Happy Children’s Day: ಬಾಲ್ಯದಲ್ಲೇ ಮೋಡಿ ಮಾಡಿ ಮಂದೆ ಸ್ಟಾರ್‌ಗಳಾಗಿ ಗೆದ್ದವರಿವರು
ಮಕ್ಕಳ ದಿನಾಚರಣೆ ಸ್ಪೆಷಲ್: ಬಾಲ ನಟರಾಗಿ ಬಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳಾಗಿ ಮಿಂಚಿದ ದಿಗ್ಗಜರು... ಸಿನಿಮಾದ ಅಂಗಳದಲ್ಲಿ ಮಕ್ಕಳ ಕಮಾಲ್... ನವೆಂಬರ್ 14, ಮಕ್ಕಳ ದಿನಾಚರಣೆಯ ಸಂಭ್ರಮ. ಇದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನ ಮಕ್ಕಳ ಹಕ್ಕುಗಳು ಮತ್ತು ಭವಿಷ್ಯದ ಬಗ್ಗೆ ನಾವು ಗಮನ ಹರಿಸುತ್ತೇವೆ. ಮಕ್ಕಳೇ ನಮ್ಮ ದೇಶದ ನಾಳಿನ ಪ್ರಜೆಗಳು. ಅವರ ಭವಿಷ್ಯ ಸದಾ ಉಜ್ವಲವಾಗಿರಲಿ. ಸಿನಿಮಾದಂತಹ ಬಣ್ಣದ ಲೋಕದಲ್ಲೂ ಮಕ್ಕಳಿಗೆ ವಿಶೇಷ ಸ್ಥಾನವಿದೆ. ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಅನೇಕ ಬಾಲ ನಟರಿದ್ದಾರೆ. ಈ ಕಲಾ ಕ್ಷೇತ್ರದಲ್ಲಿ ಮಕ್ಕಳು ಮಾಡುವ ಕಮಾಲ್ ನಿಜಕ್ಕೂ ಅದ್ಭುತ.
ಸಿನಿಮಾ ಜಗತ್ತು ಅತ್ಯಂತ ಸ್ಪರ್ಧಾತ್ಮಕವಾದದ್ದು. ಇಲ್ಲಿ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಡುವುದು ಒಂದು ರೀತಿಯ ಸವಾಲು. ಆದರೆ, ಅತಿ ದೊಡ್ಡ ಯಶಸ್ಸು ಗಳಿಸುವುದು ಮಹಾ ಸವಾಲು. ನಂತರ ವಯಸ್ಕ ನಾಯಕ ಅಥವಾ ನಾಯಕಿಯಾಗಿ ಮತ್ತೆ ಅದೇ ಯಶಸ್ಸನ್ನು ಕಾಯ್ದುಕೊಳ್ಳುವುದು ಇನ್ನೊಂದು ರೀತಿಯ ಕಷ್ಟ. ಕೆಲವೇ ಕೆಲವು ಪ್ರತಿಭಾವಂತರಿಗೆ ಇದು ಸಾಧ್ಯವಾಗಿದೆ. ಬಾಲ ನಟರಾಗಿ ಜನರ ಮನಸ್ಸನ್ನು ಗೆದ್ದವರು, ನಂತರ ಸೂಪರ್ ಸ್ಟಾರ್‌ಗಳಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಬಾಲ ಕಲಾವಿದರಾಗಿ ಬಳಿಕ ನಾಯ, ನಾಯಕಿಯಾಗಿ ಗೆದ್ದವರ ಪಟ್ಟಿ ದೊಡ್ಡದಿದೆ. ಈ ಸಾಲಿನಲ್ಲಿ ಕಮಲ್ ಹಾಸನ್, ಪುನೀತ್ ರಾಜ್‌ಕುಮಾರ್, ಶ್ರೀದೇವಿ, ಮೀನಾ ಮತ್ತು ಹೃತಿಕ್ ರೋಷನ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆಲಿಯಾ ಭಟ್, ದಳಪತಿ ವಿಜಯ್, ಜ್ಯೂ. ಎನ್‌ಟಿಆರ್ ಮತ್ತು ಮಹೇಶ್ ಬಾಬು ಕೂಡ ಇದ್ದಾರೆ. ಇವರೆಲ್ಲರೂ ಮಕ್ಕಳಾಗಿದ್ದಾಗಲೇ ಕ್ಯಾಮರಾ ಮುಂದೆ ನಿಂತು ಅಭಿನಯಿಸಿದ್ದವರು. ಅವರ ವೃತ್ತಿಜೀವನವು ಹೊಸ ಪೀಳಿಗೆಗೆ ಸದಾ ಸ್ಫೂರ್ತಿ ನೀಡಿದೆ. ಆಟ ಆಡುವ ವಯಸ್ಸಿನಲ್ಲಿ ನಟಿಸುತ್ತಿದ್ದ ಕಾಲದಿಂದ ಸೂಪರ್ ಸ್ಟಾರ್ ಪಟ್ಟದವರೆಗಿನ ಈ ದಿಗ್ಗಜರ ಪಯಣ ಹೇಗಿತ್ತು? ಇಲ್ಲಿದೆ ವಿಶೇಷ ಮಾಹಿತಿ.
