"ಹೆಣ್ಣು ಮಕ್ಕಳ ಮೇಲೆ ನಾವು ಕೈ ಮಾಡಲು, ಬೈಯ್ಯಲು, ದೌರ್ಜನ್ಯ, ದಬ್ಬಾಳಿಕೆ ಮಾಡಲು ಆಗಲ್ಲ"; ಚಂದನ್ ಶೆಟ್ಟಿ
ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಇವರಿಬ್ಬರು ದೂರಾಗುವ ಸುದ್ದಿ ಹಲವರಿಗೆ ಶಾಕ್ ತಂದಿತ್ತು. ಮೊನ್ನೆ ಮೊನ್ನೆವರೆಗೂ ಚೆನ್ನಾಗಿಯೇ ಇದ್ದರು ಏನಾಯ್ತು? ಎಂದು ಹುಬ್ಬೇರಿಸಿದ್ದರು. ಒಂದಷ್ಟು ವದಂತಿ ಶುರುವಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲದ್ದಕ್ಕೂ ಸ್ಪಷ್ಟನೆ ನೀಡಿದ್ದರು.
ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಹಾಗೂ ನಿವೇದಿತಾ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ಭಾರೀ ಸುದ್ದಿ ಆಗಿತ್ತು. ಬಳಿಕ ಮೈಸೂರಿನ ಕಲ್ಯಾಣಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದರು. 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿ ಡಿವೋರ್ಸ್ ಪಡೆದು ಇದೀಗ ದೂರಾಗಿದ್ದಾರೆ.

ತಮ್ಮ ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನಲ್‌ನಲ್ಲಿ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾವಿಬ್ಬರು ನಮ್ಮ ನಮ್ಮ ಕೆಲಸಗಳಲ್ಲಿ ಬಹಳ ಬ್ಯುಸಿ ಇದ್ದೆವು. ಕೆಲ ತಿಂಗಳಿಂದ ಬೇರೆ ಬೇರೆಯಾಗಿಯೇ ಇದ್ದೆವು. ಇದರ ನಡುವೆ ಭಿನ್ನಾಭಿಪ್ರಾಯಳಿತ್ತು. ಖುಷಿಖುಷಿಯಾಗಿ ಡಿವೋರ್ಸ್ ಆಗುವಂತದ್ಧಲ್ಲ. ನಮ್ಮ ತಂದೆ-ತಾಯಿ ದಾಂಪತ್ಯ ನೋಡಿ ಅವರಂತೆ ನಾವು ಬದುಕಬೇಕು ಎನ್ನುವುದು ಈ ಜನರೇಷನ್‌ಗೆ ಸಾಧ್ಯವಿಲ್ಲ. ಬಹಳ ಬದಲಾಗಿದೆ" ಎಂದು ಚಂದನ್ ಹೇಳಿದ್ದಾರೆ.
"ಆಗ ನಮ್ಮ ತಾಯಿ ಹೌಸ್‌ವೈಫ್ ಆಗಿದ್ದರು. ತಂದೆ ದುಡಿದುಕೊಂಡು ಬರುತ್ತಿದ್ದರು. ಹೆಣ್ಣುಮಕ್ಕಳು ಈಗ ಸಮಾನ ಹಕ್ಕು ಪಡೆದುಕೊಂಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಅದನ್ನು ಧಕ್ಕಿಸಿಕೊಂಡಿದ್ದಾರೆ. ಅದನ್ನು ಒಪ್ಪುತ್ತೇನೆ. ನಿವೇದಿತಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ದುಡಿಯುತ್ತಿದ್ದಾರೆ. ಹೀಗಿರುವಾಗ ಆಕೆಗೆ ಮನೆ ಜವಾಬ್ದಾರಿ ತಗೋ ಎಂದು ಹೇಳೋಕ್ಕಾಗಲ್ಲ. ಹೊಂದಾಣಿಕೆ ಇಲ್ಲದಿದ್ದರೆ ಡಿವೋರ್ಸ್ ಆಗುತ್ತದೆ. ಡಿವೋರ್ಸ್ ಆದರೆ ಸಮಾಜ ಆಡಿಕೊಳ್ಳುತ್ತದೆ ಎನ್ನುವುದು ಈಗ ಹೋಗಿದೆ"

"ಈಗ ಪ್ರಪಂಚ ಬದಲಾಗಿದೆ. ನಾವು ಹೆಣ್ಣುಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಬೈಯ್ಯುವಂತಿಲ್ಲ. ದೌರ್ಜನ್ಯ, ದಬ್ಬಾಳಿಕೆ ಮಾಡೋಕ್ಕಾಗಲ್ಲ. ಒಂದು ವರ್ಷದಿಂದ ನಾವು ಬೇರೆ ಬೇರೆ ಇದ್ವಿ. ಯಾಕೆ ಭಿನ್ನಾಭಿಪ್ರಾಯ ಎನ್ನುವ ಬಗ್ಗೆ ಮಾತಡಲ್ಲ. ಇಬ್ಬರೂ ಒಪ್ಪಿ ಒಬ್ಬರೇ ವಕೀಲರ ಬಳಿ ಹೋದ್ವಿ. ಅವರು ಕೌನ್ಸಲಿಂಗ್ ಮಾಡಿದ್ರು. ಆದರೂ ಸಾಧ್ಯವಾಗಲಿಲ್ಲ. ಬಳಿಕ ಡಿವೋರ್ಸ್ ಅರ್ಜಿ ಹಾಕಿದ ಮರುದಿನವೇ ಡಿವೋರ್ಸ್ ಸಿಕ್ತು" ಎಂದು ಚಂದನ್ ಹೇಳಿದ್ದಾರೆ.
"ನಾವು ಮಾಧ್ಯಮದ ಮುಂದೆ ಹೇಳುವುದು ಬೇಡ ಎಂದುಕೊಂಡಿದ್ದೆವು. ನಾವು ಯಾರಿಗೂ ಗೊತ್ತಾಗಲ್ಲ ಎಂದುಕೊಂಡಿದ್ದೆವು. ಆದರೆ ನಾವು ಕೋರ್ಟ್‌ಗೆ ಹೋದ ಕೆಲವೇ ನಿಮಿಷಗಳಲ್ಲಿ ಎಲ್ಲರಿಗೂ ಸುದ್ದಿ ಗೊತ್ತಾಗಿಬಿಡ್ತು. ಎಲ್ಲರಿಗೂ ಅದು ಶಾಕ್. ಕೋರ್ಟ್‌ನಲ್ಲೂ ಎಲ್ಲರೂ ತಿರುಗಿ ನೋಡುತ್ತಿದ್ದರು. ಅದು ಬಹಳ ಮುಜುಗರ. ಮಾಧ್ಯಮಗಳ ಕ್ಯಾಮರಾಗಳಿಗೆ ತಪ್ಪಿಸಿಕೊಳ್ಳಲು ಹಿಂದಿನ ಗೇಟ್‌ನಿಂದ ಹೋದೆವು. ನಾವು ಮಾತನಾಡಬೇಕು ಎನ್ನುವ ಕಾರಣಕ್ಕೋ ಒಂದಷ್ಟು ವದಂತಿ ಹರಡಿದರು. ಹಾಗಾಗಿ ಸುದ್ದಿಗೋಷ್ಠಿ ಮಾಡಿದೆವು" ಎಂದು ಚಂದನ್ ವಿವರಿಸಿದ್ದಾರೆ.


Click it and Unblock the Notifications











