ಶಿವಣ್ಣನ ಜೊತೆ ಮ್ಯೂಸಿಕ್ ಸಮೇತ ಅಣ್ಣಾವ್ರ ಹಾಡು ಹಾಡಿದ್ದ ದರ್ಶನ್; ವೀಡಿಯೋ ವೈರಲ್
ದೊಡ್ಮನೆ ಅಭಿಮಾನಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಿರುತ್ತದೆ. ನಮ್ಮ ನಟನೇ ಗ್ರೇಟ್ ಎನ್ನುವ ಅಭಿಮಾನ ಬಿಟ್ಟರೆ ಇದಕ್ಕೆ ಬೇರೆನೂ ಕಾರಣ ಇಲ್ಲ. ದರ್ಶನ್ ಹಾಗೂ ದೊಡ್ಮನೆ ಸದಸ್ಯರ ನಡುವೆ ಚಿಕ್ಕಂದಿನಿಂದಲೂ ಆತ್ಮೀಯ ಒಡನಾಟವಿದೆ. ಇವತ್ತಿಗೂ ಅದು ಮುಂದುವರೆದಿದೆ.
ದರ್ಶನ್ ಹೀರೋ ಆಗುವ ಮುನ್ನ ಪೂರ್ಣಿಮಾ ಎಂಟರ್‌ಪ್ರೈಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹಾಯಕ ಛಾಯಾಗ್ರಾಹಕರಾಗಿದ್ದರು. ಶಿವಣ್ಣನ ಜೊತೆ 'ದೇವರ ಮಗ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. 'ಅರಸು' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಅಣ್ಣಾವ್ರ ಕುಟುಂಬದ ಜೊತೆ ತೂಗುದೀಪ ಶ್ರೀನಿವಾಸ್ ಅವರಿಗೂ ಉತ್ತಮ ಬಾಂಧವ್ಯ ಇತ್ತು. ಕೆಲ ವರ್ಷಗಳ ಹಿಂದೆ ಚಿತ್ರರಂಗದ ಕಲಾವಿದರೆಲ್ಲಾ ಬಹಳ ಆತ್ಮೀಯವಾಗಿ ಇರುತ್ತಿದ್ದರು. ಇತ್ತೀಚೆಗೆ ಕೊಂಚ ದೂರವಾದಂತೆ ಕಾಣುತ್ತಾರೆ.

ದಶಕದ ಹಿಂದೆ 'ರಾಜ್ ಕಪ್' ಟೂರ್ನಿಯಲ್ಲಿ ಕನ್ನಡದ ನಟ-ನಟಿಯರು ತಂತ್ರಜ್ಞರೆಲ್ಲಾ ಒಟ್ಟಿಗೆ ಆಡುತ್ತಿದ್ದರು. ಎಂಜಾಯ್ ಮಾಡುತ್ತಿದ್ದರು. ಹೀಗೆ ಟೂರ್ನಿಯ ನಡುವೆ ಆಡು, ಹರಟೆ, ತಮಾಷೆ ಇರುತ್ತಿತ್ತು. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಒಮ್ಮೆ ಶಿವಣ್ಣ ಹಾಗೂ ದರ್ಶನ್ ಅಕ್ಕಪಕ್ಕ ಕೂತು ಅಣ್ಣಾವ್ರ ಹಾಡು ಹಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
'ಹೊಸಬೆಳಕು' ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಇಬ್ಬರು ಹಾಡಿದ್ದರು. ನಟಿ ಹರ್ಷಿಕಾ ಪೂಣಚ್ಚ, ನಿರ್ದೇಶಕ ಮಹೇಶ್ ಬಾಬು ಪಕ್ಕದಲ್ಲಿ ಕೂತು ಎಲ್ಲರೂ ಸೇರಿ ಹಾಡನ್ನು ಹಾಡಿ ಎಂಜಾಯ್ ಮಾಡಿದ್ದರು. ಒಂದ್ಕಾಲದಲ್ಲಿ ಹೀಗೆ ಸ್ಯಾಂಡಲ್‌ವುಡ್ ತಾರೆಯರೆಲ್ಲಾ ಒಟ್ಟಾಗಿ ಕ್ರಿಕೆಟ್ ಆಡಿ ಸಂಭ್ರಮಿಸುತ್ತಿದ್ದರು. ಆದರೆ ಬಳಿಕ ಎಲ್ಲವೂ ತಣ್ಣಗಾಯಿತು. ಮೈದಾನದಲ್ಲಿ ಸುದೀಪ್ ಹಾಗೂ ಶಿವಣ್ಣ ತಂಡಗಳ ನಡುವೆ ಕಿರಿಕ್ ಆಗಿತ್ತು. ಬಳಿಕ ಅದು ತಣ್ಣಗಾದರೂ ಮೊದಲಿನಂತೆ ಸ್ಟಾರ್ ಕಲಾವಿದರು ಮತ್ತೆ ಟೂರ್ನಿಯಲ್ಲಿ ಆಡಲಿಲ್ಲ.
