"ಆಂಟಿ ಪ್ರೀತ್ಸೆ' ಚಿತ್ರದಲ್ಲಿ ನಟಿಸದೇ ಇದ್ದಿದ್ದೇ ಒಳ್ಳೆದಾಯ್ತು": ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಚಿತ್ರವೊಂದಕ್ಕೆ 15 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ಆದರೆ 2 ದಶಕಗಳ ಹಿಂದೆ ದರ್ಶನ್ ಅವಕಾಶಗಳಿಗಾಗಿ ಸಾಕಷ್ಟು ಅಲೆದಾಡಿದ್ದು ಇದೆ.
ಚಿತ್ರರಂಗದಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ನಟ ದರ್ಶನ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ನಗರದ ಜೆಬಿ ಪಾರ್ಕ್‌ನಲ್ಲಿ ನಡೆದ ಶಿವರಾತ್ರಿ ಸಂಭ್ರಮ ಕಾರ್ಯಕ್ರಮಕ್ಕೆ ನಟ ದರ್ಶನ್ ವಿಶೇಷ ಅತಿಥಿಯಾಗಿ ಭಾಗಿ ಆಗಿದ್ದರು. ಈ ವೇಳೆ ನಿರ್ಮಾಪಕ ಮುನಿರತ್ನಂ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದರು. ಅಭಿಮಾನಿಗಳಿಗೆ, ಪರೀಕ್ಷೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು.

ವೇದಿಕೆಯಲ್ಲಿ ಮಾತನಾಡುತ್ತ ನಟ ದರ್ಶನ್ 22 ವರ್ಷಗಳ ಹಿಂದೆ ನಿರ್ಮಾಪಕ ಮುನಿರತ್ನ ನಿರ್ಮಾಣದ 'ಆಂಟಿ ಪ್ರೀತ್ಸೆ' ಚಿತ್ರದಲ್ಲಿ ನಟಿಸಲು ಅವಕಾಶ ಕೇಳಿ ಹೋಗಿದ್ದನ್ನು ನೆನಪಿಸಿಕೊಂಡರು. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ನಿರ್ಮಾಪಕ ಮುನಿರತ್ನ ಕೂಡ ಮರೆತಿದ್ದರು. "ಇದೇ ವೇದಿಕೆಯಲ್ಲಿ ಕುರುಕ್ಷೇತ್ರ ಚಿತ್ರದ 100 ದಿನಗಳ ಅವಾರ್ಡ್ ಶೀಲ್ಡ್ ತಗೊಂಡಿದ್ದೆ. ಮೊದಲ ಸಿನಿಮಾದಿಂದಲೂ ಮುನಿರತ್ನ ಅವರನ್ನು ನೋಡುತ್ತಾ ಬಂದಿದ್ದೇನೆ" ಎಂದರು.
"ಮುನಿರತ್ನ ಅವರು ಮಾತಿಗೆ ಬದ್ಧರಾಗಿರುತ್ತಾರೆ. ನಾವು ಏನೇ ಹೇಳಿದರೂ ಅದಕ್ಕೆ ಒಂದು ಪಾಯಿಂಟ್ ಹಾಕುತ್ತಾರೆ. ನಾನು ಸಾಕಷ್ಟು ನಿರ್ಮಾಪಕರನ್ನು ನೋಡಿದ್ದೇನೆ. ಆದರೆ ಮುನಿರತ್ನ ಅವರು 10 ಕಟ್ಟುವ ಕಡೆ ಒಂದು ಮುತ್ತು ಕಟ್ಟುತ್ತಾರೆ. ಅವರ ಮೊದಲ ಸಿನಿಮಾ 'ಆಂಟಿ ಪ್ರೀತ್ಸೆ'. ಗಾಂಧಿನಗರದಲ್ಲಿ ಸಂತೋಷ್ ಲಾಡ್ಜ್ ಅಂತೆ ಇದೆ. ಹೆಸ್. ವಾಸು ಆ ಸಿನಿಮಾ ನಿರ್ದೇಶಕರು. ನಾನೇ ಅವಕಾಶ ಕೇಳಿಕೊಂಡು ಅಲ್ಲಿಗೆ ಹೋಗಿ ನನ್ನ ಫೋಟೊ ಕೊಟ್ಟು ಬಂದಿದ್ದೆ"

