2023 ರೌಂಡಪ್: ಈ ವರ್ಷ ಡಿವೋರ್ಸ್ ಪಡೆದು ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ತಾರೆಯರು
ನೋಡ್ತಾ ನೋಡ್ತಾ ಒಂದು ವರ್ಷ ಕಳೆದೇ ಹೋಯ್ತು. 2023ಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಹತ್ತಿರವಾಗುತ್ತಿದೆ. ಈ ವರ್ಷ ಭಾರತೀಯ ಚಿತ್ರರಂಗ ಸಾಕಷ್ಟು ಏಳು ಬೀಲು ಕಂಡಿದೆ. ಕನ್ನಡ ಚಿತ್ರರಂಗದಲ್ಲಿ ಗೆಲುವಿಗಿಂತ ಸೋಲೇ ದೊಡ್ಡದಾಗಿದೆ.
ಅಕ್ಕಪಕ್ಕದ ಚಿತ್ರರಂಗದಲ್ಲೂ ಸಕ್ಸಸ್ ರೇಟ್‌ಗಿಂತ ಫ್ಲಾಪ್ ಸಂಖ್ಯೆ ಜಾಸ್ತಿಯಿದೆ. ಆದರೆ ಬಾಲಿವುಡ್ ಮಾತ್ರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕೊಂಚ ಚೇತರಿಸಿಕೊಂಡಿದೆ. ಇನ್ನು ತಾರೆಯರು ಕೂಡ ಈ ವರ್ಷ ಏಳುಬೀಳು ಕಂಡಿದ್ದಿದೆ. ಹೊಸ ಬಾಳಿಗೆ ಕಾಲಿಟ್ಟವರು, ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಯಿಸಿಕೊಂಡವರ ಜೊತೆಗೆ ಡಿವೋರ್ಸ್ ಪಡೆದು ದೂರಾದವರು ಇದ್ದಾರೆ.

ಕನ್ನಡ ಚಿತ್ರರಂಗ ಮಾತ್ರವಲ್ಲ ಅಕ್ಕಪಕ್ಕದ ಇಂಡಸ್ಟ್ರಿ ನಟ, ನಟಿಯರು ವರ್ಷಗಳ ತಮ್ಮ ದಾಂಪತ್ಯ ಜೀವನದಲ್ಲಿ ಈ ವರ್ಷ ಪೂರ್ಣವಿರಾಮ ಇಟ್ಟಿದ್ದಾರೆ. ಡಿವೋರ್ಸ್ ಪಡೆದು ದೂರಾಗಿದ್ದಾರೆ. ನಾನೊಂದು ತೀರ ನೀನೊಂದು ತೀರ ಎಂದು ಹಾಡುತ್ತಿದ್ದಾರೆ.
ಕಿರಿಕ್ ಕೀರ್ತಿ- ಅರ್ಪಿತಾ
ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಹಾಗೂ ಪತ್ನಿ ಅರ್ಪಿತಾ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇತ್ತು. ಇದಕ್ಕೆ ಕೆಲವೊಮ್ಮೆ ಕೀರ್ತಿ ಸ್ಪಷ್ಟನೆಯನ್ನು ಕೊಟ್ಟಿದ್ದರು. ಆಗಸ್ಟ್ ಆಗಸ್ಟ್ 18ರಂದು ತಮ್ಮ ಡಿವೋರ್ಸ್ ವಿಚಾರವನ್ನು ಘೋಷಿಸಿದ್ದರು.
ನಿನ್ನೆ (ಆಗಸ್ಟ್ 18) ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ವಿಚ್ಚೇದನದ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. "ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ" ಎಂದು ಬರೆದುಕೊಂಡಿದ್ದರು.