ಬಳಿಕ ಸಿಸಿಎಲ್, ಕೆಸಿಸಿ ಟೂರ್ನಿಗಳಲ್ಲಿ ಸುದೀಪ್ ಮುಂದಾಳತ್ವ ವಹಿಸಿದ್ದರು. ಆಗ ಕೂಡ ಶಿವಣ್ಣ ಜೊತೆಗೆ ಆಡಿದರು. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಶಿವಣ್ಣ ಹಾಗೂ ದರ್ಶನ್ ನಡುವೆ ಇವತ್ತಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಶಶಿಕುಮಾರ್ ಮಗನ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಇಬ್ಬರು ಬಂದು ಶುಭ ಕೋರಿದ್ದರು. ಕಾವೇರಿ ಹೋರಾಟಕ್ಕೆ ಚಿತ್ರರಂಗ ಪ್ರತಿಭಟನೆ ನಡೆಸಿತ್ತು. ಆಗ ಕೂಡ ಇಬ್ಬರು ವೇದಿಕೆ ಹಂಚಿಕೊಂಡಿದ್ದರು.
ಅಭಿಮಾನಿಗಳು 'ನಮ್ಮ ಬಾಸ್' ಎಂದು ಸುಖಾಸುಮ್ಮನೆ ಕಿತ್ತಾಡುತ್ತಾರೆ. ಆದರೆ ಸ್ಟಾರ್ ನಟರು ಬಹಳ ಆತ್ಮೀಯವಾಗಿಯೇ ಇರುತ್ತಾರೆ. ಶಶಿಕುಮಾರ್ ಮಗನ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಶಿವಣ್ಣನ ಕಾಲಿಗೆ ಎರಗಿ ದರ್ಶನ್ ಆಶೀರ್ವಾದ ಪಡೆಯಲು ಮುಂದಾಗಿದ್ದರು. ಅಷ್ಟರಲ್ಲೇ ಶಿವಣ್ಣ ಅವರನ್ನು ಹಿಡಿದು ಅಪ್ಪಿಕೊಂಡಿದ್ದರು. ಸಮಯ ಸಂದರ್ಭಗಳು ಕೆಲವೊಮ್ಮೆ ಏನೇನೋ ಆಗಿಬಿಡುತ್ತದೆ. ಆದರೆ ಎಲ್ಲವನ್ನು ಮರೆತು ಮುಂದೆ ಸಾಗಬೇಕು.
ಸಿನಿಮಾಗಳ ವಿಚಾರಕ್ಕೆ ಬಂದರೆ ಶಿವಣ್ಣ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪ್ರಮೋಷನಲ್ ಸಾಂಗ್ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ಇನ್ನು 'A ಫಾರ್ ಆನಂದ್' ಎಂಬ ಚಿತ್ರವನ್ನು ಶಿವಣ್ಣ ನಿರ್ಮಿಸಿ ನಟಿಸುತ್ತಿದ್ದಾರೆ. ಅತ್ತ ತೆಲುಗಿನಲ್ಲಿ 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ನಟ ದರ್ಶನ್ ಈಗ 'ಡೆವಿಲ್' ಸಿನಿಮಾದಲ್ಲಿ ತಲ್ಲೀನರಾಗಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಶೀಘ್ರದಲ್ಲೇ ಹಾಡಿ ಚಿತ್ರೀಕರಣಕ್ಕಾಗಿ ತಂಡ ವಿದೇಶಕ್ಕೆ ತೆರಳಲಿದೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಸರಾ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications