06 ಬ್ಲಾಕ್ ಬಸ್ಟರ್, 03 ಸೂಪರ್ ಹಿಟ್ ; ಬಾಲಿವುಡ್ ದೀಪಾವಳಿ..!
ಹಬ್ಬ ಹರಿದಿನ ಬಂದರೆ ಸಾಕು ಬಣ್ಣದ ಪ್ರಪಂಚ ಝಗಮಗಿಸುತ್ತೆ. ಅದರಲ್ಲಿಯೂ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರಸಂತೆ ರಂಗೇರುತ್ತೆ. ದೊಡ್ಡ ದೊಡ್ಡ ಚಿತ್ರಗಳಿಂದ ಚಿತ್ರಮಂದಿರ ತುಂಬಿ ತುಳುಕುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕ ಬಾಲಿವುಡ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಬಹುತೇಕ ಚಿತ್ರಗಳು ಗೆದ್ದಿವೆ. ಆ ಪೈಕಿ ಆರು ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿ ಹೊರ ಹೊಮ್ಮಿವೆ.
ಬ್ಲಾಕ್ ಬಸ್ಟರ್ ಚಿತ್ರಗಳು
1998ರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶಾರುಖ್ ಖಾನ್-ಕಾಜೋಲ್ ಮತ್ತು ರಾಣಿ ಮುಖರ್ಜಿ ಅಭಿನಯದ ಕುಚ್ ಕುಚ್ ಹೋತಾ ಗೈ ಚಿತ್ರ ಬಿಡುಗಡೆಯಾಗಿತ್ತು. ಪ್ರೇಕ್ಷಕರ ಹೃದಯವನ್ನು ಗೆಲ್ಲುವುದರ ಜೊತೆಯಲ್ಲಿ ಈ ಚಿತ್ರ ಆ ಕಾಲಕ್ಕೆ ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯನ್ನು ಸುರಿಸಿತ್ತು. ಕರಣ್ ಜೋಹರ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

1999ರಲ್ಲಿ ಸಲ್ಮಾನ್ ಖಾನ್ ಅಭಿನಯದ ಹಮ್ ಸಾಥ್ ಸಾಥ್ ಹೈ ಚಿತ್ರ ತೆರೆಗೆ ಬಂದಿತ್ತು. ಸಲ್ಮಾನ್ ಜೊತೆ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ಕರಿಶ್ಮಾ ಕಪೂರ್, ನೀಲಂ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿತ್ತು. ಸೂರಜ್ ಬರ್ಜಾತ್ಯ ನಿರ್ದೇಶನದ ಕುಟುಂಬ ಸಮೇತ ನೋಡುವಂತಹ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಭರ್ಜರಿ ಕಮಾಯಿ ಮಾಡಿತ್ತು.
ಶಾರುಖ್ ಖಾನ್ ಪಾಲಿಗೆ 2000ನೇ ಇಸ್ವಿಯಲ್ಲಿ ದೀಪಾವಳಿ ಮತ್ತೊಮ್ಮೆ ಲಕ್ಕಿ ಎಂದು ಸಾಬೀತಾಯ್ತು. ಮೊಹಬ್ಬತೇ ಚಿತ್ರ ಯುವ ಸಮೂಹವನ್ನು ಹುಚ್ಚೆಬ್ಬಿಸಿತ್ತು. ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಜನಪ್ರಿಯ. ಅಮಿತಾಭ್ ಬಚ್ಚನ್-ಐಶ್ವರ್ಯ ರೈ ಚಿತ್ರದಲ್ಲಿ ತಂದೆ-ಮಗಳ ಪಾತ್ರವನ್ನು ನಿರ್ವಹಿಸಿದ್ದರು. ಜಿಮ್ಮಿ ಶೆರ್ಗಿಲ್, ಉದಯ್ ಚೋಪ್ರಾ, ಪ್ರೀತಿ ಜಿಂಗಾನಿಯಾ, ಶಮಿತಾ ಶೆಟ್ಟಿ ಈ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು.
