ತಮಿಳು ರೊಮ್ಯಾಂಟಿಕ್ ಗೀತೆಗೆ ದರ್ಶನ್ ಡ್ಯಾನ್ಸ್ ವೈರಲ್; ಡಿಬಾಸ್ ಜೊತೆ ಹೆಜ್ಜೆ ಹಾಕಿದ ಆಕೆ ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಬರ್ತ್‌ಡೇ ಪಾರ್ಟಿ, ಆಪ್ತರ ಮದುವೆ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಫೋಟೊಗಳು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಸದ್ಯ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ.
ಕಳೆದ ತಿಂಗಳು ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಬಳಿಕ ಆಪ್ತರ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪಾರ್ಟಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್ ಹೆಜ್ಜೆಹಾಕಿದ್ದ ವೀಡಿಯೋ ಕೂಡ ಸದ್ದು ಮಾಡಿತ್ತು.

ಅದೇ ಪಾರ್ಟಿಯಲ್ಲಿ ನಟ ದರ್ಶನ್ ಜೊತೆ ಜಾಜಿ ರಾಜು ಎಂಬುವವರು ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮಿಳಿನ 'ತೇರಿ' ಚಿತ್ರದ 'ಎನ್ ಜೀವನ್' ಎನ್ನುವ ರೊಮ್ಯಾಂಟಿಕ್ ಸಾಂಗ್‌ಗೆ ದರ್ಶನ್ ಜೊತೆ ಜಾಜಿ ಡ್ಯಾನ್ಸ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ತಮ್ಮ ಸಿಂಪಲ್ ಡ್ಯಾನ್ಸ್ ಮೂವ್ಸ್‌ನಿಂದ ಗಮನ ಸೆಳೆಯುತ್ತಿದ್ದಾರೆ.
ಈ ಡ್ಯಾನ್ಸ್ ವೀಡಿಯೋವನ್ನು ಹಂಚಿಕೊಂಡಿರುವ ಜಾಜಿ ರಾಜು "ನಾನು ಈ ಕ್ಷಣಗಳನ್ನು ಎಂದು ಮರೆಯುವುದಿಲ್ಲ. ಬಹಳ ಹಂಬಲ್ ಹಾಗೂ ಸ್ವೀಟೆಸ್ಟ್ ವ್ಯಕ್ತಿ. ಥ್ಯಾಂಕ್ಯೂ ದರ್ಶನ್ ಅಣ್ಣ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಈ ಸಣ್ಣ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡ್ತಿದೆ. ಇನ್ನು ಜಾಜಿ ರಾಜು ಯಾರು? ಆಕೆಯ ಹಿನ್ನೆಲೆ ಏನು? ಎಂದು ಕೆಲವರು ಹುಡುಕಾಡುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಬಿ.ಬೋರೇಗೌಡ ಅವರ ಮೊಮ್ಮಗಳು ಜಾಜಿ ರಾಜು. ಶ್ರೀಮತಿ ಸುನಿತಾ ಮತ್ತು ಬೊಮ್ಮನಹಳ್ಳಿ ಮಾಜಿ ಕಾರ್ಪೋರೇಟರ್ ಮೋಹನ್ ರಾಜು ಅವರ ಮಗಳು. ಸ್ವತಃ ಭರತನಾಟ್ಯ ಕಲಾವಿದೆ ಆಗಿರುವ ತಮ್ಮ ತಾಯಿ ಸುನಿತಾ ಅವರ ಬಳಿ ಸಣ್ಣ ವಯಸ್ಸಿನಿಂದಲೇ ಜಾಜಿ ರಾಜು ಭರತನಾಟ್ಯ ಕಲಿತಿದ್ದಾರೆ. ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಡ್ಯಾನ್ಸರ್ ಎಂದು ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂf ಪೇಜ್‌ನಲ್ಲಿ ಸಾಕಷ್ಟು ಡ್ಯಾನ್ಸ್ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
ನಟ ದರ್ಶನ್‌ಗೆ ಆಪ್ತರಾದ ಮೋಹನ್ ರಾಜು ಅವರು ಬರ್ತ್‌ಡೇ ಪಾರ್ಟಿಯಲ್ಲಿ ಫ್ಯಾಮಿಲಿ ಸಮೇತ ಹಾಜರಾಗಿದ್ದರು. ಆ ಸಮಯದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದು. ಅದನ್ನು ಈಗ ಜಾಜಿ ರಾಜು ಹಂಚಿಕೊಂಡಿದ್ದಾರೆ.
ಸದ್ಯ ದರ್ಶನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ 'ಡೆವಿಲ್' ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಬಂದಿದ್ದ ಟೀಸರ್ ಹಿಟ್ ಆಗಿತ್ತು. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಕಾಂಬಿನೇಷನ್‌ನಲ್ಲಿ ಹಿಂದೆ 'ತಾರಕ್' ಸಿನಿಮಾ ಬಂದು ಗೆದ್ದಿತ್ತು.
'ಡೆವಿಲ್' ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾ ನಿರ್ಮಿಸಲಿದೆ. ಇನ್ನು ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಕೂಡ ಘೋಷಣೆ ಆಗಿದೆ. ಶೈಲಜಾ ನಾಗ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇದಕ್ಕೂ ಮುನ್ನ ದರ್ಶನ್ ನಟಿಸಿದ 'ಯಜಮಾನ' ಹಾಗೂ 'ಕ್ರಾಂತಿ' ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿತ್ತು.
ಇನ್ನುಳಿದಂತೆ ಸೂರಪ್ಪ ಬಾಬು, ಮಹೇಶ್ ಸುಖಧರೆ, ಸಚ್ಚಿದಾನಂದ ಇಂಡುವಾಳ, ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ. ಮಂಜುನಾಥ್, ರಘುನಾಥ್ ಸೋಗಿ ಹೀಗೆ ಹಲವರು ನಟ ದರ್ಶನ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದ್ದರು.


Click it and Unblock the Notifications











