'ಹೂವಿನ ಬಾಣದಂತೆ' ವೈರಲ್ ಹುಡುಗಿ ಹಿನ್ನೆಲೆ ಏನು? ಆಕೆಯ ಮತ್ತೊಂದು ಹಾಡು ಕೇಳಿದ್ರಾ?
ಈ ಸೋಶಿಯಲ್ ಮೀಡಿಯಾ ಬಹಳ ವಿಚಿತ್ರ ಕಣ್ರೀ. ಯಾರು, ಯಾವಾಗ ಅಥವಾ ಯಾವ ವಿಚಾರ ಹೇಗೆಲ್ಲಾ ವೈರಲ್ ಆಗುತ್ತದೆ ಎಂದು ಹೇಳುವುದು ಕಷ್ಟ. ರಾನು ಮೊಂಡಲ್, ಕಚ್ಚಾ ಬಾದಾಮ್ ಭುವನ್, ಡಿಂಕ್‌ಚಕ್ ಪೂಜಾ, ಕಾಫಿನಾಡು ಚಂದು, ಕುಂಭಮೇಳದ ಮೊನಾಲಿಸಾ ಹೀಗೆ ಯಾರ್ಯಾರೋ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಎನಿಸಿಕೊಂಡುಬಿಟ್ಟರು. ಆ ಸಾಲಿಗೆ ಹೊಸ ಸೇರ್ಪಡೆ ಈ ಯುವತಿ.
ಒಂದೇ ಒಂದು ರೀಲ್ಸ್ ಇವತ್ತು ಯಾರ್ ಯಾರನ್ನೋ ಫೇಮಸ್ ಮಾಡಿಬಿಡ್ತಿದೆ. ಯಾಕಂದ್ರೆ ಇದು ಸೋಶಿಯಲ್ ಮೀಡಿಯಾ ಜಮಾನ. ಜನ ನಿದ್ದೆ ಮಾಡೋಕ್ಕಿಂತ ಹೆಚ್ಚು ಸಮಯ ಸೋಶಿಯಲ್ ಮೀಡಿಯಾದಲ್ಲೇ ಕಳೆಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ 'ಹೂವಿನ ಬಾಣದಂತೆ' ಹಾಡನ್ನು ಜನ ಗುನುಗುವಂತಾಗಿದೆ. 'ಬಿರುಗಾಳಿ' ಚಿತ್ರದ ಈ ಹಾಡು ಈಗ ಸಖತ್ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಈ ಯುವತಿ ಹಾಡನ್ನು ಹಾಡಿದ ಪರಿ.

'ಹೂವಿನ ಬಾಣದಂತೆ' ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿ ಈಕೆ ಗಮನ ಸೆಳೆದಿದ್ದಾರೆ. ಸ್ನೇಹಿತರ ಎದುರು ನಿಂತು ಆಕೆ ಹಾಡು ಹಾಡಿದ್ದು ಅಕ್ಕ ಪಕ್ಕ ಇದ್ದವರು ನಕ್ಕರೂ ತಲೆ ಕೆಡಿಸಿಕೊಳ್ಳದೇ ಹಾಡಿದ್ದಾರೆ. ಬಳಿಕ ಎಲ್ಲರೂ ಚಪ್ಪಾಳೆ ತಟ್ಟಿ ಆಕೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿದ್ದ ವೀಡಿಯೋ ಲಕ್ಷಗಟ್ಟಲೆ ವೀವ್ಸ್ ಸಾಧಿಸಿದೆ. ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಇನ್ನು ಈಕೆ ಹಾಡಿರುವ ಹಾಡನ್ನು ಬಳಸಿಕೊಂಡು ಕೆಲವರು ರೀಲ್ಸ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಅಂದಹಾಗೆ ಈ ವೈರಲ್ ಯುವತಿ ಹೆಸರು ನಿತ್ಯಶ್ರೀ. ಕೆ. ಆರ್ ಪೇಟೆ ಮಚಿಲೆಕೊಪ್ಪಲು ಗ್ರಾಮದ ನಿವಾಸಿ. ಮಹಾರಾಣಿ ಕಾಮರ್ಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಸ್ನೇಹಿತರ ಗುಂಪಿನಲ್ಲಿ ತಮಾಷೆಗಾಗಿ ಈ ರೀತಿ ಹಾಡುತ್ತಿದ್ದೆ. ಹಾಸ್ಟೆಲ್‌ನಲ್ಲಿ ನಾನು ಹಾಡುವಾಗ ನನ್ನ ಸ್ನೇಹಿತರು ಖುಷಿಪಡುತ್ತಿದ್ದರು. ವೀಡಿಯೋ ವೈರಲ್ ಆಗುತ್ತಿರುವುದಕ್ಕೆ ಖುಷಿಯಾಗ್ತಿದೆ ಎಂದು ಶ್ರೀ ಸನ್ಮಾರ್ಗ ಯೂಟ್ಯೂಬ್ ಚಾನಲ್‌ನಲ್ಲಿ ಸಂದರ್ಶನದಲ್ಲಿ ನಿತ್ಯಶ್ರೀ ಹೇಳಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಗೌತಮ ಟ್ರಸ್ಟ್ ಶಿಬಿರದಲ್ಲಿ ಸ್ನೇಹಿತರ ಜೊತೆ ನಿತ್ಯಶ್ರೀ ಭಾಗವಹಿಸಿದ್ದಾರೆ. ಶಿಬಿರದಲ್ಲಿದಲ್ಲಿ ಇದ್ದಾಗಲೇ ನಿತ್ಯಶ್ರೀ ಹೀಗೆ ವಿಭಿನ್ನವಾಗಿ ಹಾಡು ಹಾಡಿದ್ದು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ನೋಡ ನೋಡುತ್ತಲೇ ವೈರಲ್ ಆಗಿದೆ. ಪಕ್ಕದಲ್ಲಿ ಇದ್ದವರು ನಗುತ್ತಿದ್ದರೂ ಆಕೆ ಅಷ್ಟು ಕಾನ್ಫಿಡೆಂಟ್ ಆಗಿ ಹಾಡಿರುವುದು ಗ್ರೇಟ್ ಎಂದು ಕಾಮೆಂಟ್ ಮಾಡಿದ್ದಾರೆ. ವಿಚಿತ್ರವಾಗಿ ಆದ್ರೆ ಮಜವಾಗಿದೆ ಎನ್ನುವವರು ಇದ್ದಾರೆ.
ಇನ್ನು ನಿತ್ಯಶ್ರೀ ಹೆಸರಿನಲ್ಲಿ ಒಂದಷ್ಟು ಇನ್‌ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಆಗಿದೆ. ಅಮ್ಮು ಗೌಡ ಹೆಸರಿನ ಅಕೌಂಟ್‌ನಲ್ಲಿ ಇದ್ದಕ್ಕಿದ್ದಂತೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಆಕೆಯ ಮತ್ತಷ್ಟು ವೀಡಿಯೋಗಳಿವೆ. 'ಹೂವಿನ ಬಾಣದಂತೆ' ಮಾತ್ರವಲ್ಲ ಆಕಾಶ್ ಚಿತ್ರದ 'ನೀನೆ ನೀನೆ' ಹಾಡನ್ನು ಕೂಡ ನಿತ್ಯಶ್ರೀ ಇದೇ ರೀತಿ ವಿಭಿನ್ನವಾಗಿ ಹಾಡಿದ್ದಾರೆ. ಆದರೆ ಆ ವೀಡಿಯೋ ಅಷ್ಟು ವೈರಲ್ ಆಗ್ತಿಲ್ಲ.
ಇನ್ನು ನಾಲ್ಕೈದು ಹಾಡುಗಳನ್ನು ನಿತ್ಯಶ್ರೀ ಇದೇ ರೀತಿ ಹಾಡುತ್ತಾರಂತೆ. ಮುಂದಿನ ದಿನಗಳಲ್ಲಿ ಆ ವೀಡಿಯೋಗಳು ಬಂದು ಸದ್ದು ಮಾಡಬಹುದು. ಒಟ್ಟಾರೆ ಸೋಶಿಯಲ್ ಮೀಡಿಯಾದಿಂದ ಯಾರ್ಯಾರೋ ರಾತ್ರೋರಾತ್ರಿ ಸದ್ದು ಮಾಡುತ್ತಿದ್ದಾರೆ. ಚಿತ್ರ, ವಿಚಿತ್ರ ಪ್ರತಿಭೆಗಳು ಹೊರಬರುವಂತಾಗಿದೆ.


Click it and Unblock the Notifications











