'ಶ್ರೀಮಂಜುನಾಥ' ಚಿತ್ರಕ್ಕೆ 3 ಕೋಟಿ ಸಂಭಾವನೆ ಪಡೆದಿದ್ದ ಚಿರು 'ಸಿಪಾಯಿ'ಗೆ ಕೇಳಿದ್ದಿದ್ದೆಷ್ಟು?
ತೆಲುಗು ನಟ ಚಿರಂಜೀವಿ 90ರ ದಶಕದಲ್ಲಿ ಬಹುಬೇಡಿಕೆಯ ನಟರಾಗಿದ್ದರು. ಕರ್ನಾಟಕದಲ್ಲಿ ಕೂಡ ಅವರ ಸಿನಿಮಾಗಳಿಗೆ ಒಳ್ಳೆ ಮಾರ್ಕೆಟ್ ಇತ್ತು. ಅಂತಹ ಸಮಯದಲ್ಲಿ ಅವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡಕ್ಕೆ ಪರಿಚಯಿಸಿದ್ದರು. 'ಸಿಪಾಯಿ' ಚಿತ್ರ ಪ್ರಮುಖ ಪಾತ್ರದಲ್ಲಿ ಚಿರು ಮಿಂಚಿದ್ದರು. ಬಳಿಕ 'ಶ್ರೀಮಂಜುನಾಥ' ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದರು.
ವೃತ್ತಿರಂಗದ ಉತ್ತುಂಗದಲ್ಲಿದ್ದ ಸಮಯದಲ್ಲಿ ಚಿರಂಜೀವಿ ಅವರನ್ನು ಕನ್ನಡಕ್ಕೆ ಕರೆತರುವುದು ತಮಾಷೆ ಮಾತಾಗಿರಲಿಲ್ಲ. ಇನ್ನು ಉಪೇಂದ್ರ ಕೂಡ ಆಗ ಚಿರುಗೆ ಆಕ್ಷನ್ ಕಟ್ ಹೇಳುವ ಪ್ರಯತ್ನ ಮಾಡಿದ್ದರು. ಕನ್ನಡದ 'ಸ್ವಸ್ತಿಕ್' ಚಿತ್ರದ ಕಥೆಯನ್ನು ಮೊದಲು ಚಿರಂಜೀವಿಗೆ ಉಪ್ಪಿ ಹೇಳಿದ್ದರು. ಅವರು ಒಲ್ಲೆ ಎಂದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಆ ಚಿತ್ರದಲ್ಲಿ ನಟಿಸುವಂತಾಗಿತ್ತು.

90ರ ದಶಕದಲ್ಲೇ 1 ಕೋಟಿ ರೂ,ಗೂ ಅಧಿಕ ಸಂಭಾವನೆ ಪಡೆದು ಚಿರಂಜೀವಿ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದಿದ್ದರು. ಬಿಗ್‌ಬಿಗಿಂತ ದೊಡ್ಡ ನಟ ಎನಿಸಿಕೊಂಡಿದ್ದರು. 1996ರಲ್ಲಿ ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ 'ಸಿಪಾಯಿ' ಚಿತ್ರ ಬಂದಿತ್ತು. ಮೊದಲಿಗೆ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಇದೆ ಎಂದಿದ್ದ ರವಿಚಂದ್ರನ್ ಬಳಿಕ ದೊಡ್ಡ ಪಾತ್ರವೇ ಸಿದ್ಧಪಡಿಸಿದ್ದರು. ಚಿರು ಮರು ಮಾತಾಡದೇ ಬಂದು ನಟಿಸಿದ್ದರು.
