ಈ Ghibli ಚಿತ್ರಗಳನ್ನು ನೋಡಿ ಯಾವ ಕನ್ನಡ ಸಿನಿಮಾ ದೃಶ್ಯ ಎಂದು ಗೆಸ್ ಮಾಡ್ತಿರಾ?
ಸೋಶಿಯಲ್ ಮೀಡಿಯಾದಲ್ಲಿ ಈಗ ಘಿಬ್ಲಿ ಶೈಲಿಯ ಎಐ ಚಿತ್ರಗಳ ದರ್ಬಾರ್ ಜೋರಾಗಿದೆ. ಜನ ತಮ್ಮ ಫೋಟೊಗಳನ್ನು ಸುಂದರವಾಗಿ ಅಷ್ಟೇ ಸೊಗಸಾದ ಭಾವ ಹೊಮ್ಮಿಸುವ ಆನಿಮೇಷನ್ ರೂಪ ಕೊಟ್ಟು ಖುಷಿಪಡುತ್ತಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ತುಂಬೆಲ್ಲಾ ಈಗ ಘಿಬ್ಲಿ ಶೈಲಿಯ ಎಐ ಚಿತ್ರಗಳೇ ವೈರಲ್ ಆಗುತ್ತಿದೆ. ಖ್ಯಾತ ಸಿನಿಮಾ ತಾರೆಯರು ಕೂಡ ಈ ಟ್ರೆಂಡ್‌ಗೆ ಮಾರು ಹೋಗಿದ್ದಾರೆ.
ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ಕಿಚ್ಚ ಸುದೀಪ್ ಕೂಡ ತಮ್ಮ ಘಿಬ್ಲಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ. ಘಿಬ್ಲಿ ಶೈಲಿಯ ಫೋಟೋ ಟ್ರೆಂಡ್ ನಡುವೆ ಗೌಪ್ಯತೆ ಅಪಾಯಗಳ ಬಗ್ಗೆ ಸೈಬರ್ ಕ್ರೈಮ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದರೂ ಜನ ಕೇಳುತ್ತಿಲ್ಲ. ಚಾಟ್‌ಜಿಪಿಟಿ, 'X' ಜಾಲತಾಣದ ಗ್ರಾಕ್ ಸೇರಿದಂತೆ ಕೆಲ ಚಾಟ್‌ಬಾಟ್‌ಗಳಲ್ಲಿ ನೀವು ಘಿಬ್ಲಿ ಶೈಲಿಯ ಫೋಟೊ ಪಡೆಯಬಹುದಾಗಿದೆ. ಘಿಬ್ಲಿ ಸ್ಟೈಲ್ ಇಮೇಜ್ ಬೇಕು ಎಂದು ಪ್ರಾಂಪ್ಟ್ ಟೈಪ್ ಮಾಡಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಫೋಟೊ ಘಿಬ್ಲಿ ಸ್ಟೈಲ್‌ಗೆ ಪರಿವರ್ತನೆ ಆಗುತ್ತದೆ.

ಸೂಪರ್ ಹಿಟ್ ಸಿನಿಮಾ ಚಿತ್ರಗಳು, ಪೋಸ್ಟರ್‌ಗಳು ಕೂಡ ಚೆಂದವಾದ ಘಿಬ್ಲಿ ಆನಿಮೇಷನ್ ರೂಪ ಪಡೆದು ಗಮನ ಎಳೆಯುತ್ತಿವೆ. ಸದ್ಯ ಈ ನಾಲ್ಕು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡ್ತಿದೆ. ಟ್ವಿಟ್ಟರ್‌ನಲ್ಲಿ ಪರಮ್ ಎಂಬುವವರು ಈ ಘಿಬ್ಲಿ ಫೋಟೊಗಳನ್ನು ಪೋಸ್ಟ್ ಮಾಡಿ ಯಾವ ಸಿನಿಮಾ ದೃಶ್ಯಗಳು ಎಂದು ಗೆಸ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಬಹಳ ಇಂಟ್ರೆಸ್ಟಿಂಗ್ ಎನಿಸುವ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಯಾವ ಐಕಾನಿಕ್ ಸಿನಿಮಾಗಳ ದೃಶ್ಯ ಎಂದು ಕೆಲವರು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಎಲ್ಲವೂ ಊಟ ಮಾಡುವಂತಹ ಸನ್ನಿವೇಶಗಳು. ಒಂದು ಫೋಟೊವನ್ನು ಬಹಳ ಬೇಗ ಗೆಸ್ ಮಾಡಿಬಿಡಬಹುದಾಗಿದೆ. ಅದಕ್ಕೆ ಕಾರಣ ಆ ಸನ್ನಿವೇಶ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಅಷ್ಟರಮಟ್ಟಿಗೆ ಉಳಿದುಬಿಟ್ಟಿದೆ. 'ಭೂತಯ್ಯನ ಮಗ ಅಯ್ಯು' ಚಿತ್ರದ ಹೋಟೆಲ್ ಫುಲ್ ಮೀಲ್ಸ್ ಸನ್ನಿವೇಶ ಅದು.

