಲ್ಲಿ ಡಾ.ರಾಜ್-ಜಯಪ್ರದ ಕೆಮಿಸ್ಟ್ರಿ ಮುಂದುವರೆಯಿತು. 2000 ರಲ್ಲಿ ಬಿಡುಗಡೆಗೊಂಡ 'ಶಬ್ದವೇಧಿ' ಚಿತ್ರದಲ್ಲೂ ಡಾ.ರಾಜ್‌ಗೆ ಜಯಪ್ರದ ಹೀರೋಯಿನ್ ಆಗಿದ್ದು ಅಕಾರಣವೇನಲ್ಲ.

    ಬಹುಭಾಷೆಯಲ್ಲಿ ಮಿಂಚಿದಾಕೆ:

    ಬಹುಭಾಷೆಯಲ್ಲಿ ಮಿಂಚಿದಾಕೆ:

    'ನಿನೈತಾಲೆ ಇನಿಕ್ಕುಮ್' ಸೇರಿದಂತೆ ಕಾಲಿವುಡ್ ನಲ್ಲಿ ಕಮಲ್ ಹಾಸನ್ ಮತ್ತು ರಜನಿಕಾಂತ್ ಜೊತೆಗೆ ಹೆಚ್ಚು ಚಿತ್ರಗಳಲ್ಲಿ ಜಯಪ್ರದ ಮಿಂಚಿದರು. ತಮಿಳಿನಲ್ಲೂ ಜಯಪ್ರದ ರವರಿಗೆ ಬಹು ಬೇಡಿಕೆ ಇತ್ತು. 'ಇನಿಯುಂ ಕಥಾ ತುದರಂ' ಸೇರಿದಂತೆ ಕೆಲ ಮಲಯಾಳಂ ಹಾಗೂ ಬೆಂಗಾಲಿ ಚಿತ್ರಗಳಲ್ಲೂ ಜಯಪ್ರದ ಮಿಂಚಿದ್ದಾರೆ. ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಕೃಷ್ಣಂ ರಾಜು, ಸೋಹನ್ ರಾಜು, ಅಮಿತಾಬ್ ಬಚ್ಚನ್, ಜಿತೇಂದ್ರ, ಮಮ್ಮೂಟಿ ಸೇರಿದಂತೆ ವಿವಿಧ ಭಾಷೆಗಳ ಸ್ಟಾರ್ ನಟರೊಂದಿಗೆ ಜಯಪ್ರದ ತೆರೆಹಂಚಿಕೊಂಡಿದ್ದಾರೆ.

    ಬಾಲಿವುಡ್ ಗೆ ಕಾಲಿಟ್ಟ ಜಯಪ್ರದ:

    ಬಾಲಿವುಡ್ ಗೆ ಕಾಲಿಟ್ಟ ಜಯಪ್ರದ:

    ಅದಾಗಲೇ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬೇಡಿಕೆ ಹೊಂದಿದ್ದ ಜಯಪ್ರದ ಬಾಲಿವುಡ್ ಗೆ ಕಾಲಿಟ್ಟಿದ್ದು 'ಸರ್ಗಮ್' ಚಿತ್ರದ ಮೂಲಕ. 1976 ರಲ್ಲಿ ಜಯಪ್ರದ ನಟನೆಯ ಕೆ.ವಿಶ್ವನಾಥ್ ನಿರ್ದೇಶನದ 'ಸಿರಿ ಸಿರಿ ಮುವ್ವ' ಚಿತ್ರ ಬಿಡುಗಡೆಗೊಂಡಿತ್ತು. ತೆಲುಗಿನಲ್ಲಿ ಈ ಚಿತ್ರ ಯಶಸ್ವಿಯಾದ ನಂತರ, ಹಿಂದಿಯಲ್ಲಿ ರೀಮೇಕ್ ಮಾಡಲು ಕೆ.ವಿಶ್ವನಾಥ್ ಮುಂದಾದರು. ಆಗ ಜಯಪ್ರದಗೆ ಬಾಲಿವುಡ್ ನಲ್ಲಿ ರತ್ನಗಂಬಳಿ ಹಾಸಿದ್ದು ಇದೇ ಕೆ.ವಿಶ್ವನಾಥ್. 'ಸರ್ಗಮ್' ಚಿತ್ರದಲ್ಲಿ ಮೂಕ ನೃತ್ಯಗಾರ್ತಿಯ ಪಾತ್ರ ನಿರ್ವಹಿಸಿದ ಜಯಪ್ರದ ವ್ಯಾಪಕ ಮೆಚ್ಚುಗೆ ಗಳಿಸಿದರು. ಸಿನಿಮಾ ಕೂಡ ಹಿಟ್ ಆಯ್ತು. ಆದರೆ ಆ ಸಕ್ಸಸ್ ಗೆ ಒಂದೇ ಒಂದು ಮೈನಸ್ ಪಾಯಿಂಟ್ ಆಗಿದ್ದೇನು ಅಂದ್ರೆ ಜಯಪ್ರದ ರವರಿಗೆ ಹಿಂದಿ ಬರುತ್ತಿರಲಿಲ್ಲ.

