ಸೈಮಾದಲ್ಲಿ ಕನ್ನಡಿಗರಿಗೆ ಅವಮಾನ; ಅವತ್ತೇ ಈ ಬಗ್ಗೆ ದರ್ಶನ್ ಬೇಸರ ಹೊರ ಹಾಕಿದ್ರು
ಸೈಮಾದಲ್ಲಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ನಟ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲೇ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಕಾಟಚಾರಕ್ಕೆ ಕನ್ನಡ ಕಲಾವಿದರು, ತಂತ್ರಜ್ಞರಿಗೆ ಕರೆದು ಅವಾರ್ಡ್ ಕೊಡಬೇಡಿ ಎಂದಿದ್ದಾರೆ. ಬಹಳ ಹಿಂದೆಯೇ ದರ್ಶನ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದ್ದರು.
ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕನ್ನಡ ಕಲಾವಿದರು ಹಾಗೂ ತಂತ್ರಜ್ಞರನ್ನು ಕಡೆಗಣಿಸುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಸನ್ನಿವೇಶಗಳು ನಿರ್ಮಾಣವಾಗಿತ್ತು. ದಕ್ಷಿಣದ ನಾಲ್ಕು ಚಿತ್ರರಂಗದವರಿಗೆ ಪ್ರಶಸ್ತಿ ಕೊಡುವಂತಿದ್ದರೆ ಎಲ್ಲರಿಗೂ ಒಮ್ಮೆಲೆ ಕರೆದು ಕೊಡಬೇಕು. ಅದುಬಿಟ್ಟು ತೆಲುಗು, ತಮಿಳು, ಮಲಯಾಳಂ ಸಾಧಕರಿಗೆ ಪ್ರಶಸ್ತಿ ಕೊಟ್ಟು ಕೊನೆಗೆ ನಾಮಕಾವಸ್ತೆಗೆ ಕನ್ನಡ ಪ್ರತಿಭೆಗಳಿಗೆ ಪ್ರಶಸ್ತಿ ಕೊಡುತ್ತಾರೆ.

ವೇದಿಕೆ ಮುಂಭಾಗದಲ್ಲಿ ಕನ್ನಡ ಫಿಲ್ಮ್ ಮೇಕರ್ಸ್ ಕೂರಲು ಅವಕಾಶ ಇರುವುದಿಲ್ಲ. ಎಲ್ಲೋ ಮೂಲೆಯಲ್ಲಿ ಕೂರಬೇಕು. ಬೇರೆ ಭಾಷೆಯವರಿಗೆಲ್ಲಾ ಪ್ರಶಸ್ತಿ ಕೊಟ್ಟು ಅವರೆಲ್ಲಾ ಎದ್ದು ಹೊರಡುವ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿ ಕೊಡುತ್ತಾರೆ. ಬಳಿಕ ಎಡಿಟಿಂಗ್‌ನಲ್ಲಿ ಕನ್ನಡ ಸಾಧಕರು ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರೂ ಕೂಡ ಚಪ್ಪಾಳೆ ಹೊಡೆಯುವಂತೆ ತೋರಿಸುತ್ತಾರೆ. ಇದೇ ಕಾರಣಕ್ಕೆ ದುನಿಯಾ ವಿಜಯ್ ಗರಂ ಆಗಿದ್ದಾರೆ. ಕಾಟಾಚಾರಕ್ಕೆ ಹೀಗೆ ಪ್ರಶಸ್ತಿ ಕೊಡುವುದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ನಾನು ಸೈಮಾಗೆ ಹೋಗಲ್ಲ, ನಮ್ಮ ಮಕ್ಕಳಿಗೆ ಪ್ರಶಸ್ತಿ ಬಂದರೂ ತಗೋಬೇಡಿ ಅನ್ನುತ್ತೇನೆ ಎಂದಿದ್ದಾರೆ.
ಬಹಳ ಹಿಂದೆ ಟಿವಿ9 ವಾಹಿನಿ ಸಂದರ್ಶನದಲ್ಲಿ ಇದೇ ವಿಚಾರದ ಬಗ್ಗೆ ನಟ ದರ್ಶನ್ ಮಾತನಾಡಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ. "ನಾನು ಅವಾರ್ಡ್ ಫಂಕ್ಷನ್‌ಗಳಿಗೆ ಹೋಗಲ್ಲ, ನಮ್ಮ ರಾಜ್ಯದಲ್ಲಿ ನಡೆಯೋ ಕಾರ್ಯಕ್ರಮ ಅಲ್ಲ. ಹೊರಗಡೆ ನಡೆಯುವ ಐಫಾ, ಫಿಲ್ಮ್‌ಫೇರ್ ರೀತಿಯ ಕಾರ್ಯಕ್ರಮಗಳು. ಮೊದಲು ಕನ್ನಡ ಕಲಾವಿದರು ಮುಂದೆ ಕೂರುವಂತೆ ಆಗಬೇಕು. ಉಳಿದವರು ಹಿಂದೆ ಕೂರಬೇಕು, ಅವತ್ತು ನಾವು ಗೆದ್ದಂತೆ" ಎಂದಿದ್ದರು.
