ಕಿಚ್ಚ, ದಾದಾ ಮಾತ್ರವಲ್ಲ, ರಾಜ್ಯ ಪ್ರಶಸ್ತಿ ನಿರಾಕರಿಸಿದ್ದ ಮತ್ತಿಬ್ಬರು ಯಾರು?
ಇತ್ತೀಚೆಗೆ 2019ನೇ ಸಾಲಿನ ಕನ್ನಡ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆ ಆಗಿತ್ತು. 'ಪೈಲ್ವಾನ್' ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಆದರೆ ಆ ಪ್ರಶಸ್ತಿಯನ್ನು ಸುದೀಪ್ ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ಸಹ ಪ್ರಶಸ್ತಿ ಬೇಡ ಎಂದಿದ್ದರು. ಅದನ್ನು ನಿರ್ದೇಶಕ ಎಸ್. ನಾರಾಯನ್ ಮೆಲುಕು ಹಾಕಿದ್ದರು.
ಪ್ರತಿ ಬಾರಿ ಯಾವುದೇ ಪ್ರಶಸ್ತಿಗಳು ಘೋಷಣೆ ಆದಾಗ ಸಣ್ಣಪುಟ್ಟ ಅಸಮಾಧಾನ ಇದ್ದೇ ಇರುತ್ತದೆ. ಕೆಲವೊಮ್ಮೆ ಕೆಲವರು ಬಹಿರಂಗವಾಗಿಯೇ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ನಟ ಸುದೀಪ್ ಯಾಕೆ ರಾಜ್ಯ ಪ್ರಶಸ್ತಿ ಬೇಡ ಎಂದರು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಹಿಂದೆ ಎರಡು ಬಾರಿ ಅವರಿಗೆ ಪ್ರಶಸ್ತಿ ಬಂದಿದೆ ಎಂದು ಹೇಳಿ ಬಳಿಕ ಬೇರೆಯವರಿಗೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

'ವೀರಪ್ಪ ನಾಯ್ಕ' ಚಿತ್ರದ ನಟನೆಗಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಅದೇ ವರ್ಷ 'ಹೂಮಳೆ' ಚಿತ್ರದ ನಟನೆಗಾಗಿ ರಮೇಶ್ ಅರವಿಂದ್ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಲಾಗಿತ್ತು. ಅಂದರೆ ಇಬ್ಬರಿಗೆ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಇದು ಸಹಜವಾಗಿಯೇ ದಾದಾಗೆ ಬೇಸರ ತಂದಿದೆ. ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ಮುರಿದು ಕೊಡಲು ಅದು ಕಡ್ಲೆ ಮಿಠಾಯಿ ಅಲ್ಲ ಎಂದು ಹೇಳಿದ್ದರು ಎಂದು ಎಸ್. ನಾರಾಯಣ್ ನೆನಪು ಮಾಡಿಕೊಂಡಿದ್ದರು.
ಒಮ್ಮೆ ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ಘೋಷಿಸಿದ ಬಳಿಕ ಮುಗೀತು. ವಿಜೇತರು ಪ್ರಶಸ್ತಿ ನಿರಾಕರಿಸಿದರೂ ಅದು ಅವರ ಹೆಸರಿನಲ್ಲೇ ದಾಖಲಾಗಿರುತ್ತದೆ. ವಿಷ್ಣುವರ್ಧನ್ ಒಟ್ಟು 7 ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಡಾ. ರಾಜ್‌ಕುಮಾರ್ 9 ಬಾರಿ ಪ್ರಶಸ್ತಿ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಬಿ. ಆರ್ ಪಂತುಲು ಹಾಗೂ ನಟ ಜಗ್ಗೇಶ್ ಸಹ ರಾಜ್ಯ ಪ್ರಶಸ್ತಿ ನಿರಾಕರಿಸಿದ್ದರು.

ಬಿ. ಆರ್ ಪಂತಲು ನಿರ್ದೇಶನದ 'ಶ್ರೀಕೃಷ್ಣ ದೇವರಾಯ' ಸಿನಿಮಾ 1970ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿತ್ತು. ಕೃಷ್ಣದೇವರಾಯನ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಚಿನ್ನಾದೇವಿ ಆಗಿ ಭಾರತಿ ನಟಿಸಿದ್ದರು. ನಿರ್ದೇಶನದ ಜೊತೆಗೆ ಮಹಾಮಂತ್ರಿ ತಿಮ್ಮರಸು ಪಾತ್ರದಲ್ಲಿ ಬಿ. ಆರ್ ಪಂತಲು ಬಣ್ಣ ಹಚ್ಚಿದ್ದರು. ಆ ವರ್ಷ ಅತ್ಯುತ್ತಮ ನಟ ಪ್ರಶಸ್ತಿಗೆ ಬಿ. ಆರ್ ಪಂತಲು ಪಾತ್ರರಾಗಿದ್ದರು. ಭಾರತಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.
'ಶ್ರೀಕೃಷ್ಣ ದೇವರಾಯ' ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದು ಡಾ. ರಾಜ್‌ಕುಮಾರ್. ಆದರೆ ಪೋಷಕ ಪಾತ್ರದಲ್ಲಿ ನಟಿಸಿದ್ದ ಬಿ. ಆರ್ ಪಂತಲು ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಲಾಗಿತ್ತು. ಈ ಬಗ್ಗೆ ಸ್ವತಃ ಬಿ. ಆರ್ ಪಂತಲು ಬೇಸರ ವ್ಯಕ್ತಪಡಿಸಿದ್ದರಂತೆ. ನಾನು ಮಾಡಿರೋದು ಪೋಷಕ ಪಾತ್ರ. ನನಗೆ ಯಾಕೆ ಅತ್ಯುತ್ತಮ ನಟ ಪ್ರಶಸ್ತಿ ಎಂದು ಕೇಳಿದ್ದರಂತೆ. ಪ್ರಶಸ್ತಿ ಪಡೆಯಲು ನಿರಾಕರಿಸಿದ್ದರು. ಆದರೂ ಇವತ್ತಿಗೂ ಆ ಪ್ರಶಸ್ತಿ ಅವರ ಹೆಸರಿನಲ್ಲೇ ಇದೆ.
'ಮಠ' ಚಿತ್ರದ ನಟನೆಗಾಗಿ ಜಗ್ಗೇಶ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಘೋಷಿಸಲಾಗಿತ್ತು. ಈ ಬಗ್ಗೆ ಸ್ವತಃ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದರೂ ಪೋಷಕ ನಟ ಪ್ರಶಸ್ತಿ ವಿಭಾಗದಲ್ಲಿ ಗುರ್ತಿಸಿದ್ದಕ್ಕೆ ನವರಸ ನಾಯಕ ಅಸಮಾಧಾನ ತೋರ್ಪಡಿಸಿದ್ದರು. ಆ ವರ್ಷ 'ಜೋಗಿ' ಚಿತ್ರದ ನಟನೆಗಾಗಿ ಶಿವರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.


Click it and Unblock the Notifications