ಕಮಲ್ ಹಾಸನ್
ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ ಕಮಲ್ ಹಾಸನ್. ಅವರ ವೃತ್ತಿಜೀವನ ಪ್ರಾರಂಭವಾದದ್ದು ಬಾಲ ನಟನಾಗಿ. 1960ರ 'ಕಲತ್ತೂರು ಕಣ್ಣಮ್ಮ' ಚಿತ್ರದಲ್ಲಿ ಅವರು ಮೊದಲ ಬಾರಿಗೆ ನಟಿಸಿದ್ದರು. ಈ ಚಿತ್ರದಲ್ಲಿನ ನಟನೆಗೆ ಕಮಲ್ ಹಾಸನ್ 'ರಾಷ್ಟ್ರ ಪ್ರಶಸ್ತಿ' ಮುಡಿಗೇರಿಸಿಕೊಂಡಿದ್ದರು. 6ನೇ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದದ್ದು ದೊಡ್ಡ ಸಾಧನೆ. ಬಳಿಕ ಕೆಲವು ವರ್ಷಗಳ ವಿರಾಮ ಪಡೆದು ವಾಪಸ್ಸಾದರು. ನಂತರ, ಅವರು ನಾಯಕನಾಗಿ ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದರು. 'ನಾಯಗನ್', 'ಸಾಗರ ಸಂಗಮಂ' ಕಮಲ್ ಅವರ ಕೆಲವು ಅದ್ಭುತ ಚಿತ್ರಗಳು. ವಿಭಿನ್ನ ಪಾತ್ರಗಳು ಮತ್ತು ಪ್ರಯೋಗಗಳನ್ನು ಮಾಡುತ್ತಾ ಅವರು ಚಿತ್ರರಂಗದ ದಿಗ್ಗಜರಾಗಿದ್ದಾರೆ. ಅವರು ಈಗಲೂ ಹೊಸ ವಿಷಯಗಳೊಂದಿಗೆ ಸಕ್ರಿಯರಾಗಿದ್ದಾರೆ.

ಡಾ. ಪುನೀತ್ ರಾಜ್‌ಕುಮಾರ್
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್. ಅಪ್ಪು ಬಾಲ್ಯದಲ್ಲಿಯೇ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು. 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಕ್ಯಾಮರಾ ಮುಂದೆ ಬಂದಿದ್ದರು. 'ಬೆಟ್ಟದ ಹೂವು', 'ಚಲಿಸುವ ಮೋಡಗಳು' ಅವರ ಬಾಲ ನಟನ ಪಾತ್ರಕ್ಕೆ ಪ್ರಸಿದ್ಧಿ. 'ಬೆಟ್ಟದ ಹೂವು' ಚಿತ್ರಕ್ಕೆ 'ರಾಷ್ಟ್ರ ಪ್ರಶಸ್ತಿ' ಕೂಡ ಸಿಕ್ಕಿತ್ತು. 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ನಾಯಕರಾದರು. ಈ ಚಿತ್ರ ಭಾರಿ ಯಶಸ್ಸು ಪಡೆಯಿತು. ನಂತರ, 'ಮೌರ್ಯ', 'ಮಿಲನ', 'ಜಾಕಿ', 'ರಾಜಕುಮಾರ'ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಅವರು ನಟನೆ ಮಾತ್ರವಲ್ಲದೆ, ಒಳ್ಳೆಯ ಕೆಲಸಗಳಿಗೂ ಹೆಸರುವಾಸಿಯಾಗಿದ್ದರು. ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಅಪ್ಪು' ಎಂದೇ ಕರೆಯುತ್ತಾರೆ. ಅವರು ಕನ್ನಡದ ಹೆಮ್ಮೆ.
ಶ್ರೀದೇವಿ
ದಿವಂಗತ ನಟಿ ಶ್ರೀದೇವಿ ಒಂದ್ಕಾಲದಲ್ಲಿ ಚಿತ್ರರಂಗವನ್ನು ಆಳಿದವರು. ಅವರು ಕೇವಲ ನಾಲ್ಕನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1967ರ ತಮಿಳು ಚಿತ್ರ 'ಕಂದನ್ ಕರುಣೈ' ಅವರ ಚೊಚ್ಚಲ ಸಿನಿಮಾ. ಬಾಲ ನಟಿಯಾಗಿ ಕೆಲ ಚಿತ್ರಗಳಳ್ಲಿ ಮಿಂಚಿದ್ದರು. ಮುಂದೆ ನಾಯಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. 'ಮಿಸ್ಟರ್ ಇಂಡಿಯಾ', 'ನಾಗಿಣಿ', 'ಚಾಂದನಿ' ಅವರ ಅತ್ಯಂತ ಜನಪ್ರಿಯ ಚಿತ್ರಗಳು. ಅವರು ತಮ್ಮ ನಟನೆಯಿಂದ ಲೇಡಿ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದ್ದರು.
ಮೀನಾ
ದಕ್ಷಿಣ ಭಾರತದ ಮುದ್ದು ಮುಖದ ನಾಯಕಿ ಮೀನಾ. ಬಾಲ ನಟಿಯಾಗಿ ಮೀನಾ ಅವರ ವೃತ್ತಿಜೀವನ ಪ್ರಾರಂಭವಾಯಿತು. 1982 ರ ತಮಿಳು ಚಿತ್ರ 'ನೆಂಜಂಗಳ್' ಅವರ ಚೊಚ್ಚಲ ಸಿನಿಮಾ. ಕಮಲ್ ಹಾಸನ್, ರಜನಿಕಾಂತ್ ಅವರಂತಹ ದಿಗ್ಗಜ ನಟರೊಂದಿಗೆ ಮಕ್ಕಳ ಪಾತ್ರ ಮಾಡಿದರು. ಚಿಕ್ಕ ವಯಸ್ಸಿನಲ್ಲೇ ಅವರ ಅಭಿನಯ ಜನರನ್ನು ಮೆಚ್ಚಿಸಿತು. ನಂತರ 90 ರ ದಶಕದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಯಶಸ್ವಿ ನಾಯಕಿಯಾದರು. ಕನ್ನಡದಲ್ಲಿ ಅನೇಕ ಉತ್ತಮ ಚಿತ್ರಗಳಲ್ಲಿ ನಟಿಸಿದರು. ಅವರ ಸಹಜ ನಟನೆ ಮತ್ತು ಮುಗ್ಧ ಸೌಂದರ್ಯಕ್ಕೆ ಅಭಿಮಾನಿಗಳು ಮರುಳಾಗಿದ್ದರು. ಅವರು ಈಗಲೂ ಪೋಷಕ ಪಾತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ಹೃತಿಕ್ ರೋಷನ್
ಬಾಲಿವುಡ್ 'ಗ್ರೀಕ್ ಗಾಡ್' ಎಂದೇ ಖ್ಯಾತಿ ಪಡೆದವರು ಹೃತಿಕ್ ರೋಷನ್. ಅವರು ನಿರ್ದೇಶಕ ರಾಕೇಶ್ ರೋಷನ್ ಅವರ ಪುತ್ರ. ಹೃತಿಕ್ ಕೂಡ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 1980 ರ 'ಆಶಾ' ಮತ್ತು 1986 ರ 'ಭಗವಾನ್ ದಾದಾ' ಚಿತ್ರಗಳಲ್ಲಿ ಮಕ್ಕಳ ಪಾತ್ರಗಳನ್ನು ಮಾಡಿದರು. 2000 ರಲ್ಲಿ 'ಕಹೋ ನಾ... ಪ್ಯಾರ್ ಹೈ' ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ದೊಡ್ಡ ಹಿಟ್ ಆಯಿತು. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಹೃದಯ ಗೆದ್ದರು. ನಂತರ 'ಕ್ರಿಶ್', 'ಧೂಮ್ 2', 'ಜೋಧಾ ಅಕ್ಬರ್' ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಅವರ ಅದ್ಭುತ ಡ್ಯಾನ್ಸ್ ಮತ್ತು ಸ್ಟೈಲ್ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇವರು ಈಗಲೂ ಬಾಲಿವುಡ್ನ ಟಾಪ್ ಸ್ಟಾರ್ಗಳಲ್ಲಿ ಒಬ್ಬರು.
