ಶಿವಣ್ಣ ಪತ್ನಿಯನ್ನು ಪ್ರೀತಿಯಿಂದ ಏನೆಂದು ಕರೀತಾರೆ? ಫೋನ್‌ನಲ್ಲಿ ಏನೆಂದು ಹೆಸರು ಸೇವ್ ಮಾಡಿದ್ದಾರೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೆಂಗೊಲನ್ ಎನ್ನುವ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ. 'ಜೈಲರ್' ಬಳಿಕ ಮತ್ತೊಮ್ಮೆ ಶಿವಣ್ಣನ ನಟನೆಗೆ ತಮಿಳು ಪ್ರೇಕ್ಷಕರು ಫಿದಾ ಆಗಿದ್ದಾರೆ.
ಅರುಣ್ ಮತೇಶ್ವರನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಧನುಷ್ ಹೀರೊ ಆಗಿ ಮಿಂಚಿದ್ದಾರೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಸಿನಿಮಾ ಸದ್ಯ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಚೆನ್ನೈನಲ್ಲಿ ಹುಟ್ಟಿಬೆಳೆದ ಶಿವಣ್ಣ ಚೆನ್ನಾಗಿ ತಮಿಳು ಸಹ ಮಾತನಾಡಬಲ್ಲರು. 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಹೊಸ್ತಿಲಲ್ಲಿ ಸಾಕಷ್ಟು ತಮಿಳು ಸಂದರ್ಶನಗಳಲ್ಲಿ ಭಾಗವಹಿಸಿದ್ದರು.

ಸಂದರ್ಶನಗಳಲ್ಲಿ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. ಚೆನ್ನೈನಲ್ಲಿ ಓದಿ ಬೆಳೆದಿದ್ದು ಸೇರಿದಂತೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಚಿಕ್ಕಂದಿನಿಂದಲೂ ನಾನು ಸಿಕ್ಕಾಪಟ್ಟೆ ನಾಟಿ ಎಂದು ಸೆಂಚುರಿ ಸ್ಟಾರ್ ಹೇಳಿಕೊಂಡಿದ್ದಾರೆ. ಸದಾ ಹುಡುಗರ ಗ್ಯಾಂಗ್‌ನಲ್ಲಿ ಇರುತ್ತಿದ್ದೆ. ಹಾಗಾಗಿ ಲವ್ವು ಗಿವ್ವು ಯಾವುದು ಇರಲಿಲ್ಲ. ಯಾವುದೇ ಲವ್ ಲೆಟರ್ ಸಹ ಬರೆದಿಲ್ಲ ಎಂದಿದ್ದಾರೆ.
"ನಾನು ರೊಮ್ಯಾಂಟಿಕ್ ವ್ಯಕ್ತಿ. ಆದರೆ ಲವ್ ಲೆಟರ್ ಎಲ್ಲಾ ಬರೆದಿಲ್ಲ. ಲವ್ ಲೆಟರ್ ಬರೆದರೆ ಮಾತ್ರ ರೊಮ್ಯಾಂಟಿಕ್ ಅಂತ ಅರ್ಥನಾ? ಎಂದಿದ್ದಾರೆ. ಪತ್ನಿ ಜೊತೆ ಹೇಗೆ ರೊಮ್ಯಾಂಟಿಕ್ ಆಗಿ ಇರ್ತೀರಾ? ಎನ್ನುವ ಪ್ರಶ್ನೆಗೆ "ನಾನು ಆಕೆಯನ್ನು 'ಡಡ' ಎಂದು ಕರೆಯುತ್ತೇನೆ. ಈಗ ಅಲ್ಲ. ಹಲವು ವರ್ಷಗಳಿಂದ ಅದೇ ರೀತಿ ಕರೆಯುತ್ತಿದ್ದೇನೆ. ತಮಿಳಿನಲ್ಲೇ ಅದೇ 'ಡಡ' ಹೆಸರಿನಲ್ಲಿ ಒಂದು ಸಿನಿಮಾ ಕೂಡ ಬಂತು. ಕೆವಿನ್ ನಟಿಸಿದ್ದರು. ಅವರಿಗೆ ಕರೆ ಮಾಡಿ ಮಾತನಾಡಿದ್ದೆ" ಎಂದು ಶಿವಣ್ಣ ಹೇಳಿದ್ದಾರೆ.
