ದರ್ಶನ್ 'ಚಾಲೆಂಜ್ ಹೀರೊ' ಆಗಿ 20 ವರ್ಷ: ಆದ್ರೆ 'ಚಾಲೆಂಜಿಂಗ್ ಸ್ಟಾರ್'ನು ಮೀರಿಸಿದ್ದು ಆ ಬಿರುದು!
ನಟ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದಿದೆ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದು ನಂತರ ಹೀರೊ ಆಗಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. 20 ವರ್ಷಗಳ ಹಿಂದೆ ಅವರಿಗೆ 'ಚಾಲೆಂಜ್ ಹೀರೊ' ಎನ್ನುವ ಬಿರುದು ಸಿಕ್ಕಿತ್ತು.
ಹೀರೋ ಆಗಿ ನಟಿಸಿದ 'ಮೆಜೆಸ್ಟಿಕ್' ಸಿನಿಮಾ ಹಿಟ್ ಆಗಿತ್ತು. ಆ ಚಿತ್ರದ ದಾಸ ಪಾತ್ರ ಅಭಿಮಾನಿಗಳ ಮನಗೆದ್ದಿತ್ತು. ಅದೇ ಹೆಸರಿನಲ್ಲಿ ಅಭಿಮಾನಿಗಳು ಕರೆಯಲು ಆರಂಭಿಸಿದ್ದರು. ದರ್ಶನ್ ಕೂಡ ತಮ್ಮ ಹೆಸರಿನ ಜೊತೆ ದಾಸ ಅಂತ ಸೇರಿಸಿಕೊಂಡರು. 2003ರಲ್ಲಿ 'ಕರಿಯ', 'ಲಾಲಿ ಹಾಡು' ಸಿನಿಮಾಗಳು ಬಿಡುಗಡೆ ಆಗಿತ್ತು. ಅದೇ ವರ್ಷ ದರ್ಶನ್ ವಿಜಯಲಕ್ಷ್ಮಿ ಕೈ ಹಿಡಿದಿದ್ದರು. ಮದುವೆ ಆದ 4 ದಿನಕ್ಕೆ ಅಭಿಮಾನಿಗಳು 'ಚಾಲೆಂಜ್ ಹೀರೊ' ಎನ್ನುವ ಬಿರುದು ಕೊಟ್ಟಿದ್ದರು.

ಸರಿಯಾಗಿ 20 ವರ್ಷಗಳ ಹಿಂದೆ ಅಭಿಮಾನಿಗಳು ಸೇರಿ ದರ್ಶನ್‌ಗೆ ಈ ಬಿರುದು ಕೊಟ್ಟಿದ್ದರು. 2003ರ ಮೇ 23 ರಂದು ಮೈಸೂರಿನ ಹುಣಸೂರಿನ ಬಳಿಯಿರುವ ಹುಟ್ಕಳ್ಳಿಯಲ್ಲಿ ದರ್ಶನ್ ಅವರನ್ನು ಅಭಿಮಾನಿಗಳು ಸನ್ಮಾನಿಸಿದ್ದರು. ಹೊಸದಾಗಿ ಮದುವೆ ಆಗಿದ್ದ ದರ್ಶನ್, ಪತ್ನಿ ಹಾಗೂ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ದರ್ಶನ್‌ಗೆ ಆಪ್ತರಾಗಿದ್ದ ಹೂಟಗಳ್ಳಿ ದೇಶಿ ಗೌಡರು 'ಚಾಲೆಂಜ್ ಹೀರೋ' ಎನ್ನುವ ಬಿರುದು ಕೊಟ್ಟಿದ್ದರು. ಮುಂದೆ ಅದು 'ಚಾಲೆಂಜಿಂಗ್ ಸ್ಟಾರ್' ಆಗಿ ಬದಲಾಯಿತು.
'ಅಣ್ಣಾವ್ರು' ಚಿತ್ರದಿಂದ 'ಚಾಲೆಂಜಿಂಗ್ ಸ್ಟಾರ್'
ಅಭಿಮಾನಿಗಳಿಂದ 'ಚಾಲೆಂಜ್ ಹೀರೊ' ಬಿರುದು ಸಿಕ್ಕ ನಂತರ 'ದಾಸ' ಸಿನಿಮಾ ರಿಲೀಸ್ ಆಗಿತ್ತು. ಆದರೆ ಆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ 'ಚಾಲೆಂಜಿಂಗ್ ಹೀರೊ' ಎಂದು ಹಾಕಲಾಗಿತ್ತು. ಆ ನಂತರ ಬಂದ ಅಣ್ಣಾವ್ರು ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ದರ್ಶನ್ ಮಿಂಚಿದ್ದರು. ಆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ 'ಚಾಲೆಂಜಿಂಗ್ ಸ್ಟಾರ್' ಎಂದು ಡಿಸೈನ್ ಮಾಡಲಾಗಿತ್ತು. ಅಲ್ಲಿಂದ ಮುಂದೆ ಅದೇ ಬಿರುದು ಫಿಕ್ಸ್ ಆಯಿತು.