ಸಿದ್ದಲಿಂಗಯ್ಯ ನಿರ್ದೇಶನದ 'ಭೂತಯ್ಯನ ಮಗ ಅಯ್ಯು' ಕನ್ನಡ ಚಿತ್ರರಂಗ ಎವರ್‌ಗ್ರೀನ್ ಸಿನಿಮಾ. ವಿಷ್ಣುವರ್ಧನ್, ಲೋಕೇಶ್, ಎಂ.ಪಿ ಶಂಕರ್ ನಿರ್ದೇಶನದ ಸಿನಿಮಾ 50 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ದಿನೇಶ್, ಧೀರೇಂದ್ರ ಗೋಪಾಲ್ ಮತ್ತಿಬ್ಬರು ಸೇರಿ ಬೆಂಗಳೂರಿನ ಹೋಟೆಲ್‌ನಲ್ಲಿ 2 ರೂಪಾಯಿ ಕೊಟ್ಟು ಫುಲ್ ಮೀಲ್ಸ್ ತಿಂದು ತೇಗುತ್ತಾರೆ.
ಫುಲ್ ಮೀಲ್ಸ್ ಅಂದ್ರೆ ಒಬ್ಬರಿಗೆ ಮಾತ್ರ. ಆದರೆ 4 ಜನ ಮುಸುಕು ಹಾಕಿಕೊಂಡು ಒಬ್ಬರ ಬಳಿಕ ಒಬ್ಬರು ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಹೋಟೆಲ್ ಸರ್ವರ್ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ ನಟಿಸಿದ್ದರು. 4 ಜನ ಊಟ ಮಾಡಿದ್ದು ಸಾಲದೇ ಅನ್ನ ಖಾಲಿ ಆಯ್ತಾ ಎಂದು ಹಣ ವಾಪಸ್ ಪಡೆದು ಹೋಗುವ ಸನ್ನಿವೇಶ ಪ್ರೇಕ್ಷಕರನ್ನು ರಂಜಿಸಿತ್ತು.
'ಶ್ರೀಕೃಷ್ಣ ದೇವರಾಯ' ಚಿತ್ರದಲ್ಲಿ ತೆನಾಲಿ ರಾಮಕೃಷ್ಣ(ನರಸಿಂಹರಾಜು) ಮೂವರು ಜೋಯಿಸರಿಗೆ ಊಟ ಹಾಕಿ ಬಳಿಕ ಬರೆ ಹಾಕಲು ಮುಂದಾಗುವ ಸನ್ನಿವೇಶ ಅದು. ತೆನಾಲಿ ತಮ್ಮ ಜಾಣತನದಿಂದ ಹೇಗೆ ಆ ಮೂವರಿಗೆ ಬುದ್ದಿ ಕಲಿಸುತ್ತಾನೆ ಎನ್ನುವುದು ಕೂಡ ಬಹಳ ಮಜವಾಗಿತ್ತು.
'ಸೊಸೆ ತಂದ ಸೌಭಾಗ್ಯ' ಚಿತ್ರದಲ್ಲಿ ದ್ವಾರಕೀಶ್ ಹೋಟೆಲ್‌ನಲ್ಲಿ ಊಟ ಮಾಡುವ ಕಾಮಿಡಿ ದೃಶ್ಯವೊಂದಿದೆ. ಊಟ ಮಾಡೋಕೆ ದುಡ್ಡು ಇಲ್ಲದೇ ಇದ್ದರೂ ಹೋಟೆಲ್‌ನಲ್ಲಿ ದತ್ತು(ದ್ವಾರಕೀಶ್) ಹಿಂದು ಮುಂದು ಗೊತ್ತಿಲ್ಲದ ಕರಿಗೌಡ(ವಜ್ರಮುನಿ)ನನ್ನು ಪರಚಯಸ್ಥನಂತೆ ಮಾತನಾಡಿಸಿ ಊಟ ಆರ್ಡರ್ ಮಾಡಿ ತಿಂದು ತೇಗುತ್ತಾನೆ. ಕೊನೆಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ದತ್ತು ಯಾಮಾರಿಸಿ ತಪ್ಪಿಸಿಕೊಳ್ಳುತ್ತಾನೆ. ಈ ದೃಶ್ಯವೂ ಸೂಪರ್ ಹಿಟ್ ಆಗಿತ್ತು.
ಈ ಮೂರು ದೃಶ್ಯಗಳಿಗಿಂತ ಮಜವಾದದ್ದು 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಅಣ್ಣಾವ್ರು ಹೋಟೆಲ್‌ನಲ್ಲಿ ಊಟ ಮಾಡುವುದು. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮುತ್ತಣ್ಣ ಹೋಟೆಲ್‌ಗೆ ಹೋಗಿ ಧರ್ಮದ ಛತ್ರ ಎಂದು ತಿಳಿದು ಚೆನ್ನಾಗಿ ಊಟ ಮಾಡುತ್ತಾನೆ. ಕೊನೆಗೆ ಬಿಲ್ ಕೊಡೋಕೆ ಹಣವಿಲ್ಲದೇ ಹಿಟ್ಟು ರುಬ್ಬೋಕೆ ಹೋಗುವ ಸನ್ನಿವೇಶ ಅದು.


Click it and Unblock the Notifications