"ನಾನು ನನ್ನ ಫೋನ್‌ನಲ್ಲಿ ಆಕೆಯ ಹೆಸರನ್ನು 'ಡಡ' ಎಂದೇ ಸೇವ್ ಮಾಡಿಕೊಂಡಿದ್ದೇನೆ ಎಂದು ಫೋನ್ ತೆಗೆದು ತೋರಿಸಿದ್ದಾರೆ. ಆಕೆ ಕೂಡ ನನ್ನ ಹೆಸರನ್ನು 'ಡಡ' ಎಂದೇ ಸೇವ್ ಮಾಡಿಕೊಂಡಿದ್ದಾರೆ" ಎಂದು ಶಿವಣ್ಣ ವಿವರಿಸಿದ್ದಾರೆ. ಇನ್ನು ನಿಮ್ಮದೇ ಜೀವನ ಕಥೆಯನ್ನು ಸಿನಿಮಾ ಮಾಡಿದರೆ ಅದಕ್ಕೆ ಏನು ಟೈಟಲ್ ಇಡುತ್ತೀರಾ? ಎನ್ನುವ ಪ್ರಶ್ನೆಗೆ ನಾನು ಬಹಳ ನಾಟಿ, ಹಾಗಾಗಿ ನಾಟಿ ಎಂದೇ ಟೈಟಲ್ ಇಡುತ್ತೇನೆ ಎಂದು ಹ್ಯಾಟ್ರಿಕ್ ಹೀರೊ ಹೇಳಿದ್ದಾರೆ.
ತಮಿಳಿನ 'ವಿಶ್ವಾಸಂ' ಚಿತ್ರವನ್ನು ರೀಮೆಕ್ ಮಾಡುವ ಆಸೆಯನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ. ಅಜಿತ್ ನಟನೆಯ ಆ ಸಿನಿಮಾ ಬಹಳ ಇಷ್ಟ ಎಂದಿರುವ ಶಿವಣ್ಣ ಫ್ಯಾಮಿಲಿಗೆ ಬಹಳ ಸಮಯ ಕೊಡ್ತೀನಿ. ಎಷ್ಟೇ ಸಿನಿಮಾ, ಕೆಲಸ ಇದ್ದರೂ ಮನೆಯವರಿಗೆ ಸಮಯ ಕೊಡಬೇಕು. ಯಾಕಂದರೆ ಅವರು ಮನೆಯಲ್ಲಿ ಇರುತ್ತಾರೆ. ನಾನು ಮೊದಲಿನಿಂದಲೂ ಫ್ಯಾಮಿಲಿಗೆ ಸಮಯ ಕೊಡುವುದನ್ನು ರೂಢಿಸಿಕೊಂಡಿದ್ದೇನೆ. ಪ್ರತಿವರ್ಷ ಮಡದಿ ಮಕ್ಕಳ ಜೊತೆಗೆ ಪ್ರವಾಸ ಕೈಗೊಳ್ಳುತ್ತೇನೆ" ಎಂದಿದ್ದಾರೆ.

"ಕೆಲಸ ಮುಗಿಸಿ ಮನೆಗೆ ಬಂದ ಕೂಡಲೇ ಪತ್ನಿ ಜೊತೆ ಕಾರ್‌ನಲ್ಲಿ ಒಂದು ಗಂಟೆ ಹೊರಗೆ ಸುತ್ತಾಡಲು ಹೋಗುತ್ತೇನೆ. ಆ ಸಮಯದಲ್ಲೇ ನಾವಿಬ್ಬರು ಏನಿದ್ದರು ಮಾತನಾಡುತ್ತೇವೆ. ಮಕ್ಕಳ ಮುಂದೆ ಮಾತನಾಡಲ್ಲ. ಏನಾದರೂ ಬೇಕು ಅಂದ್ರೆ ರಸ್ತೆ ಬದಿ ಕಾರು ನಿಲ್ಲಿಸಿ ತಿನ್ನುತ್ತೇವೆ. ಮನೆಯಲ್ಲಿ ಜೊತೆಗೆ ಕೂತು ಟಿವಿ ನೋಡುತ್ತೇವೆ. ನಾನು 11 ಗಂಟೆಗೆಲ್ಲಾ ಟಿವಿ ನೋಡುವುದು ಮುಗಿಸಿ ರೂಮ್‌ಗೆ ಹೋಗಬೇಕು. ಇಲ್ಲ ಅಂದ್ರೆ ಬಾಗಿಲು ತೆಗೆಯಲ್ಲ ಎಂದು ಗೀತಾ ಹೇಳುತ್ತಾಳೆ. ಈ ವಿಚಾರಕ್ಕೆ ಸಣ್ಣ ಗಲಾಟೆ ನಡೆಯುತ್ತಿರುತ್ತದೆ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