ನಿರೂಪಕಿ ಜಾಹ್ನವಿ
ಖಾಸಗಿ ಸುದ್ದಿ ವಾಹಿನಿ ನಿರೂಪಕಿ ಜಾಹ್ನವಿ ಕೂಡ ಇತ್ತೀಚೆಗೆ ತಮ್ಮ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಕಿರುತೆರೆಯ 'ಗಿಚ್ಚಿ ಗಿಲಿ ಗಿಲಿ' ಶೋನಲ್ಲಿ ಆಕೆ ಭಾಗವಹಿಸಿದ್ದರು. ಕಲರ್ಸ್ ಕನ್ನಡದ 'ನಮ್ಮಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದಲ್ಲೂ ಭಾಗವಹಿಸಿ ಗಮನ ಸೆಳೆದಿದ್ದರು. ಜಾಹ್ನವಿಗೆ ಒಬ್ಬ ಪುತ್ರ ಕೂಡ ಇದ್ದು ಸಿಂಗಲ್ ಪೇರೆಂಟ್ ಆಗಿರುವ ಆಕೆ ಸದ್ಯ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಗ್ಲಾಮರಸ್ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ.
ಚೈತ್ರಾ ವಾಸುದೇವನ್- ಸತ್ಯ ನಾಯ್ಡು
ನಟಿ, ನಿರೂಪಕಿ ಚೈತ್ರಾ ವಾಸುದೇವನ್ ಕೂಡ ಪತಿ ಸತ್ಯ ನಾಯ್ಡು ಅವರಿಂದ ಈ ವರ್ಷ ಡಿವೋರ್ಸ್ ಪಡೆದರು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದರು. "ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಚೈತ್ರಾ ಬರೆದುಕೊಂಡಿದ್ದರು.
ನಿಹಾರಿಕಾ- ಚೈತನ್ಯ ಜೊನ್ನಲಗಡ್ಡ
ತೆಲುಗು ನಟ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೋನಿಡೇಲ ಕೂಡ ಈ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಬಹಳ ದಿನಗಳ ಕಾಲ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಕೇಳಿಬಂದಿತ್ತು. ಕೊನೆಗೆ ನಿಹಾರಿಕಾ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. 2020 ಡಿಸೆಂಬರ್ 9ರಂದು ನಿಹಾರಿಕಾ- ಚೈತನ್ಯಾ ಡಿಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಆದರೆ 3 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾದರು. ಕಾನೂನಾತ್ಮಕವಾಗಿ ವಿಚ್ಛೇದನ ಸಿಗುತ್ತಿದ್ದಂತೆ ನಿಹಾರಿಕಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ಚೈತನ್ಯಾ ಹಾಗೂ ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾನು ನಮ್ಮ ಬದುಕಿನಲ್ಲಿ ಮುಂದೆ ಸಾಗಲು ನೀವು ನಮಗೆ ಕರುಣೆ ತೋರಿಸಿ ವರ್ತಿಸಬೇಕು. ನಮ್ಮ ಬೆಂಬಲಕ್ಕೆ ನಿಂತ ಸ್ನೇಹಿತರು, ಕುಟುಂಬಸ್ಥರಿಗೆ ಧನ್ಯವಾದ" ಎಂದು ಪೋಸ್ಟ್ ಮಾಡಿದ್ದರು.
ಹನಿಸಿಂಗ್ - ಶಾಲಿನಿ
ಬಾಲಿವುಡ್ ರ್ಯಾಪರ್ ಹನಿಸಿಂಗ್ ಹಾಗೂ ಪತ್ನಿ ಶಾಲಿನಿ ಕಳೆದ ವರ್ಷವೇ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಹನಿ ಸಿಂಗ್ ವಿರುದ್ಧ ಶಾಲಿನಿ ಗೃಹಹಿಂಸೆ ಆರೋಪ ಹೊರಿಸಿದ್ದರು. ಒಂದು ವರ್ಷ ವ್ಯಾಜ್ಯ ಕೋರ್ಟ್‌ನಲ್ಲಿತ್ತು. 13 ವರ್ಷಗಳ ಹಿಂದೆ ಮದುವೆ ಆಗಿದ್ದ ದಂಪತಿ ಈ ವರ್ಷ ದೂರಾದರು. ಹನಿ ಸಿಂಗ್ ಹಾಗೂ ಶಾಲಿನಿ ವಿಚ್ಛೇದನಕ್ಕೆ ದೆಹಲಿ ಕೌಟುಂಬಿಕ ನ್ಯಾಯಾಲಯ ಈ ವರ್ಷ ಒಪ್ಪಿ ನೀಡಿತ್ತು.


Click it and Unblock the Notifications