ಅಷ್ಟಕ್ಕೂ ಯಾಕೆ ತಾವು ಅಂತಹ ಕಾರ್ಯಕ್ರಮಗಳಿಗೆ ಹೋಗಲ್ಲ ಎನ್ನುವುದನ್ನು ದರ್ಶನ್ ಬಿಚ್ಚಿಟ್ಟಿದ್ದರು. "ನಾನು ಇವತ್ತಿಗೂ ಅಂತಹ ಕಾರ್ಯಕ್ರಮಗಳಿಗೆ ಹೋಗಲ್ಲ. ಯಾಕಂದ್ರೆ ಅಲ್ಲೆಲ್ಲೋ ಕೂರಿಸಿರ್ತಾರೆ. ಒಂದು ಒಂದು ಬ್ಲ್ಯಾಕ್ ಲೇಡಿ(ಫಿಲ್ಮ್ ಫೇರ್) ಇರೋದು ನನ್ನತ್ರ. ಅನಿವಾರ್ಯವಾಗಿ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಕೊಡಬೇಕಿತ್ತು ಕೊಟ್ರು. ಆದರೆ ನಾನು ಹೋಗಲ್ಲ ಅಂದೆ. ಯಾವತ್ತು ನಮ್ಮ ಅಷ್ಟು ಕನ್ನಡ ಕಲಾವಿದರಿಗೆ ಮೊದಲು ಸಾಲಿನಲ್ಲಿ ಕೂರಲು ಅವಕಾಶ ಕೊಡ್ತಿರೋ ಅವತ್ತು ಬರ್ತೀನಿ ಎಂದೆ" ಅಂತ ದರ್ಶನ್ ವಿವರಿಸಿದ್ದರು.
10ನೇ ವರ್ಷದ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ಅವತ್ತು ನಟ ದರ್ಶನ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿ ಮುಂದಿನ ಸಾಲಿನಲ್ಲಿ ಕೂತಿದ್ದರು. ಈ ಬಾರಿ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಉಪೇಂದ್ರ, ಪ್ರಿಯಾಂಕ ಉಪೇಂದ್ರ, ದುನಿಯಾ ವಿಜಯ್ ಸೇರಿ ಕೆಲ ಕನ್ನಡ ಸಿನಿಮಾ ತಾರೆಯರು ಭಾಗಿ ಆಗಿದ್ದರು. 'ಮ್ಯಾಕ್ಸ್' ಚಿತ್ರದ ನಟನೆಗಾಗಿ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 'ಯುಐ' ಚಿತ್ರಕ್ಕಾಗಿ ಉಪೇಂದ್ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
'O2' ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. 'ಭೀಮ' ಚಿತ್ರದ ನಟನೆಗಾಗಿ ದುನಿಯಾ ವಿಜಯ್ ಅವರಿಗೆ ವಿಮರ್ಶಕರ ನೆಚ್ಚಿನ ಅತ್ಯುತ್ತಮ ನಟ ಅವಾರ್ಡ್ ದೊರೆತಿದೆ. ಇನ್ನುಳಿದಂತೆ ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್) ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸಂದೀಪ್ ಸುಂಕದ್ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ(ಶಾಖಾಹಾರಿ), ಸಮರ್ಜಿತ್ ಲಂಕೇಶ್ (ಗೌರಿ) ಅತ್ಯುತ್ತಮ ಚೊಚ್ಚಲ ನಟ, ಐಶ್ವರ್ಯ ರಂಗರಾಜನ್ ಅತ್ಯುತ್ತಮ ಹಿನ್ನೆಲೆ ಗಾಯಕಿ, ವಿ. ನಾಗೇಂದ್ರ ಪ್ರಸಾದ್ ಅತ್ಯುತ್ತಮ ಗೀತರಚನೆಕಾರ ಹೀಗೆ ಹಲವು ವಿಭಾಗಗಳಲ್ಲಿ ಸಾಧಕರು ಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