'ಚಾಲೆಂಜಿಂಗ್ ಸ್ಟಾರ್' ಮೀರಿಸಿದ ಡಿ ಬಾಸ್
ಇವತ್ತಿಗೂ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಂತ ನೋಡಬಹುದು. ಅಭಿಮಾನಿಗಳು ನೆಚ್ಚಿನ ನಟನನ್ನು ಚಾಲೆಂಜಿಂಗ್ ಸ್ಟಾರ್ ಅಂತಲೇ ಕರೆಯುತ್ತಾರೆ. ಆದರೆ ಇತ್ತೀಚೆಗೆ ಡಿಬಾಸ್ ಎನ್ನುವ ಟೈಟಲ್ ಬಹಳ ಜೋರಾಗಿ ಸದ್ದು ಮಾಡ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ 'ಚಾಲೆಂಜಿಂಗ್ ಸ್ಟಾರ್' ಅನ್ನುವುದನ್ನು ಕೂಡ ಮೀರಿಸಿಬಿಟ್ಟಿದೆ. ಅಭಿಮಾನಿಗಳಿಂದಲೇ ಹುಟ್ಟಿಕೊಂಡ ಡಿಬಾಸ್ ಟೈಟಲ್ ಈಗ ಭಾರೀ ಸದ್ದು ಮಾಡ್ತಿದೆ.
50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
'ಮೆಜೆಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ಎಂಟ್ರಿ ಕೊಟ್ಟ ದರ್ಶನ್ ಮುಂದೆ ಮಾಸ್ ಹೀರೊ ಆಗಿ ಅಭಿಮಾನಿಗಳ ಮನಗೆದ್ದರು. ಆಕ್ಷನ್ ಸಿನಿಮಾಗಳ ಮೂಲಕ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಇನ್ನು 'ಗಜ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಬಿರುದು ಸಿಕ್ಕಿತ್ತು. ಕರುನಾಡ ಒಡೆಯ, ಶತಕೋಟಿ ಸರದಾರ ಎನ್ನುವ ಬಿರುದುಗಳನ್ನು ಕೂಡ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿದ್ದಾರೆ. ಆದರೆ 'ಚಾಲೆಂಜಿಂಗ್ ಸ್ಟಾರ್' ಅನ್ನೋದು ಶಾಶ್ವತವಾಗಿ ಉಳಿದುಕೊಂಡಿದೆ.

'ಕಾಟೇರ'ನಾಗಿ ಬರ್ತಿದ್ದಾರೆ ದರ್ಶನ್
'ಕ್ರಾಂತಿ' ನಂತರ ದರ್ಶನ್ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಸಿನಿಮಾ ಶೂಟಿಂಗ್ ಹೊಸ ಶೆಡ್ಯೂಲ್ ಶುರುವಾಗಬೇಕಿದೆ. ಚುನಾವಣೆ ಪ್ರಚಾರದ ನಿಮಿತ್ತದ ಕೊಂಚ ಚಿತ್ರೀಕರಣಕ್ಕೆ ಬಿಡುವು ನೀಡಲಾಗಿತ್ತು. ಶೀಘ್ರದಲ್ಲೇ ಮತ್ತೆ 'ಕಾಟೇರ'ನ ವೇಷದಲ್ಲಿ ದರ್ಶನ್ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಸದ್ಯ ನೆಚ್ಚಿನ ನಟನಿಗೆ 'ಚಾಲೆಂಜಿಂಗ್ ಸ್ಟಾರ್' ಬಿರುದು ಸಿಕ್ಕಿ 20 ವರ್ಷಗಳಾದ ಸಂಭ್ರಮದಲ್ಲಿ ಅಭಿಮಾನಿಗಳು ಇದ್ದಾರೆ.


Click it and Unblock the Notifications











