ವಂಡರ್ ಚೈಲ್ಡ್ ಬೇಬಿ ಶ್ಯಾಮಿಲಿ ಅದ್ಭುತ ನಟನೆಯ ಹಿಂದಿನ ಶಕ್ತಿ ಏನು? ಕೊನೆಗೂ ಸೀಕ್ರೆಟ್ ರಿವೀಲ್
ಬೇಬಿ ಶ್ಯಾಮಿಲಿ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಬಾಲ ಪ್ರತಿಭೆ. ಅವತ್ತಿನ ಕಾಲಕ್ಕೆ ವಂಡರ್ ಚೈಲ್ಡ್ ಅಂತಲೇ ಹೆಸರು ಮಾಡಿದ್ದಳು. ಕೇರಳದಲ್ಲಿ ಹುಟ್ಟಿ ಬೆಳೆದ ಶ್ಯಾಮಿಲಿ ಚಿಕ್ಕ ವಯಸ್ಸಿನಲ್ಳೇ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಗೆದ್ದಳು. ಕನ್ನಡದ ಮನೆಮಗಳೇ ಆಗಿಬಿಟ್ಟಿದ್ದಳು.
'ಮತ್ತೆ ಹಾಡಿತು ಕೋಗಿಲೆ' ಚಿತ್ರದ ಮೂಲಕ ಪುಟಾಣಿ ಶ್ಯಾಮಿಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಳು. ಮೊದಲ ಚಿತ್ರದಲ್ಲೇ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿ ಮೋಡಿ ಮಾಡಿದ್ದಳು. ಮುಂದೆ 'ಭೈರವಿ', 'ಶ್ವೇತಾಗ್ನಿ', 'ಪೊಲೀಸ್ ಲಾಕಪ್', 'ಕಾದಂಬರಿ', 'ಶಾಂಭವಿ', 'ಚಿನ್ನ ನೀನು ನಗುತ್ತಿರು', 'ಕರುಳಿನ ಕುಡಿ', 'ಜಗದೀಶ್ವರಿ' ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಳು.

ತಮಿಳು ಬಿಟ್ಟರೆ ಕನ್ನಡದಲ್ಲೇ ಬೇಬಿ ಶ್ಯಾಮಿಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು. ಈ ಪುಟಾಣಿಯನ್ನು ಕನ್ನಡ ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಆ ರೀತಿ ಎಕ್ಸ್‌ಪ್ರೆಷನ್, ಡೈಲಾಗ್ ಡೆಲಿವರಿ, ಆಕ್ಟಿಂಗ್ ಹೇಗೆ ಸಾಧ್ಯ? ಎಂದು ಸಾಕಷ್ಟು ಜನ ಅಂದುಕೊಂಡಿದ್ದು ಇದೆ. ಎಲ್ಲಾ ಮಕ್ಕಳಿಗೂ ಇದು ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಇದು ಸಿದ್ಧಿಸಿರುವ ವರ ಎಂದುಕೊಂಡವರು ಇದ್ದಾರೆ.
ಬಟ್ಟಲು ಕಂಗಳ ಮುದ್ದು ಮುಖದ ಚಿನ್ನಾರಿ ತಮ್ಮ ನೋಟದಲ್ಲೇ ಜಾದೂ ಮಾಡಿಬಿಡುತ್ತಿದ್ದಳು. ಭಾರತೀಯ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಬೇಬಿ ಶ್ಯಾಮಿಲಿ ರೀತಿ ಪ್ರೇಕ್ಷಕರ ಮನಸೂರೆಗೊಂಡ ಮತ್ತಷ್ಟು ಬಾಲ ಪ್ರತಿಭೆ ಇರಲಿಲ್ಲ ಎನ್ನಬಹುದು. ಕೆಲ ವರ್ಷಗಳ ಬಳಿಕ ಆಕೆ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಇಂದಿಗೂ ಈ ಚಿನ್ನಾರಿಯ ಮುಗ್ಧ ನಗುವನ್ನು ಸಿನಿರಸಿಕರು ಮರೆತ್ತಿಲ್ಲ. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟಿ ಪ್ರತಿಭೆ ಹೇಗೆ ಸಾಧ್ಯ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಆ ಸೀಕ್ರೆಟ್ ರಿವೀಲ್ ಆಗಿದೆ.

