ಕೋಸ್ಟಲ್‌ವುಡ್‌ನಿಂದ ಬಾಲಿವುಡ್ ವರೆಗೆ: ಸೋನಾಲ್ ಮೊಂತೆರೋ ಆಸಕ್ತಿಕರ ಪಯಣ
ಕೋಸ್ಟಲ್ವುಡ್‌ನಲ್ಲಿ ನಟಿಸಿ ನಂತರ ಸ್ಯಾಂಡಲ್‌ವುಡ್, ಬಾಲಿವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಕೆಲವು ನಟಿ ಮಣಿಯರಿದ್ದಾರೆ ಅವರಲ್ಲಿ ಒಬ್ಬರು ನಟಿ ಸೋನಾಲ್ ಮೊಂತೇರೋ. 11 ಆಗಸ್ಟ್ 1995 ರಂದು ಮಂಗಳೂರಿನ ಪಡೀಲ್ ನಲ್ಲಿ ಜನಿಸಿದ ಸೋನಾಲ್ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಲು ಬಯಸಿದ್ದರು ಆದರೆ ಅವರ ತಾಯಿ, ಮಾಡೆಲಿಂಗ್ ಮಾಡಲು ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಲು ಹೆಚ್ಚಾಗಿ ಪ್ರೋತ್ಸಾಹಿಸಿದ ಕಾರಣ ಚಿತ್ರ ರಂಗಕ್ಕೆ ಎಂಟ್ರಿ ನೀಡಿದರು.
ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಸೋನಲ್ ಅಧ್ಯಯನದ ಸಮಯದಲ್ಲಿಯೆ ಮಾಡೆಲಿಂಗ್ ಗೆ ಕಾಲಿಡುತ್ತಾರೆ. 2013ರಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ , 2015ರಲ್ಲಿ ಮಿಸ್ ಕೊಂಕಣ ಎಂಬ ಪಟ್ಟವನ್ನು ಗೆದ್ದುಕೊಳ್ಳುತ್ತಾರೆ. ನಂತರ "ಅಂಜೇ ಸರ್ಖೇನ್ ಚೆಡುನ್" ಕೊಂಕಣಿ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಂಡರು. 2013 ರಲ್ಲಿ ಬಿಡುಗಡೆ ಆದ ಈ ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿ ಸೋನಲ್‌ಗೆ ಜನಪ್ರಿಯತೆ ತಂದುಕೊಟ್ಟಿತು.
ಬಳಿಕ ಸಿನಿಮಾಗಳಲ್ಲಿ ನಟಿಸುವ ಕನಸು ಕಂಡು ತುಳು ಸಿನಿಮಾಗಳಲ್ಲಿ ಅಭಿನಯಿಸಲು ಆಡಿಷನ್ ಗಳನ್ನು ನೀಡಿ 2015 ರಲ್ಲಿ 'ಎಕ್ಕ ಸಕ್ಕ' ಎಂಬ ತುಳು ಚಲನಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 'ಜೈ ತುಳುನಾಡ್' ನಲ್ಲಿ ಆಧುನಿಕ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಬಳಿಕ ರೊಮ್ಯಾಂಟಿಕ್ ಕಾಮಿಡಿ 'ಪಿಲಿಬೈಲ್ ಯಮುನಕ್ಕ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ ಜನ ಮನ್ನಣೆ ಗಳಿಸಿದರು.

ದರ್ಶನ್, ಯೋಗರಾಜ್ ಭಟ್ ಜೊತೆ ಕೆಲಸ
2018 ರಲ್ಲಿ ಅಭಿಸಾರಿಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಒಳ್ಳೆ ಹುಡುಗ ಪ್ರಥಮ್ ಜೊತೆ ನಟಿಸಿದ 'ಎಂಎಲ್‌ಎ' ಸಿನಿಮಾ ಸಹ ಬಿಡುಗಡೆ ಆಯ್ತು. ನಂತರ ಯೋಗರಾಜ್ ಭಟ್ಟರ ನಿರ್ದೇಶನದ 'ಪಂಚತಂತ್ರ' ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಬಳಿಕ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದಲ್ಲಿ ನಟಿಸಿ ಟಾಪ್ ನಟಿಯಾಗಿ ಬದಲಾದರು. ಸೋನಾಲ್, ಹಂತ-ಹಂತವಾಗಿ ಮೇಲೇರಿದ ರೀತಿ ಹಲವು ಯುವ ನಟಿಯರಿಗೆ ಮಾದರಿ.