    ಹಿಂದಿ ಕಲಿತ ಜಯಪ್ರದ:

    ಹಿಂದಿ ಕಲಿತ ಜಯಪ್ರದ:

    ನಿರರ್ಗಳವಾಗಿ ಹಿಂದಿ ಮಾತನಾಡಲು ಕಲಿತ ಮೇಲೆ ನಿರ್ದೇಶಕ ಕೆ.ವಿಶ್ವನಾಥ್ 'ಕಾಮ್ ಚೋರ್' ಚಿತ್ರದ ಮೂಲಕ ಜಯಪ್ರದ ರವರನ್ನ ಬಾಲಿವುಡ್ ನಲ್ಲಿ ರೀಲಾಂಚ್ ಮಾಡಿದರು. 'ಕಾಮ್ ಚೋರ್' ಹಿಟ್ ಆಗುತ್ತಿದ್ದಂತೆಯೇ ಬಾಲಿವುಡ್ ನಲ್ಲಿ ಜಯಪ್ರದಗೆ ಡಿಮ್ಯಾಂಡ್ ಹೆಚ್ಚಾಯ್ತು. 'ಶರಾಬಿ' ಮತ್ತು 'ಸಂಜೋಗ್' ಚಿತ್ರಗಳು ಜಯಪ್ರದಗೆ ಸಕ್ಸಸ್ ತಂದುಕೊಡ್ತು.

    ದೊಡ್ಡ ತಿರುವು ಕೊಟ್ಟ ಚಿತ್ರ:

    ದೊಡ್ಡ ತಿರುವು ಕೊಟ್ಟ ಚಿತ್ರ:

    ಕೆ.ವಿಶ್ವನಾಥ್ ನಿರ್ದೇಶನದ 'ಸಾಗರ ಸಂಗಮಮ್' ಚಿತ್ರ ಜಯಪ್ರದ ವೃತ್ತಿಬದುಕಿನಲ್ಲಿ ದೊಡ್ಡ ಮೈಲಿಗಲ್ಲು. ಈ ಚಿತ್ರದ ನಟನೆಗಾಗಿ ಜಯಪ್ರದಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತು. ಇಲ್ಲಿಂದ ಜಯಪ್ರದಗಿದ್ದ ಬೇಡಿಕೆ ಡಬಲ್ ಆಯ್ತು. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬಿಜಿಯಾಗಿದ್ದ ಜಯಪ್ರದ ರಾಜಕೀಯಕ್ಕೆ ಧುಮುಕಿದರು. 1994 ರಲ್ಲಿ ಜಯಪ್ರದ ತೆಲುಗು ದೇಸಂ ಪಾರ್ಟಿ ಸೇರಿದರು. 1996 ರಲ್ಲಿ ರಾಜ್ಯಸಭಾ ಸದಸ್ಯೆಯಾದರು. ಚಂದ್ರಬಾಬು ನಾಯ್ಡು ಜೊತೆಗಿನ ವೈಮನಸ್ಯದಿಂದಾಗಿ ಟಿ.ಡಿ.ಪಿ ಬಿಟ್ಟ ಜಯಪ್ರದ ಸಮಾಜವಾದಿ ಪಾರ್ಟಿ ಸೇರಿದರು. 2004 ರ ಚುನಾವಣೆಯಲ್ಲಿ ರಾಂಪುರ್ ಕ್ಷೇತ್ರದಿಂದ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು. ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ 2010 ರಲ್ಲಿ ಸಮಾಜವಾದಿ ಪಕ್ಷದಿಂದ ಜಯಪ್ರದರನ್ನ ಅಮಾನತು ಮಾಡಲಾಯಿತು. ಸದ್ಯ ನಟಿ ಜಯಪ್ರದ ಬಿ.ಜೆ.ಪಿ ಪಕ್ಷದಲ್ಲಿದ್ದಾರೆ. ರಾಜಕೀಯದ ಜಂಜಾಟದ ನಡುವೆ ಮಲಯಾಳಂನ 'ಪ್ರಣಯಂ', ಕನ್ನಡದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸೇರಿದಂತೆ ಕೆಲ ಚಿತ್ರಗಳಲ್ಲಿ ಜಯಪ್ರದ ನಟಿಸಿದರು. 30 ವರ್ಷಗಳ ವೃತ್ತಿ ಜೀವನದಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಜಯಪ್ರದ, ಚೆನ್ನೈನಲ್ಲಿ 'ಜಯಪ್ರದ' ಥಿಯೇಟರ್ ಗೆ ಮಾಲೀಕರಾಗಿದ್ದಾರೆ.