ಕನ್ನಡದ ಖ್ಯಾತ ನಿರ್ದೇಶಕ 'ಮತ್ತೆ ಹಾಡಿತು ಕೋಗಿಲೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅವರೇ ಬೇಬಿ ಶ್ಯಾಮಿಲಿ ಅವರನ್ನು ಕನ್ನಡದ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆ ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿದ್ದಾರೆ. ಅದಾಗಲೇ ಮಣಿರತ್ನಂ ನಿರ್ದೇಶನದ 'ಅಂಜಲಿ' ಚಿತ್ರದಲ್ಲಿ ನಟಿಸಿ ಆ ವರ್ಷದ ಅತ್ಯುತ್ತಮ ಬಾಲನಟಿ ರಾಷ್ಟ್ರಪ್ರಶಸ್ತಿಯನ್ನು ಶ್ಯಾಮಿಲಿ ತನ್ನದಾಗಿಸಿಕೊಂಡಿದ್ದಳು.
ನಿರ್ದೇಶಕ ಭಾರ್ಗವ ಮಾತನಾಡಿ "ಅವತ್ತಿಗೆ ಇಂಡಸ್ಟ್ರಿಯಲ್ಲಿ ಬೇಬಿ ಶ್ಯಾಮಿಲಿಗೆ ವಂಡರ್ ಚೈಲ್ಡ್ ಎಂದು ಹೆಸರು ಬಂದುಬಿಟ್ಟಿತ್ತು. ಅವಳ ಅಕ್ಕ ಶಾಲಿನಿ ಕೂಡ ಅದಾಗಲೇ ಬಾಲನಟಿಯಾಗಿ ಗಮನ ಸೆಳೆದಿದ್ದಳು. 'ಮತ್ತೆ ಹಾಡಿತು ಕೋಗಿಲೆ' ಚಿತ್ರಕ್ಕೆ ಶ್ಯಾಮಿಲಿಯೇ ಬೇಕು ಎಂದುಕೊಂಡೆವು. ಯಾಕಂದರೆ ನಾಯಕ ವಿಷ್ಣುವರ್ಧನ್ ಜೊತೆ ಕಾಂಬಿನೇಷನ್ ದೃಶ್ಯಗಳಿದ್ದವು. ಹಾಗಾಗಿ ಆಕೆ ಕೇಳಿದ್ದಷ್ಟು ಸಂಭಾವನೆ ಕೊಟ್ಟು ಕರೆದುಕೊಂಡುಬಂದಿದ್ದೆವು" ಎಂದಿದ್ದಾರೆ.
"90ರ ದಶಕದ ಆರಂಭದಲ್ಲೇ ಶ್ಯಾಮಿಲಿಗೆ 75 ಸಾವಿರ ರೂ. ಸಂಭಾವನೆ ಕೊಟ್ಟಿದ್ದರು. ಆಗಿನ ಕಾಲಕ್ಕೆ ಅವರ ತಂದೆ ಮಗಳ ಹೆಸರಿನಲ್ಲಿ ಆದಾಯ ತೆರಿಗೆ ಪಾವತಿಸಲು ಆರಂಭಿಸಿದ್ದರು. ಅಷ್ಟರಮಟ್ಟಿಗೆ ಆಕೆಯ ಕ್ರೇಜ್ ಇತ್ತು. ಅವರ ತಂದೆ ಬಾಬು ಬಹಳ ಚಾಣಕ್ಯ. ವಿಪರೀತ ಬುದ್ಧಿವಂತ. ಆತ ಹಿಂದೆ ಆಕ್ಟಿಂಗ್ ಮಾಡ್ತಿದ್ನಾ ಗೊತ್ತಿಲ್ಲ. ಆದರೆ ಹೇಳಿದ್ದನ್ನು ತಕ್ಷಣಕ್ಕೆ ಅರ್ಥ ಮಾಡಿಕೊಂಡು ಮಗಳಿಗೆ ಹೇಳಿಕೊಡುತ್ತಿದ್ದ" ಎಂದು ಭಾರ್ಗವ ತಿಳಿಸಿದ್ದಾರೆ.
ಶ್ಯಾಮಿಲಿ ಅಷ್ಟು ಚೆನ್ನಾಗಿ ನಟಿಸೋಕೆ ಕಾರಣ ಅವರ ತಂದೆ. ಅದು ಹೇಗೆ ಎನ್ನುವುದನ್ನು ಭಾರ್ಗವ ಬಿಚ್ಚಿಟ್ಟಿದ್ದಾರೆ. "ಹಿಂದಿನ ದಿನವೇ ಶ್ಯಾಮಿಲಿ ತಂದೆ ನನ್ನ ಬಳಿ ಬಂದು, ಸರ್ ಮಗಳು ಯಾವ ಪಾತ್ರ, ಹೇಗೆ ನಟಿಸಬೇಕು, ಏನು ಡೈಲಾಗ್ ಅಂತೆಲ್ಲಾ ಕೇಳಿ ಮಲಯಾಳಂನಲ್ಲಿ ಬರೆದುಕೊಳ್ಳುತ್ತಿದ್ದ. ಅದನ್ನು ಮನೆಯಲ್ಲಿ ಹೇಳಿಕೊಟ್ಟು ತಯಾರಿ ಮಾಡಿ ನಾನು ಚಿತ್ರೀಕರಣಕ್ಕೆ ಕರೆದುಕೊಂಡು ಬರ್ತೀನಿ ಎನ್ನುತ್ತಿದ್ದ. ನಾನು ಅದರಂತೆ ಡೈಲಾಗ್ಸ್ ಕೊಟ್ಟು, ಹೇಗೆ ಮಾತನಾಡಬೇಕು ಎನ್ನುವುದನ್ನು ಆತನಿಗೆ ಹೇಳಿದ್ದೆ. ಅದನ್ನು ಬರೆದುಕೊಂಡು ನನ್ನ ಮುಂದೆ ಹೇಳಿ ಒಪ್ಪಿಸಿದ್ದ. ಮರುದಿನ ಮಗಳನ್ನು ತಯಾರು ಮಾಡಿ ಕರೆದುಕೊಂಡು ಬಂದಿದ್ದ" ಎಂದು ನೆನಪಿಸಿಕೊಂಡಿದ್ದಾರೆ.
ಮರುದಿನ ನಾವು ಮೊದಲಿಗೆ ಡೈಲಾಗ್ ಕೊಡದೇ ಒಂದಷ್ಟು ಕ್ಲೋಸ್‌ಅಪ್ ದೃಶ್ಯಗಳನ್ನು ಸೆರೆಹಿಡಿದೆವು. ಬಹಳ ಮುದ್ದಾದ ಮಗು, ಚೆನ್ನಾಗಿ ನಟಿಸಿದಳು. ಬಳಿಕ ಡೈಲಾಗ್ ಕೊಟ್ಟೆವು. ಒಮ್ಮೆ ಮಗು ತಪ್ಪು ಮಾಡಿದಾಗ ತಂದೆ ಬಂದು ಕೋಪದಿಂದ ಮಗಳಿಗೆ ಬೈಯಲು ಶುರು ಮಾಡಿದ. ಶ್ಯಾಮಿಲಿ ಅಳಲು ಆರಂಭಿಸಿದಳು. ಬಳಿಕ ನಾನು ತಂದೆನ ಕರೆದು ತಿಳಿ ಹೇಳಿದೆ. ಮಗು ಅತ್ತರೆ ಚೆನ್ನಾಗಿರಲ್ಲ, ಬೈಯಬೇಡ ಎಂದೆ. ಬಳಿಕ ಮಗಳನ್ನು ಸಮಾಧಾನ ಮಾಡಿ ಕರ್ಕೊಂಡ್ ಬಂದ, ಮಗು ಚೆನ್ನಾಗಿ ನಟಿಸಿತು"
"ಶ್ಯಾಮಿಲಿ ತಂದೆ ಆ ದೃಶ್ಯ ನಮ್ಮ ಬಳಿಕ ಕೇಳಿ ತಿಳಿದು, ಅದನ್ನು ನಟಿಸಿ ತೋರಿಸಿ, ಬಳಿಕ ಮನೆಗೆ ಹೋಗಿ ಮಗುವಿಗೆ ಅದನ್ನು ನಟಿಸಿ ತೋರಿಸಿ ತಯಾರಿ ಮಾಡಿಸಿ ಕರೆತರ್ತಿದ್ದ. ಅಷ್ಟು ತಯಾರಿ ಇರುತ್ತಿತ್ತು. ನಾನು ಶ್ಯಾಮಿಲಿ ನಟನೆ ನೋಡಿ ಗುಡ್ ಎಂದು ಚಪ್ಪಾಳೆ ತಟ್ಟಿದೆ. ಕೂಡಲೇ ನನ್ನ ಬಳಿ ಬಂದ ಮಗು, ಡೈರೆಕ್ಟರ್ ಅಂಕಲ್ ನಾನು ಈಗ ಚೆನ್ನಾಗಿ ಮಾಡಿದ್ನಾ? ಎಂದು ಕೇಳಿದಳು. ಮಗುವಿಗೆ ಬೇಕಾಗಿದ್ದು ಪ್ರೋತ್ಸಾಹ. ನಾನು ಅದೇ ರೀತಿ ಮೆಚ್ಚುಗೆ ಸೂಚಿಸುತ್ತಾ ಚಿತ್ರೀಕರಣ ಮಾಡಿ ಮುಗಿಸಿದ್ದೆ" ಎಂದು ನಿರ್ದೇಶಕ ಭಾರ್ಗವ ವಿವರಿಸಿದ್ದಾರೆ.