ಆಲಿಯಾ ಭಟ್
ಬಾಲಿವುಡ್ ಪ್ರಮುಖ ನಟಿ ಆಲಿಯಾ ಭಟ್ ಕೂಡ ಬಾಲ ನಟಿಯಾಗಿ ಬಂದವರು. 1999ರ 'ಸಂಘರ್ಷ್' ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದರು. 2012ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಕರಣ್ ಜೋಹರ್ ನಿರ್ದೇಶನದ ಆ ಚಿತ್ರ ಸೂಪರ್ ಹಿಟ್ ಆಯಿತು. 'ರಾಝಿ', 'ಗಲ್ಲಿ ಬಾಯ್', 'ಗಂಗೂಬಾಯಿ ಕಾಠಿಯಾವಾಡಿ' ಅವರ ಅತ್ಯುತ್ತಮ ಚಿತ್ರಗಳು. ಅವರು ತಮ್ಮ ನಟನಾ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಬಾಲಿವುಡ್‌ನ ಯುವ ಪೀಳಿಗೆಯ ಸೂಪರ್ ಸ್ಟಾರ್ ಇವರು.
ದಳಪತಿ ವಿಜಯ್
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್. ತಂದೆ ಎಸ್.ಎ. ಚಂದ್ರಶೇಖರ್ ಫಿಲ್ಮ್ ಮೇಕರ್ ಆಗಿದ್ದರಿಂದ ವಿಜಯ್ ಬಾಲ್ಯದಲ್ಲಿ ಬಣ್ಣ ಹಚ್ಚಲು ಸಹಾಯವಾಗಿತ್ತು. 1984ರ 'ವೆಟ್ರಿ' ಅಂತಹ ಒಂದು ಸಿನಿಮಾ. ಚಿಕ್ಕ ವಯಸ್ಸಿನಲ್ಲೇ ಅವರ ನಟನೆ ಗಮನ ಸೆಳೆಯಿತು. 1992ರಲ್ಲಿ 'ನಾಳಯ್ಯತೀರ್ಪು' ಮೂಲಕ ನಾಯಕರಾದರು. ನಂತರ, ವಿಜಯ್ ಅವರನ್ನು ತಮಿಳು ಪ್ರೇಕ್ಷಕರು ಪ್ರೀತಿಯಿಂದ 'ದಳಪತಿ' ಎಂದು ಕರೆಯಲು ಆರಂಭಿಸಿದರು. 'ಕತ್ತಿ', 'ಬಿಗಿಲ್', 'ಲಿಯೋ' ಅವರ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳು. ಅವರು ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.
ಜ್ಯೂ. ಎನ್ ಟಿ ಆರ್
ತೆಲುಗು ಚಿತ್ರರಂಗದ ಸ್ಟಾರ್ ಜ್ಯೂನಿಯರ್ ಎನ್‌ಟಿಆರ್ ಕೂಡ ಸಿನಿಮಾ ಹಿನ್ನೆಲೆಯಿಂದ ಬಂದವರು. 1997ರಲ್ಲಿ ಬಂದಿದ್ದ 'ಬಾಲ ರಾಮಾಯಣಂ' ಚಿತ್ರರಲ್ಲಿ ರಾಮನ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. 2001 ರಲ್ಲಿ 'ನಿನ್ನು ಚೂಡಾಲನಿ' ಮೂಲಕ ನಾಯಕನಾಗಿ ಬಂದರು. ಅವರ ಡ್ಯಾನ್ಸ್ ಮತ್ತು ಮಾಸ್ ಶೈಲಿ ಅಭಿಮಾನಿಗಳಿಗೆ ಇಷ್ಟ. ಇತ್ತೀಚೆಗೆ 'RRR' ಚಿತ್ರದ ಮೂಲಕ ಅವರು ಗ್ಲೋಬಲ್ ಸ್ಟಾರ್ ಆದರು.