ಇನ್ನೂ ಮೊಹಬ್ಬತೇ ಚಿತ್ರದ ಎದುರು ಬಿಡುಗಡೆಯಾದ ಹೃತಿಕ್ ರೋಷನ್-ಸಂಜಯ್ ದತ್ ಅಭಿನಯದ ಮಿಷನ್ ಕಾಶ್ಮೀರ್ ಚಿತ್ರಕ್ಕೂ ಕೂಡ ಪ್ರೇಕ್ಷಕರು ಬಹುಪರಾಕ್ ಹಾಕಿದರು. ಮೊಹಬ್ಬತೇ ಚಿತ್ರದ ಅಲೆಯ ನಡುವೆಯೂ ಚಿತ್ರಮಂದಿರದಲ್ಲಿ ಸ್ಥಾನ ಭದ್ರ ಮಾಡಿಕೊಂಡ ಮಿಷನ್ ಕಾಶ್ಮೀರ್ ಚಿತ್ರ ಹೃತಿಕ್ ರೋಷನ್‌ಗೆ ಬೇಕಿದ್ದ ಅತ್ಯವಶ್ಯಕ ಗೆಲುವುನ್ನು ತಂದು ಕೊಟ್ಟಿತ್ತು. ಪ್ರೀತಿ ಜಿಂಟಾ ಈ ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು.
2004ರಲ್ಲಿ ಶಾರುಖ್ ಖಾನ್ , ಪ್ರೀತಿ ಜಿಂಟಾ, ರಾಣಿ ಮುಖರ್ಜಿ ಅಭಿನಯದ ವೀರ್ ಜಾರಾ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರ ಹೊಮ್ಮಿತು. 2010ರಲ್ಲಿ ರೊಹೀತ್ ಶೆಟ್ಟಿ ನಿರ್ದೇಶನದ ಅಜಯ್ ದೇವಗನ್ ಅಭಿನಯದ ಗೋಲ್‌ಮಾಲ್ 3 ಕೂಡ ಬಾಲಿವುಡ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆಯುವಲ್ಲಿ ಯಶಸ್ವಿ ಆಯಿತು.
ಸೂಪರ್ ಹಿಟ್ ಚಿತ್ರಗಳು
1997ರಲ್ಲಿ ದಿಲ್ ತೋ ಪಾಗಲ್ ಹೈ ಚಿತ್ರ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬಂದಿತ್ತು. ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಕರಿಶ್ಮಾ ಕಪೂರ್ ಮತ್ತು ಅಕ್ಷಯ್ ಕುಮಾರ್‌ಗೆ ಗೆಲುವನ್ನು ತಂದು ಕೊಟ್ಟಿತ್ತು. ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಸ್ಥಾನ ಅಲಂಕರಿಸಿತ್ತು. 2007ರಲ್ಲಿ ತೆರೆಗೆ ಬಂದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಓಂ ಶಾಂತಿ ಓಂ ಚಿತ್ರ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ವಿಜಯದ ಬಾವುಟ ಹಾರಿಸಿತ್ತು. ದೀಪಿಕಾ ಪಡುಕೋಣೆ ಅಭಿನಯದ ಮೊದಲ ಹಿಂದಿ ಚಿತ್ರ ಇದು ಅನ್ನುವುದು ವಿಶೇಷ. ಇನ್ನೂ 2017ರಲ್ಲಿ ತೆರೆಗೆ ಬಂದ ರೊಹೀತ್ ಶೆಟ್ಟಿ ನಿರ್ದೇಶನದ ಅಜಯ್ ದೇವಗನ್ ಅಭಿನಯದ ಗೋಲ್‌ಮಾಲ್ 2 ಕೂಡ ಗೆದ್ದು ಬೀಗಿತ್ತು.


Click it and Unblock the Notifications