ಹಲವು ಸಿನಿಮಾಗಳು ಸೋನಾಲ್ ಕೈಯಲ್ಲಿವೆ
ಇದೀಗ 2022 ರಲ್ಲಿ 'ಸಾಜನ್ ಚಲೇ ಸಸುರಾಲ್ 2' ನೊಂದಿಗೆ ಹಿಂದಿಗೆ ಪಾದಾರ್ಪಣೆ ಮಾಡಿದ್ದಾರೆ. ಜೊತೆಗೆ 'ಸರೋಜಿನಿ' ಎಂಬ ಹಿಂದಿ ಸಿನಿಮಾದಲ್ಲಿ ಸೋನಾಲ್ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಸೋನಾಲ್ ಕೋಸ್ಟಲ್ ವುಡ್ ನಿಂದಾ ಬಾಲಿವುಡ್ ವರೆಗೂ ತನ್ನ ಛಾಪನ್ನೂ ಮೂಡಿಸುತ್ತಿದ್ದಾರೆ. ಇಷ್ಟು ಮಾತ್ರವೇ ಅಲ್ಲದೆ ಸೋನಾಲ್ ಮೊಂತೆರೋ 'ಗಾಳಿಪಟ 2' ಮತ್ತು 'ಬುದ್ದಿವಂತ 2' ಚಿತ್ರದ ಚಿತ್ರೀಕರಣಗಳಲ್ಲಿ ಸಹ ನಟಿಸಿದ್ದಾರೆ. ಜೊತೆಗೆ ಇವರ ನಟನೆಯ 'ಬನಾರಸ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೀಘ್ರವೇ ಬಿಡುಗಡೆ ಆಗಲಿದೆ.

ಮಂಗಳೂರಿನ ಹುಡುಗಿಯ ಬಾಲಿವುಡ್ ಪಯಣ ಶುರು
ಸ್ಟೇಜ್ ಶೋ, ಬ್ಯೂಟಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಮಂಗಳೂರಿನ ಹುಡುಗಿ ಸೋನಾಲ್, ದೊಡ್ಡ ಮಟ್ಟದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ತುಳು ಸಿನಿಮಾಗಳಲ್ಲಿ ನಟಿಸುವಾಗಲೂ ಶ್ರದ್ಧೆಯಿಂದ, ತನ್ಮಯತೆಯಿಂದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದ ಸೋನಾಲ್‌ಗೆ ಅವರ ಅದೇ ಶ್ರದ್ಧೆ ತನ್ಮಯತೆ ಸ್ಯಾಂಡಲ್‌ವುಡ್, ಬಾಲಿವುಡ್‌ಗಳ ಅವಕಾಶಗಳನ್ನು ತಂದು ಮುಂದಿರಿಸಿವೆ.

'ಬನಾರಸ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ
ಇನ್‌ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯರಾಗಿರುವ ಸೋನಾಲ್ ತಮ್ಮ ಚಿತ್ರಗಳು, ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ಜಾಹೀರಾತುಗಳಲ್ಲಿ ಸಹ ಸೋನಾಲ್ ಕಾಣಿಸಿಕೊಂಡಿದ್ದಾರೆ. ಇದೀಗ 'ಬನಾರಸ್' ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಸೋನಾಲ್ ಭಾಗಿಯಾಗಿದ್ದಾರೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಸೋನಾಲ್ ಇಟ್ಟುಕೊಂಡಿದ್ದಾರೆ.


Click it and Unblock the Notifications