ಮಹೇಶ್ ಬಾಬು
ತೆಲುಗು ಚಿತ್ರರಂಗದ 'ಪ್ರಿನ್ಸ್' ಎಂದೇ ಖ್ಯಾತಿ ಮಹೇಶ್ ಬಾಬು. ಇವರು ಕೂಡ ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಬಂದರು. ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಹಲವು ಸಿನಿಮಾಗಳಲ್ಲಿ ನಟಿಸಿದರು. 'ನೀಡಾ' (1979) ಅವರ ಮೊದಲ ಸಿನಿಮಾ. ಬಾಲ ನಟನಾಗಿ 'ಗೂಡಾಚಾರಿ 117' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1999ರಲ್ಲಿ 'ರಾಜಕುಮಾರುಡು' ಮೂಲಕ ನಾಯಕನಾದರು. ಅಂದಿನಿಂದ ಇಂದಿನವರೆಗೆ ಅವರ ಸ್ಟೈಲ್, ಲುಕ್ ಮತ್ತು ನಟನೆಗೆ ದೊಡ್ಡ ಅಭಿಮಾನಿ ಬಳಗವಿದೆ. ತೆಲುಗು ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಸಾಮ್ರಾಜ್ಯ ಸ್ಥಾಪಿಸಿದ್ದಾರೆ.
ವಿಜಯ್ ರಾಘವೇಂದ್ರ
ಕನ್ನಡ ಚಿತ್ರರಂಗದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಒಂದು ವಿಶೇಷ ಸ್ಥಾನವಿದೆ. ಅವರು ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರನ ಮಗ. ಅವರು ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟರು. 1993ರಲ್ಲಿ ಬಂದಿದ್ದ 'ಚಿನ್ನಾರಿ ಮುತ್ತಾ' ಚಿತ್ರವು ಅವರ ವೃತ್ತಿಜೀವನದ ದೊಡ್ಡ ತಿರುವು. 'ಕೊಟ್ರೇಶಿ ಕನಸು' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮುಂದೆ ನಿನಗಾಗಿ ಸಿನಿಮಾ ಮೂಲಕ ಹೀಗರ ಆಗಿ ಚಿತ್ರರಂಗಕ್ಕೆ ವಾಪಸ್ ಆಗಿದ್ದರು.
ಹೇಳ್ತಾ ಹೋದ್ರೆ ಹೀಗೆ ಬಾಲ್ಯದಲ್ಲೇ ಚಿತ್ರರಂಗಕ್ಕೆ ಬಂದು ಗಮನ ಸೆಳೆದು ಬಳಿಕ ನಾಯಕ, ನಾಯಕಿಯಾಗಿ ಗೆದ್ದವರು ಮತ್ತಷ್ಟು ಜನ ಇದ್ದಾರೆ. ಕನ್ನಡ ನಟಿ ಅಮೂಲ್ಯ, ತಮಿಳು ನಟಿ ಶಾಲಿನಿ ಅಜಿತ್ ಕುಮಾರ್, ಬಾಲಿವುಡ್ ಆಮಿರ್ ಖಾನ್, ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಕೂಡ ಚಿಕ್ಕ ವಯಸ್ಸಿನಲ್ಲೇ ನಟಿಸಿ ನಂತರ ಯಶಸ್ವಿಯಾದರು. ಇವರೆಲ್ಲರೂ ಇಂದು ತಮ್ಮ ತಮ್ಮ ಚಿತ್ರರಂಗಗಳಲ್ಲಿ ಸೂಪರ್ ಸ್ಟಾರ್‌ಗಳಾಗಿದ್ದಾರೆ.


Click it and Unblock the Notifications