1987ರಲ್ಲಿ ಬಾಬು ಮತ್ತು ಆಲಿಸ್ ದಂಪತಿ ಮಗಳಾಗಿ ಶ್ಯಾಮಿಲಿ ಹುಟ್ಟಿದರು. ಅವರ ತಂದೆ ನಟನಾಗುವ ಆಸೆಯಿಂದ ಕೇರಳದ ಮದ್ರಾಸ್‌ಗೆ ಬಂದು ನೆಲೆಸಿದ್ದರು. ನಂತರ ಅವರು ತಮ್ಮ ಮಕ್ಕಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಶ್ಯಾಮಿಲಿ ಸಹೋದರಿ ಕೂಡ ಬಾಲನಟಿಯಾಗಿ ಸಕ್ಸಸ್ ಕಂಡಿದ್ದರು. 'ಈ ಜೀವ ನಿನಗಾಗಿ' ಚಿತ್ರದಲ್ಲಿ ಶಾಲಿನಿ ನಟಿಸಿದ್ದರು. 'ಅಮ್ಮ ಅಮ್ಮ ಅನ್ನೋ ಮಾತು' ಎನ್ನುವ ಹಿಟ್ ಗೀತೆಯನ್ನು ಹಾಡಿದ್ದರು.
ಎರಡು ವರ್ಷದ ಮಗು ಆಗಿದ್ದಾಗಲೇ ತಮಿಳಿನ 'ರಾಜನದೈ' ಚಿತ್ರದಲ್ಲಿ ಬೇಬಿ ಶ್ಯಾಮಿಲಿ ಮಿಂಚಿದ್ದರು. ಚಿರಂಜೀವಿ, ಮೋಹನ್ ಲಾಲ್ ರೀತಿಯ ದಿಗ್ಗಜ ನಟರ ಸಿನಿಮಾಗಳಲ್ಲಿ ಶ್ಯಾಮಿಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದರು. 'ಮತ್ತೆ ಹಾಡಿತು ಕೋಗಿಲೆ' ಚಿತ್ರದ ನಟನೆಗಾಗಿ 1990ರಲ್ಲಿ ಅತ್ಯುತ್ತಮ ಬಾಲನಟಿ ರಾಜ್ಯಪ್ರಶಸ್ತಿ ಕೂಡ ಆಕೆಗೆ ಸಿಕ್ಕಿತ್ತು. ಕೇರಳ ಹಾಗೂ ತಮಿಳುನಾಡು ಚಲನಚಿತ್ರ ರಾಜ್ಯ ಪ್ರಶಸ್ತಿಗಳು ಆಕೆಯ ಮುಡಿಗೇರಿತ್ತು.
2009ರಲ್ಲಿ ಬಂದ 'ಓಯ್' ಚಿತ್ರದಲ್ಲಿ ಸಿದ್ದಾರ್ಥ್‌ಗೆ ನಾಯಕಿಯಾಗಿ ಶ್ಯಾಮಿಲಿ ನಟಿಸಿದ್ದರು. 'ವಲೀಂ ಥೇಟ್ಟಿ ಪುಲೀಂ ಥೇಟ್ಟಿ' ಎಂಬ ಒಂದು ಮಲಯಾಳಂ ಸಿನಿಮಾ, 'ವೀರ ಶಿವಾಜಿ' ಎಂಬ ಒಂದು ತಮಿಳು ಹಾಗೂ 'ಅಮ್ಮಮ್ಮಗರಿಲ್ಲು' ಎಂಬ ಮತ್ತೊಂದು ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಆದರೆ ಗೆಲುವು ಸಿಗಲಿಲ್ಲ. ಹಾಗಾಗಿ ಬಳಿಕ ನಟನೆ ನಿಲ್ಲಿಸಿದರು.
ಒಟ್ಟಾರೆ ಬಾಲನಟಿಯಾಗಿ ಬೇಬಿ ಶ್ಯಾಮಿಲಿ ಅಷ್ಟು ಸೊಗಸಾಗಿ ನಟಿಸಲು, ಎಕ್ಸ್‌ಪ್ರೆಷನ್ ಕೊಡಲು ಕಾರಣ ಅವರ ತಂದೆ ಬಾಬು ಎನ್ನುವುದು ಈಗ ಗೊತ್ತಾಗುತ್ತಿದೆ. ಅವತ್ತಿನ ಕಾಲಕ್ಕೆ ಬಹಳ ದುಬಾರಿ ಬಾಲನಟಿ ಎನ್ನುವುದು ವಿಶೇಷ.


Click it and Unblock the Notifications