    ಕಿರುತೆರೆಯಲ್ಲಿ ಜಯಪ್ರದ

    ಕಿರುತೆರೆಯಲ್ಲಿ ಜಯಪ್ರದ

    'ಜಯಪ್ರದಂ' ಎಂಬ ಟಿವಿ ಶೋ ಮೂಲಕ ಜಯಪ್ರದ ಕಿರುತೆರೆಗೆ ಕಾಲಿಟ್ಟರು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಚಿರಂಜೀವಿ, ಕೆ.ವಿಶ್ವನಾಥ್, ರಾಮ್ ಗೋಪಾಲ್ ವರ್ಮಾ ಮುಂತಾದವರನ್ನು ಜಯಪ್ರದ ಸಂದರ್ಶನ ಮಾಡಿದ್ದರು. ಈ ಶೋ ಬಹು ಜನಪ್ರಿಯತೆ ಪಡೆಯಿತು. ಇನ್ನೂ 'ಪರ್ಫೆಕ್ಟ್ ಪತಿ' ಧಾರಾವಾಹಿಯಲ್ಲೂ ಜಯಪ್ರದ ನಟಿಸಿದ್ದರು.

    ವೈವಾಹಿಕ ಜೀವನ:

    ವೈವಾಹಿಕ ಜೀವನ:

    1986 ರಲ್ಲಿ ನಿರ್ಮಾಪಕ ಶ್ರೀಕಾಂತ್ ನಹತಾ ಎಂಬುವರನ್ನ ಜಯಪ್ರದ ಮದುವೆಯಾದರು. ಅದಾಗಲೇ ಶ್ರೀಕಾಂತ್ ನಹತಾಗೆ ಚಂದ್ರ ಎಂಬುವರ ಜೊತೆಗೆ ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಜಯಪ್ರದರನ್ನ ಮದುವೆಯಾದ ಕಾರಣ ಶ್ರೀಕಾಂತ್ ನಹತಾ ವಿವಾದದ ಸುಳಿಯಲ್ಲಿ ಸಿಲುಕಿದರು. ಜಯಪ್ರದ ಮತ್ತು ಶ್ರೀಕಾಂತ್ ನಹತಾ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಸಹೋದರಿಯ ಪುತ್ರನನ್ನ ಜಯಪ್ರದ ದತ್ತು ಪಡೆದಿದ್ದಾರೆ. ನಟನೆ ಜತೆಗೆ ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದ ಕೆಲವೇ ನಟಿಯರ ಪಟ್ಟಿಯಲ್ಲಿ ಜಯಪ್ರದ ಪ್ರಮುಖರು. ಹಲವು ತಿರುವುಗಳನ್ನು ಒಳಗೊಂಡ ಆಕೆಯ ಬದುಕಿನ ಹೆಜ್ಜೆಗಳು ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿಯಲಿವೆ ಎಂಬುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.

    English summary
    Jayaprada is an Indian Actress who worked in Hindi, Tamil, Telugu, Malayalam and Kannada Films. Have a look at Jayapradha's profile.
    Tuesday, November 12, 2019, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X