ಸಂಭಾವನೆ ಎಷ್ಟು ಎಂದು ಕೂಡ ಚಿರಂಜೀವಿ ಕೇಳಲಿಲ್ಲ. ನಾನೇ ಅವರ ಬಾಮೈದ ಅಲ್ಲು ಅರವಿಂದ್ ಬಳಿಕ ಸಂಭಾವನೆ ವಿಚಾರ ಮಾತನಾಡಿದ್ದೆ. ನಿಮಗೋಸ್ಕರ ಸಿನಿಮಾ ಮಾಡ್ತಿರೋದು, ನೀವು ಎಷ್ಟು ಕೊಡ್ತೀರೊ ಕೊಡಿ ಎಂದಿದ್ದರು. ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ಹೋಗಿ ಒಂದಷ್ಟು ಹಣವನ್ನು ಸಂಭಾವನೆಯಾಗಿ ಕೊಡಲು ಹೋದೆ. ಆಗ ಕೂಡ ಬೇಡ ಸಿನಿಮಾ ಬಿಡುಗಡೆ ಆಗಲಿ ಎಂದರು. ಸಿನಿಮಾ ಗೆಲ್ಲುತ್ತೋ ಸೋಲುತ್ತೋ ಗೊತ್ತಿಲ್ಲ, ಬಳಿಕ ನನ್ನ ಬಳಿಕ ಹಣ ಇಲ್ಲದಿದ್ದರೆ ಏನು ಮಾಡುವುದು ಎಂದು ಹೇಳಿ ಒಂದಷ್ಟು ಹಣ ಕೊಟ್ಟು ಬಂದಿದ್ದೆ ಎಂದು ರವಿಚಂದ್ರನ್ ಟಿವಿ9 ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಕೆ. ರಾಘವೇಂದ್ರ ರಾವ್ ನಿರ್ದೇಶನದ 'ಶ್ರೀಮಂಜುನಾಥ' ಚಿತ್ರದಲ್ಲಿ ಶಿವನ ಪಾತ್ರಕ್ಕೆ ಚಿರು ಬಣ್ಣ ಹಚ್ಚಿದ್ದರು. 2001ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಜಯಶ್ರೀ ದೇವಿ ಚಿತ್ರಕ್ಕೆ ಹಣ ಹೂಡಿದ್ದರು. ಅವತ್ತಿನ ಕಾಲಕ್ಕೆ ಚಿರಂಜೀವಿ ಅವರಿಗೆ 3 ಕೋಟಿ ರೂ. ಸಂಭಾವನೆ ಕೊಟ್ಟಿದ್ದೆವು. ನನ್ನ ಕೈಯಾರಿ ನಾನೇ ಅಷ್ಟು ಹಣ ಕೊಟ್ಟೆ ಎಂದು ಆ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ವಾಸು ಇತ್ತೀವೆಗೆ ಹೆಗ್ಗದ್ದೆ ಸ್ಟುಡಿಯೋ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.
ಜೋಗಿ ಪ್ರೇಮ್ ಕೆಲ ತಿಂಗಳ ಹಿಂದೆ ಚಿರಂಜೀವಿ ಅವರನ್ನು ಭೇಟಿ ಆಗಿ ಬಂದಿದ್ದರು. ದರ್ಶನ್ ಕಾಂಬಿನೇಷನ್‌ನಲ್ಲಿ ಪ್ರೇಮ್ ನಿರ್ದೇಶನದ ಸಿನಿಮಾ ಘೋಷಣೆ ಆಗಿದೆ. ಆ ಚಿತ್ರದಲ್ಲಿ ಚಿರಂಜೀವಿ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಕಳೆದ ವರ್ಷ ಚಿರು ಹುಟ್ಟುಹಬ್ಬಕ್ಕೆ ಪ್ರೇಮ್ ಶುಭ ಕೋರಿ ಪೋಸ್ಟ್ ಮಾಡಿದ್ದರು.
ದೇವನಹಳ್ಳಿ ಬಳಿ ಚಿರಂಜೀವಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಆಗಾಗ್ಗೆ ಕುಟುಂಬ ಸದಸ್ಯರ ಜೊತೆ ಅಲ್ಲಿ ಬಂದು ಕಾಲ ಕಳೆಯುತ್ತಾರೆ. 'ಸಿಪಾಯಿ' ಚಿತ್ರಕ್ಕೆ ಸಂಭಾವನೆಯಾಗಿ ರವಿಚಂದ್ರನ್ ಈ ಜಾಗ ಕೊಟ್ಟಿದ್ದರು ಎಂದು ಗುಲ್ಲಾಗಿತ್ತು. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ. ಸ್ವತಃ ರವಿಚಂದ್ರನ್ ಚಿತ್ರಕ್ಕಾಗಿ ಚಿರುಗೆ ಕೊಟ್ಟ ಸಂಭಾವನೆ ಬಗ್ಗೆ ಹೇಳಿದ್ದಾರೆ. ಹಾಗಾಗಿ ಇದೆಲ್ಲಾ ಬರೀ ಊಹಾಪೋಹ ಅಷ್ಟೆ.


Click it and Unblock the Notifications