"ಆ ಚಿತ್ರಕ್ಕೆ ಅದಾಗಲೇ ಎಲ್ಲಾ ಪಾತ್ರಗಳಿಗೂ ಕಲಾವಿದರು ಆಯ್ಕೆ ನಡೆದುಬಿಟ್ಟಿತ್ತು. ಆದರೂ ಸರಿ ಸರ್ ಎಂದು ಫೋಟೊ ಕೊಟ್ಟಿದ್ದೆ. ಇಲ್ಲದಿದ್ದರೆ ನಿಮ್ಮ 'ಆಂಟಿ ಪ್ರೀತ್ಸೆ' ಸಿನಿಮಾ ನಾನು ನಟಿಸಬೇಕಿತ್ತು" ಎಂದರು. ಕೂಡಲೇ ವೇದಿಕೆಯಲ್ಲಿದ್ದ ಮುನಿರತ್ನ ನೀವು ಮಾಡದೇ ಇದ್ದಿದ್ದೆ ಒಳ್ಳೆದಾಯಿತು ಎಂದಿದ್ದು ಇದನ್ನು ಕೇಳಿ ದರ್ಶನ್ ನಕ್ಕರು.
ಅಲ್ಲಿಂದ ಮುಂದೆ ಹಲವು ಸಿನಿಮಾಗಳನ್ನು ಮುನಿರತ್ನ ಅವರು ಮಾಡಿದರು. ಬಹಳ ಫ್ಯಾಷನ್ ಇಂದ ಸಿನಿಮಾ ಮಾಡುತ್ತಾ ಬಂದಿದ್ದಾರೆ. 'ಕುರುಕ್ಷೇತ್ರ' ಚಿತ್ರಕ್ಕೆ ಅಷ್ಟು ಖರ್ಚು ಮಾಡುವಾಗ ನಾನೇ ಯೋಚನೆ ಮಾಡಿ ಎನ್ನುತ್ತಿದ್ದೆ. ಇಲ್ಲ ಸಿನಿಮಾ ದೊಡ್ಡದು ಎಂದು ಹೇಳುತ್ತಿದ್ದರು. ಸಿನಿಮಾ ಬಗ್ಗೆ ಅಷ್ಟು ನಂಬಿಕೆ ಮುನಿರತ್ನ ಅವರಿಗಿದೆ. ಸರಿಯಾಗಿ ಸಮಯ ಪಾಲನೆ ಮಾಡುತ್ತಾರೆ. ಆ ವಿಚಾರಕ್ಕೆ ಅವರು ಬಹಳ ಇಷ್ಟವಾಗುತ್ತಾರೆ" ಎಂದು ದರ್ಶನ್ ಹೇಳಿದ್ದಾರೆ.
ಕೊನೆಯದಾಗಿ ಮನೆ ಮುಂದೆ ಮನೆ ಮೇಲೆ ದಯಮಾಡಿ ಪ್ರಾಣಿ, ಪಕ್ಷಿಗಳಿಗೆ ನೀರು ಇಡಿ. ಇದನ್ನು ಯಾವಾಗಲೂ ಕೇಳಿಕೊಳ್ಳುತ್ತೇನೆ. ನಮಗೂ ಸರಿಯಾಗಿ ನೀರು ಸಿಗುತ್ತಿಲ್ಲ. ನಾವಾದರೂ ನೀರು ಕೊಡಿ ಎಂದು ಕೇಳಬಹುದು. ಪಾಪ ಅವು ಕೇಳಿಕೊಳ್ಳಲ್ಲ. ದಯಮಾಡಿ ಈ ಕೆಲಸ ಮಾಡಿ ಎದು ಮನವಿ ಮಾಡಿದರು. ಪರೀಕ್ಷೆ ಬರ್ತಿದೆ. ಮಕ್ಕಳೆಲ್ಲಾ ಚೆನ್ನಾಗಿ ಓದಿ. ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದಕ್ಕಿಂತ ದೊಡ್ಡ ದೊಡ್ಡ ಪರೀಕ್ಷೆಗಳು ಜೀವನದಲ್ಲಿ ಇದೆ. ಅದರ ಮುಂದೆ ಇದು ಬಹಳ ಚಿಕ್ಕದು" ಎಂದರು.


Click it and Unblock the Notifications











